ಯೆಹೆಜ್ಕೇಲನು
ಗ್ರಂಥಕರ್ತೃತ್ವ
ಈ ಪುಸ್ತಕವು ಬೂಜಿಯ ಮಗನು, ಯಾಜಕನು ಮತ್ತು ಪ್ರವಾದಿಯು ಆದ ಯೆಹೆಜ್ಕೇಲನಿಗೆ ಸೇರಿದುದೆಂದು ಹೇಳಲಾಗುತ್ತದೆ. ಅವನು ಯೆರೂಸಲೇಮಿನಲ್ಲಿ ಯಾಜಕನ ಕುಟುಂಬದಲ್ಲಿ ಬೆಳೆದನು ಮತ್ತು ಸೆರೆವಾಸದ ಸಮಯದಲ್ಲಿ ಬಾಬೆಲಿನಲ್ಲಿದ್ದ ಯೆಹೂದ್ಯರೊಂದಿಗೆ ವಾಸಿಸುತ್ತಿದ್ದನು. ಯೆಹೆಜ್ಕೇಲನ ಯಾಜಕತ್ವದ ವಂಶಾವಳಿಯು ಅವನ ಪ್ರವಾದಿಯ ಸೇವೆಯಲ್ಲಿ ವಿಜೃಂಭಿಸುತ್ತದೆ, ದೇವಾಲಯ, ಯಾಜಕತ್ವ, ಕರ್ತನ ಮಹಿಮೆ, ಮತ್ತು ಯಜ್ಞದ ಪದ್ಧತಿ ಮುಂತಾದ ವಿಷಯಗಳಲ್ಲಿ ಅವನು ಹೆಚ್ಚಾಗಿ ಆಸಕ್ತಿಯುಳ್ಳವನಾಗಿದ್ದಾನೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 593-570 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಯೆಹೆಜ್ಕೇಲನು ಬಾಬೆಲನಿಂದ ಬರೆದನು, ಆದರೆ ಅವನ ಪ್ರವಾದನೆಗಳು ಇಸ್ರಾಯೇಲ್, ಐಗುಪ್ತ, ಮತ್ತು ನೆರೆಹೊರೆಯ ಹಲವಾರು ದೇಶಗಳ ಕುರಿತಾಗಿದ್ದವು.
ಸ್ವೀಕೃತದಾರರು
ಬಾಬೆಲಿನಲ್ಲಿ ಮತ್ತು ಸ್ವದೇಶದಲ್ಲಿದ್ದ ಇಸ್ರಾಯೇಲ್ಯರು ಮತ್ತು ಸತ್ಯವೇದದ ಓದುಗಾರರೆಲ್ಲರು.
ಉದ್ದೇಶ
ಅತೀವ ಪಾಪ ಮತ್ತು ಸಂಪೂರ್ಣವಾಗಿ ಹತಾಶರಾಗಿದ್ದ ತನ್ನ ಕಾಲದ ತಲೆಮಾರಿನವರಿಗೆ ಯೆಹೆಜ್ಕೇಲನು ಸೇವೆಮಾಡುತ್ತಿದ್ದನು. ಅವನು ತನ್ನ ಪ್ರವಾದನಾ ಸೇವೆಯ ಮೂಲಕ ಅವರನ್ನು ತಕ್ಷಣವೇ ಪಶ್ಚಾತ್ತಾಪಕ್ಕೆ ಮತ್ತು ಭವಿಷ್ಯದಲ್ಲಿ ಆತ್ಮವಿಶ್ವಾಸಕ್ಕೆ ತರಲು ಪ್ರಯತ್ನಿಸಿದನು. ದೇವರು ಮಾನವ ಸಂದೇಶಕರ ಮೂಲಕ ಕ್ರಿಯೆ ಮಾಡುತ್ತಾನೆ, ಸೋಲು ಮತ್ತು ಹತಾಶೆಯಲ್ಲಿಯೂ ಸಹ ದೇವರ ಜನರು ದೇವರ ಸಾರ್ವಭೌಮತ್ವವನ್ನು ದೃಢಪಡಿಸಿಕೊಳ್ಳಬೇಕು, ದೇವರ ವಾಕ್ಯವು ಎಂದಿಗೂ ವಿಫಲವಾಗುವುದಿಲ್ಲ, ದೇವರು ಎಲ್ಲೆಡೆಯು ಇದ್ದಾನೆ ಮತ್ತು ಎಲ್ಲೆಡೆಯು ಆತನನ್ನು ಆರಾಧಿಸಬಹುದು ಎಂದು ಅವನು ಬೋಧಿಸಿದನು. ಯೆಹೆಜ್ಕೇಲನ ಪುಸ್ತಕವು ನಾವು ಕಳೆದುಹೋಗಿದ್ದೇವೆ ಎಂದು ಭಾವಿಸುವಂಥ ಆ ಕಗ್ಗತ್ತಲೆಯ ಕಾಲದಲ್ಲಿ ಕರ್ತನನ್ನು ಹುಡುಕಿರಿ, ನಮ್ಮ ಜೀವನವನ್ನು ಪರೀಕ್ಷಿಸಿಕೊಳ್ಳಿರಿ, ಮತ್ತು ನಾವು ಏಕ ಸತ್ಯ ದೇವರೊಂದಿಗೆ ಒಂದಾಗಿರಬೇಕು ಎಂದು ನಮಗೆ ನೆನಪಿಸುತ್ತದೆ.
ಮುಖ್ಯಾಂಶ
ಕರ್ತನ ಮಹಿಮೆ
ಪರಿವಿಡಿ
1. ಯೆಹೆಜ್ಕೇಲನ ಕರೆ — 1:1-3:27
2. ಯೆರೂಸಲೇಮ್, ಯೆಹೂದ ಮತ್ತು ದೇವಾಲಯದ ವಿರುದ್ಧ ಪ್ರವಾದನೆಗಳು — 4:1-24:27
3. ದೇಶಗಳ ವಿರುದ್ಧ ಪ್ರವಾದನೆಗಳು — 25:1-32:32
4. ಇಸ್ರಾಯೇಲ್ಯರಿಗೆ ಸಂಬಂಧಿಸಿದ ಪ್ರವಾದನೆಗಳು — 33:1-39:29
5. ಪುನಃಸ್ಥಾಪನೆಯ ದರ್ಶನ — 40:1-48:35
1
ವಾಹನರೂಢನಾದ ಯೆಹೋವನ ದರ್ಶನ
1 ಕೆಬಾರ್ ನದಿಯ ಹತ್ತಿರ ಸೆರೆಯಾಗಿ ವಾಸಿಸುತ್ತಿದ್ದ ಯೆಹೂದ್ಯರ ಮಧ್ಯದಲ್ಲಿ ನಾನು ವಾಸಿಸುತ್ತಿದ್ದಾಗ, ಮೂವತ್ತನೆಯ ವರ್ಷದ, ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ ಆಕಾಶವು ತೆರೆಯಲ್ಪಟ್ಟಿತು, ನಾನು ದೇವ ದರ್ಶನಗಳನ್ನು ಕಂಡೆನು.
2 ಅರಸನಾದ ಯೆಹೋಯಾಖೀನನು ಸೆರೆಯಾದ ಐದನೆಯ ವರ್ಷದ ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ,
3 ಯೆಹೋವನ ವಾಕ್ಯವು ಕಸ್ದೀಯ ದೇಶದೊಳಗೆ ಕೆಬಾರ್ ನದಿಯ ಹತ್ತಿರ ಬೂಜಿಯ ಮಗನೂ, ಯಾಜಕನೂ ಆದ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಕೇಳಿಸಿತು; ಅಲ್ಲಿ ಯೆಹೋವನ ಹಸ್ತಸ್ಪರ್ಶದಿಂದ ಅವನು ಪರವಶನಾದನು.
4 ಆಗ ನಾನು ನೋಡಲಾಗಿ; ಇಗೋ, ಉತ್ತರ ದಿಕ್ಕಿನಿಂದ ಬಿರುಗಾಳಿಯು ಬೀಸಿತು, ಎಡೆಬಿಡದೆ ಝಗಝಗಿಸುವ ಜ್ವಾಲೆಯುಳ್ಳ ಮಹಾಮೇಘವು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು, ಅದರ ನಡುವೆ, ಆ ಜ್ವಾಲೆಯ ಮಧ್ಯೆ, ಸುವರ್ಣದಂಥ ಕಾಂತಿಯು ಉಂಟಾಯಿತು.
5 ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ಆಕಾರಗಳು ಕಂಡುಬಂದವು; ಅವುಗಳ ರೂಪವು ಮನುಷ್ಯನ ರೂಪದಂತಿತ್ತು.
6 ಒಂದೊಂದಕ್ಕೆ ನಾಲ್ಕು ನಾಲ್ಕು ಮುಖಗಳೂ ಮತ್ತು ನಾಲ್ಕು ನಾಲ್ಕು ರೆಕ್ಕೆಗಳೂ ಇದ್ದವು.
7 ಅವುಗಳ ಕಾಲುಗಳು ನೆಟ್ಟಗಿದ್ದು; ಹೆಜ್ಜೆಗಳು ಕರುವಿನ ಗೊರಸಿನಂತಿದ್ದವು. ಅವುಗಳು ಬೆಳಗಿದ ತಾಮ್ರದ ಹಾಗೆ ಹೊಳೆಯುತ್ತಿದ್ದವು.
8 ಒಂದೊಂದು ಜೀವಿಯ ನಾಲ್ಕು ಪಾರ್ಶ್ವಗಳಲ್ಲಿನ ರೆಕ್ಕೆಗಳ ಕೆಳಗೆ ಮನುಷ್ಯನ ಹಸ್ತದಂಥ ಹಸ್ತಗಳಿದ್ದವು; ಆ ನಾಲ್ಕು ಜೀವಿಗಳ ಮುಖಗಳೂ, ರೆಕ್ಕೆಗಳೂ ಹೇಗಿದ್ದವೆಂದರೆ,
9 ರೆಕ್ಕೆಗಳು ಒಂದಕ್ಕೊಂದು ತಗಲುತ್ತಿದ್ದವು; ಆ ಜೀವಿಗಳು ಮುಂದೆ ಹೋಗುವಾಗ ತಿರುಗಿಕೊಳ್ಳದೆ ನೇರ ಮುಖವಾಗಿಯೇ ಹೋಗುತ್ತಿದ್ದವು.
10 ಅವುಗಳ ಮುಖಗಳು ಹೀಗಿದ್ದವು: ಒಂದೊಂದರ ಮುಂದಿನ ಮುಖವು ಮನುಷ್ಯನ ಮುಖದಂತಿತ್ತು, ಬಲಗಡೆಯ ಮುಖವು ಸಿಂಹದ ಮುಖದಂತಿತ್ತು, ಎಡಗಡೆಯ ಮುಖವು ಹೋರಿಯ ಮುಖದಂತಿತ್ತು, ಹಿಂದಿನ ಮುಖವು ಗರುಡಪಕ್ಷಿಯ ಮುಖದಂತಿತ್ತು.
11 ಅವುಗಳ ರೆಕ್ಕೆಗಳು ಮೇಲಕ್ಕೆ ಚಾಚಲ್ಪಟ್ಟಿದ್ದವು; ರೆಕ್ಕೆಗಳೂ ಮೇಲ್ಗಡೆ ಪ್ರತ್ಯೇಕಪ್ರತ್ಯೇಕವಾಗಿದ್ದವು; ಒಂದೊಂದು ಜೀವಿಯ ಎರಡು ರೆಕ್ಕೆಗಳು ಪಕ್ಕದ ಜೀವಿಗಳ ರೆಕ್ಕೆಗಳಿಗೆ ತಗಲುತ್ತಿದ್ದವು, ಇನ್ನೆರಡು ರೆಕ್ಕೆಗಳು ದೇಹವನ್ನು ಮುಚ್ಚಿಕೊಂಡಿದ್ದವು.
12 ಆ ಜೀವಿಗಳೆಲ್ಲಾ ನೇರ ಮುಖವಾಗಿಯೇ ಹೋಗುತ್ತಿದ್ದವು, ದೇವರಾತ್ಮವು ಸಾಗಿಸಿದ ಕಡೆಗೇ ಸಾಗಿದವು; ಹಿಂತಿರುಗಿನೋಡದೆ ಮುಂದೆ ಹೋದವು.
13 ಆ ಜೀವಿಗಳ ಮಧ್ಯದಲ್ಲಿ ಅದ್ಭುತಕಾಂತಿಯೊಂದು ಉರಿಯುವ ಕೆಂಡಗಳೋ, ಪಂಜುಗಳೋ ಎಂಬಂತೆ ಕಾಣಿಸಿತು; ಅದು ಜೀವಿಗಳ ನಡುವೆ ಓಲಾಡುತ್ತಿತ್ತು; ಆ ಉರಿಯು ತೇಜೋಮಯವಾಗಿತ್ತು, ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು.
14 ಆ ಜೀವಿಗಳು ಮಿಂಚಿನಂತೆ ಮುಂದಕ್ಕೂ, ಹಿಂದಕ್ಕೂ ವೇಗವಾಗಿ ಚಲಿಸುತ್ತಿದ್ದವು.
15 ಇಗೋ, ನಾನು ಆ ಜೀವಿಗಳನ್ನು ನೋಡುತ್ತಿರಲಾಗಿ ಒಂದೊಂದು ಕಡೆಯಲ್ಲಿಯೂ ಜೀವಿಗಳ ಪಕ್ಕದಲ್ಲಿ ಭೂಮಿಯ ಮೇಲೆ ಒಂದು ಚಕ್ರವು ಕಾಣಿಸಿತು.
16 ಆ ಚಕ್ರಗಳ ವರ್ಣವೂ, ರಚನೆಯೂ ಹೇಗಿದ್ದವೆಂದರೆ, ಅವುಗಳ ವರ್ಣವು ಪೀತರತ್ನದ ಹಾಗೆ ಥಳಥಳಿಸುತ್ತಿತ್ತು. ಒಂದು ಚಕ್ರದೊಳಗೆ ಇನ್ನೊಂದು ಚಕ್ರವು ಅಡ್ಡವಾಗಿ ರಚಿಸಿದಂತಿತ್ತು; ಆ ನಾಲ್ಕು ಚಕ್ರಗಳು ಒಂದೇ ಮಾದರಿಯಾಗಿದ್ದವು.
17 ಅವು ಚಲಿಸುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ತಿರುಗುತ್ತಿದ್ದವು; ಓರೆಯಾಗಿ ತಿರುಗುತ್ತಿರಲಿಲ್ಲ.
18 ಗಾಲಿಗಳ ಸುತ್ತಣ ಭಾಗಗಳು ಎತ್ತರವಾಗಿಯೂ, ಭಯಂಕರವಾಗಿಯೂ ಇದ್ದವು; ಈ ಭಾಗಗಳ ಎಲ್ಲಾ ಕಡೆಯಲ್ಲಿಯೂ ತುಂಬಾ ಕಣ್ಣುಗಳಿದ್ದವು;
19 ಜೀವಿಗಳು ಮುಂದೆ ಹೋಗುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಮುಂದೆ ಹೋಗುತ್ತಿದ್ದವು; ಆ ಜೀವಿಗಳು ಭೂಮಿಯಿಂದ ಮೇಲಕ್ಕೇಳುವಾಗ ಚಕ್ರಗಳೂ ಮೇಲೆ ಏಳುತ್ತಿದ್ದವು;
20 ದೇವರಾತ್ಮವು ಸಾಗಿಸಿದ ಕಡೆಗೇ ಸಾಗಿದವು; ಜೀವಿಗಳ ಒಳಗಿನ ಆತ್ಮವು ಚಕ್ರಗಳಲ್ಲಿ ಇದ್ದ ಕಾರಣ ಚಕ್ರಗಳು ಅವುಗಳ ಪಕ್ಕದಲ್ಲಿ ಏಳುತ್ತಿದ್ದವು.
21 ಅವು ಮುಂದೆ ಹೋಗುವಾಗ ಇವೂ ಮುಂದೆ ಹೋಗುತ್ತಿದ್ದವು, ಅವು ನಿಂತು ಹೋಗುವಾಗ ಇವೂ ನಿಂತುಹೋಗುತ್ತಿದ್ದವು, ಅವು ನೆಲದಿಂದ ಮೇಲಕ್ಕೆ ಏಳುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಏಳುತ್ತಿದ್ದವು; ಏಕೆಂದರೆ ಜೀವಿಗಳ ಆತ್ಮವು ಚಕ್ರಗಳಲ್ಲಿಯೂ ಇತ್ತು.
22 ಭೀಕರವಾದ ಮಂಜುಗಡ್ಡೆಯಂತೆ ಥಳಥಳಿಸುವ ಒಂದು ರೀತಿಯ ಗಗನಮಂಡಲ ಆ ಜೀವಿಗಳ ತಲೆಯ ಮೇಲ್ಗಡೆ ಹರಡಿತ್ತು.
23 ಅದರ ಕೆಳಗೆ ಜೀವಿಗಳ ರೆಕ್ಕೆಗಳು ನೇರವಾಗಿ ಚಾಚಲ್ಪಟ್ಟು ಒಂದಕ್ಕೊಂದು ತಗಲುತ್ತಿದ್ದವು; ಇದಲ್ಲದೆ ಒಂದೊಂದು ಜೀವಿಗೆ ದೇಹವನ್ನು ಮುಚ್ಚಿಕೊಳ್ಳುವ ಎರಡೆರಡು ರೆಕ್ಕೆಗಳಿದ್ದವು.
24 ಅವು ಮುಂದೆ ಹೋಗುವಾಗ ಅವುಗಳ ರೆಕ್ಕೆಗಳ ಶಬ್ದವು ಜಲಪ್ರವಾಹದ ಘೋಷದಂತೆ ಸರ್ವಶಕ್ತನ ಧ್ವನಿಯಂತೆ, ಆರ್ಭಟಿಸುವ ಸೈನ್ಯದ ಕೋಲಾಹಲದಂತೆ ನನಗೆ ಕೇಳಿಸಿತು; ಅವು ನಿಂತಾಗ ರೆಕ್ಕೆಗಳನ್ನು ಮುದುರಿಕೊಳ್ಳುತ್ತಿದ್ದವು.
25 ಅವುಗಳ ತಲೆಗಳ ಮೇಲ್ಗಡೆಯ ಗಗನಮಂಡಲದ ಮೇಲಿಂದ ಒಂದು ಧ್ವನಿಯು ಕಿವಿಗೆ ಬಿತ್ತು. ಜೀವಿಗಳು ನಿಂತಾಗ ರೆಕ್ಕೆಗಳನ್ನು ಮುದುರಿಕೊಳ್ಳುತ್ತಿದ್ದವು.
26 ಅವುಗಳ ತಲೆಗಳ ಮೇಲ್ಗಡೆಯ ಗಗನಮಂಡಲ ಮೇಲೆ ಇಂದ್ರನೀಲಮಣಿಯಂತೆ ಹೊಳೆಯುವ ಸಿಂಹಾಸನಾಕಾರವು ಕಾಣಿಸಿತು; ಅದರ ಮೇಲೆ ನರರೂಪದಂಥ ರೂಪವುಳ್ಳ ಒಬ್ಬಾತನು ಆಸೀನನಾಗಿದ್ದನು.
27 ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಭುತಕಾಂತಿಯನ್ನು ಕಂಡೆನು; ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಕೆಳಗಡೆ ಬೆಂಕಿಯು ಉರಿಯುತ್ತದೋ ಎಂಬಂತಿರುವ ಮಹಾ ತೇಜಸ್ಸನ್ನು ನೋಡಿದೆನು; ಮತ್ತು ಪ್ರಕಾಶವು ಆತನನ್ನು ಆವರಿಸಿಕೊಂಡಿತ್ತು.
28 ಮಳೆಗಾಲದಲ್ಲಿ ಮೇಘಮಂಡಲದೊಳಗೆ ಕಾಮನ ಬಿಲ್ಲು ಹೊಳೆಯುವಂತೆ ಆತನ ಸುತ್ತಲೂ ಪ್ರಕಾಶವು ಹೊಳೆಯುತ್ತಿತ್ತು. ಹೀಗೆ ಯೆಹೋವನ ಮಹಿಮಾದ್ಭುತ ದರ್ಶನವು ಆಯಿತು. ಇದನ್ನು ಕಂಡಾಗ ನಾನು ಅಡ್ಡಬಿದ್ದೆ; ಮಾತನಾಡುವಾತನ ವಾಣಿಯನ್ನು ಕೇಳಿದೆ.