20
ಇಸ್ರಾಯೇಲರ ದಂಗೆ
1 ಏಳನೆಯ ವರ್ಷದ, ಐದನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ಯೆಹೋವನನ್ನು ಪ್ರಶ್ನೆ ಕೇಳುವುದಕ್ಕೆ ಬಂದು ನನ್ನ ಮುಂದೆ ಕುಳಿತುಕೊಂಡರು.
2 ಆಗ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
3 “ನರಪುತ್ರನೇ, ಇಸ್ರಾಯೇಲಿನ ಹಿರಿಯರನ್ನು ಸಂಬೋಧಿಸಿ ಹೀಗೆ ಹೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನನ್ನನ್ನು ಪ್ರಶ್ನೆ ಕೇಳುವುದಕ್ಕೆ ಬಂದಿರೋ? ನನ್ನ ಜೀವದಾಣೆ, ನಾನು ನಿಮಗೆ ಉತ್ತರ ಕೊಡುವುದೇ ಇಲ್ಲ’ ” ಇದು ಕರ್ತನಾದ ಯೆಹೋವನ ನುಡಿ.
4 “ನರಪುತ್ರನೇ, ಇವರಿಗೆ ನ್ಯಾಯತೀರಿಸಲು ನಿನ್ನ ಮನಸ್ಸು ಸ್ಥಿರವಾಗಿದೆಯೋ? ಇವರ ಪೂರ್ವಿಕರ ದುರಾಚಾರಗಳನ್ನು ಇವರಿಗೆ ಹೀಗೆ ತಿಳಿಸು,
5 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಯಾವ ದಿನದಲ್ಲಿ ನಾನು ಇಸ್ರಾಯೇಲನ್ನು ಆರಿಸಿಕೊಂಡು, ಯಾಕೋಬ ಸಂತಾನದವರಿಗೆ ಮಾತುಕೊಟ್ಟು, ನಾನು ನಿಮ್ಮ ದೇವರಾದ ಯೆಹೋವನು’ ಎಂದು ಐಗುಪ್ತ ದೇಶದಲ್ಲಿ ಪ್ರಮಾಣ ಪೂರ್ವಕವಾಗಿ ತಿಳಿಯಪಡಿಸಿದೆನೋ,
6 ಆ ದಿನದಲ್ಲಿ ನಾನು ಅವರಿಗೆ, ‘ಸಕಲ ದೇಶ ಶಿರೋಮಣಿಯಾದ ದೇಶವನ್ನು ನಿಮಗಾಗಿ ನೋಡಿದ್ದೇನೆ; ನಾನು ನಿಮ್ಮನ್ನು ಐಗುಪ್ತ ದೇಶದೊಳಗಿಂದ ಉದ್ಧರಿಸಿ ಹಾಲೂ ಮತ್ತು ಜೇನೂ ಹರಿಯುವ ಆ ದೇಶಕ್ಕೆ ಸೇರಿಸುವೆನು’ ಎಂದು ಪ್ರಮಾಣಮಾಡಿದೆನು.
7 ‘ನೀವೆಲ್ಲರೂ ನಿಮ್ಮ ಕಣ್ಣಿಗೆ ಕಾಣುವ ಇಷ್ಟವಾದ ಅಸಹ್ಯ ವಸ್ತುಗಳನ್ನು ಬಿಸಾಡಿಬಿಡಿರಿ, ಐಗುಪ್ತದ ವಿಗ್ರಹಗಳಿಂದ ನಿಮ್ಮನ್ನು ಹೊಲಸು ಮಾಡಿಕೊಳ್ಳಬೇಡಿರಿ; ನಾನು ನಿಮ್ಮ ದೇವರಾದ ಯೆಹೋವನು’ ” ಎಂಬುದಾಗಿ ಅವರನ್ನು ಎಚ್ಚರಿಸಿದೆನು.
8 “ ‘ಅವರಾದರೋ ನನ್ನ ಮಾತನ್ನು ನಿರಾಕರಿಸಿ, ನನ್ನ ಮೇಲೆ ತಿರುಗಿ ಬಿದ್ದರು; ತಮ್ಮ ಕಣ್ಣಿಗೆ ಕಾಣುವ ಇಷ್ಟವಾದ ಅಸಹ್ಯ ವಸ್ತುಗಳನ್ನು ಯಾರೂ ಬಿಸಾಡಿಬಿಡಲಿಲ್ಲ, ಐಗುಪ್ತದ ವಿಗ್ರಹಗಳನ್ನು ತ್ಯಜಿಸಲಿಲ್ಲ; ಆಗ ನಾನು ಇವರ ಮೇಲೆ ಐಗುಪ್ತ ದೇಶದೊಳಗೆ ನನ್ನ ರೋಷಾಗ್ನಿಯನ್ನು ಸುರಿಸಿ ನನ್ನ ಕೋಪವನ್ನು ತೀರಿಸಿಕೊಳ್ಳುವೆನು’ ಅಂದುಕೊಂಡೆನು.
9 ‘ಆದರೂ ನಿಮ್ಮನ್ನು ಐಗುಪ್ತ ದೇಶದೊಳಗಿಂದ ಪಾರುಮಾಡುವೆನು ಎಂಬುದಾಗಿ ಜನಾಂಗಗಳ ಮುಂದೆಯೇ ನನ್ನನ್ನು ಇವರಿಗೆ ಪ್ರಕಟಿಸಿಕೊಂಡೆನಲ್ಲಾ ಎಂದು ಯೋಚಿಸಿ, ಅವರ ಸುತ್ತಣ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗದಂತೆ ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆನು.
10 ಆಗ ನಾನು ಅವರನ್ನು ಐಗುಪ್ತ ದೇಶದೊಳಗಿಂದ ಬಿಡಿಸಿ, ಅರಣ್ಯಕ್ಕೆ ಕರೆದು ತರಲು,
11 ಕೈಗೊಳ್ಳುವವರಿಗೆ ಜೀವಾಧಾರವಾದ ನನ್ನ ಆಜ್ಞಾವಿಧಿಗಳನ್ನು ಅವರಿಗೆ ತಿಳಿಸಿಕೊಟ್ಟೆನು.
12 ಇದಲ್ಲದೆ ತಮ್ಮನ್ನು ಪರಿಶುದ್ಧ ಜನರನ್ನಾಗಿ ಮಾಡಿರುವ ಯೆಹೋವನು ನಾನೇ ಎಂದು ಅವರು ತಿಳಿದುಕೊಳ್ಳುವಂತೆ ನನಗೂ, ಅವರಿಗೂ ಗುರುತಾದ ಸಬ್ಬತ್ ದಿನಗಳನ್ನು ಅವರಿಗೆ ಗುರುತಾಗಿ ನೇಮಿಸಿದೆನು.
13 “ ‘ಆದರೆ ಇಸ್ರಾಯೇಲ್ ವಂಶದವರು ಅರಣ್ಯದಲ್ಲಿ ನನ್ನ ಮೇಲೆ ತಿರುಗಿ ಬಿದ್ದರು. ಕೈಗೊಳ್ಳುವವರಿಗೆ ಜೀವಾಧಾರವಾದ ನನ್ನ ಆಜ್ಞಾವಿಧಿಗಳನ್ನು ಅನುಸರಿಸದೆ ನಿರಾಕರಿಸಿದರು, ನಾನು ನೇಮಿಸಿದ ಸಬ್ಬತ್ ದಿನಗಳನ್ನು ವಿಶೇಷವಾಗಿ ಹೊಲೆಮಾಡಿದರು; ಆಗ ನಾನು ಇವರ ಮೇಲೆ ಅರಣ್ಯದೊಳಗೆ ನನ್ನ ರೋಷಾಗ್ನಿಯನ್ನು ಸುರಿಸಿ ಇವರನ್ನು ಧ್ವಂಸಮಾಡುವೆನು’ ಅಂದುಕೊಂಡೆನು.
14 ‘ಆದರೂ ಯಾವ ಜನಾಂಗಗಳ ಮುಂದೆ ಅವರನ್ನು ಪಾರುಮಾಡಿದೆನೋ, ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆನು.
15 ಆ ಮೇಲೆ ಸಕಲ ದೇಶ ಶಿರೋಮಣಿಯಾದ ಯಾವ ದೇಶವನ್ನು ವಾಗ್ದಾನಮಾಡಿದೆನೋ, ಹಾಲೂ ಮತ್ತು ಜೇನು ಹರಿಯುವ ಆ ದೇಶಕ್ಕೆ ನಿಮ್ಮನ್ನು ಸೇರಿಸುವುದಿಲ್ಲ ಎಂದು ಅರಣ್ಯದಲ್ಲಿ ಅವರಿಗೆ ಪ್ರಮಾಣ ಮಾಡಿದೆನು.
16 ಏಕೆಂದರೆ ಅವರ ಹೃದಯವು ತಮ್ಮ ವಿಗ್ರಹಗಳಲ್ಲಿ ಆಸಕ್ತರಾಗಿ, ಅವರು ನನ್ನ ಆಜ್ಞಾವಿಧಿಗಳನ್ನು ಅನುಸರಿಸದೆ ನಿರಾಕರಿಸಿ, ನಾನು ನೇಮಿಸಿದ ಸಬ್ಬತ್ ದಿನಗಳನ್ನು ಹೊಲೆ ಮಾಡಿದವರಾಗಿದ್ದರು.
17 ಆದರೂ ನಾನು ಅವರನ್ನು ನಾಶ ಮಾಡಲಿಲ್ಲ; ನನ್ನ ಕಟಾಕ್ಷವು ಅವರನ್ನು ಉಳಿಸಿತು; ನಾನು ಅವರನ್ನು ಅರಣ್ಯದಲ್ಲಿ ನಿರ್ಮೂಲಮಾಡಲಿಲ್ಲ.’ ”
18 ಆ ಮೇಲೆ ನಾನು ಅರಣ್ಯದಲ್ಲಿ ಅವರ ಸಂತಾನದವರಿಗೆ, “ನೀವು ನಿಮ್ಮ ತಂದೆಗಳ ಆಜ್ಞೆಗಳನ್ನು ಅನುಸರಿಸದೆ, ಅವರ ವಿಧಿಗಳನ್ನು ಕೈಕೊಳ್ಳದೆ, ಅವರ ವಿಗ್ರಹಗಳಿಂದ ನಿಮ್ಮನ್ನು ಹೊಲಸು ಮಾಡಿಕೊಳ್ಳದೆ ಇರಬೇಕು.
19 ನಾನು ನಿಮ್ಮ ದೇವರಾದ ಯೆಹೋವನು; ನೀವು ನನ್ನ ಆಜ್ಞೆಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ನಡೆಯಿರಿ.
20 ನಾನು ನೇಮಿಸಿದ ಸಬ್ಬತ್ ದಿನಗಳನ್ನು ನನ್ನ ಪರಿಶುದ್ಧ ದಿನಗಳೆಂದು ಆಚರಿಸಿರಿ; ನಾನು ನಿಮ್ಮ ದೇವರಾದ ಯೆಹೋವನು ಎಂದು ನೀವು ತಿಳಿದುಕೊಳ್ಳುವಂತೆ ಅವು ನಿಮಗೂ ಮತ್ತು ನನಗೂ ಗುರುತಾಗಿರುವುವು” ಎಂದು ಹೇಳಿದೆನು.
21 “ಆದರೆ ಆ ಸಂತಾನದವರಾದರೋ ನನ್ನ ಮೇಲೆ ತಿರುಗಿ ಬಿದ್ದರು; ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ; ಕೈಗೊಂಡವರಿಗೆ ಜೀವಾಧಾರವಾದ ನನ್ನ ವಿಧಿಗಳನ್ನು ಅನುಸರಿಸಿ ನಡೆಯಲಿಲ್ಲ; ನಾನು ನೇಮಿಸಿದ ಸಬ್ಬತ್ ದಿನಗಳನ್ನು ಹೊಲೆ ಮಾಡಿದರು; ಆದುದರಿಂದ ನಾನು ಅರಣ್ಯದಲ್ಲಿ ಇವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ನನ್ನ ಕೋಪವನ್ನು ತೀರಿಸಿಕೊಳ್ಳುವೆನು” ಅಂದುಕೊಂಡೆನು.
22 “ಆದರೂ ನಾನು ಯಾವ ಜನಾಂಗಗಳ ಮುಂದೆ ಅವರನ್ನು ಪಾರು ಮಾಡಿದೆನೋ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡು ಕೈಯನ್ನು ಹಿಂದಕ್ಕೆ ತೆಗೆದುಕೊಂಡೆನು.
23 ನಾನು ಅವರನ್ನು ಅನ್ಯಜನಾಂಗಗಳಲ್ಲಿ ಚದರಿಸುತ್ತೇನೆಂದೂ ದೇಶದಲ್ಲಿ ಹರಡಿಸುತ್ತೇನೆಂದೂ ಮರುಭೂಮಿಯಲ್ಲಿ ಪ್ರಮಾಣ ಮಾಡಿ ಹೇಳಿದೆ.
24 ಏಕೆಂದರೆ ನನ್ನ ಜನರು ನನ್ನ ಆಜ್ಞೆಗಳನ್ನು ಕೈಕೊಳ್ಳದೆ, ನನ್ನ ವಿಧಿಗಳನ್ನು ನಿರಾಕರಿಸಿ ನಾನು ನೇಮಿಸಿದ ಸಬ್ಬತ್ ದಿನಗಳನ್ನು ಹೊಲೆಮಾಡಿ, ತಮ್ಮ ಪೂರ್ವಿಕರ ವಿಗ್ರಹಗಳ ಮೇಲೆ ಕಣ್ಣುಹಾಕಿದ್ದರಿಂದ, ನಾನು ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ, ದೇಶ ದೇಶಗಳಿಗೆ ಚೆಲ್ಲಾಪಿಲ್ಲಿಯಾಗಿಸುವೆನು.” ಎಂದು ಅರಣ್ಯದಲ್ಲಿ ಅವರಿಗೆ ಪ್ರಮಾಣಮಾಡಿದೆನು.
25 “ಇದಲ್ಲದೆ, ನಾನೇ ಯೆಹೋವನು ಎಂದು ಅವರು ತಿಳಿದುಕೊಳ್ಳುವಂತೆ ನಾನು ಅವರಿಗೆ ಅಹಿತವಾದ ಆಜ್ಞೆಗಳನ್ನೂ, ಜೀವಾಧಾರವಲ್ಲದ ವಿಧಿಗಳನ್ನೂ ನೇಮಿಸಿದೆನು.
26 ಅವರು ತಮ್ಮ ಚೊಚ್ಚಲಮಕ್ಕಳನ್ನು ಆಹುತಿಕೊಟ್ಟು ಅರ್ಪಿಸುತ್ತಿದ್ದ ಬಲಿಗಳಿಂದಲೇ ಅವರನ್ನು ಹೊಲೆಗೆಡಿಸಿ, ಕೇವಲ ದುರಾವಸ್ಥೆಗೆ ತಂದೆನು.”
27 ಹೀಗಿರಲು, “ನರಪುತ್ರನೇ, ಇಸ್ರಾಯೇಲ್ ವಂಶದವರಿಗೆ ಈ ಮಾತನ್ನು ಹೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಿಮ್ಮ ಪೂರ್ವಿಕರು ಇನ್ನೂ ಒಂದು ದ್ರೋಹವನ್ನು ಮಾಡಿ ನನ್ನನ್ನು ದೂಷಿಸಿದ್ದಾರೆ.
28 ನಾನು ಪ್ರಮಾಣ ಪೂರ್ವಕವಾಗಿ ಅವರಿಗೆ ವಾಗ್ದಾನ ಮಾಡಿದ ದೇಶಕ್ಕೆ ಅವರನ್ನು ಸೇರಿಸಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ, ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳನ್ನೂ ನೋಡಿ ಅಲ್ಲಿ ಯಜ್ಞಪಶುಗಳನ್ನು ವಧಿಸಿ, ನನ್ನನ್ನು ರೇಗಿಸುವ ನೈವೇದ್ಯವನ್ನರ್ಪಿಸಿ, ಸುಗಂಧ ಹೋಮಮಾಡಿ, ಪಾನದ್ರವ್ಯವನ್ನು ಸುರಿದು, ಬಲಿ ಅರ್ಪಿಸುತ್ತಿದ್ದರು.’
29 ನೀವು ಹೋಗುವ, ‘ಬಾಮಾ ಎಂಬ ಪೂಜಾಸ್ಥಾನ ಇದು ಎಂಥ ಸ್ಥಳ?’ ” (ಇಂದಿನ ವರೆಗೂ ಇಂಥಾ ಪೂಜಾಸ್ಥಾನಗಳಿಗೆ ಬಾಮಾ ಎಂದೇ ಹೆಸರು).
ನ್ಯಾಯತೀರ್ಮಾನ ಮತ್ತು ಪುನಸ್ಥಾಪನೆ
30 ಇಸ್ರಾಯೇಲ್ ವಂಶದವರಿಗೆ ಹೀಗೆ ಹೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ಪೂರ್ವಿಕರಂತೆ ನಿಮ್ಮನ್ನು ನೀವೇ ಹೊಲಸು ಮಾಡಿಕೊಳ್ಳುತ್ತೀರೋ? ಅವರು ಪೂಜಿಸುತ್ತಿದ್ದ ಅಸಹ್ಯ ವಸ್ತುಗಳನ್ನು ನೀವೂ ಪೂಜಿಸಿ ದೇವದ್ರೋಹ ಮಾಡುತ್ತೀರೋ?
31 ನೀವು ಬಲಿಯರ್ಪಿಸುತ್ತಾ ನಿಮ್ಮ ಮಕ್ಕಳನ್ನು ಆಹುತಿಕೊಟ್ಟು ಇಂದಿನವರೆಗೂ ನಿಮ್ಮನ್ನು ಅಶುದ್ಧ ಮಾಡಿಕೊಳ್ಳುತ್ತಿದ್ದೀರೋ? ಇಸ್ರಾಯೇಲ್ ವಂಶದವರೇ, ನಾನು ನಿಮ್ಮಂಥವರಿಗೆ ದೈವೋತ್ತರವನ್ನು ದಯಪಾಲಿಸಬಹುದೋ? ನನ್ನ ಜೀವದಾಣೆ, ನಿಮಗೆ ದೈವೋತ್ತರವನ್ನು ದಯಪಾಲಿಸುವುದಿಲ್ಲ” ಇದು ಕರ್ತನಾದ ಯೆಹೋವನ ನುಡಿ.
32 “ನಾವು ಜನಾಂಗಗಳಂತೆ, ಅನ್ಯದೇಶಗಳವರಂತೆ ಮರಕಲ್ಲುಗಳ ಬೊಂಬೆಗಳನ್ನು ಭಜಿಸುವೆವು ಎಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆಯು ಖಂಡಿತ ನೆರವೇರುವುದಿಲ್ಲ.”
ಶಿಕ್ಷಿಸುವ ಹಾಗೂ ಕ್ಷಮಿಸುವ ದೇವರು
33 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ನಾನು ಶಿಕ್ಷಾಹಸ್ತವನ್ನೆತ್ತಿ, ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಸುರಿಸುತ್ತಾ ನಿಮ್ಮ ಮೇಲೆ ದೊರೆತನ ಮಾಡುವೆನು.
34 ಹೌದು, ನಾನು ಶಿಕ್ಷಾಹಸ್ತವನ್ನೆತ್ತಿ ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಸುರಿಸುತ್ತಾ ನಿಮ್ಮನ್ನು ಜನಾಂಗಗಳೊಳಗಿಂದ ಪಾರುಮಾಡಿ ನೀವು ಚದರಿಹೋಗಿರುವ ದೇಶಗಳಿಂದ ನಿಮ್ಮನ್ನು ಕೂಡಿಸುವೆನು.
35 ಜನಾಂಗಗಳ ಮಧ್ಯದ ಅರಣ್ಯಕ್ಕೆ ಕರೆ ತಂದು ಅಲ್ಲೇ ಮುಖಾಮುಖಿಯಾಗಿ ನಿಮ್ಮೊಂದಿಗೆ ವಾದಿಸುವೆನು.
36 ನಾನು ಐಗುಪ್ತದ ಅರಣ್ಯದಲ್ಲಿ ನಿಮ್ಮ ಪೂರ್ವಿಕರ ಸಂಗಡ ವಾದಿಸಿದಂತೆ, ನಿಮ್ಮ ಸಂಗಡಲೂ ವಾದಿಸುವೆನು” ಇದು ಕರ್ತನಾದ ಯೆಹೋವನ ನುಡಿ.
37 “ನಾನು ನಿಮ್ಮನ್ನು ಲೆಕ್ಕಿಸುವಂತೆ, ದಂಡನೆಯ ಕೋಲಿನ ಕೆಳಗೆ ಹೋಗುವಂತೆ ಮಾಡಿ, ಒಡಂಬಡಿಕೆಯ ಕಟ್ಟಿನಿಂದ ಬಂಧಿಸುವೆನು.
38 ನನಗೆ ತಿರುಗಿ ಬಿದ್ದು ದ್ರೋಹಿಗಳಾದವರನ್ನು ನಿಮ್ಮೊಳಗಿಂದ ಕಳುಹಿಸಿ ಬಿಡುವೆನು; ಅವರು ಪ್ರವಾಸಿಗಳಾಗಿದ್ದ ದೇಶದಿಂದ ನಾನು ಅವರನ್ನು ಪಾರು ಮಾಡಿದರೂ, ಅವರು ಇಸ್ರಾಯೇಲ್ ದೇಶಕ್ಕೆ ಸೇರುವುದೇ ಇಲ್ಲ; ನಾನೇ ಯೆಹೋವನು” ಎಂದು ನಿಮಗೆ ಗೊತ್ತಾಗುವುದು.
39 ಇಸ್ರಾಯೇಲ್ ವಂಶದವರೇ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಹೋಗಿರಿ, ನಿಮ್ಮ ವಿಗ್ರಹಗಳನ್ನು ಸೇವಿಸಿಕೊಳ್ಳಿರಿ; ಇನ್ನು ಮುಂದೆ ನನ್ನ ಮಾತನ್ನು ಕೇಳಿಯೇ ಕೇಳುವಿರಿ, ಇನ್ನು ಮೇಲಾದರೂ ನನ್ನ ಪರಿಶುದ್ಧ ನಾಮವನ್ನು ನಿಮ್ಮ ಬಲಿಗಳಿಂದಲೂ, ವಿಗ್ರಹಗಳಿಂದಲೂ ನೀವು ಅಪಕೀರ್ತಿಗೆ ಗುರಿಮಾಡುವುದೇ ಇಲ್ಲ.”
40 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ದೇಶದಲ್ಲಿ ಇಸ್ರಾಯೇಲ್ ವಂಶದವರೆಲ್ಲರೂ ನನ್ನ ಪರಿಶುದ್ಧವಾದ ಬೆಟ್ಟದಲ್ಲಿ, ಇಸ್ರಾಯೇಲಿನ ಪರ್ವತಾಗ್ರದಲ್ಲಿ ನನ್ನನ್ನು ಸೇವಿಸುವರು; ಅಲ್ಲೇ ಅವರಿಗೆ ಪ್ರಸನ್ನನಾಗುವೆನು, ಅಲ್ಲೇ ನಿಮ್ಮ ಕಾಣಿಕೆಗಳನ್ನೂ, ಉತ್ತಮ ನೈವೇದ್ಯಗಳನ್ನೂ, ಮೀಸಲಾದ ಎಲ್ಲವನ್ನೂ ಬರಮಾಡಿಕೊಳ್ಳುವೆನು.
41 ನಾನು ನಿಮ್ಮನ್ನು ಜನಾಂಗಗಳೊಳಗಿಂದ ಪಾರುಮಾಡಿ, ನೀವು ಚದರಿಹೋಗಿರುವ ದೇಶಗಳಿಂದ ತಂದು ಕೂಡಿಸುವಾಗ ನಿಮ್ಮ ಸುಗಂಧಹೋಮವನ್ನು ಅಂಗೀಕರಿಸಿ, ನಿಮಗೆ ಪ್ರಸನ್ನನಾಗುವೆನು; ಸಕಲ ಜನಾಂಗಗಳೆದುರಿಗೆ ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು.
42 ನಾನು ಪ್ರಮಾಣಮಾಡಿ, ನಿಮ್ಮ ಪೂರ್ವಿಕರಿಗೆ ಯಾವ ದೇಶವನ್ನು ಕೊಟ್ಟೆನೋ, ಆ ಇಸ್ರಾಯೇಲ್ ದೇಶಕ್ಕೆ ನಿಮ್ಮನ್ನು ಬರಮಾಡುವಾಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.
43 ನೀವು ನಿಮ್ಮನ್ನು ಹೊಲಸು ಮಾಡಿಕೊಂಡಿರುವ ನಿಮ್ಮ ನಡತೆಯನ್ನೂ, ನಿಮ್ಮ ಎಲ್ಲಾ ಕಾರ್ಯಗಳನ್ನೂ ಅಲ್ಲಿ ಜ್ಞಾಪಕಕ್ಕೆ ತಂದುಕೊಂಡು, ನೀವು ನಡೆಸಿರುವ ಸಕಲ ದುಷ್ಕೃತ್ಯಗಳ ನಿಮಿತ್ತ ನಿಮ್ಮನ್ನು ನೋಡಿ ನೀವೇ ಅಸಹ್ಯಪಡುವಿರಿ.
44 ಇಸ್ರಾಯೇಲ್ ವಂಶದವರೇ, ನಿಮ್ಮ ದುರ್ನಡತೆಗೂ, ದುಷ್ಕೃತ್ಯಗಳಿಗೂ ತಕ್ಕ ಹಾಗೆ ನಾನು ನಿಮ್ಮನ್ನು ದಂಡಿಸದೆ, ನನ್ನ ಹೆಸರಿನ ನಿಮಿತ್ತವೇ ನಾನು ನಿಮ್ಮನ್ನು ಸಹಿಸಿಕೊಂಡಿರುವಾಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು” ಇದು ಕರ್ತನಾದ ಯೆಹೋವನ ನುಡಿ.
ಕಾಡುಗಿಚ್ಚಿನ ಸಾಮ್ಯ
45 ಆ ಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
46 “ನರಪುತ್ರನೇ, ನೀನು ದಕ್ಷಿಣಾಭಿಮುಖನಾಗಿ ಆ ಕಡೆಗೆ ಮಾತನಾಡುತ್ತಾ ದಕ್ಷಿಣ ಸೀಮೆಯ ವನದ ಪ್ರಸ್ತಾಪವನ್ನೆತ್ತಿ,
47 ಆ ವನಕ್ಕೆ ಹೀಗೆ ಪ್ರವಾದಿಸು, ಯೆಹೋವನ ಮಾತನ್ನು ಕೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ, ನಾನು ನಿನ್ನೊಳಗೆ ಬೆಂಕಿಯನ್ನು ಹೊತ್ತಿಸುವೆನು, ಅದು ನಿನ್ನಲ್ಲಿನ ಎಲ್ಲಾ ಹಸಿರು ಮರಗಳನ್ನೂ, ಒಣಮರಗಳನ್ನೂ ನುಂಗಿ ಬಿಡುವುದು; ಧಗಧಗಿಸುವ ಉರಿಯು ಆರದೆ ದಕ್ಷಿಣದಿಂದ ಉತ್ತರದವರೆಗೆ ಎಲ್ಲರ ಮುಖಗಳು ಸುಟ್ಟು ಹೋಗುವವು.
48 ಅದನ್ನು ಹೊತ್ತಿಸಿದವನು ಯೆಹೋವನಾದ ನಾನೇ ಎಂಬುದು ಸಕಲ ನರಪ್ರಾಣಿಗಳಿಗೂ ಗೋಚರವಾಗುವುದು; ಅದು ಆರಿಹೋಗದು.’
49 “ಆಗ ನಾನು, ‘ಅಯ್ಯೋ, ಕರ್ತನಾದ ಯೆಹೋವನೇ, ಇವನು ಒಗಟುಗಾರನಲ್ಲವೇ?’ ಎಂದು ಈ ಜನರು ನನ್ನ ವಿಷಯವಾಗಿ ಅಂದುಕೊಳ್ಳುತ್ತಾರೆ” ಎಂಬುದಾಗಿ ಅರಿಕೆಮಾಡಿದೆನು.