34
ಇಸ್ರಾಯೇಲೆಂಬ ಮಂದೆಯ ಕುರುಬರ ಸ್ವಾರ್ಥತೆ
ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು, “ನರಪುತ್ರನೇ, ಇಸ್ರಾಯೇಲಿನ ಮಂದೆಯ ಕುರುಬರಿಗೆ ಈ ಪ್ರವಾದನೆಯನ್ನು ನುಡಿ, ಪ್ರವಾದಿಸಿ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅಯ್ಯೋ, ಸ್ವಂತ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಇಸ್ರಾಯೇಲಿನ ಕುರುಬರ ಗತಿಯನ್ನು ಏನು ಹೇಳಲಿ! ಕುರಿಗಳನ್ನು ಮೇಯಿಸುವುದು ಕುರುಬರ ಧರ್ಮವಲ್ಲವೋ? ನೀವು ಕೊಬ್ಬಿನ ಮಾಂಸವನ್ನು ತಿನ್ನುತ್ತೀರಿ, ಉಣ್ಣೆಯ ಬಟ್ಟೆಯನ್ನು ಹಾಕುತ್ತೀರಿ, ಕೊಬ್ಬಿದ ಕುರಿಗಳನ್ನು ಕೊಲ್ಲುತ್ತೀರಿ; ಆದರೆ ಕುರಿಗಳನ್ನು ಮೇಯಿಸುವುದಿಲ್ಲ. ನೀವು ದುರ್ಬಲವಾದವುಗಳನ್ನು ಬಲಗೊಳಿಸುವುದಿಲ್ಲ, ರೋಗದವುಗಳನ್ನು ಸ್ವಸ್ಥಮಾಡುವುದಿಲ್ಲ, ಮುರಿದ ಅಂಗಗಳನ್ನು ಕಟ್ಟುವುದಿಲ್ಲ, ಕಳೆದು ಹೋದವುಗಳನ್ನು ಹುಡುಕುವುದಿಲ್ಲ, ಓಡಿಸಿದನ್ನು ನೀವು ಹಿಂದಕ್ಕೆ ತರುವುದಿಲ್ಲ, ಆದರೆ ಬಲಾತ್ಕಾರದಿಂದ ಮತ್ತು ಕ್ರೂರತನದಿಂದ ಅವುಗಳ ಮೇಲೆ ದೊರೆತನ ಮಾಡುತ್ತೀರಿ. ಕುರುಬರು ಇಲ್ಲವಾದುದರಿಂದ ಅವು ಚದುರಿ ಹೋದವು; ಚದುರಿ ಹೋಗಿ, ಕಾಡಿನ ಸಕಲ ಮೃಗಗಳಿಗೆ ತುತ್ತಾದವು. ನನ್ನ ಕುರಿಗಳು ಪರ್ವತಗಳ ಮೇಲೆಯೂ, ಎತ್ತರವಾದ ಪ್ರತಿಯೊಂದು ಬೆಟ್ಟದ ಮೇಲೆಯೂ ಅಲೆದಾಡುತ್ತಿವೆ; ಹೌದು, ನನ್ನ ಮಂದೆಯು ಭೂಮಂಡಲದಲ್ಲೆಲ್ಲಾ ಚದುರಿಹೋಗಿದೆ; ಯಾರೂ ಅವುಗಳ ಹಿಂದೆ ಹೋಗಿ ಹುಡುಕಲಿಲ್ಲ.
“ ‘ಆದುದರಿಂದ ಕುರುಬರೇ, ಯೆಹೋವನ ಮಾತನ್ನು ಕೇಳಿರಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ “ಅಯ್ಯೋ, ನನ್ನ ಮಂದೆಯು ಕೊಳ್ಳೆಯಾದವು, ಕಾಡಿನ ಸಕಲ ಮೃಗಗಳಿಗೆ ತುತ್ತಾದವು, ಕುರುಬನಿಲ್ಲದೆ ಬಯಲಿನ ಮೃಗಗಳಿಗೆಲ್ಲಾ ಆಹಾರವಾಯಿತು, ನನ್ನ ಕುರುಬರು ನನ್ನ ಕುರಿಗಳನ್ನು ಹುಡುಕಲಿಲ್ಲ, ಅವರು ಸ್ವಂತ ಹೊಟ್ಟೆಯನ್ನು ತುಂಬಿಸಿಕೊಂಡರೇ ಹೊರತು ನನ್ನ ಕುರಿಗಳ ಹೊಟ್ಟೆಯನ್ನು ನೋಡಲೇ ಇಲ್ಲ.”
“ ‘ಆದಕಾರಣ, ಕುರುಬರೇ, ಯೆಹೋವನ ವಾಕ್ಯವನ್ನು ಕೇಳಿರಿ, 10 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ನನ್ನ ಜೀವದಾಣೆ, ನಾನು ಕುರುಬರಿಗೆ ವಿರುದ್ಧವಾಗಿದ್ದೇನೆ; ಅವರು ನನ್ನ ಕುರಿಗಳ ಲೆಕ್ಕವನ್ನು ನನಗೆ ಒಪ್ಪಿಸಬೇಕು; ನನ್ನ ಕುರಿಗಳನ್ನು ಮೇಯಿಸುವ ಕೆಲಸದಿಂದ ಅವರನ್ನು ತೆಗೆದುಬಿಡುವೆನು; ಆ ಕುರುಬರು ಇನ್ನು ಸ್ವಂತ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಿಲ್ಲ; ನನ್ನ ಕುರಿಗಳು ಆಹಾರವಾಗಿ, ಅವರ ಬಾಯಿಗೆ ಬೀಳದಂತೆ ಅವುಗಳನ್ನು ರಕ್ಷಿಸುವೆನು.”
ಯೆಹೋವನೇ ಒಳ್ಳೆಯ ಕುರುಬನು
11 “ ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು. 12 ಮಂದೆಯ ಕುರುಬನು ಸುತ್ತುಮುತ್ತಲು ಚದುರಿ ಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ, ನಾನು ನನ್ನ ಕುರಿಗಳನ್ನು ಹುಡುಕುವೆನು; ಕಾರ್ಮುಗಿಲಿನ ದುರ್ದಿನದಲ್ಲಿ ಚದುರಿಹೋದ ಎಲ್ಲಾ ಸ್ಥಳಗಳಿಂದ ಅವುಗಳನ್ನು ರಕ್ಷಿಸುವೆನು.
13 “ ‘ “ಜನಾಂಗಗಳ ವಶದಿಂದ ಅವುಗಳನ್ನು ತಪ್ಪಿಸಿ ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡಿ, ಇಸ್ರಾಯೇಲಿನ ಪರ್ವತಗಳ ಮೇಲೆಯೂ, ಹಳ್ಳಗಳ ಬಳಿಯಲ್ಲಿಯೂ, ದೇಶದ ಎಲ್ಲಾ ಪ್ರದೇಶಗಳಲ್ಲಿಯೂ ಮೇಯಿಸುವೆನು. 14 ಅವುಗಳನ್ನು ಒಳ್ಳೆಯ ಮೇವಿನಿಂದ ಮೇಯಿಸುವೆನು; ಅವುಗಳ ಹುಲ್ಲುಗಾವಲು ಇಸ್ರಾಯೇಲಿನ ಎತ್ತರವಾದ ಬೆಟ್ಟಗಳಲ್ಲಿರುವುದು; ಅವು ಒಳ್ಳೆಯ ಮಂದೆಯಲ್ಲಿ ಮಲಗಿ; ಇಸ್ರಾಯೇಲಿನ ಪರ್ವತಗಳಲ್ಲಿ ಪುಷ್ಟಿಯುಳ್ಳ ಮೇವನ್ನು ಮೇಯುವವು. 15 ನಾನೇ ನನ್ನ ಕುರಿಗಳನ್ನು ಮೇಯಿಸಿ, ಹಾಯಾಗಿ ಮಲಗುವಂತೆ ಮಾಡುವೆನು” ಇದು ಕರ್ತನಾದ ಯೆಹೋವನ ನುಡಿ. 16 “ತಪ್ಪಿಸಿಕೊಂಡದ್ದನ್ನು ಹುಡುಕುವೆನು, ಓಡಿಸಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದದ್ದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು; ಬಲಿತ ಕೊಬ್ಬಿದ ಕುರಿಗಳನ್ನು *ಸಂಹರಿಸುವೆನು; ನಾನೇ ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.”
ದುರ್ಬಲರಿಗೆ ಪ್ರಬಲರ ಹಿಂಸೆ
17 “ ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಹಿಂಡೇ, ಇಗೋ, ನಾನು ನಿಮ್ಮಲ್ಲಿನ ಕುರಿಮೇಕೆಗಳಿಗೂ, ಟಗರುಹೋತಗಳಿಗೂ ಮಧ್ಯವರ್ತಿಯಾಗಿ ನ್ಯಾಯ ತೀರಿಸುವೆನು. 18 (ಟಗರುಹೋತಗಳೇ,) ಒಳ್ಳೆಯ ಮೇವನ್ನು ನೀವು ಮೇದುಬಿಟ್ಟು ಉಳಿದ ಮೇವನ್ನು ತುಳಿದು ಕಾಲಕಸ ಮಾಡಿದ್ದು ಅಲ್ಪಕಾರ್ಯವೋ? ತಿಳಿನೀರನ್ನು ಕುಡಿದುಬಿಟ್ಟು, ಉಳಿದದ್ದನ್ನು ಕಾಲಿನಿಂದ ಕಲಕಿ ಹೊಲಸು ಮಾಡಿದ್ದು ಸಣ್ಣ ಕೆಲಸವೋ? 19 ನೀವು ತುಳಿದು ಕಾಲಕಸ ಮಾಡಿದ್ದನ್ನು ನನ್ನ ಕುರಿಗಳು ಮೇಯಬೇಕಾಯಿತು; ನೀವು ಕಾಲಿನಿಂದ ಕಲಕಿ ಹೊಲಸು ಮಾಡಿದ್ದನ್ನು ಅವು ಕುಡಿಯಬೇಕಾಯಿತು.”
20 “ ‘ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನೇ ಕೊಬ್ಬಿದ ಟಗರುಹೋತಗಳಿಗೂ, ಬಡ ಕುರಿಮೇಕೆಗಳಿಗೂ ನ್ಯಾಯತೀರಿಸುತ್ತೇನೆ. 21 ಏಕೆಂದರೆ (ಟಗರುಹೋತಗಳೇ,) ನೀವು ಕುರಿಮೇಕೆಗಳನ್ನು ಪಕ್ಕೆಯಿಂದಲೂ, ಹೆಗಲಿನಿಂದಲೂ ನೂಕುತ್ತಾ, ದುರ್ಬಲವಾದವುಗಳನ್ನು ಕೊಂಬುಗಳಿಂದ ಹಾಯುತ್ತಾ, ನನ್ನ ಹಿಂಡನ್ನು ಚದುರಿಸಿಬಿಟ್ಟಿರಿ. 22 ಆದಕಾರಣ ನನ್ನ ಹಿಂಡು ಇನ್ನೆಂದಿಗೂ ಕೊಳ್ಳೆಯಾಗದಂತೆ ನಾನು ಅದನ್ನು ರಕ್ಷಿಸಿ, ಟಗರುಹೋತಗಳಿಗೂ, ಕುರಿಮೇಕೆಗಳಿಗೂ ನ್ಯಾಯತೀರಿಸುವೆನು.”
ದೇವರ ಕೃಪಾಪೂರ್ಣವಾದ ಒಡಂಬಡಿಕೆ
23 “ ‘ನನ್ನ ಹಿಂಡನ್ನು ಕಾಯಲಿಕ್ಕೆ ಒಬ್ಬನೇ ಕುರುಬನನ್ನು ನೇಮಿಸುವೆನು; ನನ್ನ ಸೇವಕನಾದ ದಾವೀದನೆಂಬ ಆ ಕುರುಬನು ಅದನ್ನು ಮೇಯಿಸುವನು; ಹೌದು, ಅದರ ಕುರುಬನಾಗಿ ಅದನ್ನು ಮೇಯಿಸುತ್ತಾ ಬರುವನು. 24 ಯೆಹೋವನಾದ ನಾನು ನನ್ನ ಜನರ ದೇವರಾಗಿರುವೆನು; ನನ್ನ ಸೇವಕನಾದ ದಾವೀದನು ಅವರನ್ನಾಳುವ ಅರಸನಾಗಿರುವನು; ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ.
25 “ ‘ನಾನು ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ದುಷ್ಟಮೃಗಗಳು ದೇಶದಲ್ಲಿ ಇನ್ನಿರದಂತೆ ಮಾಡುವೆನು; ನನ್ನ ಜನರು ಕಾಡಿನಲ್ಲಿ ನಿರ್ಭಯವಾಗಿ ವಾಸಿಸುವರು, ಅರಣ್ಯದಲ್ಲಿ ಹಾಯಾಗಿ ನಿದ್ರಿಸುವರು. 26 ನಾನು ಅವರನ್ನೂ, ನನ್ನ ಪರ್ವತದ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿಸಿ ಸುಖಪಡಿಸುವೆನು; ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ದಿವ್ಯಾಶೀರ್ವಾದದ ಮಳೆಯು ಆಗುವುದು. 27 ತೋಟದ ಮರಗಳು ಹಣ್ಣುಬಿಡುವುದು; ಹೊಲಗಳು ಒಳ್ಳೆಯ ಬೆಳೆಯನ್ನು ಕೊಡುವುದು; ಜನರು ಸ್ವದೇಶದಲ್ಲಿ ನೆಮ್ಮದಿಯಾಗಿರುವರು; ಅವರ ಮೇಲೆ ಹೇರಿದ ನೊಗದ ಬಂಧನಗಳನ್ನು ಮುರಿದು ಹಾಕಿ, ಅವರನ್ನು ದಾಸರಾಗಿ ಮಾಡಿಕೊಂಡವರ ಅಧೀನದಿಂದ ಬಿಡಿಸಿದಾಗ ನಾನೇ ಯೆಹೋವನು ಎಂದು ಅವರಿಗೆ ದೃಢವಾಗುವುದು.
28 “ ‘ಅಂದಿನಿಂದ ಅವರನ್ನು ಅನ್ಯಜನರು ಸೂರೆಮಾಡುವುದಿಲ್ಲ, ಕಾಡು ಮೃಗಗಳು ಅವರನ್ನು ತಿನ್ನುವುದಿಲ್ಲ; ಅವರು ಯಾರಿಗೂ ಹೆದರದೆ ನೆಮ್ಮದಿಯಾಗಿ ವಾಸಿಸುವರು. 29 ನಾನು ಅವರಿಗಾಗಿ ಪ್ರಸಿದ್ಧ ಫಲವೃಕ್ಷಗಳನ್ನು ಬೆಳೆಯಿಸುವೆನು, ಕ್ಷಾಮವು ಅವರ ದೇಶವನ್ನು ಇನ್ನು ಹಾಳುಮಾಡುವುದಿಲ್ಲ, ಅವರು ಅನ್ಯಜನರ ತಿರಸ್ಕಾರಕ್ಕೆ ಗುರಿಯಾಗುವುದಿಲ್ಲ.
30 “ ‘ಆಗ ಅವರು ತಮ್ಮ ದೇವರಾದ ಯೆಹೋವನೆಂಬ ನಾನು ತಮ್ಮೊಂದಿಗೆ ಇದ್ದೇನೆಂತಲೂ, ಇಸ್ರಾಯೇಲ್ ವಂಶದವರಾದ ತಾವು ತನ್ನ ಜನರಾಗಿದ್ದೇವೆಂತಲೂ ತಿಳಿದುಕೊಳ್ಳುವರು’ ” ಇದು ಕರ್ತನಾದ ಯೆಹೋವನ ನುಡಿ. 31 “ನೀವು ನನ್ನ ಕುರಿಗಳು, ನನ್ನ ಮೇವಿನ ಮಂದೆಯ ಕುರಿಗಳು; ನರಪ್ರಾಣಿಗಳಾದ ನಿಮಗೆ ನಾನು ದೇವರು ಎಂದು ಕರ್ತನಾದ ಯೆಹೋವನು ಅನ್ನುತ್ತಾನೆ.”
* 34:16 34:16 ಅಥವಾ ಸಂರಕ್ಷಿಸುವೆನು.