8
ದೇವಾಲಯದಲ್ಲಿನ ಅಸಹ್ಯ ಕಾರ್ಯಗಳು
ಯೆಹೋಯಾಖೀನನು ಸೆರೆಯಾದ ಆರನೆಯ ವರ್ಷದ, ಆರನೆಯ ತಿಂಗಳಿನ, ಐದನೆಯ ದಿನದಲ್ಲಿ ನಾನೂ ಮತ್ತು ಯೆಹೂದದ ಹಿರಿಯರೂ ನನ್ನ ಮನೆಯೊಳಗೆ ಎದುರಾಗಿ ಕುಳಿತಿರಲು ಕರ್ತನಾದ ಯೆಹೋವನ ಹಸ್ತಸ್ಪರ್ಶದಿಂದ ನಾನು ಪರವಶನಾದೆನು. ಇಗೋ, ನಾನು ನೋಡಲಾಗಿ ಬೆಂಕಿಯು ಉರಿಯುತ್ತದೋ ಎಂಬಂತೆ ನನಗೆ ತೇಜೋರೂಪವು ಕಾಣಿಸಿತು; ಸೊಂಟದ ಹಾಗೆ ತೋರುವ ಅದರ ಮಧ್ಯಭಾಗದಿಂದ ಕೆಳಗಡೆ ಬೆಂಕಿಯು ಉರಿಯುತ್ತಿತ್ತು; ಅದರ ಮಧ್ಯಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ ಎಂಬಂತೆ ಅದ್ಭುತಕಾಂತಿಯು ಹೊಳೆಯಿತು. ಆಗ ಆ ತೇಜೋರೂಪಿಯು ಮನುಷ್ಯ ಹಸ್ತದಂಥ ಹಸ್ತವನ್ನು ಚಾಚಿ ನನ್ನ ತಲೆಯ ಕೂದಲಿನಿಂದ ಹಿಡಿಯಲು ದೇವರಾತ್ಮವು ನನ್ನನ್ನು ಎತ್ತಿಕೊಂಡು ಭೂಮ್ಯಾಕಾಶಗಳ ನಡುವೆ ಯೆರೂಸಲೇಮಿನವರೆಗೆ ಒಯ್ದು, ಒಳಗಣ ಪ್ರಾಕಾರದ ಉತ್ತರ ಬಾಗಿಲ ಮುಂದೆ, ದೇವರನ್ನು ರೋಷಗೊಳಿಸುವ ವಿಗ್ರಹವು ಮೊದಲಿದ್ದ ಸ್ಥಳದಲ್ಲಿ ನಿಲ್ಲಿಸಿದ ಹಾಗೆ ಆ ದೇವದರ್ಶನದಲ್ಲಿ ನನಗೆ ಕಂಡು ಬಂದಿತು. ಆಹಾ, ಇಸ್ರಾಯೇಲಿನ ದೇವರ ಮಹಿಮೆಯ ದರ್ಶನವು ಬಯಲು ಸೀಮೆಯಲ್ಲಿ ಆದಂತೆ ಇಲ್ಲಿಯೂ ನನಗಾಯಿತು.
ಆಗ ಆತನು ನನಗೆ, “ನರಪುತ್ರನೇ, ಉತ್ತರ ದಿಕ್ಕಿಗೆ ಕಣ್ಣೆತ್ತಿ ನೋಡು” ಎಂದು ಹೇಳಿದನು; ಹಾಗೆ ನಾನು ಉತ್ತರ ದಿಕ್ಕಿಗೆ ಕಣ್ಣೆತ್ತಿ ನೋಡಲು, ಇಗೋ, ದೇವರನ್ನು ರೋಷಗೊಳಿಸುವ ಆ ವಿಗ್ರಹವು ಯಜ್ಞವೇದಿಯ ಉತ್ತರದಿಕ್ಕಿನ ಬಾಗಿಲಿನ ಪ್ರವೇಶದ್ವಾರದ ಮುಂದೆ ನಿಂತಿತ್ತು.
ಆಗ ಆತನು ನನಗೆ, “ನರಪುತ್ರನೇ, ಇವರು ಮಾಡುವುದನ್ನು ನೋಡಿದೆಯಾ? ಇಸ್ರಾಯೇಲ್ ವಂಶದವರು ಇಲ್ಲಿ ನಡೆಸುವ ಅಧಿಕ ದುರಾಚಾರಗಳನ್ನು ಕಂಡೆಯಾ? ಇದರಿಂದ ನಾನು ನನ್ನ ಪವಿತ್ರಾಲಯವನ್ನು ಬಿಟ್ಟು ದೂರ ಹೋಗಬೇಕಾಯಿತು. ಬಾ, ಇವುಗಳಿಗಿಂತ ಇನ್ನು ಹೆಚ್ಚಾದ ದುರಾಚಾರಗಳನ್ನು ನೋಡುವೆ” ಎಂದು ಹೇಳಿದನು.
ಆಮೇಲೆ ಆತನು ನನ್ನನ್ನು ಪ್ರಾಕಾರದ ಬಾಗಿಲಿಗೆ ಬರ ಮಾಡಿದನು; ಇಗೋ, ಆ ಗೋಡೆಯಲ್ಲಿ ಒಂದು ರಂಧ್ರವು ನನಗೆ ಕಾಣಿಸಿತು. ಆಗ ಆತನು ನನಗೆ, “ನರಪುತ್ರನೇ, ಗೋಡೆಯನ್ನು ತೋಡು” ಎಂದು ಹೇಳಿದನು. ನಾನು ಗೋಡೆಯನ್ನು ತೋಡಲಾಗಿ ಅಲ್ಲಿ, ಒಂದು ಬಾಗಿಲು ಕಾಣಿಸಿತು.
ಆತನು ನನಗೆ, “ನೀನು ಒಳಕ್ಕೆ ಹೋಗಿ ಜನರು ಇಲ್ಲಿ ನಡೆಸುವ ಅಸಹ್ಯವಾದ ದುಷ್ಕಾರ್ಯಗಳನ್ನು ನೋಡು” ಎಂದು ಹೇಳಿದಾಗ ನಾನು ಹೋಗಿ ನೋಡಿದೆನು. 10 ಇಗೋ, ಎಲ್ಲಾ ಜಾತಿಯ ಕ್ರಿಮಿಕೀಟಗಳೂ, ಅಸಹ್ಯ ಮೃಗಗಳೂ ಮತ್ತು ಇಸ್ರಾಯೇಲ್ ವಂಶದವರು ಪೂಜಿಸುವ ಸಕಲ ಮೂರ್ತಿಗಳೂ ಆ ಗೋಡೆಯ ಸುತ್ತಲೂ ಚಿತ್ರಿಸಲ್ಪಟ್ಟಿದ್ದವು. 11 ಇಸ್ರಾಯೇಲ್ ವಂಶದ ಎಪ್ಪತ್ತು ಮಂದಿ ಹಿರಿಯರೂ ಮತ್ತು ಅವರ ಮಧ್ಯದಲ್ಲಿ ಶಾಫಾನನ ಮಗನಾದ ಯಾಜನ್ಯನೂ ತಮ್ಮ ತಮ್ಮ ಕೈಗಳಲ್ಲಿ ಧೂಪಾರತಿಗಳನ್ನು ಹಿಡಿದುಕೊಂಡು ಆ ಚಿತ್ರಗಳ ಮುಂದೆ ನಿಂತಿದ್ದರು; ಧೂಪದ ಸುವಾಸನೆಯ ಧೂಮವು ಮೇಘವಾಗಿ ಏರುತ್ತಿತ್ತು.
12 ಆಗ ಆತನು ನನಗೆ, “ನರಪುತ್ರನೇ, ಇಸ್ರಾಯೇಲ್ ವಂಶದ ಹಿರಿಯರೆಲ್ಲರೂ ನಾನಾ ರೂಪಗಳಿಂದ ಚಿತ್ರಿಸಲ್ಪಟ್ಟ ತಮ್ಮ ತಮ್ಮ ಕೋಣೆಗಳೊಳಗೆ ಕತ್ತಲೆಯಲ್ಲಿ ನಡೆಸುವ ಕೆಲಸವನ್ನು ನೋಡಿದೆಯಾ? ‘ಯೆಹೋವನು ನಮ್ಮನ್ನು ನೋಡುವುದಿಲ್ಲ, ಯೆಹೋವನು ದೇಶವನ್ನು ತೊರೆದುಬಿಟ್ಟಿದ್ದಾನೆ’ ಎಂದು ಮಾತನಾಡಿಕೊಳ್ಳುತ್ತಾರಷ್ಟೆ” ಎಂಬುದಾಗಿ ಹೇಳಿದನು. 13 ಆಮೇಲೆ ಆತನು ನನಗೆ, “ಇವುಗಳಿಗಿಂತ ಇನ್ನೂ ಹೆಚ್ಚಾದ ದುರಾಚಾರಗಳನ್ನು ನೋಡುವಿ” ಎಂದು ಹೇಳಿದನು.
14 ಆತನು ನನ್ನನ್ನು ಯೆಹೋವನ ಆಲಯದ ಉತ್ತರದ ಬಾಗಿಲ ಮುಂದಕ್ಕೆ ಕರೆತಂದನು; ಇಗೋ, ಅಲ್ಲಿ ಸ್ತ್ರೀಯರು “ತಮ್ಮೂಜ್*” ದೇವತೆಗಾಗಿ ಅಳುತ್ತಾ ಕುಳಿತಿದ್ದರು. 15 ಇದಾದ ಮೇಲೆ ಆತನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ? ಇವುಗಳಿಗಿಂತ ಇನ್ನೂ ಹೆಚ್ಚಾದ ದುರಾಚಾರಗಳನ್ನು ನೋಡುವೆ” ಎಂದು ಹೇಳಿದನು.
16 ಆತನು ಯೆಹೋವನ ಆಲಯದ ಒಳಗಣ ಪ್ರಾಕಾರದೊಳಕ್ಕೆ ನನ್ನನ್ನು ಕರೆತಂದನು; ಇಗೋ, ಯೆಹೋವನ ಆಲಯದ ಬಾಗಿಲ ಮುಂದೆ ಮಂಟಪಕ್ಕೂ ಮತ್ತು ಯಜ್ಞವೇದಿಗೂ ನಡುವೆ ಸುಮಾರು ಇಪ್ಪತ್ತೈದು ಜನರು ಯೆಹೋವನ ಆಲಯಕ್ಕೆ ಬೆನ್ನು ಮಾಡಿ ಪೂರ್ವದ ಕಡೆಗೆ ಮುಖ ಮಾಡಿ ಉದಯಕಾಲದ ಸೂರ್ಯನನ್ನು ಪೂಜಿಸುತ್ತಿದ್ದರು.
17 ಆಗ ಆತನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ? ಯೆಹೂದ ವಂಶದವರು ತಾವು ಇಲ್ಲಿ ನಡೆಸುವ ಅಸಹ್ಯಕಾರ್ಯಗಳು ಅಲ್ಪವೆಂದು ಭಾವಿಸಿದ್ದಾರೋ? ದೇಶವನ್ನು ಹಿಂಸೆಯಿಂದ ತುಂಬಿಸಿದ್ದಲ್ಲದೆ, ನನ್ನನ್ನು ಕೆಣಕಬೇಕೆಂದೇ ಮತ್ತೆ ಯತ್ನಿಸುತ್ತಿದ್ದಾರೆ; ನೋಡು, ಕೊಂಬೆಗಳನ್ನು ಮೂಗಿಗೆ ಒತ್ತಿಕೊಳ್ಳುತ್ತಾರೆ. 18 ಆದಕಾರಣ ನಾನು ಕೋಪೋದ್ರೇಕದಿಂದ ವರ್ತಿಸುವೆನು, ಕಟಾಕ್ಷಿಸುವುದಿಲ್ಲ, ಉಳಿಸುವುದಿಲ್ಲ; ಅವರು ಕೂಗಿಕೊಳ್ಳುವ ಮಹಾ ಶಬ್ದವು ನನ್ನ ಕಿವಿಗೆ ಬಿದ್ದರೂ ಆಲಿಸುವುದಿಲ್ಲ.”
* 8:14 ತಮ್ಮೂಜ್ ಪುರಾತನ ಮಧ್ಯ ಪ್ರಾಚ್ಯದಲ್ಲಿ, ತಮ್ಮೂಜ್ ಅನ್ನು ಸಸ್ಯವು ಸತ್ತಾಗ ಸಾಯುವಂಥ ದೇವರು ಎಂದು ಪರಿಗಣಿಸಲ್ಪಟ್ಟಿದ್ದನು, ಅವನು ಮುಂಬರುವ ವರ್ಷದಲ್ಲಿ ಮರಣದಿಂದ ಮತ್ತೆ ಎದ್ದುಬರುವನು ಎಂದು ಊಹಿಸಲಾಗಿತ್ತು, ಅವನ ಸಾವಿಗೆ ಸ್ತ್ರೀಯರು ದುಃಖಿಸುತ್ತಿದ್ದರು.