ಅಪೊಸ್ತಲರ ಕೃತ್ಯಗಳು
ಗ್ರಂಥಕರ್ತೃತ್ವ
ವೈದ್ಯನಾದ ಲೂಕನು, ಈ ಪುಸ್ತಕದ ಗ್ರಂಥಕರ್ತನು. ಅವನು ಅಪೊಸ್ತಲರ ಕೃತ್ಯಗಳಲ್ಲಿರುವ ಅನೇಕ ಘಟನೆಗಳ ಪ್ರತ್ಯಕ್ಷದರ್ಶಿಯಾಗಿದ್ದನು ಅನೇಕ ವಚನಭಾಗಗಳಲ್ಲಿ ನಾವು ಎಂಬ ಪದವನ್ನು ಉಪಯೋಗಿಸುವುದರ ಮೂಲಕ ಲೂಕನು ಅದನ್ನು ದೃಢಪಡಿಸುತ್ತಾನೆ (16:10-17; 20:5-21:18; 27:1-28:16). ಸಾಂಪ್ರದಾಯಿಕವಾಗಿ ಅವನನ್ನು ಅನ್ಯಜನಾಂಗದವನು ಎಂದು ಪರಿಗಣಿಸಲಾಗಿದೆ, ಪ್ರಾಥಮಿಕವಾಗಿ ಅವನು ಸುವಾರ್ತಿಕನಾಗಿದ್ದನು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 60-63 ರ ನಡುವೆ ಬರೆಯಲ್ಪಟ್ಟಿದೆ.
ಬರವಣಿಗೆಯ ಪ್ರಮುಖ ಸ್ಥಳಗಳು ಯೆರೂಸಲೇಮ್, ಸಮಾರ್ಯ, ಲುದ್ದ, ಯೊಪ್ಪ, ಅಂತಿಯೋಕ್ಯ, ಇಕೋನ್ಯ, ಲುಸ್ತ್ರ, ದೆರ್ಬೆ, ಫಿಲಿಪ್ಪಿ, ಥೆಸಲೋನಿಕ, ಬೆರೋಯ, ಅಥೇನೆ, ಕೊರಿಂಥ, ಎಫೆಸ, ಕೈಸರೈಯ, ಮೆಲೀತೆ, ರೋಮ್.
ಸ್ವೀಕೃತದಾರರು
ಲೂಕನು ಥೆಯೊಫಿಲನಿಗೆ ಬರೆದನು (ಅ.ಕೃ. 1:1). ದುರದೃಷ್ಟವಶಾತ್, ಥೆಯೊಫಿಲನು ಯಾರು ಎಂಬ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ ಕೆಲವು ಸಾಧ್ಯತೆಗಳಿವೆ ಅವುಗಳು ಯಾವುವೆಂದರೆ: ಅವನು ಲೂಕನ ಅಶ್ರಯದಾತನಾಗಿರಬಹುದು, ಅಥವಾ ಥೆಯೊಫಿಲನು (“ದೇವರನ್ನು ಪ್ರೀತಿಸುವವನು” ಎಂದರ್ಥ) ಎಂಬ ಪದವನ್ನು ಸಾರ್ವತ್ರಿಕವಾಗಿ ಎಲ್ಲಾ ಕ್ರೈಸ್ತರನ್ನು ಸೂಚಿಸುವುದಕ್ಕಾಗಿ ಬಳಸಲಾಗಿದೆ.
ಉದ್ದೇಶ
ಅಪೊಸ್ತಲರ ಕೃತ್ಯಗಳ ಉದ್ದೇಶವು ಸಭೆಯ ಉತ್ಪತ್ತಿ ಮತ್ತು ಬೆಳವಣಿಗೆಯ ಕಥೆಯನ್ನು ಹೇಳುವುದಾಗಿದೆ, ಇದು ಸಾನ್ನಿಕನಾದ ಯೋಹಾನನಿಂದ, ಯೇಸುವಿನಿಂದ ಮತ್ತು ಸುವಾರ್ತೆಗಳಲ್ಲಿ ಆತನ ಹನ್ನೆರಡು ಮಂದಿ ಅಪೊಸ್ತಲರಿಂದ ಪ್ರಾರಂಭವಾದ ಸಂದೇಶವನ್ನು ಮುಂದುವರಿಸುವಂಥದ್ದಾಗಿದೆ. ಇದು ಪಂಚಾಶತ್ತಮ ದಿನದಂದು ಪವಿತ್ರಾತ್ಮನ ಬರುವಿಕೆಯಿಂದ ಮೊದಲುಗೊಂಡಿರುವ ಕ್ರೈಸ್ತತ್ವದ ಹರಡುವಿಕೆಯ ಬಗ್ಗೆ ದಾಖಲೆಯನ್ನು ನಮಗೆ ನೀಡುತ್ತದೆ.
ಮುಖ್ಯಾಂಶ
ಸುವಾರ್ತೆಯ ಹರಡುವಿಕೆ
ಪರಿವಿಡಿ
1. ಪವಿತ್ರಾತ್ಮನ ವಾಗ್ದಾನ — 1:1-26
2. ಪವಿತ್ರಾತ್ಮನ ಪ್ರತ್ಯಕ್ಷವಾಗುವಿಕೆ — 2:1-4
3. ಪವಿತ್ರಾತ್ಮನಿಂದ ಶಕ್ತಿ ಹೊಂದಿಕೊಂಡ ಅಪೊಸ್ತಲರ ಸೇವೆ ಮತ್ತು ಯೆರೂಸಲೇಮಿನಲ್ಲಿರುವ ಸಭೆಯ ಹಿಂಸೆ — 2:5-8:3
4. ಪವಿತ್ರಾತ್ಮನಿಂದ ಶಕ್ತಿ ಹೊಂದಿಕೊಂಡ ಅಪೊಸ್ತಲರ ಸೇವೆ ಯೂದಾಯ ಮತ್ತು ಸಮಾರ್ಯದಲ್ಲಿ — 8:4-12:25
5. ಪವಿತ್ರಾತ್ಮನಿಂದ ಶಕ್ತಿ ಹೊಂದಿಕೊಂಡ ಅಪೊಸ್ತಲರ ಸೇವೆ ಪ್ರಪಂಚದ ಇತರ ಭಾಗಗಳಲ್ಲಿ — 13:1-28:31
1
ಯೇಸು ಸ್ವರ್ಗಾರೋಹಣವಾದದ್ದು
1 ಥೆಯೊಫಿಲನೇ, ನಾನು ಮೊದಲು ಬರೆದ ಪುಸ್ತಕದಲ್ಲಿ, ಯೇಸು ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಪವಿತ್ರಾತ್ಮನ ಮೂಲಕ ಅಪ್ಪಣೆಕೊಟ್ಟು,
2 ಆತನು ಸ್ವರ್ಗಾರೋಹಣವಾದ ದಿನದವರೆಗೆ ಆತನು ಮಾಡಿದ ಎಲ್ಲಾ ಕಾರ್ಯಗಳನ್ನೂ, ಉಪದೇಶಿಸಿದ ಎಲ್ಲಾ ಬೋಧನೆಗಳನ್ನೂ ಬರೆದಿದ್ದೇನೆ.
3 ಯೇಸುವು ಬಾಧೆಪಟ್ಟು ಸತ್ತ ನಂತರ ತಾನು ಜೀವಂತನಾಗಿ ಎದ್ದು ಬಂದಿದ್ದೇನೆ ಎಂದು ಅನೇಕ ಸಂಭವಗಳ ಮೂಲಕ ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಸ್ಪಷ್ಟಪಡಿಸಿದನು. ಸತತವಾಗಿ ನಲವತ್ತು ದಿನಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವನ್ನು ಕುರಿತು ಅವರಿಗೆ ಬೋಧಿಸಿದನು.
4 ಒಮ್ಮೆ ಅವರೆಲ್ಲರೂ ಒಂದುಗೂಡಿದ್ದ ಸಂದರ್ಭದಲ್ಲಿ, “ನೀವು ಯೆರೂಸಲೇಮನ್ನು ಬಿಟ್ಟುಹೋಗದೆ, ನನ್ನಿಂದ ಕೇಳಿದಂಥ ಮತ್ತು ತಂದೆಯು ಮಾಡಿದ ವಾಗ್ದಾನಗಳಿಗಾಗಿ ಇಲ್ಲೇ ಕಾದುಕೊಂಡಿರಿ,
5 ಏಕೆಂದರೆ, ಯೋಹಾನನಂತೂ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತಿದ್ದನು ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನವಾಗುವುದು” ಎಂದು ಅಪ್ಪಣೆ ಕೊಟ್ಟನು.
6 ಕೂಡಿಬಂದವರು ಆತನನ್ನು,, “ಕರ್ತನೇ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ಪುನಃ ಸ್ಥಾಪಿಸಿಕೊಡುವಿಯೋ?” ಎಂದು ಕೇಳಲು
7 ಆತನು ಅವರಿಗೆ, “ತಂದೆಯು ತನ್ನ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ, ಸಮಯಗಳನ್ನೂ ತಿಳಿದುಕೊಳ್ಳುವುದು ನಿಮ್ಮ ಕಾರ್ಯವಲ್ಲ.
8 ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಶಕ್ತಿಯನ್ನು ಹೊಂದಿದವರಾಗಿ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸ್ಥಳದಲ್ಲಿಯು, ಸಮಾರ್ಯ ಸೀಮೆಗಳಲ್ಲಿಯೂ, ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಅಂದನು.
9 ಈ ಮಾತುಗಳನ್ನು ಅವನು ಹೇಳಿದ ಬಳಿಕ ಅವರು ನೋಡುತ್ತಿದ್ದ ಹಾಗೆಯೇ ಆತನು ಪರಲೋಕಕ್ಕೆ ಎತ್ತಲ್ಪಟ್ಟನು, ಮೋಡವೊಂದು ಆತನನ್ನು ಕವಿದುಕೊಂಡಿದ್ದರಿಂದ, ಯೇಸುವು ಅವರ ಕಣ್ಣಿಗೆ ಮರೆಯಾದನು.
10 ಆತನು ಹೋಗುತ್ತಿರುವಾಗ ಅವರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಾ ಇರಲಾಗಿ ಶುಭ್ರ ವಸ್ತ್ರಧಾರಿಗಳಾದ ಇಬ್ಬರು ಪುರುಷರು ಫಕ್ಕನೆ ಅವರ ಹತ್ತಿರ ನಿಂತುಕೊಂಡರು.
11 “ಗಲಿಲಾಯದವರೇ, ನೀವು ಏಕೆ ಹೀಗೆ ಆಕಾಶದ ಕಡೆಗೆ ನೋಡುತ್ತಾ ನಿಂತಿದ್ದೀರಿ? ನಿಮ್ಮ ಬಳಿಯಿಂದ ಆಕಾಶದೊಳಗೆ ಸೇರಿಸಲ್ಪಟ್ಟಿರುವ ಈ ಯೇಸುವು ಯಾವ ರೀತಿಯಲ್ಲಿ ಆಕಾಶದೊಳಗೆ ಹೋಗಿರುವುದನ್ನು ನೀವು ಕಂಡಿರೋ ಹಾಗೆಯೇ ಆತನು ಹಿಂತಿರುಗಿ ಬರುವನು” ಎಂದು ಹೇಳಿದರು.
12 ಆಗ ಅವರು ಆಲೀವ್ ಮರಗಳ ಗುಡ್ಡದಿಂದ ಯೆರೂಸಲೇಮಿಗೆ ಹಿಂತಿರುಗಿ ಬಂದರು. ಆ ಗುಡ್ಡಕ್ಕೂ ಯೆರೂಸಲೇಮಿಗೂ ಸಬ್ಬತ್ ದಿನದಲ್ಲಿ ಪ್ರಯಾಣಮಾಡುವಷ್ಟು ದೂರವಿತ್ತು.
13 ಅವರು ಅಲ್ಲಿಗೆ ಬಂದು ತಾವು ವಾಸಮಾಡುತ್ತಿದ್ದ ಮೇಲಂತಸ್ತಿಗೆ ಹೋದರು; ಅವರು ಯಾರಾರೆಂದರೆ, ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಅಲ್ಫಾಯನ ಮಗ ಯಾಕೋಬ, ಮತಾಭಿಮಾನಿ ಎನಿಸಿಕೊಂಡ ಸೀಮೋನ, ಯಾಕೋಬನ ಸಹೋದರನಾದ ಯೂದ, ಇವರೇ.
14 ಅಲ್ಲಿ ಕೆಲವು ಮಂದಿ ಸ್ತ್ರೀಯರೂ, ಯೇಸುವಿನ ತಾಯಿಯಾದ ಮರಿಯಳೂ, ಆತನ ತಮ್ಮಂದಿರೂ ಅವರ ಸಂಗಡ ಇದ್ದರು, ಇವರೆಲ್ಲರೂ ಏಕಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗಿದ್ದರು.
ಇಸ್ಕರಿಯೂತ ಯೂದನ ಬದಲಾಗಿ ಮತ್ತೀಯನನ್ನು ಆರಿಸಿಕೊಂಡದ್ದು
15 ಆ ದಿನಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ವಿಶ್ವಾಸಿಗಳು ಕೂಡಿಬಂದಿರಲಾಗಿ ಪೇತ್ರನು ಅವರ ಮಧ್ಯದಲ್ಲಿ ಎದ್ದು ನಿಂತು ಹೀಗೆಂದನು,
16 “ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ದಾರೀತೋರಿಸಿದ ಯೂದನ ವಿಷಯವಾಗಿ ಪವಿತ್ರಾತ್ಮನು ದಾವೀದನ ಬಾಯಿಂದ ಮೊದಲೇ ಹೇಳಿಸಿದ ಶಾಸ್ತ್ರವಚನವು ನೆರವೇರುವುದು ಅವಶ್ಯವಾಗಿತ್ತು.
17 ಯೂದನು ನಮ್ಮೊಂದಿಗೆ ಸೇರಿ ಈ ಸೇವೆಯಲ್ಲಿ ಪಾಲು ಹೊಂದಿದವನಾಗಿದ್ದನು.”
18 (ಈ ಮನುಷ್ಯನು ತನ್ನ ದ್ರೋಹದ ಪ್ರತಿಫಲವಾಗಿ ಹೊಲವನ್ನು ಪಡೆದನು ಮತ್ತು ತಲೆಕೆಳಗಾಗಿ ಬಿದ್ದು ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಚೆಲ್ಲಿದವು.
19 ಇದು ಯೆರೂಸಲೇಮ್ ಪಟ್ಟಣದ ನಿವಾಸಿಗಳಿಗೆಲ್ಲಾ ತಿಳಿದುಬಂದುದರಿಂದ ಆ ಹೊಲಕ್ಕೆ ಅವರ ಭಾಷೆಯಲ್ಲಿ ‘ಅಕೆಲ್ದಾಮಾ,’ ಅಂದರೆ ರಕ್ತದ ಹೊಲ ಎಂಬ ಹೆಸರು ಬಂದಿತು.)
20 ಅವನ ವಿಷಯವಾಗಿ,
ಅವನ ಮನೆ ಹಾಳಾಗಲಿ,
ಅದು ಜನರಿಲ್ಲದೆ ಪಾಳುಬೀಳಲಿ ಎಂತಲೂ
ಅವನ
ನಾಯಕತ್ವದ ಹುದ್ದೆಯು ಮತ್ತೊಬ್ಬನಿಗಾಗಲಿ ಎಂತಲೂ ಕೀರ್ತನೆಗಳ ಗ್ರಂಥದಲ್ಲಿ ಬರೆದಿದೆಯಲ್ಲಾ.
21-22 ಆದುದರಿಂದ ಕರ್ತನಾದ ಯೇಸು ನಮ್ಮಲ್ಲಿ ಬರುತ್ತಾ ಹೋಗುತ್ತಾ ಇದ್ದಕಾಲವೆಲ್ಲಾ, ಅಂದರೆ ಯೋಹಾನನು ದೀಕ್ಷಾಸ್ನಾನ ಮಾಡಿಸಿದ್ದು ಮೊದಲುಗೊಂಡು ಯೇಸು ನಮ್ಮ ಬಳಿಯಿಂದ ಪರಲೋಕವನ್ನೇರಿ ಹೋದ ದಿನದ ವರೆಗೂ ನಮ್ಮ ಜೊತೆಯಲ್ಲಿದ್ದವರೊಳಗೆ ಒಬ್ಬನು ನಮ್ಮೊಂದಿಗೆ ಆತನ ಪುನರುತ್ಥಾನದ ವಿಷಯದಲ್ಲಿ ಸಾಕ್ಷಿಹೇಳುವವನಾಗಬೇಕು ಅಂದನು
23 ಈ ಮಾತುಗಳನ್ನು ಕೇಳಿ ಅವರು ಯೂಸ್ತನೆನಿಸಿಕೊಳ್ಳುವ ಬಾರ್ನಬನೆಂಬ ಯೋಸೇಫನನ್ನೂ ಮತ್ತೀಯನನ್ನೂ ನಿಲ್ಲಿಸಿ,
24-25 “ಕರ್ತನೇ, ಎಲ್ಲರ ಹೃದಯವನ್ನು ಬಲ್ಲಾತನೇ, ಯೂದನು ಅಪೊಸ್ತಲತನವೆಂಬ ಈ ಸೇವಾಸ್ಥಾನದಿಂದ ಭ್ರಷ್ಟನಾಗಿ ತಾನು ಹೋಗ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ ಆ ಸ್ಥಾನವನ್ನು ಹೊಂದುವುದಕ್ಕೆ ಈ ಇಬ್ಬರಲ್ಲಿ ನೀನು ಆರಿಸಿ ಕೊಂಡವನನ್ನು ತೋರಿಸಿಕೊಡು” ಎಂದು ಪ್ರಾರ್ಥಿಸಿದರು.
26 ಆನಂತರ ಅವರಿಗೋಸ್ಕರ ಚೀಟುಹಾಕಿದರು; ಚೀಟು ಮತ್ತೀಯನ ಪರವಾಗಿ ಬಿದ್ದುದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಸೇರಿಕೊಂಡನು.