೨೧
೧ “ಈಗ ನೀನು ಅವರ ಮುಂದೆ ಇಡಬೇಕಾದ ನ್ಯಾಯವಿಧಿಗಳು ಯಾವುದೆಂದರೆ;
೨ “ ‘ನಿಮ್ಮಲ್ಲಿ ಯಾರಾದರೂ ಇಬ್ರಿಯನೊಬ್ಬನನ್ನು ದಾಸತ್ವಕ್ಕಾಗಿ ಕೊಂಡುಕೊಂಡರೆ, ಆ ಇಬ್ರಿಯನು ಆರು ವರುಷ ದಾಸನಾಗಿದ್ದು ಏಳನೆಯ ವರುಷದಲ್ಲಿ ಏನೂ ಕೊಡದೆ ಬಿಡುಗಡೆಯಾಗಿ ಹೋಗಬೇಕು. ೩ ಪುರುಷನು ಒಂಟಿಯಾಗಿ ಬಂದಿದ್ದರೆ ಒಂಟಿಯಾಗಿಯೇ ಹೊರಟುಹೋಗಬೇಕು. ಮದುವೆಯಾಗಿ ಬಂದಿದ್ದರೆ ಅವನ ಹೆಂಡತಿಯೂ ಅವನ ಜೊತೆ ಹೋಗಬೇಕು. ೪ ಅವನ ಯಜಮಾನನು ಅವನಿಗೆ ಮದುವೆಮಾಡಿಸಿದ ಪಕ್ಷದಲ್ಲಿ ಆ ಹೆಂಡತಿಯಲ್ಲಿ ಗಂಡು ಇಲ್ಲವೆ ಹೆಣ್ಣುಮಕ್ಕಳು ಹುಟ್ಟಿದ್ದರೆ, ಆ ಹೆಂಡತಿಯೂ ಅವಳ ಮಕ್ಕಳೂ ಯಜಮಾನನ ಸೊತ್ತಾಗುವರು. ದಾಸನು ಒಂಟಿಗನಾಗಿಯೇ ಹೊರಟುಹೋಗಬೇಕು.’ ”
೫ ಆದರೆ ದಾಸನು, “ನಾನು ನನ್ನ ಯಜಮಾನನ್ನೂ, ನನ್ನ ಹೆಂಡತಿ ಮಕ್ಕಳನ್ನು ಪ್ರೀತಿಸುತ್ತೇನೆ. ಆದುದರಿಂದ ನಾನು ಬಿಡುಗಡೆಯಾಗಿ ಹೋಗುವುದಕ್ಕೆ ನನಗೆ ಮನಸಿಲ್ಲ” ಎಂದು ಸ್ಪಸ್ಟವಾಗಿ ಹೇಳಿದರೆ, ೬ ಅವನ ಯಜಮಾನನು ದೇವರ ಬಳಿಗೆ ಅವನನ್ನು ಕರೆದುಕೊಂಡು ಬಂದು ಬಾಗಿಲಿನ ಹತ್ತಿರ ಅಥವಾ ಬಾಗಿಲಿನ ನಿಲುವು ಪಟ್ಟಿಗಳ ಹತ್ತಿರ ನಿಲ್ಲಿಸಿ ಅವನ ಕಿವಿಯನ್ನು ಸೂಜಿಯಿಂದ ಚುಚ್ಚಿ ಗುರುತು ಮಾಡಬೇಕು. ಆಗ ಅವನು ಶಾಶ್ವತವಾಗಿ ಅವನಿಗೆ ದಾಸನಾಗಿರುವನು.
೭ ಯಾರಾದರೂ ತನ್ನ ಮಗಳನ್ನು ದಾಸಿಯನ್ನಾಗಿ ಮಾರಿದರೆ, ದಾಸರು ಬಿಡುಗಡೆಯಾಗಿ ಹೋಗುವ ಪ್ರಕಾರ ಅವಳು ಬಿಡುಗಡೆಯಾಗಿ ಹೋಗಬಾರದು. ೮ ಅವಳನ್ನು ನಿಶ್ಚಯ ಮಾಡಿಕೊಂಡ ಯಜಮಾನನಿಗೆ ಒಂದು ವೇಳೆ ಮೆಚ್ಚಿಕೆಯಾಗದೆ ಹೋದರೆ ಅವಳನ್ನು ಬಿಡಿಸಿ ಕೊಲ್ಲುವುದಕ್ಕೆ ಅವನು ಅನುಮತಿ ನೀಡಬೇಕು. ಅವನು ಕೊಟ್ಟ ಮಾತಿಗೆ ತಪ್ಪಿದವನಾದ್ದರಿಂದ ಅನ್ಯಜನರಿಗೆ ಅವಳನ್ನು ಮಾರುವುದಕ್ಕೆ ಅವನಿಗೆ ಅಧಿಕಾರವಿಲ್ಲ.
೯ ಒಂದು ವೇಳೆ ಅವನು ತನ್ನ ಮಗನಿಗೆ ಅವಳನ್ನು ನಿಶ್ಚಯ ಮಾಡಿಕೊಂಡರೆ ಮಗಳಂತೆ ಆಕೆಯನ್ನು ನೋಡಿಕೊಳ್ಳಬೇಕು. ೧೦ ಯಜಮಾನನು ಇನ್ನೊಬ್ಬಳನ್ನು ಮದುವೆಯಾದರೆ ಮೊದಲನೆಯವಳಿಗೆ ಅನ್ನ, ವಸ್ತ್ರ, ದಾಂಪತ್ಯದ ಹಕ್ಕುಗಳನ್ನು ಕಡಿಮೆಮಾಡಬಾರದು. ೧೧ ಈ ಮೂರರಲ್ಲಿ ಯಾವುದನ್ನೂ ನಡೆಸದೆ ಹೋದರೆ ಅವಳು ಏನೂ ಕೊಡದೆ ಬಿಡುಗಡೆಯಾಗಿ ಹೋಗಬಹುದು.
೧೨ ಮನುಷ್ಯನನ್ನು ಹೊಡೆದು ಕೊಂದವನು ಖಂಡಿತವಾಗಿ ಸಾಯಬೇಕು. ೧೩ ಆದರೆ ಕೊಲ್ಲಬೇಕೆಂಬ ಯೋಚನೆಯಿಲ್ಲದೆ ದೇವರ ಸಂಕಲ್ಪದಿಂದ ಆ ಕೊಲೆ ನಡೆದಿದೆಯಾದರೆ, ಆ ಕೊಲೆಮಾಡಿದವನು ಓಡಿಹೋಗುವಂತೆ ಅವನಿಗೆ ನಾನು ಒಂದು ಸ್ಥಳವನ್ನು ನೇಮಿಸುವೆನು. ೧೪ ಆದರೆ ಒಬ್ಬನು ತನ್ನ ನೆರೆಯವನನ್ನು ಕೊಲ್ಲಬೇಕೆಂಬ ಉದ್ದೇಶದಿಂದಲೇ ಅವನನ್ನು ಮೋಸದಿಂದ ಕೊಂದರೆ, ಅವನು ಸಾಯುವಂತೆ ನೀನು ಅವನನ್ನು ನನ್ನ ಯಜ್ಞವೇದಿಯ ಬಳಿಯಿಂದ ಕರೆದುಕೊಂಡು ಹೋಗಿ ಕೊಂದುಹಾಕಬೇಕು.
೧೫ ಯಾರಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಹೊಡೆದರೆ ಖಂಡಿತವಾಗಿ ಅವನು ಸಾಯಲೇಬೇಕು.
೧೬ ಯಾರಾದರೂ ಒಬ್ಬ ಮನುಷ್ಯನನ್ನು ಅಪಹರಿಸಿಕೊಂಡು ಹೋಗಿ ಮಾರಿದರೆ ಅಥವಾ ಅವನು ಬಂಧಿಸಲ್ಪಟ್ಟಗ, ಅಪಹರಿಸಲ್ಪಟ್ಟವನು ಅವನೊಂದಿಗಿದ್ದರೆ ಅವನಿಗೆ ಮರಣಶಿಕ್ಷೆಯಾಗಬೇಕು.
೧೭ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವವನಿಗೆ ಮರಣಶಿಕ್ಷೆಯಾಗಬೇಕು.
೧೮ ಇಬ್ಬರು ಜಗಳವಾಡುತ್ತಿರುವಲ್ಲಿ ಒಬ್ಬನು ಮತ್ತೊಬ್ಬನನ್ನು ಕಲ್ಲಿನಿಂದಾಗಲಿ, ಮುಷ್ಠಿಯಿಂದಾಗಲೀ ಹೊಡೆದಿದ್ದರಿಂದ ಗಾಯಪಟ್ಟವನು ಸಾಯದೆ ಕೆಲವು ಕಾಲ ಹಾಸಿಗೆ ಹಿಡಿದು,
೧೯ ತರುವಾಯ ಅವನು ಎದ್ದು ಕೋಲೂರಿಕೊಂಡು ತಿರುಗಾಡುವುದಾದರೆ ಅವನನ್ನು ಹೊಡೆದವನಿಗೆ ಶಿಕ್ಷೆಯನ್ನು ವಿಧಿಸಬಾರದು. ಆದರೆ ಪೆಟ್ಟುತಿಂದ ಮನುಷ್ಯನು ಗುಣಹೊಂದುವವರೆಗೂ ಆಗುವ ಖರ್ಚನ್ನು ಹೊಡೆದವನು ಕೊಡಬೇಕು ಮತ್ತು ಅವನು ಪೂರ್ಣ ಸ್ವಸ್ಥನಾಗುವಂತೆ ಮಾಡಬೇಕು. ೨೦ ಒಬ್ಬನು ತನ್ನ ದಾಸನನ್ನಾಗಲಿ, ದಾಸಿಯನ್ನಾಗಲಿ ಕೋಲಿನಿಂದ ಹೊಡೆದು ಸಾಯುವಂತೆ ಹೊಡೆದರೆ, ಅವನಿಗೆ ತಕ್ಕ ಶಿಕ್ಷೆಯಾಗಬೇಕು.
೨೧ ಆ ದಾಸನು ಆಗಲೇ ಸಾಯದೆ ಒಂದೆರಡು ದಿನ ಬದುಕಿದ್ದರೆ, ಯಜಮಾನನಿಗೆ ಶಿಕ್ಷೆಯನ್ನು ವಿಧಿಸಕೂಡದು. ಏಕೆಂದರೆ ಆ ದಾಸನು ಅವನ ಸೊತ್ತಾಗಿದ್ದಾನೆ.
೨೨ ಗಂಡಸರು ಜಗಳವಾಡುವಾಗ ಗರ್ಭಿಣಿಯಾದ ಹೆಂಗಸಿಗೆ ಏಟು ತಗಲಿದ್ದರಿಂದ ಅವಳಿಗೆ ಗರ್ಭಸ್ರಾವವಾದರೆ, ಆ ಸ್ತ್ರೀಯ ಗಂಡನು ಕೇಳಿದಷ್ಟು ಮತ್ತು ನ್ಯಾಯಾಲಯವು ವಿಧಿಸುವಷ್ಟು ದಂಡವನ್ನು ಹೊಡೆದವನು ಕೊಡಬೇಕು. ೨೩ ಬೇರೆ ಹಾನಿಯಾದ ಪಕ್ಷದಲ್ಲಿ ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡಬೇಕು. ೨೪ ಕಣ್ಣಿಗೆ ಕಣ್ಣನ್ನು, ಹಲ್ಲಿಗೆ ಹಲ್ಲನ್ನು, ಕೈಗೆ ಕೈಯನ್ನು, ಕಾಲಿಗೆ ಕಾಲನ್ನು, ೨೫ ಬರೆಗೆ ಬರೆಯನ್ನು, ಗಾಯಕ್ಕೆ ಗಾಯವನ್ನು, ಏಟಿಗೆ ಏಟನ್ನು ಪ್ರತಿಯಾಗಿ ಕೊಡಬೇಕು.
೨೬ ಯಾವನಾದರೂ ತನ್ನ ದಾಸನ ಅಥವಾ ದಾಸಿಯ ಕಣ್ಣನ್ನು ಹೊಡೆದು ನಷ್ಟಪಡಿಸಿದರೆ ಆ ಕಣ್ಣಿಗೆ ಈಡಾಗಿ (ಬದಲಾಗಿ) ಅವರನ್ನು ಅವನು ಬಿಡುಗಡೆಮಾಡಿ ಕಳುಹಿಸಬೇಕು. ೨೭ ಒಬ್ಬನು ದಾಸನ ಅಥವಾ ದಾಸಿಯ ಹಲ್ಲನ್ನು ಉದುರಿಸಿದರೆ ಹಲ್ಲಿಗೆ ಈಡಾಗಿ ಅವರನ್ನು ಬಿಡುಗಡೆಮಾಡಿ ಕಳುಹಿಸಬೇಕು.
೨೮ ಯಾವುದಾದರೂ ಒಂದು ಎತ್ತು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ, ತಿವಿದು ಕೊಂದರೆ ಆ ಎತ್ತನ್ನು ಖಂಡಿತವಾಗಿ ಕಲ್ಲೆಸೆದು ಕೊಲ್ಲಬೇಕು. ಅದರ ಮಾಂಸವನ್ನು ತಿನ್ನಬಾರದು. ಆದರೆ ಆ ಎತ್ತಿನ ಯಜಮಾನನು ನಿರಪರಾಧಿಯಾಗಿರಬೇಕು. ೨೯ ಆದರೆ ಆ ಎತ್ತು ಮೊದಲಿನಿಂದ ಹಾಯುವಂಥದೆಂದು ಯಜಮಾನನಿಗೆ ತಿಳಿದಿದ್ದರೂ ಅವನು ಅದನ್ನು ಕಟ್ಟಿಹಾಕದೇ ಹೋದದ್ದರಿಂದ ಅದು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಕೊಂದು ಹಾಕಿದರೆ ಆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು. ಅಲ್ಲದೆ ಅದರ ಯಜಮಾನನೂ ಮರಣದಂಡನೆಗೆ ಗುರಿಯಾಗುವನು.
೩೦ ಆದರೆ ಯಜಮಾನನಿಗೆ ಹಣವನ್ನು ನೇಮಿಸಿದರೆ ಅವನು ತನಗೆ ನೇಮಕವಾದ ಹಣವನ್ನು ಕೊಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳಲಿ. ೩೧ ಆ ಎತ್ತು ಮಗನನ್ನಾಗಲಿ ಅಥವಾ ಮಗಳನ್ನಾಗಲಿ ತಿವಿದರೆ ನ್ಯಾಯತೀರ್ಪಿನ ಪ್ರಕಾರ ಅದರ ಯಜಮಾನನಿಗೆ ಮಾಡಬೇಕು. ೩೨ ದಾಸನನ್ನಾದರೂ ಅಥವಾ ದಾಸಿಯನ್ನಾದರೂ ಎತ್ತು ತಿವಿದರೆ ದಾಸನ ಅಥವ ದಾಸಿಯ ಯಜಮಾನನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ಕೊಡಬೇಕು, ಮತ್ತು ಆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು.
೩೩ ಒಬ್ಬನು ಗುಂಡಿಯನ್ನು ಅಗೆದರೆ ಇಲ್ಲವೆ ಅಗೆದು ಅದನ್ನು ಮುಚ್ಚದೇ ಇದ್ದು ಅದರಲ್ಲಿ ಎತ್ತಾಗಲಿ, ಕತ್ತೆಯಾಗಲಿ ಆ ಗುಂಡಿಯಲ್ಲಿ ಬಿದ್ದು ಸತ್ತರೆ, ೩೪ ಆ ಗುಂಡಿಯನ್ನು ಅಗೆಸಿದವನು ಉಂಟಾದ ನಷ್ಟಕ್ಕೆ ಪ್ರತಿಯಾಗಿ ಈಡು ಕೊಡಬೇಕು. ಎತ್ತಿನ ಯಜಮಾನನಿಗೆ ತೃಪ್ತಿಯಾಗುವಷ್ಟು ಕ್ರಯವನ್ನು ಕೊಡಬೇಕು. ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬಹುದು.
೩೫ ಒಬ್ಬನ ಎತ್ತು ಮತ್ತೊಬ್ಬನ ಎತ್ತನ್ನು ಹಾಯ್ದು ಕೊಂದರೆ ಜೀವದಿಂದಿರುವ ಎತ್ತನ್ನು ಮಾರಿ ಅದರ ಕ್ರಯವನ್ನು ಕೊಡಬೇಕು. ಸತ್ತ ಎತ್ತನ್ನೂ ಇಬ್ಬರೂ ಸಮವಾಗಿ ಹಂಚಿಕೊಳ್ಳಬೇಕು. ೩೬ ಆದರೆ ಆ ಎತ್ತು ಮೊದಲಿನಿಂದಲೂ ಹಾಯುವಂಥದ್ದೇ ಎಂದು ಅದರ ಯಜಮಾನನಿಗೆ ತಿಳಿದ್ದಿದ್ದರೂ ಅದನ್ನು ಕಟ್ಟಿಹಾಕದೇ ಹೋದದ್ದರಿಂದ ಅವನು ಎತ್ತಿಗೆ ಪ್ರತಿಯಾಗಿ ಎತ್ತನ್ನು ಖಂಡಿತವಾಗಿ ಬದಲು ಕೊಡಬೇಕು. ಆದರೆ ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬಹುದು.