4
1 ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನೊಬ್ಬನಿದ್ದಾನೆಂದು ತಿಳಿದು ನಿಮ್ಮ ದಾಸರೊಂದಿಗೆ ನೀತಿಯಿಂದಲೂ ನ್ಯಾಯದಿಂದಲೂ ವರ್ತಿಸಿರಿ.
ಪ್ರಾರ್ಥಿಸಲು ಉತ್ತೇಜನ
2 ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ, ಎಚ್ಚರವಾಗಿದ್ದು ದೇವರಿಗೆ ಕೃತಜ್ಞತಾಸ್ತುತಿಮಾಡಿರಿ.
3 ಕ್ರಿಸ್ತನ ಮರ್ಮವನ್ನು ಅಂದರೆ ಸುರ್ವಾತೆಯನ್ನು ನಾವು ಸಾರುವುದಕ್ಕೆ ದೇವರು ನಮಗೆ ಬಾಗಿಲನ್ನು ತೆರೆದು ಕೊಡುವುದಕ್ಕಾಗಿ ನಮಗೋಸ್ಕರವಾಗಿ ಪ್ರಾರ್ಥಿಸಿರಿ. ಈ ಸುರ್ವಾತೆಯ ನಿಮಿತ್ತವೇ ನಾನು ಸೆರೆಯಲ್ಲಿದ್ದೇನಲ್ಲಾ.
4 ನಾನು ಆ ಸತ್ಯಾರ್ಥವನ್ನು ಹೇಳಬೇಕಾದ ರೀತಿಯಲ್ಲಿ ಸ್ಪಷ್ಟವಾಗಿ ಹೇಳುವಂತೆ ಪ್ರಾರ್ಥಿಸಿರಿ.
5 ಸಮಯವನ್ನು ಸದುಪಯೋಗಿಸಿಕೊಂಡು ಹೊರಗಿನವರೊಂದಿಗೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ.
6 ನಿಮ್ಮ ಸಂಭಾಷಣೆಯು ಯಾವಾಗಲೂ ಕೃಪೆಯುಳ್ಳದ್ದಾಗಿಯೂ, ಉಪ್ಪಿನಂತೆ ರುಚಿಕರವಾಗಿಯೂ ಇರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಯಾವಾವ ರೀತಿಯಲ್ಲಿ ಉತ್ತರಹೇಳಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.
ವಂದನೆಗಳು ಹಾಗೂ ಕಡೆ ಮಾತುಗಳು
7 ಪ್ರಿಯ ಸಹೋದರನೂ, ನಂಬಿಗಸ್ತನಾದ ಸೇವಕನೂ ಮತ್ತು ಕರ್ತನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವನು.
8 ನೀವು ನಮ್ಮ ಕುರಿತು ತಿಳಿದುಕೊಳ್ಳುವಂತೆ, ಅವನು ನಿಮ್ಮ ಹೃದಯಗಳನ್ನು ಉರಿದುಂಬಿಸುವಂತೆ,
9 ಅವನನ್ನು ನಂಬಿಗಸ್ತನು ಮತ್ತು ಪ್ರಿಯ ಸಹೋದರನಾಗಿರುವ ನಿಮ್ಮ ಊರಿನವನೇ ಆದ ಓನೇಸಿಮನ ಜೊತೆಯಲ್ಲಿ ಕಳುಹಿಸಿದ್ದೇನೆ. ಅವರು ಇಲ್ಲಿ ನಡೆಯುತ್ತಿರುವ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವರು.
10 ನನ್ನ ಜೊತೆ ಸೆರೆಯವನಾದ ಅರಿಸ್ತಾರ್ಕನೂ ಮತ್ತು ಬಾರ್ನಬನ ಸೋದರಸಂಬಂಧಿಯಾಗಿರುವ ಮಾರ್ಕನೂ ನಿಮಗೆ ವಂದನೆ ಹೇಳುತ್ತಾರೆ. ಅವನು ನಿಮ್ಮ ಬಳಿಗೆ ಬಂದರೆ ಅವನನ್ನು ಸೇರಿಸಿಕೊಳ್ಳಿರಿ. ಅವನ ವಿಷಯದಲ್ಲಿ ಅಪ್ಪಣೆಗಳನ್ನು ಹೊಂದಿದ್ದೀರಲ್ಲಾ.
11 ಯುಸ್ತನೆನಿಸಿಕೊಳ್ಳುವ ಯೇಸು ಸಹ ನಿಮಗೆ ವಂದನೆ ಹೇಳುತ್ತಾನೆ. ಸುನ್ನತಿಯವರೊಳಗೆ ಇವರು ಮಾತ್ರವೇ ದೇವರ ರಾಜ್ಯಕ್ಕಾಗಿ ನನ್ನ ಜೊತೆಸೇವಕರಾಗಿದ್ದಾರೆ, ಇವರಿಂದ ನನಗೆ ಆದರಣೆ ಉಂಟಾಯಿತು.
12 ಕ್ರಿಸ್ತಯೇಸುವಿನ ದಾಸನಾಗಿರುವ ನಿಮ್ಮ ಊರಿನವನಾದ ಎಪಫ್ರನು ನಿಮಗೆ ವಂದನೆ ಹೇಳುತ್ತಾನೆ, ನೀವು ಪ್ರವೀಣರಾಗಿಯೂ ದೇವರ ಎಲ್ಲಾ ಚಿತ್ತದಲ್ಲಿ ಪೂರ್ಣ ನಿಶ್ಚಯವುಳ್ಳವರಾಗಿರಬೇಕೆಂದು ನಿಮಗೋಸ್ಕರ ಯಾವಾಗಲೂ ಪ್ರಾರ್ಥನೆಯಲ್ಲಿ ಹೋರಾಡುತ್ತಾನೆ.
13 ಇವನು ನಿಮಗಾಗಿಯೂ, ಲವೊದಿಕೀಯದವರಿಗಾಗಿಯೂ ಮತ್ತು ಹಿರಿಯಾಪೋಲಿಯದವರಿಗಾಗಿಯೂ ಬಹಳ ಪ್ರಯಾಸ ಪಡುತ್ತಾನೆಂದು ನಾನು ಸಾಕ್ಷಿಹೇಳುತ್ತೇನೆ.
14 ಪ್ರಿಯ ವೈದ್ಯನಾಗಿರುವ ಲೂಕನು ಮತ್ತು ದೇಮನು ನಿಮಗೆ ವಂದನೆ ಹೇಳುತ್ತಾರೆ.
15 ಲವೊದಿಕೀಯದಲ್ಲಿರುವ ಸಹೋದರರಿಗೂ ಮತ್ತು ನುಂಫಳಿಗೂ ಹಾಗೂ ಆಕೆಯ ಮನೆಯಲ್ಲಿ ಸೇರಿಬರುವ ಸಭೆಯವರಿಗೂ ವಂದನೆ ಹೇಳಿರಿ.
16 ನಿಮ್ಮಲ್ಲಿ ಈ ಪತ್ರವನ್ನು ಓದಿದ ತರುವಾಯ ಲವೊದಿಕೀಯದವರ ಸಭೆಯಲ್ಲಿಯೂ ಇದನ್ನು ಓದಿಸಿರಿ ಮತ್ತು ನಾನು ಬರೆದ ಪತ್ರವನ್ನು ಲವೊದಿಕೀಯದಿಂದ ತರಿಸಿ ನೀವೂ ಓದಿಕೊಳ್ಳಿರಿ.
17 ಅರ್ಖಿಪ್ಪನಿಗೆ, “ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ಎಚ್ಚರವಾಗಿದ್ದು ನೆರವೇರಿಸಬೇಕೆಂದು” ಹೇಳಿರಿ.
18 ಇದು ಪೌಲನೆಂಬ ನಾನು ಸ್ವಂತ ಕೈಯಿಂದಲೇ ಬರೆದ ವಂದನೆ. ನಾನು ಸೆರೆಯಲ್ಲಿದ್ದೇನೆಂಬುದನ್ನು ಜ್ಞಾಪಕ ಮಾಡಿಕೊಳ್ಳಿರಿ. ಕೃಪೆಯು ನಿಮ್ಮೊಂದಿಗಿರಲಿ.