18
ಅಬ್ರಹಾಮನಿಗೆ ದೇವರು ಕೊಟ್ಟ ವಾಗ್ದಾನ
ಅಬ್ರಹಾಮನು ಬಿಸಿಲೇರಿದಾಗ ಮಮ್ರೆಯ ಮೋರೆ ತೋಪಿನ ತನ್ನ ಗುಡಾರದ ಬಾಗಿಲಲ್ಲಿ ಕುಳಿತಿರುವಾಗ ಯೆಹೋವನು ಅವನಿಗೆ ಪ್ರತ್ಯಕ್ಷನಾದನು. ಹೇಗೆಂದರೆ, ಅಬ್ರಹಾಮನು ಕಣ್ಣೆತ್ತಿ ನೋಡಲು ಅವನೆದುರಿನಲ್ಲಿ ಮೂವರು ಪುರುಷರು ನಿಂತಿದ್ದರು. ಕೂಡಲೆ ಅವರನ್ನು ಎದುರುಗೊಳ್ಳುವುದಕ್ಕೆ ಅವನು ಗುಡಾರದ ಬಾಗಿಲಿನಿಂದ ಓಡಿ ಹೋಗಿ ತಲೆಬಾಗಿ ನಮಸ್ಕರಿಸಿ.
“ಕರ್ತನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರೆತಿದ್ದರೆ; ದಾಸನ ಗುಡಾರಕ್ಕೆ ದಯಮಾಡದೆ ಮುಂದೆ ಹೋಗಬೇಡಿರಿ. ನೀವು ದಾಸನಿರುವ ಸ್ಥಳದ ಹತ್ತಿರ ಹಾದು ಹೋಗುತ್ತೀರಲ್ಲಾ. ನೀರು ತರಿಸಿಕೊಡುತ್ತೇನೆ; ನಿಮ್ಮ ಕಾಲುಗಳನ್ನು ತೊಳೆದುಕೊಂಡು ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳಿರಿ. ಸ್ವಲ್ಪ ಆಹಾರ ತರುತ್ತೇನೆ, ಊಟವಾದ ಮೇಲೆ ನೀವು ಮುಂದಕ್ಕೆ ಪ್ರಯಾಣ ಮಾಡಬಹುದು” ಎನ್ನಲು ಅವರು, “ನೀನು ಹೇಳಿದಂತೆ ಮಾಡಬಹುದು” ಅಂದರು.
ಆಗ ಅಬ್ರಹಾಮನು ಗುಡಾರದಲ್ಲಿದ್ದ ಸಾರಳ ಬಳಿಗೆ ಓಡಿಹೋಗಿ ಆಕೆಗೆ, “ಹಸನಾದ *ಮೂರು ಸೇರು ಹಿಟ್ಟನ್ನು ನಾದಿ ಬೇಗ ರೊಟ್ಟಿಗಳನ್ನು ಮಾಡು” ಎಂದು ಹೇಳಿದನು.
ಆ ಮೇಲೆ ಅವನು ದನಗಳ ಕಡೆಗೆ ಓಡಿಹೋಗಿ ಕೊಬ್ಬಿದ ಎಳೇ ಕರುವನ್ನು ತೆಗೆದು ಆಳಿನ ಕೈಗೆ ಕೊಟ್ಟನು. ಆಳು ಬೇಗನೆ ಕೊಬ್ಬಿದ ಕರುವನ್ನು ಕಡಿದು, ಅಡಿಗೆ ಮಾಡಿದನು. ತರುವಾಯ ಅಬ್ರಹಾಮನು ಹಾಲು ಮೊಸರನ್ನೂ ಅಡಿಗೆ ಮಾಡಿದ ಮಾಂಸವನ್ನೂ ತೆಗೆದುಕೊಂಡು ಬಂದು ಆ ಮನುಷ್ಯರಿಗೆ ಬಡಿಸಿದನು. ಅವರು ಮರದ ಕೆಳಗೆ ಕುಳಿತು ಊಟ ಮಾಡುವವರೆಗೂ ಅವನು ಹತ್ತಿರ ನಿಂತು ಅವರಿಗೆ ಉಪಚಾರ ಮಾಡಿದನು.
ಬಳಿಕ ಅವರು ಅವನಿಗೆ, “ನಿನ್ನ ಪತ್ನಿಯಾದ ಸಾರಳು ಎಲ್ಲಿದ್ದಾಳೆ” ಎಂದು ಕೇಳಲು ಅವನು “ಅಗೋ, ಗುಡಾರದಲ್ಲಿದ್ದಾಳೆ” ಎಂದನು.
10 ಅದಕ್ಕೆ ಆತನು, “ಬರುವ ವರ್ಷ ಇದೇ ವೇಳೆಗೆ ನಾನು ತಪ್ಪದೆ ತಿರುಗಿ ನಿನ್ನ ಬಳಿಗೆ ಬರುತ್ತೇನೆ; ಬಂದಾಗ ನಿನ್ನ ಪತ್ನಿಯಾದ ಸಾರಳಿಗೆ ಮಗನಿರುವನು” ಎಂದನು. ಆ ಮಾತು ಹಿಂದೆ ಗುಡಾರದ ಬಾಗಿಲಲ್ಲಿ ನಿಂತಿದ್ದ ಸಾರಳ ಕಿವಿಗೆ ಬಿತ್ತು. 11 ಅಬ್ರಹಾಮನೂ ಸಾರಳೂ ಬಹುವೃದ್ಧರಾಗಿದ್ದರು; ಸಾರಳಿಗೆ ಮುಟ್ಟು ನಿಂತು ಹೋಗಿತ್ತು. 12 ಹೀಗಿರಲಾಗಿ ಸಾರಳು, “ನನ್ನಂಥ ಮುದುಕಿಗೆ ಭೋಗವಾದೀತೇ?” ನನ್ನ ಯಜಮಾನನೂ ಮುದುಕನಲ್ಲವೇ ಎಂದು ತನ್ನೊಳಗೆ ನಕ್ಕಳು.
13 ಯೆಹೋವನು ಅಬ್ರಹಾಮನಿಗೆ, “ಸಾರಳು ನಕ್ಕು, ಮುದುಕಿಯಾದ, ನಾನು ಮಗುವನ್ನು ಹೆರುವುದಾದೀತೇ ಎಂದು ಹೇಳಿದ್ದೇನು? 14 ಯೆಹೋವನಿಗೆ ಅಸಾಧ್ಯವಾದದ್ದುಂಟೋ? ನಾನು ಹೇಳಿದಂತೆಯೇ ಬರುವ ವರ್ಷದ ಇದೇ ಕಾಲದಲ್ಲಿ ನಾನು ನಿನ್ನ ಬಳಿಗೆ ಬಂದಾಗ ಸಾರಳಿಗೆ ಮಗನಿರುವನು” ಎಂದು ಹೇಳಿದನು.
15 ಆಗ ಸಾರಳು ಭಯಪಟ್ಟು, “ನಾನು ನಗಲಿಲ್ಲ” ಎಂದು ಸುಳ್ಳಾಡಿದಾಗ, ಆತನು ಅದಕ್ಕೆ, “ಹಾಗಲ್ಲ, ನೀನು ನಕ್ಕಿದ್ದುಂಟು” ಎಂದನು.
ಸೊದೋಮ್ ಪಟ್ಟಣಕ್ಕಾಗಿ ಅಬ್ರಹಾಮನ ವಿಜ್ಞಾಪನೆ
16 ತರುವಾಯ ಆ ಮನುಷ್ಯರು ಅಲ್ಲಿಂದ ಹೊರಟು ಸೊದೋಮಿನ ಕಡೆಗೆ ನೋಡಿದರು. ಅಬ್ರಹಾಮನು ಅವರನ್ನು ಕಳುಹಿಸಿಕೊಡಲು ಅವರ ಜೊತೆಯಲ್ಲೇ ಹೋದನು. 17 ಆಗ ಯೆಹೋವನು ತನ್ನೊಳಗೆ, “ನಾನು ಮಾಡಬೇಕೆಂದಿರುವ ಕಾರ್ಯವನ್ನು ಅಬ್ರಹಾಮನಿಗೆ ಮರೆಮಾಡುವುದು ಸರಿಯೋ? 18 ಅವನಿಂದ ಬಲಿಷ್ಠವಾದ ಮಹಾ ಜನಾಂಗವು ಹುಟ್ಟಬೇಕಲ್ಲಾ; ಅವನ ಮೂಲಕ ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದಲ್ಲಾ; 19 ಅವನು ತನ್ನ ಮಕ್ಕಳಿಗೂ ಮನೆಯವರಿಗೂ ನ್ಯಾಯ ನೀತಿಗಳನ್ನು ತಿಳಿಸಿ ಯೆಹೋವನ ಮಾರ್ಗವನ್ನು ಅನುಸರಿಸಬೇಕೆಂದು ಬೋಧಿಸುವಂತೆ ಅವನನ್ನು ನಾನು ಆರಿಸಿಕೊಂಡೆನಲ್ಲಾ; ಅವನು ಹೀಗೆ ಮಾಡುವುದರಿಂದ ಯೆಹೋವನಾದ ನನ್ನ ವಾಗ್ದಾನವು ನೆರವೇರುವುದು” ಅಂದುಕೊಂಡನು.
20 ಇದಲ್ಲದೆ ಯೆಹೋವನು, “ಸೊದೋಮ್ ಗೊಮೋರಗಳ ದೊಡ್ಡ ಮೊರೆ ನನಗೆ ಮುಟ್ಟಿತು; ಆ ಊರಿನವರ ಮೇಲೆ ಹೊರಿಸಿರುವ ಪಾಪವು ಎಷ್ಟೋ ಘೋರವಾದದ್ದು, 21 ನಾನು ಇಳಿದು ಹೋಗಿ, ನನಗೆ ಮುಟ್ಟಿದ ಮೊರೆಯಂತೆಯೇ ಅವರು ಮಾಡಿರುವರೋ ಇಲ್ಲವೋ ಎಂದು ನೋಡಿ ತಿಳಿದುಕೊಳ್ಳುತ್ತೇನೆ” ಎಂದನು.
22 ಆ ಮನುಷ್ಯರು ಅಲ್ಲಿಂದ ಸೊದೋಮಿನ ಕಡೆಗೆ ಹೋದರು; ಆದರೆ ಅಬ್ರಹಾಮನು ಯೆಹೋವನಿಗೆ ಎದುರಾಗಿ ಇನ್ನೂ ನಿಂತುಕೊಂಡಿದ್ದನು.
23 ಆಗ ಅಬ್ರಹಾಮನು ಹತ್ತಿರಕ್ಕೆ ಬಂದು, “ನೀನು ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವಿಯಾ? 24 ಒಂದು ವೇಳೆ ಆ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರಿದ್ದಾರು; ಅದರಲ್ಲಿ ಐವತ್ತು ಮಂದಿ ನೀತಿವಂತರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿಯಾ? 25 ಆ ರೀತಿಯಾಗಿ ದುಷ್ಟರಿಗೂ ಶಿಷ್ಟರಿಗೂ ಭೇದ ಮಾಡದೆ ದುಷ್ಟರ ಸಂಗಡ ನೀತಿವಂತರನ್ನೂ ಸಂಹರಿಸುವುದು ನಿನ್ನಿಂದ ಎಂದಿಗೂ ಆಗಬಾರದು; ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ” ಎಂದು ಹೇಳಲು.
26 ಯೆಹೋವನು, “ಸೊದೋಮನಲ್ಲಿ ಐವತ್ತು ಮಂದಿ ನೀತಿವಂತರು ನನಗೆ ಸಿಕ್ಕಿದರೆ ಅವರ ನಿಮಿತ್ತ ಪಟ್ಟಣವನ್ನೆಲ್ಲಾ ಉಳಿಸುವೆನು” ಎಂದನು.
27 ಅದಕ್ಕೆ ಅಬ್ರಹಾಮನು, “ಇಗೋ, ಮಣ್ಣೂ ಬೂದಿಯೂ ಆಗಿರುವ ನಾನು ಸ್ವಾಮಿಯ ಸಂಗಡ ವಾದಿಸುವುದಕ್ಕೆ ಧೈರ್ಯಗೊಂಡಿದ್ದೇನೆ; 28 ಒಂದು ವೇಳೆ ಐವತ್ತು ಮಂದಿ ನೀತಿವಂತರಲ್ಲಿ ಐದು ಮಂದಿ ಕಡಿಮೆ ಇದ್ದರೆ ಪಟ್ಟಣವನ್ನೆಲ್ಲಾ ನಾಶ ಮಾಡುವಿಯಾ?” ಎಂದು ಕೇಳಲು ಯೆಹೋವನು, “ಅಲ್ಲಿ ನಲ್ವತ್ತೈದು ಮಂದಿ ನೀತಿವಂತರು ಸಿಕ್ಕಿದರೆ ಅದನ್ನು ನಾಶ ಮಾಡುವುದಿಲ್ಲ” ಅಂದನು.
29 ಅಬ್ರಹಾಮನು ಆತನ ಸಂಗಡ ಇನ್ನೂ ಮಾತನಾಡಿ, “ಒಂದು ವೇಳೆ ಅಲ್ಲಿ ನಲ್ವತ್ತು ಮಂದಿ ಸಿಕ್ಕಾರು” ಎನ್ನಲು ಆತನು, “ನಲ್ವತ್ತು ಮಂದಿ ಸಿಕ್ಕಿದರೆ ಆ ಪಟ್ಟಣವನ್ನು ನಾಶ ಮಾಡುವುದಿಲ್ಲ” ಎಂದನು.
30 ಅಬ್ರಹಾಮನು, “ಕರ್ತನೇ, ಕೋಪಮಾಡಬಾರದು; ಇನ್ನೂ ಮಾತನಾಡುತ್ತೇನೆ; ಒಂದು ವೇಳೆ ಮೂವತ್ತು ಮಂದಿ ಅಲ್ಲಿ ಸಿಕ್ಕಾರು” ಎನ್ನಲು ಆತನು, “ಅಲ್ಲಿ ಮೂವತ್ತು ಮಂದಿ ಸಿಕ್ಕಿದರೆ ಅದನ್ನು ನಾಶ ಮಾಡುವುದಿಲ್ಲ” ಅಂದನು.
31 ಅವನು, “ಇಗೋ, ಸ್ವಾಮಿಯ ಸಂಗಡ ಮಾತನಾಡುವುದಕ್ಕೆ ಧೈರ್ಯಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತು ಮಂದಿ ಅಲ್ಲಿ ಸಿಕ್ಕಾರು” ಎನ್ನಲು ಆತನು, “ಇಪ್ಪತ್ತು ಮಂದಿಯಿದ್ದರೆ ಅವರ ನಿಮಿತ್ತ ಆ ಪಟ್ಟಣವನ್ನು ಉಳಿಸುವೆನು, ನಾಶ ಮಾಡುವುದಿಲ್ಲ” ಅಂದನು.
32 ಅಬ್ರಹಾಮನು, “ಕರ್ತನೇ, ಸಿಟ್ಟಾಗಬಾರದು; ಇನ್ನು ಒಂದೇ ಸಾರಿ ಮಾತನಾಡುತ್ತೇನೆ; ಒಂದು ವೇಳೆ ಹತ್ತು ಮಂದಿ ಸಿಕ್ಕಾರು” ಎನ್ನಲು ಆತನು, “ಹತ್ತು ಮಂದಿಯ ನಿಮಿತ್ತವೂ ಅದನ್ನು ಉಳಿಸುವೆನು, ನಾಶ ಮಾಡುವುದಿಲ್ಲ.” ಎಂದನು.
33 ಯೆಹೋವನು ಅಬ್ರಹಾಮನ ಸಂಗಡ ಮಾತನಾಡುವುದನ್ನು ನಿಲ್ಲಿಸಿ ಅಲ್ಲಿಂದ ಹೊರಟು ಹೋದನು; ಅಬ್ರಹಾಮನು ತನ್ನ ಸ್ಥಳಕ್ಕೆ ಹಿಂದಿರುಗಿ ಹೋದನು.
* 18:6 18:6 ಸುಮಾರು 21 ಕಿಲೋಗ್ರಾಂ. 18:10 18:10 ಯೆಹೋವನು.