೨೪
ಇಸಾಕನಿಗೆ ಸ್ವದೇಶದಿಂದ ಹೆಣ್ಣನ್ನು ತಂದದ್ದು
೧ ಅಬ್ರಹಾಮನು ದಿನ ತುಂಬಿದ ವೃದ್ಧನಾಗಿದ್ದನು. ಯೆಹೋವನು ಅವನನ್ನು ಸಕಲ ವಿಷಯಗಳಲ್ಲಿ ಅಭಿವೃದ್ಧಿಪಡಿಸಿದ್ದನು. ೨ ಹೀಗಿರಲು ಅವನು ತನಗಿದ್ದ ಆಸ್ತಿಯ ಮೇಲೆ ಆಡಳಿತ ಮಾಡುತ್ತಿದ್ದ ಹಿರಿಯ ಸೇವಕನಿಗೆ ಅಬ್ರಹಾಮನು, “ನೀನು ನನ್ನ ತೊಡೆಯ ಕೆಳಗೆ ಕೈಯಿಡು ಅಂದನು. ೩ ಅನಂತರ ಯೆಹೋವನ ಆಣೆ ನಾನು ವಾಸವಾಗಿರುವ ಈ ಕಾನಾನ್ಯರ ಪುತ್ರಿಯರೊಳಗಿಂದ ನನ್ನ ಮಗನಾದ ಇಸಾಕನಿಗೆ ಹೆಣ್ಣನ್ನು ತಂದು ಮದುವೆ ಮಾಡದೆ, ೪ ನನ್ನ ದೇಶದ, ನನ್ನ ಸಂಬಂಧಿಕರೊಳಗಿಂದ ಇಸಾಕನಿಗೆ ಹೆಣ್ಣನ್ನು ತಂದು ಮದುವೆ ಮಾಡುತ್ತೇನೆ ಎಂದು ಪರಲೋಕದ ಮತ್ತು ಭೂಲೋಕದ ತಂದೆಯಾಗಿರುವ ಯೆಹೋವನ ಮೇಲೆ ಪ್ರಮಾಣ ಮಾಡಬೇಕು” ಎಂದು ಹೇಳಿದನು.
೫ ಅದಕ್ಕೆ ಆ ಸೇವಕನು, “ಒಂದು ವೇಳೆ ನನ್ನೊಡನೆ ಈ ದೇಶಕ್ಕೆ ಬರುವುದಕ್ಕೆ ಆ ಸ್ತ್ರೀಗೆ ಮನಸ್ಸಿಲ್ಲದೆ ಹೋದರೆ, ನೀನು ಬಿಟ್ಟು ಬಂದ ಆ ದೇಶಕ್ಕೆ ನಾನು ನಿನ್ನ ಮಗನನ್ನು ತಿರುಗಿ ಕರೆದುಕೊಂಡು ಹೋಗಬೇಕೊ?” ಎಂದು ಕೇಳಿದನು.
೬ ಅಬ್ರಹಾಮನು ಅವನಿಗೆ, “ಅಲ್ಲಿಗೆ ನನ್ನ ಮಗನನ್ನು ಎಂದಿಗೂ ಕರೆದುಕೊಂಡು ಹೋಗಲೇ ಬಾರದು. ೭ ನನ್ನ ತಂದೆಯ ಮನೆಯಿಂದಲೂ ನಾನು ಹುಟ್ಟಿದ ದೇಶದಿಂದಲೂ ನನ್ನನ್ನು ಕರತಂದು, ‘ನಿನ್ನ ಸಂತತಿಗೆ ಈ ದೇಶವನ್ನು ಕೊಡುವೆನು’ ಎಂದು ಪ್ರಮಾಣಮಾಡಿ ಹೇಳಿದ ಪರಲೋಕದ ದೇವರಾದ ಯೆಹೋವನು ನಿನ್ನ ಮುಂದೆ ತನ್ನ ದೂತನನ್ನು ಕಳುಹಿಸಿ, ನೀನು ಅಲ್ಲಿಂದ ನನ್ನ ಮಗನಿಗೋಸ್ಕರ ಹೆಣ್ಣನ್ನು ತೆಗೆದುಕೊಂಡು ಬರುವಂತೆ ಅನುಕೂಲಮಾಡುವನು. ೮ ನಿನ್ನನ್ನು ಹಿಂಬಾಲಿಸಿ ಬರುವುದಕ್ಕೆ ಆ ಸ್ತ್ರೀಗೆ ಮನಸ್ಸಿಲ್ಲದೆ ಹೋದರೆ ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವಿ. ಆದರೆ ನನ್ನ ಮಗನನ್ನು ತಿರುಗಿ ಅಲ್ಲಿಗೆ ಕರೆದುಕೊಂಡು ಹೋಗಬಾರದು” ಎಂದು ಹೇಳಿದನು. ೯ ಆಗ ಆ ಸೇವಕನು ತನ್ನ ದಣಿಯಾದ ಅಬ್ರಹಾಮನ ತೊಡೆಯ ಕೆಳಗೆ ಕೈಯಿಟ್ಟು ಅವನು ಹೇಳಿದಂತೆಯೇ ಪ್ರಮಾಣಮಾಡಿದನು.
೧೦ ತರುವಾಯ ಆ ಸೇವಕನು ತನ್ನ ದಣಿಯ ಒಂಟೆಗಳಲ್ಲಿ ಹತ್ತು ಒಂಟೆಗಳನ್ನು ಸಿದ್ಧಮಾಡಿ, ದಣಿಯ ಬಳಿಯಿದ್ದ ಶ್ರೇಷ್ಠವಾದ ಒಡವೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಹೊರಟು, ಅರಾಮ್ ಸೀಮೆಗೆ ಸೇರಿದ ನಾಹೋರನು ವಾಸಿಸಿದ ಊರನ್ನು ಮುಟ್ಟಿದನು. ೧೧ ಸಾಯಂಕಾಲದಲ್ಲಿ ಸ್ತ್ರೀಯರು ನೀರು ತರುವುದಕ್ಕೆ ಹೋಗುವಾಗ ಅವನು ಊರಿನ ಹೊರಗಡೆ ಬಾವಿಯ ಹತ್ತಿರ ಒಂಟೆಗಳನ್ನು ಮಲಗಿಸಿ,
೧೨ “ನನ್ನ ದಣಿಯಾದ ಅಬ್ರಹಾಮನ ದೇವರಾಗಿರುವ ಯೆಹೋವನೇ, ಈ ಹೊತ್ತು ನಾನು ಬಂದ ಕಾರ್ಯವನ್ನು ನೀನು ಸಫಲಪಡಿಸಿ ನನ್ನ ದಣಿಯಾದ ಅಬ್ರಹಾಮನಿಗೆ ದಯೆಯನ್ನು ತೋರಿಸಬೇಕೆಂದು ಬೇಡಿಕೊಳ್ಳುತ್ತೇನೆ. ೧೩ ಇಗೋ, ನೀರಿನ ಬುಗ್ಗೆಯ ಬಳಿಯಲ್ಲಿ ನಿಂತಿದ್ದೇನೆ; ಈ ಊರಿನ ಹೆಣ್ಣುಮಕ್ಕಳು ನೀರಿಗೆ ಬರುತ್ತಾರೆ. ೧೪ ನಾನು ಯಾವ ಹುಡುಗಿಗೆ, ‘ನೀನು ದಯವಿಟ್ಟು ನಿನ್ನ ಕೊಡವನ್ನು ಇಳಿಸಿ ನನಗೆ ಕುಡಿಯುವುದಕ್ಕೆ ನೀರನ್ನು ಕೊಡು’ ಎಂದು ಹೇಳುವಾಗ, ‘ನೀನು ಕುಡಿಯಬಹುದು ಮತ್ತು ನಿನ್ನ ಒಂಟೆಗಳಿಗೂ ನೀರು ಕೊಡುತ್ತೇನೆ’ ಎನ್ನುವಳೋ, ಅವಳೇ ನಿನ್ನ ದಾಸನಾದ ಇಸಾಕನಿಗೆ ನೀನು ನೇಮಿಸಿರುವ ಕನ್ಯೆಯಾಗಲಿ. ನನ್ನ ದಣಿಯ ಮೇಲೆ ನಿನ್ನ ದಯೆಯಿದೆ ಎಂದು ಇದರಿಂದ ನನಗೆ ಗೊತ್ತಾಗುವುದು” ಎಂದನು.
೧೫ ಅವನು ಹೀಗೆ ಅಂದುಕೊಳ್ಳುತ್ತಿರುವಾಗಲೇ ಅಬ್ರಹಾಮನ ತಮ್ಮನಾದ ನಾಹೋರನ ಹೆಂಡತಿಯಾಗಿರುವ ಮಿಲ್ಕಳ ಮಗನಾದ ಬೆತೂವೇಲನಿಗೆ ಹುಟ್ಟಿದ ರೆಬೆಕ್ಕಳು ಹೆಗಲಿನ ಮೇಲೆ ಕೊಡವನ್ನಿಟ್ಟುಕೊಂಡು ಊರ ಹೊರಗೆ ಬರುವುದನ್ನು ಕಂಡನು. ೧೬ ಆ ಹುಡುಗಿ ಬಹು ಸುಂದರಿಯೂ ಇನ್ನೂ ಮದುವೆಯಾಗದ ಕನ್ಯೆಯಾಗಿದ್ದಳು.
೧೭ ಆಕೆ ಬುಗ್ಗೆಯ ಬಳಿಗೆ ಹೋಗಿ ಕೊಡದಲ್ಲಿ ನೀರು ತುಂಬಿಕೊಂಡು ಮೇಲಕ್ಕೆ ಬಂದಾಗ ಆ ಸೇವಕನು ಓಡಿಬಂದು ಎದುರುಗೊಂಡು, “ಅಮ್ಮಾ, ದಯಮಾಡಿ ನಿನ್ನ ಕೊಡದಿಂದ ನನಗೆ ಸ್ವಲ್ಪ ನೀರನ್ನು ಕುಡಿಯುವುದಕ್ಕೆ ಕೊಡು” ಎಂದು ಕೇಳಿಕೊಳ್ಳಲು ಆಕೆಯು,
೧೮ ಆಕೆ ತಕ್ಷಣವೇ ಕೊಡವನ್ನು ತನ್ನ ಕೈಯ ಮೇಲೆ ಇಳಿಸಿ “ಕುಡಿಯಿರಿ” ಎಂದು ಕುಡಿಯಲು ಕೊಟ್ಟಳು.
೧೯ ನೀರು ಕೊಟ್ಟ ಮೇಲೆ, “ನಾನು ನಿನ್ನ ಒಂಟೆಗಳಿಗೂ ಬೇಕಾದಷ್ಟು ನೀರು ತಂದು ಕೊಡುತ್ತೇನೆ” ಎಂದು ಹೇಳಿ, ೨೦ ಕೊಡದಲ್ಲಿದ್ದ ನೀರನ್ನು ನೀರಿನ ತೊಟ್ಟಿಯೊಳಗೆ ಹೊಯಿದು ತಿರುಗಿ ತರುವುದಕ್ಕೆ ಬಾವಿಗೆ ತ್ವರೆಯಾಗಿ ಹೋದಳು. ಹೀಗೆ ಅವನ ಎಲ್ಲಾ ಒಂಟೆಗಳಿಗೂ ನೀರನ್ನು ತಂದು ಕೊಟ್ಟಳು. ೨೧ ಅಷ್ಟರಲ್ಲಿ ಆ ಮನುಷ್ಯನು ಏನೂ ಮಾತನಾಡದೆ ಆಕೆಯನ್ನು ದೃಷ್ಟಿಸಿ ನೋಡುತ್ತಾ, ಯೆಹೋವನು ತನ್ನ ಪ್ರಯಾಣವನ್ನು ಸಫಲ ಮಾಡಿದನೋ ಇಲ್ಲವೋ ಎಂದು ತಿಳಿಯುವುದಕ್ಕಾಗಿ ಕಾದುಕೊಂಡಿದ್ದನು.
೨೨ ಒಂಟೆಗಳು ಕುಡಿದ ನಂತರ ಅವನು ಆಕೆಗೆ ಅರ್ಧ ತೊಲಾ ತೂಕವುಳ್ಳ ಒಂದು ಚಿನ್ನದ ಮೂಗುತಿಯನ್ನು, ಆಕೆಯ ಕೈಗಳಿಗೆ ಹತ್ತು ತೊಲಾ ತೂಕವುಳ್ಳ ಎರಡು ಚಿನ್ನದ ಬಳೆಗಳನ್ನೂ ಕೊಟ್ಟು, “ನೀನು ಯಾರ ಮಗಳು? ದಯವಿಟ್ಟು ನನಗೆ ಹೇಳು. ೨೩ ನಿನ್ನ ತಂದೆಯ ಮನೆಯಲ್ಲಿ ನಾವು ಇಳಿದು ಕೊಳ್ಳುವುದಕ್ಕೆ ಸ್ಥಳವಿದೆಯೋ?” ಎಂದು ಕೇಳಲು,
೨೪ ಆಕೆಯು ಅವನಿಗೆ, “ನಾನು ನಾಹೋರನಿಗೆ ಮಿಲ್ಕಳಲ್ಲಿ ಹುಟ್ಟಿದ ಬೆತೂವೇಲನ ಮಗಳು” ಎಂದು ಉತ್ತರಕೊಟ್ಟಳು. ೨೫ ಇದಲ್ಲದೆ ಆಕೆಯು ಅವನಿಗೆ, “ಹುಲ್ಲೂ ಮೇವೂ ನಮ್ಮಲ್ಲಿ ಸಾಕಷ್ಟು ಇದೆ ಮತ್ತು ನೀನು ಉಳಿದುಕೊಳ್ಳುವುದಕ್ಕೂ ಸ್ಥಳವಿದೆ” ಎಂದಳು.
೨೬ ಆ ಮನುಷ್ಯನು ಇದನ್ನು ಕೇಳಿ ಅಡ್ಡಬಿದ್ದು ಯೆಹೋವನಿಗೆ ನಮಸ್ಕರಿಸಿ, ೨೭ “ನನ್ನ ದಣಿಯಾದ ಅಬ್ರಹಾಮನ ದೇವರಾಗಿರುವ ಯೆಹೋವನಿಗೆ ಸ್ತೋತ್ರವಾಗಲಿ. ಆತನು ತನ್ನ ಪ್ರೀತಿಯನ್ನೂ ಸತ್ಯತೆಯನ್ನೂ ನನ್ನ ದಣಿಯಿಂದ ತೆಗೆಯಲಿಲ್ಲ; ನನ್ನನ್ನು ನನ್ನ ದಣಿಯ ಬಂಧುಗಳ ಮನೆಗೆ ನೆಟ್ಟನೆ ದಾರಿಯಿಂದಲೇ ಕರೆದುಕೊಂಡು ಬಂದಿದ್ದಾನೆ” ಎಂದನು.
೨೮ ಆ ಹುಡುಗಿಯು ಓಡಿ ಹೋಗಿ ನಡೆದ ಸಂಗತಿಯನ್ನು ತಾಯಿಯ ಮನೆಯವರಿಗೆ ತಿಳಿಸಿದಳು. ೨೯ ರೆಬೆಕ್ಕಳಿಗೆ ಲಾಬಾನನೆಂಬ ಅಣ್ಣನಿದ್ದನು. ಅವನು ಬುಗ್ಗೆಯ ಹತ್ತಿರ ಒಂಟೆಗಳ ಬಳಿಯಲ್ಲಿ ನಿಂತಿದ್ದ ಆ ಮನುಷ್ಯನ ಬಳಿಗೆ ಓಡಿಬಂದನು. ೩೦ ತನ್ನ ತಂಗಿಯ ಬಳಿ ಇದ್ದ ಮೂಗುತಿಯನ್ನೂ ಬಳೆಗಳನ್ನೂ ನೋಡಿ, ಆ ಮನುಷ್ಯನು ನನ್ನ ಸಂಗಡ ಹೇಗೆ ಮಾತನಾಡಿದನೆಂದು ರೆಬೆಕ್ಕಳು ಹೇಳಿದ ಮಾತುಗಳನ್ನು ಕೇಳಿ, ಬುಗ್ಗೆಯ ಹತ್ತಿರ ಒಂಟೆಗಳ ಬಳಿಯಲ್ಲಿ ನಿಂತಿದ್ದ ಆ ಮನುಷ್ಯನ ಬಳಿಗೆ ಬಂದನು. ೩೧ ಅವನಿಗೆ, “ಯೆಹೋವನ ಆಶೀರ್ವಾದವನ್ನು ಹೊಂದಿದವನೇ, ಒಳಗೆ ಬಾ; ಯಾಕೆ ಹೊರಗೆ ನಿಂತಿರುತ್ತೀ? ನಿನಗೋಸ್ಕರ ನನ್ನ ಮನೆಯಲ್ಲಿ ಒಂಟೆಗಳಿಗೆ ಬೇಕಾದ ಸ್ಥಳವನ್ನೂ ಸಿದ್ಧಮಾಡಿದ್ದೇನೆ” ಎಂದು ಹೇಳಿದನು.
೩೨ ಆ ಮನುಷ್ಯನು ಮನೆಯೊಳಕ್ಕೆ ಬಂದಾಗ ಲಾಬಾನನು ಒಂಟೆಗಳ ಹೊರೆಗಳನ್ನು ಇಳಿಸಿ ಅವುಗಳಿಗೆ ಹುಲ್ಲನ್ನು, ಮೇವನ್ನು ಕೊಡಿಸಿ ಆ ಮನುಷ್ಯನ ಮತ್ತು ಅವನ ಸಂಗಡ ಇದ್ದವರ ಕಾಲುಗಳನ್ನು ತೊಳೆಯುವುದಕ್ಕೆ ನೀರನ್ನು ಕೊಟ್ಟನು. ೩೩ ಆದರೆ ಅವನಿಗೆ ಊಟಕ್ಕೆ ಬಡಿಸಿದಾಗ, ಅವನು, “ನಾನು ಬಂದ ಕೆಲಸವನ್ನು ಹೇಳದೆ ಊಟ ಮಾಡುವುದಿಲ್ಲ” ಅನ್ನಲು ಲಾಬಾನನು, “ಹೇಳು” ಎಂದನು.
೩೪ ಆಗ ಅವನು, “ನಾನು ಅಬ್ರಹಾಮನ ಸೇವಕನು. ೩೫ ಯೆಹೋವನು ನನ್ನ ದಣಿಯನ್ನು ಬಹಳವಾಗಿ ಅಭಿವೃದ್ಧಿಪಡಿಸಿ ಅವನಿಗೆ ಕುರಿದನಗಳನ್ನೂ, ಬೆಳ್ಳಿ ಬಂಗಾರವನ್ನೂ, ದಾಸದಾಸಿಯರನ್ನೂ, ಒಂಟೆಗಳನ್ನೂ, ಕತ್ತೆಗಳನ್ನೂ ಕೊಟ್ಟಿದ್ದರಿಂದ ಅವನು ಧನವಂತನಾದನು.
೩೬ ನನ್ನ ದಣಿಯ ಪತ್ನಿಯಾದ ಸಾರಳು ವೃದ್ಧಾಪ್ಯದಲ್ಲಿ ಅವನಿಗೆ ಮಗನನ್ನು ಹೆತ್ತಳು; ಆ ಮಗನಿಗೆ ನನ್ನ ದಣಿಯು ತನಗಿರುವುದನ್ನೆಲ್ಲಾ ಕೊಟ್ಟಿದ್ದಾನೆ. ೩೭ ಇದಲ್ಲದೆ ನನ್ನ ದಣಿಯು ನನ್ನಿಂದ ಪ್ರಮಾಣ ಮಾಡಿಸಿ, ‘ನಾನು ವಾಸವಾಗಿರುವ ಕಾನಾನ್ ದೇಶದವರಿಂದ ನನ್ನ ೩೮ ಮಗನಿಗೆ ಹೆಣ್ಣನ್ನು ತೆಗೆದುಕೊಳ್ಳದೆ, ನನ್ನ ತಂದೆಯ ಮನೆಗೂ ನನ್ನ ಬಂಧುಗಳ ಬಳಿಗೂ ಹೋಗಿ ಅವರಲ್ಲೇ ಹೆಣ್ಣನ್ನು ತೆಗೆದುಕೊಳ್ಳಬೇಕೆಂದು ಹೇಳಿ ನನ್ನಿಂದ ಪ್ರಮಾಣ ಮಾಡಿಸಿದನು.’
೩೯ ನಾನು ನನ್ನ ದಣಿಗೆ, ‘ಒಂದು ವೇಳೆ ನನ್ನ ಹಿಂದೆ ಬರುವುದಕ್ಕೆ ಆ ಕನ್ಯೆಗೆ ಮನಸ್ಸಿಲ್ಲದೆ ಹೋದರೆ’ ” ಎಂದು ಹೇಳಲು,
೪೦ ಅವನು ನನಗೆ, “ನಾನು ಆರಾಧನೆ ಮಾಡುತ್ತಾ ಬಂದಿರುವ ನನ್ನ ದೇವರಾದ ಆ ಯೆಹೋವನು ತನ್ನ ದೂತನನ್ನು ನಿನ್ನೊಂದಿಗೆ ಕಳುಹಿಸಿ ನೀನು ನನ್ನ ತಂದೆಯ ಮನೆತನಕ್ಕೆ ಸೇರಿರುವ ಬಂಧುಗಳಲ್ಲಿ ನನ್ನ ಮಗನಿಗೆ ಹೆಣ್ಣು ತೆಗೆದುಕೊಳ್ಳುವಂತೆ ಅನುಕೂಲ ಮಾಡುವನು. ೪೧ ಆ ಮೇಲೆ ನಾನು ಮಾಡಿಸಿದ ಪ್ರಮಾಣದಿಂದ ನೀನು ಹೋದಾಗ ನನ್ನ ಬಂಧುಗಳಲ್ಲಿ ಅವರು ಹೆಣ್ಣನ್ನು ಕೊಡದಿದ್ದರೆ ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವಿ” ಎಂದು ಹೇಳಿದನು.
೪೨ ನಾನು ಈ ಹೊತ್ತು ಈ ಊರಿನ ಬುಗ್ಗೆಯ ಬಳಿಗೆ ಬಂದಾಗ, “ನನ್ನ ದಣಿಯಾದ ಅಬ್ರಹಾಮನ ದೇವರಾಗಿರುವ ಯೆಹೋವನೇ, ನೀರಿನ ಬುಗ್ಗೆಯ ಬಳಿಯಲ್ಲಿ ನಿಂತಿದ್ದೇನಷ್ಟೆ; ನೀನು ನನ್ನ ಪ್ರಯಾಣವನ್ನು ಸಫಲಮಾಡುವುದಾದರೆ ೪೩ ನೀರಿಗೆ ಬರುವ ಯಾವ ಸ್ತ್ರೀಗೆ, ‘ನೀನು ದಯವಿಟ್ಟು, ನಿನ್ನ ಕೊಡದಿಂದ ನನಗೆ ಸ್ವಲ್ಪ ನೀರನ್ನು ಕುಡಿಯುವುದಕ್ಕೆ ಕೊಡಮ್ಮಾ’ ಎಂದು ನಾನು ಕೇಳುವಾಗ, ಅವಳು, ೪೪ ‘ಕುಡಿಯಿರಿ ಮತ್ತು ನಿನ್ನ ಒಂಟೆಗಳಿಗೂ ನೀರು ತಂದು ಕೊಡುತ್ತೇನೆ ಅನ್ನುವಳೋ ಅವಳೇ ಯೆಹೋವನಿಂದ ನನ್ನ ದಣಿಯ ಮಗನಿಗೆ ನೇಮಕವಾದ ಕನ್ಯೆಯಾಗಿರಲಿ’ ಎಂದು,
೪೫ ನಾನು ನನ್ನ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವಾಗಲೇ, ರೆಬೆಕ್ಕಳು ಹೆಗಲಿನ ಮೇಲೆ ಕೊಡವನ್ನು ಹೊತ್ತುಕೊಂಡು ಬರುವುದನ್ನು ಕಂಡೆನು. ಆಕೆಯು ಬುಗ್ಗೆಗೆ ಇಳಿದು ನೀರನ್ನು ತೆಗೆದುಕೊಂಡು ಬಂದಾಗ ನಾನು ಆಕೆಗೆ, ‘ನನಗೆ ಕುಡಿಯುವುದಕ್ಕೆ ನೀರನ್ನು ಕೊಡು’ ಎಂದು ಕೇಳಿದೆನು.
೪೬ ಆ ಕ್ಷಣವೇ ಆಕೆ ಕೊಡವನ್ನು ಹೆಗಲಿನಿಂದ ಇಳಿಸಿ, ‘ಕುಡಿಯಿರಿ, ನಿಮ್ಮ ಒಂಟೆಗಳಿಗೂ ತಂದು ಕೊಡುತ್ತೇನೆ’ ಎಂದಳು. ನಾನು ಕುಡಿದ ಮೇಲೆ ಆಕೆ ಒಂಟೆಗಳಿಗೂ ನೀರು ತಂದುಕೊಟ್ಟಳು.
೪೭ ನೀನು ಯಾರ ಮಗಳೆಂದು ನಾನು ಕೇಳಿದ್ದಕ್ಕೆ ಆಕೆಯು, ‘ನಾನು ನಾಹೋರನಿಗೆ ಮಿಲ್ಕಳಲ್ಲಿ ಹುಟ್ಟಿದ ಬೆತೂವೇಲನ ಮಗಳು’ ಎಂದಳು. ೪೮ ಅದನ್ನು ಕೇಳಿ ನಾನು ಆಕೆಯ ಮೂಗಿಗೆ ಮೂಗುತಿಯನ್ನೂ ಕೈಗಳಿಗೆ ಬಳೆಗಳನ್ನೂ ಇಟ್ಟು ನನ್ನ ದಣಿಯಾದ ಅಬ್ರಹಾಮನ ದೇವರಾದ ಯೆಹೋವನಿಗೆ ತಲೆಬಾಗಿ ನಮಸ್ಕರಿಸಿ ಆತನು ನನ್ನ ದಣಿಯ ಮಗನಿಗೋಸ್ಕರ ಅವನ ತಮ್ಮನ ಮಗಳನ್ನೇ ತೆಗೆದುಕೊಳ್ಳುವಂತೆ ನನ್ನನ್ನು ಸತ್ಯದ ದಾರಿಯಲ್ಲಿ ಕರೆದುಕೊಂಡು ಬಂದುದಕ್ಕಾಗಿ ಆತನನ್ನು ಕೊಂಡಾಡಿದನು. ೪೯ ಹೀಗಿರುವಲ್ಲಿ ನೀವು ನನ್ನ ದಣಿಗೆ ಪ್ರೀತಿಯಿಂದಲೂ, ನಂಬಿಕೆಯಿಂದಲೂ ನಡೆಯುವುದಕ್ಕೆ ಒಪ್ಪಿದರೆ ನನಗೆ ಹೇಳಿರಿ; ಇಲ್ಲವಾದರೆ ಇಲ್ಲವೆನ್ನಿರಿ; ಆಗ ನಾನು ಬಲಗಡೆಗಾಗಲಿ ಎಡಗಡೆಗಾಗಲಿ ನನ್ನ ಪ್ರಯಾಣ ಮುಂದುವರೆಸುತ್ತೇನೆ” ಎಂದು ವಿವರಿಸಿದನು.
೫೦ ಅದಕ್ಕೆ ಲಾಬಾನನೂ, ಬೆತೂವೇಲನೂ, “ಈ ಕಾರ್ಯವು ಯೆಹೋವನಿಂದಲೇ ಉಂಟಾಯಿತು; ನಾವಂತೂ ಹೌದೆಂದೂ, ಅಲ್ಲವೆಂದೂ ಹೇಳಲಾರೆವು. ರೆಬೆಕ್ಕಳನ್ನು ನಿನ್ನ ವಶಕ್ಕೆ ಕೊಡುತ್ತೇವೆ; ೫೧ ಕರೆದುಕೊಂಡು ಹೋಗಬಹುದು; ಯೆಹೋವನು ಹೇಳಿದಂತೆಯೇ ರೆಬೆಕ್ಕಳು ನಿನ್ನ ದಣಿಯ ಮಗನಿಗೆ ಹೆಂಡತಿಯಾಗಲಿ” ಎಂದರು.
೫೨ ಅಬ್ರಹಾಮನ ಸೇವಕನು ಅವರ ಮಾತನ್ನು ಕೇಳಿದಾಗ ಯೆಹೋವನಿಗೆ ತಲೆಬಾಗಿ ನಮಸ್ಕರಿಸಿದನು. ೫೩ ಆ ಮೇಲೆ ತಾನು ತಂದಿದ್ದ ಬೆಳ್ಳಿ ಬಂಗಾರದ ಒಡವೆಗಳನ್ನೂ, ವಸ್ತ್ರಗಳನ್ನೂ ತೆಗೆದು ರೆಬೆಕ್ಕಳಿಗೆ ಕೊಟ್ಟನು. ಆಕೆಯ ಅಣ್ಣನಿಗೂ ತಾಯಿಗೂ ಸಹ ಬೆಲೆಯುಳ್ಳ ವಸ್ತುಗಳನ್ನು ಕೊಟ್ಟನು. ೫೪ ಬಳಿಕ ಅವನೂ ಅವನ ಸಂಗಡ ಬಂದ ಸೇವಕರೂ ಊಟ ಉಪಚಾರಗಳನ್ನು ಮುಗಿಸಿಕೊಂಡು ರಾತ್ರಿಯೆಲ್ಲಾ ಅಲ್ಲೇ ಇದ್ದರು. ಬೆಳಗ್ಗೆ ಎದ್ದಾಗ ಅವನು, “ನನ್ನ ದಣಿಯ ಬಳಿಗೆ ಹೊರಡುವುದಕ್ಕೆ ನನಗೆ ಅಪ್ಪಣೆಯಾಗಲಿ” ಎಂದು ಕೇಳಲು,
೫೫ ರೆಬೆಕ್ಕಳ ಅಣ್ಣನೂ, ತಾಯಿಯೂ ಅವನಿಗೆ, “ಹುಡುಗಿಯು ಇನ್ನು ಹತ್ತು ದಿನವಾದರೂ ನಮ್ಮಲ್ಲಿರಲಿ; ಆ ಮೇಲೆ ಆಕೆ ಹೋಗಬಹುದು” ಎಂದು ಹೇಳಿದರು.
೫೬ ಅವನು ಅವರಿಗೆ, “ಯೆಹೋವನು ನನ್ನ ಪ್ರಯಾಣವನ್ನು ಸಫಲಮಾಡಿದ್ದಾನೆ; ಆದುದರಿಂದ ನನ್ನನ್ನು ತಡೆಯಬೇಡಿರಿ, ನನ್ನ ದಣಿಯ ಬಳಿಗೆ ಹೋಗುವುದಕ್ಕೆ ನನಗೆ ಅಪ್ಪಣೆಯಾಗಬೇಕು” ಎಂದು ಹೇಳಲು
೫೭ ಅವರು, “ನಾವು ಹುಡುಗಿಯನ್ನು ಕರೆದು ಆಕೆಯ ಅಭಿಪ್ರಾಯವನ್ನು ತಿಳಿದುಕೊಳ್ಳುತ್ತೇವೆ” ಎಂದರು. ೫೮ ಅವರು ರೆಬೆಕ್ಕಳನ್ನು ಕರೆದು ಆಕೆಗೆ, “ಅಮ್ಮಾ ಈ ಮನುಷ್ಯನ ಜೊತೆಯಲ್ಲಿ ನೀನು ಹೋಗುವಿಯಾ?” ಎಂದು ಕೇಳಿದರು. ಅದಕ್ಕೆ ಅವಳು “ಹೋಗುತ್ತೇನೆ” ಎಂದಳು.
೫೯ ಆಗ ಅವರು ತಮ್ಮ ತಂಗಿಯಾದ ರೆಬೆಕ್ಕಳನ್ನೂ, ಅವಳ ದಾಸಿಯರನ್ನು, ಸಂಗಡ ಬಂದ ಅಬ್ರಹಾಮನ ಮನುಷ್ಯರ ಸಂಗಡ ಕಳುಹಿಸಿ ಕೊಟ್ಟರು. ೬೦ ಮತ್ತು ರೆಬೆಕ್ಕಳಿಗೆ, “ತಂಗಿ, ನಿನ್ನಿಂದ ಸಾವಿರ, ಹತ್ತು ಸಾವಿರ ಸಂತಾನವಾಗಲಿ; ನಿನ್ನ ಸಂತಾನದವರು ತಮ್ಮ ವೈರಿಗಳ ಸ್ವಾಸ್ತ್ಯವನ್ನು ಸ್ವಾಧೀನಮಾಡಿಕೊಳ್ಳಲಿ” ಎಂದು ಹೇಳಿ ಹರಸಿದರು.
೬೧ ರೆಬೆಕ್ಕಳೂ ಆಕೆಯ ದಾಸಿಯರೂ ಒಂಟೆಗಳ ಮೇಲೆ ಹತ್ತಿದವರಾಗಿ ಅಬ್ರಹಾಮನ ಸೇವಕನ ಹಿಂದೆ ಹೋದರು. ಹೀಗೆ ಆ ಸೇವಕರು ರೆಬೆಕ್ಕಳನ್ನು ಕರೆದುಕೊಂಡು ಹೊರಟನು.
೬೨ ಅಷ್ಟರಲ್ಲಿ ಇಸಾಕನು ಬೆರ್ ಲಹೈರೋಯಿ ಬಾವಿಗೆ ಹೋಗಿ ಬಂದಿದ್ದನು; ಅವನು ಕಾನಾನ್ ದೇಶದ ದಕ್ಷಿಣ ಸೀಮೆಯಲ್ಲಿ ವಾಸವಾಗಿದ್ದನು. ೬೩ ಇಸಾಕನು ಸಂಜೆ ವೇಳೆಯಲ್ಲಿ ಧ್ಯಾನ ಮಾಡುವುದಕ್ಕಾಗಿ ಬಯಲು ಪ್ರದೇಶಕ್ಕೆ ಹೋಗಿದ್ದನು. ಅಲ್ಲಿ ಕಣ್ಣೆತ್ತಿ ನೋಡಲಾಗಿ ಒಂಟೆಗಳು ಬರುವುದನ್ನು ಕಂಡನು. ೬೪ ರೆಬೆಕ್ಕಳು ಕಣ್ಣೆತ್ತಿ ಇಸಾಕನನ್ನು ನೋಡಿ ಒಂಟೆಯಿಂದ ಕೆಳಗೆ ಇಳಿದಳು. ೬೫ ಆಕೆಯು ಆ ಸೇವಕನಿಗೆ, “ನಮ್ಮನ್ನು ಎದುರುಗೊಳ್ಳುವುದಕ್ಕೆ ಅಡವಿಯಲ್ಲಿ ನಡೆದು ಬರುವ ಆ ಮನುಷ್ಯನು ಯಾರು?” ಎಂದು ಕೇಳಿದಳು. ಅವನೇ ನನ್ನ ದಣಿಯೆಂದು ಅವನು ಹೇಳಿದಾಗ ಆಕೆ ಮುಸುಕು ಹಾಕಿಕೊಂಡಳು.
೬೬ ಆ ಸೇವಕನು ತಾನು ಮಾಡಿದ ಕಾರ್ಯಗಳನ್ನೆಲ್ಲಾ ಇಸಾಕನಿಗೆ ತಿಳಿಸಿದ ನಂತರ ಇಸಾಕನು ಆಕೆಯನ್ನು ತನ್ನ ತಾಯಿಯಾದ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ೬೭ ಈ ರೀತಿಯಾಗಿ ಇಸಾಕನು ರೆಬೆಕ್ಕಳನ್ನು ವರಿಸಿದನು, ಆಕೆ ಅವನ ಹೆಂಡತಿಯಾದಳು. ಅವನು ಆಕೆಯನ್ನು ಪ್ರೀತಿಸಿ ತನ್ನ ತಾಯಿ ಸಾರಳು ಸತ್ತ ದುಃಖವನ್ನು ಶಮನ ಮಾಡಿಕೊಂಡನು.