5
ದೇವರನ್ನು ಗೌರವಿಸಿ ಆತನಿಗೆ ಭಯಪಡು
ದೇವಸ್ಥಾನಕ್ಕೆ ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು. ಮೂಢರ ಯಜ್ಞಕ್ಕಿಂತ ಸಾನ್ನಿಧ್ಯಕ್ಕೆ ಬಂದು ಕಿವಿಗೊಡುವುದು ಲೇಸು. ತಾವು ತಪ್ಪು ಮಾಡುತ್ತಿದ್ದೇವೆಂಬುದು ಮೂಢರಿಗೆ ಗೊತ್ತೇ ಇಲ್ಲ.
ನಿನ್ನ ಬಾಯಿಂದ ದುಡುಕಬೇಡ
ಮತ್ತು ದೇವರ ಮುಂದೆ ಮಾತನಾಡಲು ನಿನ್ನ ಹೃದಯದಲ್ಲಿ ಆತುರಪಡಬೇಡ.
ದೇವರು ಪರಲೋಕದಲ್ಲಿದ್ದಾನೆ. ನೀನು ಭೂಮಿಯಲ್ಲಿದ್ದಿ,
ಆದಕಾರಣ ನಿನ್ನ ಮಾತುಗಳು ಕಡಿಮೆಯಾಗಿರಲಿ.
ಬಹಳ ಚಿಂತೆಯ ಮೂಲಕ ಕನಸು ಉಂಟಾಗುತ್ತದೆ
ಮತ್ತು ಮೂಢನ ಧ್ವನಿಯು ಬಹಳ ಮಾತುಗಳಿಂದ ಕೂಡಿದ್ದಾಗಿದೆ.
ನೀನು ದೇವರಿಗೆ ಹರಕೆಯನ್ನು ಮಾಡಿದರೆ ಅದನ್ನು ತೀರಿಸಲು ತಡಮಾಡಬೇಡ. ಮೂಢರಲ್ಲಿ ದೇವರಿಗೆ ಸಂತೋಷವಿಲ್ಲ. ನೀನು ಪ್ರಮಾಣಮಾಡಿದ್ದನ್ನು ತೀರಿಸು. ನೀನು ಹರಕೆಮಾಡಿದ್ದನ್ನು ನೆರವೇರಿಸದೆ ಇರುವುದಕ್ಕಿಂತ ಹರಕೆಮಾಡದೆ ಇರುವುದು ಒಳ್ಳೆಯದು.
ನಿನ್ನ ಬಾಯಿ ನಿನ್ನನ್ನು ಪಾಪಕ್ಕೆ ಗುರಿಮಾಡದಂತೆ ನೋಡಿಕೋ. “ಇದು ಅಜಾಗ್ರತೆಯಿಂದ ಆಯಿತು” ಎಂದು ದೂತನ ಮುಂದೆ ಹೇಳಬೇಡ. ದೇವರು ನಿನ್ನ ಮಾತಿಗೆ ರೋಷಗೊಂಡು ನಿನ್ನ ಕೈಕೆಲಸವನ್ನು ಏಕೆ ಹಾಳುಮಾಡಬೇಕು? ಬಹಳ ಕನಸುಗಳಿಂದಲೂ, ವ್ಯರ್ಥ ವಿಷಯಗಳಿಂದಲೂ, ಹೆಚ್ಚು ಮಾತುಗಳಿಂದಲೂ ವ್ಯರ್ಥವೇ. ನೀನಂತೂ ದೇವರಲ್ಲಿ ಭಯಭಕ್ತಿಯುಳ್ಳವನಾಗಿರು.
ಐಶ್ವರ್ಯವೂ ವ್ಯರ್ಥ
ಸಂಸ್ಥಾನದಲ್ಲಿ ಬಡವರ ಹಿಂಸೆಯನ್ನೂ, ನೀತಿನ್ಯಾಯಗಳ ನಾಶನವನ್ನೂ ನೀನು ನೋಡಿದರೆ ಆಶ್ಚರ್ಯಪಡಬೇಡ. ಏಕೆಂದರೆ ಒಬ್ಬ ಅಧಿಕಾರಿಯ ಮೇಲೆ ಇನ್ನೊಬ್ಬನಿದ್ದಾನೆ. ಅವರಿಬ್ಬರ ಮೇಲೆ ಹೆಚ್ಚಿನ ಅಧಿಕಾರವುಳ್ಳವನಿದ್ದಾನೆ. ಭೂಮಿಯಿಂದ ಎಲ್ಲರಿಗೂ ಲಾಭವಿದೆ ಮತ್ತು ಹೊಲಗದ್ದೆಗಳಿಂದ ರಾಜನಿಗೆ ಲಾಭವಾಗುತ್ತದೆ.
10 ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗುವುದಿಲ್ಲ
ಮತ್ತು ಸಮೃದ್ಧಿಯನ್ನು ಬಯಸುವವನಿಗೆ ಆದಾಯವೆಷ್ಟಾದರೂ ಸಾಲುವುದಿಲ್ಲ.
ಇದೂ ಸಹ ವ್ಯರ್ಥವೇ.
11 ಆಸ್ತಿ ಹೆಚ್ಚಾದರೆ ಅನುಭವಿಸುವವರ ಸಂಖ್ಯೆಯೂ ಹೆಚ್ಚಾಗುವುದು.
ಅದನ್ನು ಕಣ್ಣಿನಿಂದ ನೋಡುವುದೇ ಹೊರತು
ಯಜಮಾನನಿಗೆ ಇನ್ಯಾವ ಲಾಭವೂ ಇಲ್ಲ.
12 ದುಡಿಯುವವನು ಸ್ವಲ್ಪವೇ ತಿನ್ನಲಿ ಹೆಚ್ಚೇ ತಿನ್ನಲಿ,
ಹಾಯಾಗಿ ನಿದ್ರಿಸುತ್ತಾನೆ.
ಆದರೆ ಐಶ್ವರ್ಯವಂತನ ಸಮೃದ್ಧಿಯು ಅವನಿಗೆ ನಿದ್ರೆ ಮಾಡಗೊಡಿಸದು.
13 ಸೂರ್ಯನ ಕೆಳಗೆ ನಾನು ಮತ್ತೊಂದು ಕೇಡನ್ನು ಕಂಡೆನು.
ಯಜಮಾನನು ತನ್ನ ಆಸ್ತಿಯನ್ನು ಕಾಪಾಡುವುದರಲ್ಲಿಯೇ ಕೊರಗುತ್ತಿರುವನು.
14 ಆ ಆಸ್ತಿಯು ವ್ಯರ್ಥ ಪ್ರಯತ್ನದಿಂದ ಹಾಳಾಗುವುದು.
ಅವನಿಗೆ ಮಗನಿದ್ದರೆ ಆ ಮಗನಿಗಾಗಿ ಅವನ ಕೈಯಲ್ಲಿ ಏನೂ ಇರದು.
15 ತಾಯಿಯ ಗರ್ಭದಿಂದ ಹೇಗೆ ಬಂದನೋ ಹಾಗೆಯೇ
ಏನೂ ಇಲ್ಲದವನಾಗಿ ಗತಿಸಿ ಹೋಗುವನು.
ಅವನು ಪ್ರಯಾಸಪಟ್ಟರೂ, ತನ್ನ ಕೈಯಲ್ಲಿ ಏನೂ ತೆಗೆದುಕೊಂಡು ಹೋಗುವುದಿಲ್ಲ. 16 ಇದು ಸಹ ದುರದೃಷ್ಟಕರವೇ.
ಮನುಷ್ಯನು ಹೇಗೆ ಬಂದನೋ ಹಾಗೆಯೇ ಹೋಗುವನು.
ಗಾಳಿಗಾಗಿ ಪಟ್ಟ ಪ್ರಯಾಸದಿಂದ ಅವನಿಗೆ ಲಾಭವೇನು?
17 ಅವನು ತನ್ನ ಜೀವಮಾನವೆಲ್ಲಾ ಕತ್ತಲೆಯಲ್ಲಿ ಜೀವಿಸುವನು.*
ಅವನ ರೋಗದೊಂದಿಗೆ ಅವನಿಗೆ ಬಹಳ ರೋಷವೂ ವ್ಯಥೆಯೂ ಇರುವುದು.
18 ಇಗೋ, ನಾನು ಕಂಡದ್ದು ಇದೇ. ದೇವರು ಒಬ್ಬನಿಗೆ ದಯಪಾಲಿಸಿರುವ ಜೀವಮಾನದ ದಿನಗಳಲ್ಲೆಲ್ಲಾ ಅವನು ಅನ್ನಪಾನಗಳನ್ನು ತೆಗೆದುಕೊಂಡು ತಾನು ಲೋಕದೊಳಗೆ ಪಡುವ ಪ್ರಯಾಸದಲ್ಲಿಯೂ ಸುಖವನ್ನು ಅನುಭವಿಸುವನು. ಇದು ಅವನಿಗೆ ಉಚಿತವಾದದ್ದೂ, ಉತ್ತಮವಾದದ್ದೂ ಆಗಿದೆ. ಇದೇ ಅವನ ಪಾಲು.
19 ಪ್ರತಿಯೊಬ್ಬ ಮನುಷ್ಯನಿಗೆ ದೇವರು ಆಸ್ತಿಪಾಸ್ತಿಗಳನ್ನು ದಯಪಾಲಿಸಿ, ಅದನ್ನು ಅನುಭವಿಸಿ, ಪಾಲಿಗೆ ಬಂದದ್ದನ್ನು ಪಡೆದು ತನ್ನ ಪ್ರಯಾಸದಲ್ಲಿ ಸಂತೋಷಪಡಲು ಶಕ್ತಿಕೊಟ್ಟಿದ್ದರೆ ಅದು ಅವನಿಗೆ ದೊರೆತ ದೇವರ ಅನುಗ್ರಹವೇ. 20 ಇಂಥವನು ತನ್ನ ಜೀವಮಾನದ ದಿನಗಳನ್ನು ಹೆಚ್ಚಾಗಿ ಗಣನೆಗೆ ತಂದುಕೊಳ್ಳುವುದಿಲ್ಲ. ಅವನು ತನ್ನ ಹೃದಯಾನಂದದಲ್ಲೇ ಮಗ್ನನಾಗಿರುವಂತೆ ದೇವರು ಮಾಡಿದ್ದಾನೆ.
* 5:17 ಕತ್ತಲೆಯಲ್ಲಿ ಜೀವಿಸುವನು. ಅಥವಾ ಕತ್ತಲೆಯಲ್ಲಿ ಊಟಮಾಡುವನು ಅಥವಾ ಅವನ ಊಟದಲ್ಲಿ ಕತ್ತಲು ಕವಿದಿರುವುದು.