33
ಸೀನಾಯಿ ಬೆಟ್ಟವನ್ನು ಬಿಟ್ಟುಹೋಗಬೇಕೆಂಬ ಆಜ್ಞೆ
1 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು ಐಗುಪ್ತ ದೇಶದಿಂದ ಕರೆದುತಂದ ಈ ಜನರನ್ನು ನಿನ್ನ ಸಂಗಡ ಕರೆದುಕೊಂಡು ಈ ಸ್ಥಳವನ್ನು ಬಿಟ್ಟು, ‘ನಾನು ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ಮತ್ತು ನಿಮ್ಮ ಸಂತತಿಯವರಿಗೆ ಕೊಡುವೆನೆಂದು’ ಪ್ರಮಾಣ ಮಾಡಿದ ದೇಶಕ್ಕೆ ಹೊರಟುಹೋಗು.
2 ನಾನು, ನಿನಗಿಂತ ಮುಂದಾಗಿ ಒಬ್ಬ ದೂತನನ್ನು ಕಳುಹಿಸಿ ಕಾನಾನ್ಯರನ್ನು, ಅಮೋರಿಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು ಹಾಗು ಯೆಬೂಸಿಯರನ್ನು ಹೊರದೂಡುವೆನು.
3 ಹಾಲೂ ಮತ್ತು ಜೇನೂ ಹರಿಯುವ ದೇಶಕ್ಕೆ ನೀನು ಹೋಗು. ಆದರೆ ನಾನು ನಿಮ್ಮ ಸಂಗಡ ಬರುವುದಿಲ್ಲ, ಏಕೆಂದರೆ ನೀವು ಮೊಂಡುತನದ ಜನರು. ನಾನು ದಾರಿಯಲ್ಲಿ ನಿಮ್ಮನ್ನು ಸಂಹರಿಸಿಬಿಟ್ಟೇನು” ಅಂದನು.
4 ಇಸ್ರಾಯೇಲ್ ಜನರು ದೋಷಾರೋಪಣೆಯ ಈ ವಾಕ್ಯವನ್ನು ಕೇಳಿದಾಗ ದುಃಖಪಟ್ಟರು. ಅವರಲ್ಲಿ ಒಬ್ಬರೂ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ.
5 ಯೆಹೋವನು ಮೋಶೆಗೆ ಹೀಗೆಂದನು. “ನೀನು ಇಸ್ರಾಯೇಲರಿಗೆ ಹೇಳಬೇಕಾದದ್ದೇನೆಂದರೆ, ‘ನೀವು ಮೊಂಡುತನವುಳ್ಳ ಜನರು, ನಾನು ಒಂದು ಕ್ಷಣ ಮಾತ್ರ ನಿಮ್ಮ ಮಧ್ಯದಲ್ಲಿ ಬರುವುದಾದರೆ, ನಾನು ನಿಮ್ಮನ್ನು ನಿರ್ಮೂಲ ಮಾಡಿಬಿಡುವೆನು. ಆದಕಾರಣ ನಿಮ್ಮ ಆಭರಣಗಳನ್ನು ಈಗ ತೆಗೆದುಬಿಡಿರಿ. ನಿಮಗೆ ನಾನು ಏನು ಮಾಡಬೇಕೆಂಬುದನ್ನು ಆಲೋಚಿಸಿಕೊಳ್ಳುವೆನು’ ” ಅಂದನು.
6 ಅದರಂತೆಯೇ ಇಸ್ರಾಯೇಲ್ಯರು ಹೋರೇಬ್ ಬೆಟ್ಟದಿಂದ ಮುಂದೆ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ.
ದೇವದರ್ಶನ ಗುಡಾರ
7 ಮೋಶೆಯು ಗುಡಾರವನ್ನು ಪಾಳೆಯದ ಹೊರಗೆ ದೂರವಾಗಿ ಹಾಕಿದ್ದನು. ಅದಕ್ಕೆ ದೇವದರ್ಶನದ ಗುಡಾರ ಎಂದು ಹೆಸರಿಟ್ಟನು. ಯೆಹೋವನ ಉತ್ತರವನ್ನು ಬಯಸಿದವರೆಲ್ಲರೂ ಪಾಳೆಯದ ಹೊರಗಿದ್ದ ದೇವದರ್ಶನದ ಗುಡಾರಕ್ಕೆ ಹೋಗುತ್ತಿದ್ದರು.
8 ಮೋಶೆಯು ಆ ಗುಡಾರಕ್ಕೆ ಹೋಗುವಾಗಲೆಲ್ಲಾ ಜನರೆಲ್ಲರೂ ಎದ್ದು ತಮ್ಮ ತಮ್ಮ ಡೇರೆಗಳ ಬಾಗಿಲಲ್ಲಿ ನಿಂತು, ಮೋಶೆಯು ಆ ಗುಡಾರದೊಳಕ್ಕೆ ಹೋಗುವ ತನಕ ಅವನನ್ನು ನೋಡುತ್ತಿದ್ದರು.
9 ಮೋಶೆಯು ಆ ಗುಡಾರದೊಳಕ್ಕೆ ಹೋದಕೂಡಲೆ ಮೇಘಸ್ತಂಭವು ಇಳಿದು ಆ ಗುಡಾರದ ಬಾಗಿಲಲ್ಲಿ ನಿಲ್ಲುತ್ತಿತ್ತು ಹಾಗು ಯೆಹೋವನು ಮೋಶೆಯ ಸಂಗಡ ಮಾತನಾಡುತ್ತಿದ್ದನು.
10 ಆ ಮೇಘಸ್ತಂಭವು ಗುಡಾರದ ಬಾಗಿಲಲ್ಲಿ ನಿಂತಿದ್ದನ್ನು ಜನರೆಲ್ಲರೂ ನೋಡಿ ತಮ್ಮ ತಮ್ಮ ಡೇರೆಗಳ ಬಾಗಿಲಲ್ಲೇ ಅಡ್ಡಬೀಳುತ್ತಿದ್ದರು.
11 ಮನುಷ್ಯರೊಳಗೆ ಒಬ್ಬನೂ ತನ್ನ ಸ್ನೇಹಿತನೊಡನೆ ಹೇಗೆ ಮಾತನಾಡುವನೋ ಹಾಗೆಯೇ ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತನಾಡುತ್ತಿದ್ದನು. ಆನಂತರ ಮೋಶೆಯು ಪಾಳೆಯಕ್ಕೆ ಹಿಂತಿರುಗಿ ಬರುವನು. ಆದರೆ ನೂನನ ಮಗನಾದ ಯೆಹೋಶುವನೆಂಬ ಯೌವನಸ್ಥನಾದ ಅವನ ಶಿಷ್ಯನು ಆ ಗುಡಾರದಲ್ಲಿಯೇ ಇರುತ್ತಿದ್ದನು, ಅದರ ಬಳಿಯಿಂದ ದೂರ ಸರಿಯುತ್ತಿರಲಿಲ್ಲ.
ಮೋಶೆಯ ಪ್ರಾರ್ಥನೆ
12 ಮೋಶೆಯು ಯೆಹೋವನಿಗೆ ಹೇಳಿದ್ದೇನೆಂದರೆ, “ ‘ಈ ಜನರನ್ನು ಆ ಸೀಮೆಗೆ ನಡೆಸಿಕೊಂಡು ಹೋಗಬೇಕೆಂದು’ ನೀನು ನನಗೆ ಆಜ್ಞಾಪಿಸಿದಿಯಷ್ಟೇ. ನನ್ನ ಸಂಗಡ ಯಾರನ್ನು ಕಳುಹಿಸಿ ಕೊಡುವೆಯೆಂಬುದನ್ನು ನನಗೆ ತಿಳಿಸಲಿಲ್ಲವಲ್ಲಾ. ‘ಆದರೆ ನಾನು ನಿನ್ನನ್ನು ಚೆನ್ನಾಗಿ ಬಲ್ಲೆನು. ನಿನಗೆ ನನ್ನ ದಯೆ ದೊರಕಿತೆಂದೂ’ ನೀನು ನನಗೆ ಹೇಳಿರುವೆಯಲ್ಲಾ.
13 ನನ್ನ ಮೇಲೆ ದಯೆಯಿರುವುದಾದರೆ ನಿನ್ನ ಮಾರ್ಗವನ್ನು ನನಗೆ ತೋರಿಸು ನಾನು ನಿನ್ನನ್ನು ಅರಿತುಕೊಳ್ಳುವಂತೆ ನಿನ್ನ ಕೃಪೆಯನ್ನು ನನಗೆ ದಯಪಾಲಿಸು ಆಗ ನಿನ್ನ ದಯೆ ನನಗೆ ದೊರೆಯಿತೆಂದು ನನಗೆ ತಿಳಿಯುವುದು. ಈ ಜನಾಂಗವು ನಿನ್ನ ಪ್ರಜೆಯೆಂಬುದನ್ನು ನೆನಪುಮಾಡಿಕೋ” ಎಂದು ಅರಿಕೆಮಾಡಿದನು.
14 ಅದಕ್ಕೆ ಯೆಹೋವನು, “ನನ್ನ ಪ್ರಸನ್ನತೆಯು ನಿನ್ನ ಜೊತೆಯಲ್ಲಿ ಬರುವುದು, ನಾನು ನಿಮಗೆ ವಿಶ್ರಾಂತಿಯನ್ನು ನೀಡುವೆನು” ಅಂದನು.
15 ಮೋಶೆಯು ಆತನಿಗೆ, “ನಿನ್ನ ಪ್ರಸನ್ನತೆಯು ನಮ್ಮ ಸಂಗಡ ಬಾರದೇ ಹೋದರೆ ನಮ್ಮನ್ನು ಇಲ್ಲಿಂದ ಹೋಗಗೊಡಿಸಬೇಡ.
16 ನನಗೂ ನಿನ್ನ ಪ್ರಜೆಗಳಾದ ಇವರಿಗೂ ನಿನ್ನ ದಯೆಯು ದೊರಕಿತೆಂಬುದು ನೀನು ನಮ್ಮ ಸಂಗಡ ಬರುವುದರಿಂದಲೇ ಹೊರತು ಬೇರೆ ಯಾವುದರಿಂದ ತಿಳಿದುಬರುವುದು? ಇದರಿಂದ ನಾನೂ ಮತ್ತು ನಿನ್ನ ಪ್ರಜೆಗಳಾದ ಇವರೂ ಭೂಮಿಯಲ್ಲಿರುವ ಬೇರೆ ಎಲ್ಲಾ ಜನಗಳಿಗಿಂತಲೂ ವಿಶೇಷತೆಯುಳ್ಳವರೆಂಬುದು ಗೊತ್ತಾಗುವುದು” ಅಂದನು.
17 ಯೆಹೋವನು ಮೋಶೆಗೆ, “ನಿನಗೆ ನನ್ನ ದಯೆಯು ದೊರಕಿರುವುದರಿಂದಲೂ, ನಾನು ನಿನ್ನ ಹೆಸರನ್ನು ಬಲ್ಲವನಾಗಿರುವುದರಿಂದಲೂ ನಿನಗೋಸ್ಕರ ಈ ಕಾರ್ಯವನ್ನು ಮಾಡುವೆನು” ಎಂದು ಹೇಳಿದನು.
18 ಅದಕ್ಕೆ ಮೋಶೆಯು, “ನಿನ್ನ ಮಹಿಮೆಯನ್ನು ದಯಮಾಡಿ ನನಗೆ ತೋರಿಸು” ಎಂದು ಕೇಳಿದನು.
19 ಸರ್ವೋತ್ತಮತ್ವವನ್ನು ಅದಕ್ಕೆ ಆತನು, “ನಾನು ನನ್ನ ಮಹಿಮೆಯನ್ನು ಪೂರ್ಣವಾಗಿ ನಿನ್ನೆದುರಿಗೆ ಬರುವಂತೆ ಮಾಡುವೆನು. ಯೆಹೋವನೆಂಬ ನನ್ನ ನಾಮದ ಪೂರ್ಣ ಮಹತ್ವವನ್ನು ನಿನ್ನೆದುರಾಗಿ ಪ್ರಕಟಿಸುವೆನು. ನಾನು ಯಾರ ಮೇಲೆ ದಯೆತೋರಿಸಬೇಕೆಂದಿರುವೆನೋ ಅವನ ಮೇಲೆ ದಯೆ ತೋರಿಸುವೆನು, ಯಾರನ್ನು ಕರುಣಿಸಬೇಕೆಂದಿರುವೆನೋ ಅವನನ್ನು ಕರುಣಿಸುವೆನು” ಅಂದನು.
20 ಆದರೆ ಆತನು ಅವನಿಗೆ, “ನೀನು ನನ್ನ ಮುಖವನ್ನು ನೋಡುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಮನುಷ್ಯರಲ್ಲಿ ಯಾರೂ ನನ್ನನ್ನು ನೋಡಿ ಬದುಕಿರಲಾರನು” ಎಂದು ಹೇಳಿದನು.
21 ಮತ್ತು ಯೆಹೋವನು ಅವನಿಗೆ, “ನೋಡು, ಇಲ್ಲಿ ನನ್ನ ಸಮೀಪದಲ್ಲೇ ಒಂದು ಸ್ಥಳವಿದೆ. ನೀನು ಈ ಬಂಡೆಯ ಮೇಲೆಯೇ ನಿಂತುಕೊಂಡಿರು.
22 ನನ್ನ ಮಹಿಮೆಯು ನಿನ್ನೆದುರಿಗೆ ದಾಟಿಹೋಗುವಾಗ ನಾನು ಈ ಬಂಡೆಯ ಸಂದಿನಲ್ಲಿ ನಿನ್ನನ್ನು ಇರಿಸಿ ನನ್ನ ಮುಂದೆ ದಾಟಿ ಹೋಗುವ ತನಕ ನಿನ್ನನ್ನು ಕೈಯಿಂದ ಮರೆಮಾಡುವೆನು.
23 ತರುವಾಯ ನಾನು ನನ್ನ ಕೈಯನ್ನು ತೆಗೆದಾಗ ನೀನು ನನ್ನ ಹಿಂಭಾಗವನ್ನು ನೋಡುವಿಯೇ ಹೊರತು ನನ್ನ ಮುಖವು ನಿನಗೆ ಕಾಣಿಸುವುದಿಲ್ಲ” ಎಂದು ಯೆಹೋವನು ಆಜ್ಞಾಪಿಸಿದನು.