೧೦
ದೇವದೂತನ ದರ್ಶನ
೧ ಪಾರಸಿಯ ರಾಜನಾದ ಕೋರೆಷನ ಆಳ್ವಿಕೆಯ ಮೂರನೆಯ ವರುಷದಲ್ಲಿ ಬೇಲ್ತೆಶಚ್ಚರನೆಂಬ ದಾನಿಯೇಲನಿಗೆ ಒಂದು ಸಂಗತಿಯು ಪ್ರಕಟವಾಯಿತು; ಅದು ಮಹಾಹೊರಾಟದ ಸಂಗತಿ ಸತ್ಯವಾದಸಂಗತಿ; ಅವನು ಕಂಡ ಕನಸನ್ನು ಗಮನಿಸಿ ಆ ಸಂಗತಿಯನ್ನು ಮನದಟ್ಟು ಮಾಡಿಕೊಂಡನು. ೨ ಆ ಕಾಲದಲ್ಲಿ ದಾನಿಯೇಲನಾದ ನಾನು ಮೂರು ವಾರ ಶೋಕಿಸುತ್ತಿದ್ದೆನು. ೩ ಮೂರು ವಾರ ಮುಗಿಯುವ ತನಕ ನಾನು ರುಚಿಪದಾರ್ಥವನ್ನು ತಿನ್ನಲಿಲ್ಲ. ಮಾಂಸವನ್ನೂ, ದ್ರಾಕ್ಷಾರಸವನ್ನೂ ನನ್ನ ಬಾಯಿಗೆ ಹಾಕಲಿಲ್ಲ. ಎಣ್ಣೆಯನ್ನು ಹಚ್ಚಿಕೊಳ್ಳಲಿಲ್ಲ. ೪ ಮೊದಲನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ನಾನು ಹಿದ್ದೆಕೆಲೆಂಬ ೫ ಟೈಗ್ರಿಸ್ ಮಹಾನದಿಯ ದಡದ ಮೇಲೆ ಇದ್ದು ಕಣ್ಣೆತ್ತಿ ನೋಡಲು ಇಗೋ, ನಾರಿನ ಬಟ್ಟೆಯನ್ನು ಹೊದ್ದುಕೊಂಡು ಊಫಜಿನ ಅಪರಂಜಿಯ ಪಟ್ಟಿಯನ್ನು ಸೊಂಟಕ್ಕೆ ಬಿಗಿದುಕೊಂಡ ಒಬ್ಬ ಪುರುಷನು ನನಗೆ ಕಾಣಿಸಿದನು; ೬ ಅವನ ಶರೀರವು ಪೀತರತ್ನದ ಹಾಗೆ ಕಂಗೊಳಿಸಿತು, ಅವನ ಮುಖವು ಮಿಂಚಿನಂತೆ ಹೊಳೆಯಿತು, ಅವನ ಕಣ್ಣುಗಳು ಉರಿಯುವ ಪಂಜುಗಳೋಪಾದಿಯಲ್ಲಿ ನಿಗಿನಿಗಿಸಿದವು, ಅವನ ಕೈಕಾಲುಗಳು ಬೆಳಗಿದ ತಾಮ್ರದ ಹಾಗೆ ಥಳಥಳಿಸಿದವು, ಅವನ ಮಾತಿನ ಶಬ್ದವು ಸಂದಣಿಯ ಕೋಲಾಹಲದಂತೆ ಕೇಳಿಸಿತು. ೭ ದಾನಿಯೇಲನಾದ ನಾನೊಬ್ಬನೇ ಆ ದರ್ಶನವನ್ನು ಕಂಡೆನು; ನನ್ನೊಂದಿಗಿದ್ದವರು ಅದನ್ನು ಕಾಣಲಿಲ್ಲ; ದೊಡ್ಡ ನಡುಕವು ಅವರನ್ನು ಹಿಡಿಯಿತು, ಓಡಿ ಹೋಗಿ ಅವಿತುಕೊಂಡರು. ೮ ನಾನು ಏಕಾಂಗಿಯಾಗಿ ಉಳಿದು ಆ ಅದ್ಭುತ ದರ್ಶನವನ್ನು ಕಂಡು ಶಕ್ತಿಯನ್ನೆಲ್ಲಾ ಕಳೆದುಕೊಂಡೆನು, ನನ್ನ ಗಾಂಭೀರ್ಯವು ಹಾಳಾಯಿತು, ನಾನು ನಿತ್ರಾಣನಾದೆನು. ೯ ಆದರೂ ಅವನು ಮಾತನಾಡುವ ಶಬ್ದವನ್ನು ಕೇಳಿದೆನು; ಅವನ ಮಾತಿನ ಶಬ್ದವು ನನ್ನ ಕಿವಿಗೆ ಬಿದ್ದಾಗ ನಾನು ಮೈಮರೆತು ಬೋರಲು ಬಿದ್ದಿದ್ದೆನು. ೧೦ ಆಹಾ, ನನಗೆ ಹಸ್ತಸ್ಪರ್ಶವಾಯಿತು; ನಾನು ಗಡಗಡನೆ ನಡುಗುತ್ತಾ ಮೊಣಕಾಲೂರಿ ಅಂಗೈಗಳ ಮೇಲೆ ನಿಲ್ಲುವಂತೆ ಮಾಡಿತು. ೧೧ ಆಗ ಅವರು ನನಗೆ, “ದಾನಿಯೇಲನೇ, ಅತಿಪ್ರಿಯನೇ, ನಾನು ನುಡಿಯುವ ಮಾತುಗಳನ್ನು ಗ್ರಹಿಸು; ನಿಂತುಕೋ, ಈಗ ನಿನ್ನ ಬಳಿಗೇ ಕಳುಹಿಸಲ್ಪಟ್ಟಿದ್ದೇನೆ” ಎಂದು ಹೇಳಿದನು. ಹೇಳಿದ ಕೂಡಲೆ ನಾನು ನಡುಗುತ್ತಾ ನಿಂತುಕೊಂಡೆನು. ೧೨ ಆ ಮೇಲೆ ಅವನು ನನಗೆ, “ದಾನಿಯೇಲನೇ, ಭಯಪಡಬೇಡ, ನೀನು ದೈವಸಂಕಲ್ಪವನ್ನು ವಿಮರ್ಶಿಸುವುದಕ್ಕೂ, ನಿನ್ನನ್ನು ನಿನ್ನ ದೇವರ ಮುಂದೆ ತಗ್ಗಿಸಿಕೊಳ್ಳುವುದಕ್ಕೂ ಮನಸ್ಸಿಟ್ಟ ಮೊದಲನೆಯ ದಿನದಲ್ಲಿಯೇ ನಿನ್ನ ವಿಜ್ಞಾಪನೆಯು ದೇವರಿಗೆ ಮುಟ್ಟಿತು; ಆ ವಿಜ್ಞಾಪನೆಯ ನಿಮಿತ್ತವೇ ನಾನು ಬಂದೆನು. ೧೩ ಪಾರಸಿಯ ರಾಜ್ಯದ ದಿವ್ಯಪಾಲಕನು ಇಪ್ಪತ್ತೊಂದು ದಿನ ನನ್ನನ್ನು ತಡೆಯಲು ಇಗೋ, ಪ್ರಧಾನ ದಿವ್ಯಪಾಲಕರಲ್ಲೊಬ್ಬನಾದ ಮೀಕಾಯೇಲನು ನನ್ನ ಸಹಾಯಕ್ಕೆ ಬಂದನು; ಅಲ್ಲಿ ಪಾರಸಿಯ ರಾಜರ ಸಂಗಡ ಹೋರಾಡಿ, ೧೪ ಉಳಿದು ಅಂತ್ಯಕಾಲದಲ್ಲಿ ನಿನ್ನ ಜನರಿಗಾಗುವ ಗತಿಯನ್ನು ನಿನಗೆ ತಿಳಿಸುವುದಕ್ಕೋಸ್ಕರ ಬಂದೆನು; ಆ ಕಾಲದ ಸಂಗತಿಯನ್ನು ವ್ಯಕ್ತಪಡಿಸುವ ಇನ್ನೊಂದು ದರ್ಶನವುಂಟು” ಎಂದು ಹೇಳಿದನು. ೧೫ ಅವನು ಈ ಮಾತುಗಳನ್ನು ನನಗೆ ಹೇಳಿದ ಕೂಡಲೆ ನಾನು ಮುಖವನ್ನು ತಗ್ಗಿಸಿಕೊಂಡು ಬಾಯಿಬಿಡಲಾರದೆ ಹೋದೆನು. ೧೬ ಇಗೋ, ನರರೂಪ ಸದೃಶನೊಬ್ಬನು ನನ್ನ ತುಟಿಗಳನ್ನು ಮುಟ್ಟಲು ನಾನು ಬಾಯಿಬಿಟ್ಟು ನನ್ನ ಮುಂದೆ ನಿಂತಿರುವವನಿಗೆ, “ಎನ್ನೊಡೆಯನೇ, ಈ ದರ್ಶನದಿಂದ ವೇದನೆಗಳು ನನ್ನನ್ನು ಆಕ್ರಮಿಸಿವೆ, ನಿತ್ರಾಣನಾಗಿದ್ದೇನೆ. ೧೭ ಎನ್ನೊಡೆಯನ ಸೇವಕನಾದ ನನ್ನಂಥವನು ಎನ್ನೊಡೆಯನಾದ ನಿನ್ನಂಥವನ ಸಂಗಡ ಹೇಗೆ ಮಾತನಾಡಬಹುದು? ಈಗಿನಿಂದ ಶಕ್ತಿಯನ್ನೆಲ್ಲಾ ಕಳಕೊಂಡವನಾಗಿದ್ದೇನೆ, ನನ್ನಲ್ಲಿ ಉಸಿರೇ ಇಲ್ಲ” ಎಂದು ಹೇಳಿದೆನು. ೧೮ ಮನುಷ್ಯ ಸದೃಶನು ಪುನಃ ನನ್ನನ್ನು ಮುಟ್ಟಿ ಬಲಪಡಿಸಿದನು. ೧೯ ಆ ಮೇಲೆ ಆ ಪುರುಷನು ನನಗೆ, “ಅತಿಪ್ರಿಯನೇ, ಭಯಪಡಬೇಡ; ನಿನಗೆ ಸಮಾಧಾನವಿರಲಿ, ಬಲಗೊಳ್ಳು, ಬಲಗೊಳ್ಳು” ಎಂದು ಹೇಳಿದನು. ಅವನು ಈ ಮಾತನ್ನು ಹೇಳಿದ ಕೂಡಲೆ ನಾನು ಬಲಗೊಂಡು, “ಎನ್ನೊಡೆಯನೇ, ಮಾತನಾಡು; ನನ್ನನ್ನು ಬಲಗೊಳಿಸಿದ್ದೀ” ೨೦ ಎಂದು ಅರಿಕೆಮಾಡಲು ಅವನು ನನಗೆ ಹೀಗೆ ಹೇಳಿದನು, “ನಾನು ನಿನ್ನ ಬಳಿಗೆ ಏಕೆ ಬಂದೆನೆಂಬುದು ನಿನಗೆ ಗೊತ್ತಲ್ಲವೆ; ಈಗ ನಾನು ಪಾರಸಿಯ ರಾಜ್ಯದ ದಿವ್ಯ ಪಾಲಕನೊಂದಿಗೆ ಹೋರಾಡಲು ಹಿಂದಿರುಗಬೇಕು; ನಾನು ಆ ಹೋರಾಟವನ್ನು ತೀರಿಸಿದ ಕೂಡಲೆ ಆಹಾ, ಗ್ರೀಕ್ ರಾಜ್ಯದ ದಿವ್ಯಪಾಲಕನು ಎದುರು ಬೀಳುವನು. ೨೧ ಆದರೂ ಸತ್ಯಶಾಸನದಲ್ಲಿ ಲಿಖಿತವಾದದ್ದನ್ನು ಈಗ ನಿನಗೆ ತಿಳಿಸುವೆನು. ಇವರಿಬ್ಬರೊಂದಿಗೆ ಹೋರಾಡುವಲ್ಲಿ ನಿಮ್ಮ ಪಾಲಕನಾದ ಮೀಕಾಯೇಲನ ಹೊರತು ನನಗೆ ಬೆಂಬಲರಾಗತಕ್ಕವರು ಇನ್ನಾರೂ ಇಲ್ಲ ಎಂದನು.”