14
ನ್ಯಾಯತೀರ್ಪಿನ ದಿನ
1 ಯೆಹೋವನ ನ್ಯಾಯತೀರಿಸುವ ದಿನ ಬಂದಿದೆ. ನೀವು ಸುಲಿದುಕೊಂಡ ಐಶ್ವರ್ಯವು ನಿಮ್ಮ ಪಟ್ಟಣದಲ್ಲಿ ಪಾಲು ಮಾಡಲಾಗುವದು.
2 ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಮಾಡಲು ನಾನು ಎಲ್ಲಾ ಜನಾಂಗಗಳನ್ನು ಒಟ್ಟಿಗೆ ಸೇರಿಸುವೆನು. ಅವರು ಪಟ್ಟಣವನ್ನು ವಶಪಡಿಸಿಕೊಂಡು ಕಟ್ಟಡಗಳನ್ನೆಲ್ಲಾ ಧ್ವಂಸಮಾಡುವರು. ಹೆಂಗಸರನ್ನು ಬಲಾತ್ಕಾರದಿಂದ ಸಂಭೋಗಿಸುವರು. ಜನಸಂಖ್ಯೆಯ ಅರ್ಧದಷ್ಟು ಜನರು ಸೆರೆಹಿಡಿಯಲ್ಪಡುವರು. ಉಳಿದವರನ್ನು ಪಟ್ಟಣದಿಂದ ಕೊಂಡೊಯ್ಯುವುದಿಲ್ಲ.
3 ಆಗ ಯೆಹೋವನು ಆ ಜನಾಂಗಗಳ ವಿರುದ್ಧವಾಗಿ ಯುದ್ಧ ಮಾಡುವನು. ಅದು ಭಯಂಕರವಾದ ಕಾದಾಟವಾಗಿರುವದು.
4 ಅದೇ ಸಮಯದಲ್ಲಿ ಜೆರುಸಲೇಮಿಗೆ ಪೂರ್ವದಲ್ಲಿರುವ ಆಲೀವ್ ಮರಗಳ ಬೆಟ್ಟದ ಮೇಲೆ ನಿಂತುಕೊಳ್ಳುವನು. ಆ ಬೆಟ್ಟವು ಇಬ್ಭಾಗವಾಗುವದು. ಅದರ ಒಂದು ಭಾಗವು ಉತ್ತರಕ್ಕೆ ಹೋಗುವದು, ಇನ್ನೊಂದು ಭಾಗವು ದಕ್ಷಿಣದ ಕಡೆಗೆ ಹೋಗುವದು.
5 ಆ ಬೆಟ್ಟವು ನಿನ್ನ ಹತ್ತಿರಕ್ಕೆ ಬರುತ್ತಿರುವಾಗ ನೀನು ಓಡಿಹೋಗಲು ಪ್ರಯತ್ನಿಸುವಿ. ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಆದ ಭೂಕಂಪದ ಸಮಯದಲ್ಲಿ ನೀನು ಹೇಗೆ ಪಲಾಯನ ಮಾಡಿದ್ದಿಯೋ ಅದೇ ರೀತಿಯಲ್ಲಿ ನೀನು ಓಡುವಿ. ಆಗ ನನ್ನ ದೇವರಾದ ಯೆಹೋವನು ತನ್ನ ಎಲ್ಲಾ ಪರಿಶುದ್ಧ ಜನರೊಂದಿಗೆ ಬರುವನು.
6-7 ಅದು ಒಂದು ಮಹಾ ವಿಶೇಷ ದಿವಸವಾಗಿರುವದು. ಆ ದಿವಸದಲ್ಲಿ ಬೆಳಕಾಗಲಿ ಚಳಿಯಾಗಲಿ ಹಿಮವಾಗಲಿ ಇರುವದಿಲ್ಲ. ಇದು ಹೇಗೆ ಎಂದು ಯೆಹೋವನಿಗೆ ಮಾತ್ರ ಗೊತ್ತು. ರಾತ್ರಿ ಬರಬೇಕಾದ ವೇಳೆಯಲ್ಲಿ ಹಗಲು ಇನ್ನೂ ಇರುವದು.
8 ಆ ಸಮಯದಲ್ಲಿ ಜೆರುಸಲೇಮಿನಿಂದ ನೀರು ಹರಿಯುತ್ತಲೇ ಇರುವದು. ಆ ನದಿಯು ಇಬ್ಭಾಗವಾಗಿ ಒಂದು ಭಾಗ ಪೂರ್ವಕ್ಕೆ ಹರಿಯುವದು. ಇನ್ನೊಂದು ಭಾಗ ಪಶ್ಚಿಮಕ್ಕೆ ಹರಿದು ಮೆಡಿಟರೇನಿಯನ್ ಸಮುದ್ರವನ್ನು ಸೇರುವದು. ಈ ನದಿಯು ಎಲ್ಲಾ ಕಾಲದಲ್ಲಿಯೂ ಬೇಸಿಗೆ, ಹಿಮಕಾಲವೆನ್ನದೆ ಹರಿಯುತ್ತಲೇ ಇರುವದು.
9 ಆ ಸಮಯದಲ್ಲಿ ಯೆಹೋವನು ಇಡೀ ಭೂಲೋಕದ ಅರಸನಾಗುವನು. ಆತನು ಒಬ್ಬನೇ. ಆತನ ಹೆಸರು ಒಂದೇ.
10 ಆ ಸಮಯದಲ್ಲಿ ಜೆರುಸಲೇಮಿನ ಸುತ್ತಮುತ್ತ ಇರುವ ಜಾಗವು ನಿರ್ಜನವಾಗಿದ್ದು ಅರಾಬಾ ಮರುಭೂಮಿಯಂತಿರುವದು. ದೇಶವು ಗೆಬದಿಂದ ಹಿಡಿದು ನೆಗೆವ್‌ನಲ್ಲಿರುವ ರಿಮ್ಮೋನ್ ತನಕ ಮರುಭೂಮಿಯಂತಿರುವದು. ಆದರೆ ಜೆರುಸಲೇಮ್ ನಗರವು ತಿರುಗಿ ಕಟ್ಟಲ್ಪಡುವದು. ಬೆನ್ಯಾಮೀನ್ ದ್ವಾರದಿಂದ ಮೂಲೇ ದ್ವಾರ ಅಥವಾ ಮೊದಲನೇ ದ್ವಾರದ ತನಕ ಮತ್ತು ಹನನೇಲ್ ಬುರುಜಿನಿಂದ ಹಿಡಿದು ಅರಸನ ದ್ರಾಕ್ಷಿತೊಟ್ಟಿಯ ತನಕ ಹೊಸದಾಗಿ ಕಟ್ಟಲ್ಪಡುವದು.
11 ಜನರು ಅಲ್ಲಿಗೆ ವಾಸಿಸಲು ಹೋಗುವರು. ಇನ್ನು ಮುಂದೆ ಯಾವ ಶತ್ರುವೂ ಅವರನ್ನು ನಾಶಮಾಡಲು ಬರುವುದಿಲ್ಲ. ಜೆರುಸಲೇಮ್ ಸುರಕ್ಷಿತವಾಗಿರುವದು.
12 ಆದರೆ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧ ಮಾಡಿದ ಜನಾಂಗಗಳನ್ನೆಲ್ಲಾ ಯೆಹೋವನು ಶಿಕ್ಷಿಸುವನು. ಅವರಿಗೆ ಭಯಂಕರ ರೋಗವನ್ನು ಬರಮಾಡುವನು. ಅವರು ಜೀವಂತರಾಗಿರುವಾಗಲೇ ಅವರ ಚರ್ಮವು ಕೊಳೆತುಹೋಗುವದು. ಅವರ ಕಣ್ಣುಗಳು ಅವು ಇರುವಲ್ಲಿಯೇ ಕೊಳೆತುಹೋಗುವವು. ಅವರ ಬಾಯೊಳಗೆ ಅವರ ನಾಲಿಗೆಗಳು ಕೊಳೆತುಹೋಗುವವು.
13-15 ಆ ಭಯಂಕರವಾದ ವ್ಯಾಧಿಯು ಶತ್ರುಗಳ ಶಿಬಿರದಲ್ಲಿರುವದು. ಅವರ ಬಳಿಯಲ್ಲಿರುವ ಕುದುರೆ, ಹೇಸರಕತ್ತೆ, ಒಂಟೆ ಮತ್ತು ಕತ್ತೆಗಳೆಲ್ಲಾ ಈ ವ್ಯಾಧಿಯಿಂದ ಸಂಕಟಪಡುವವು.
ಆ ಸಮಯದಲ್ಲಿ ಆ ಜನರು ನಿಜವಾಗಿಯೂ ಯೆಹೋವನಿಗೆ ಭಯಪಡುವರು. ಪ್ರತಿಯೊಬ್ಬನೂ ತನ್ನ ನೆರೆಯವನ ಕೈಗಳನ್ನು ಹಿಡಿದುಕೊಳ್ಳುವನು ಮತ್ತು ಆ ನೆರೆಯವರು ಪರಸ್ಪರ ಹೊಡೆದಾಡಿಕೊಳ್ಳುವರು. ಯೆಹೂದವೂ ಜೆರುಸಲೇಮಿನೊಂದಿಗೆ ಕಾದಾಡುವದು. ಎಲ್ಲಾ ಜನಾಂಗಗಳ ಐಶ್ವರ್ಯವನ್ನು ಪಟ್ಟಣದ ಸುತ್ತಲೂ ಶೇಖರಿಸಿಟ್ಟಿರುವಾಗಲೂ ಇದು ಸಂಭವಿಸುವುದು. ಆಗ ಅಲ್ಲಿ ಬಹು ಸಂಖ್ಯೆಯಲ್ಲಿ ಬೆಳ್ಳಿಬಂಗಾರ ಮತ್ತು ಬಟ್ಟೆಗಳ ರಾಶಿ ಇರುವದು.
16 ಜೆರುಸಲೇಮಿನೊಂದಿಗೆ ಯುದ್ಧಮಾಡಲು ಬಂದವರಲ್ಲಿ ಕೆಲವರು ಸಾಯದೆ ಉಳಿಯುವರು. ಅವರೆಲ್ಲರು ಪ್ರತಿವರ್ಷ ಅರಸನೂ ಸರ್ವಶಕ್ತನೂ ಆಗಿರುವ ಯೆಹೋವನನ್ನು ಆರಾಧಿಸಲು ಜೆರುಸಲೇಮಿಗೆ ಬರುವರು. ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಬರುವರು.
17 ರಾಜನೂ ಸರ್ವಶಕ್ತನೂ ಆಗಿರುವ ಯೆಹೋವನನ್ನು ಆರಾಧಿಸಲು ಭೂಲೋಕದ ಕುಟುಂಬಗಳ ಯಾವ ಜನರಾದರೂ ಜೆರುಸಲೇಮಿಗೆ ಹೋಗದಿದ್ದಲ್ಲಿ ಅವರ ರಾಜ್ಯಗಳಲ್ಲಿ ಮಳೆಗೆರೆಯುವದು ನಿಂತುಹೋಗುವದು.
18 ಈಜಿಪ್ಟಿನಲ್ಲಿರುವ ಯಾವ ಕುಟುಂಬವಾಗಲಿ ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಬಾರದೆ ಹೋದಲ್ಲಿ ಯೆಹೋವನು ಶತ್ರುಗಳಿಗೆ ತಂದ ವ್ಯಾಧಿಯನ್ನು ಅವರಿಗೂ ಬರಮಾಡುವನು.
19 ಇದು ಕೇವಲ ಈಜಿಪ್ಟಿನ ಜನರಿಗೆ ಮಾತ್ರವೇ ಆಗಿರದೆ ಯಾವ ದೇಶವು ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಬರುವುದಿಲ್ಲವೋ ಆ ದೇಶದ ಜನರೂ ಅದೇ ರೋಗಕ್ಕೆ ತುತ್ತಾಗುವರು.
20 ಆ ಸಮಯದಲ್ಲಿ ಸಮಸ್ತವೂ ಯೆಹೋವನಿಗೆ ಸೇರಿದ್ದಾಗಿರುವದು. ಕುದುರೆಗಳ ಮೇಲಿರುವ ಜೀನಿನ ಮೇಲೂ ಸರ್ವಶಕ್ತನಾದ ಯೆಹೋವನಿಗೆ ಇದು ಮೀಸಲಾಗಿರುವದು ಎಂದು ಬರೆಯಲ್ಪಡುವದು. ಯೆಹೋವನ ಆಲಯದಲ್ಲಿ ಉಪಯೋಗಿಸುವ ಎಲ್ಲಾ ಮಡಕೆಗಳು ಯಜ್ಞವೇದಿಕೆಯ ಮೇಲೆ ಉಪಯೋಗಿಸುವ ಬೋಗುಣಿಗಳಷ್ಟೇ ಮುಖ್ಯವಾಗಿವೆ.
21 ವಾಸ್ತವವಾಗಿ ಜೆರುಸಲೇಮಿನ ಮತ್ತು ಯೆಹೊದದ ಪ್ರತಿಯೊಂದು ಪಾತ್ರೆಯ ಮೇಲೆ, “ಸರ್ವಶಕ್ತನಾದ ಯೆಹೋವನಿಗೆ ಮೀಸಲಾಗಿದೆ” ಎಂದು ಬರೆದಿರುತ್ತದೆ. ಯಜ್ಞಗಳನ್ನರ್ಪಿಸಲು ಬರುವ ಜನರೆಲ್ಲರೂ ಆ ಪಾತ್ರೆಗಳನ್ನು ತೆಗೆದುಕೊಂಡು ಅವುಗಳಲ್ಲಿ ವಿಶೇಷ ಅಡಿಗೆಯನ್ನು ಮಾಡುವರು.
ಆ ಸಮಯದಲ್ಲಿ ಸರ್ವಶಕ್ತನಾದ ಯೆಹೋವನ ಆಲಯದೊಳಗೆ ಯಾವ ವರ್ತಕನೂ ವ್ಯಾಪಾರ ನಡೆಸುವದಿಲ್ಲ.