೨೭
ಯಾಕೋಬನು ಮೋಸದಿಂದ ಆಶೀರ್ವಾದವನ್ನು ಪಡೆದುಕೊಂಡದ್ದು
೧ ಇಸಾಕನು ಮುಪ್ಪಿನಿಂದ ಕಣ್ಣು ಕಾಣಲಾರದಷ್ಟು ಮೊಬ್ಬಾಗಿರಲು ಅವನು ತನ್ನ ಹಿರೀಮಗನಾದ ಏಸಾವನನ್ನು ಕರೆದು, “ಮಗನೇ” ಎನ್ನಲು ಏಸಾವನು, “ಇಗೋ ಇದ್ದೇನೆ” ಅಂದನು.
೨ ಇಸಾಕನು ಅವನಿಗೆ, “ನಾನು ಮುದುಕನಾಗಿದ್ದೇನೆ; ಯಾವಾಗ ಸಾಯುವೆನೋ ಗೊತ್ತಿಲ್ಲ. ೩ ಆದುದರಿಂದ ನೀನು ಬಿಲ್ಲು ಬತ್ತಳಿಕೆ ಮುಂತಾದ ಆಯುಧಗಳನ್ನು ತೆಗೆದುಕೊಂಡು ೪ ಕಾಡಿಗೆ ಹೋಗಿ ಬೇಟೆಯಾಡಿ ಬೇಟೆ ಮಾಂಸದಿಂದ ನನಗೆ ಇಷ್ಟವಾಗಿರುವ ರುಚಿಪದಾರ್ಥವನ್ನು ನನ್ನ ಊಟಕ್ಕೆ ಸಿದ್ಧಪಡಿಸು, ಸಾವು ಬರುವುದಕ್ಕಿಂತ ಮೊದಲು ನಾನು ಅದನ್ನು ತಿಂದು ನಿನ್ನನ್ನು ಆಶೀರ್ವದಿಸುತ್ತೇನೆ” ಎಂದು ಹೇಳಿದನು.
೫ ಇಸಾಕನು ತನ್ನ ಮಗನಾದ ಏಸಾವನಿಗೆ ಹೇಳಿದ ಮಾತು ರೆಬೆಕ್ಕಳ ಕಿವಿಗೆ ಬಿತ್ತು. ೬ ಏಸಾವನು ಬೇಟೆಯಾಡುವುದಕ್ಕೆ ಕಾಡಿಗೆ ಹೋಗಿದ್ದಾಗ ರೆಬೆಕ್ಕಳು ತನ್ನ ಮಗನಾದ ಯಾಕೋಬನಿಗೆ, “ನಿನ್ನ ತಂದೆಯು ನಿನ್ನ ಅಣ್ಣನಾದ ಏಸಾವನಿಗೆ, ೭ ‘ನೀನು ಹೋಗಿ ಬೇಟೆಯಾಡಿ ಬೇಟೆಯ ಮಾಂಸದಿಂದ ನನ್ನ ಊಟಕ್ಕೆ ರುಚಿಪದಾರ್ಥವನ್ನು ಸಿದ್ಧಮಾಡು; ಸಾವು ಬರುವುದಕ್ಕಿಂತ ಮೊದಲು ನಾನು ನಿನ್ನನ್ನು ಯೆಹೋವನ ಸನ್ನಿಧಿಯಲ್ಲಿ ಆಶೀರ್ವದಿಸುತ್ತೇನೆ’ ಎಂದು ಹೇಳುವುದನ್ನು ಕೇಳಿದ್ದೇನೆ. ೮ ಆದುದರಿಂದ ಮಗನೇ, ನೀನು ನನ್ನ ಮಾತಿಗೆ ಕಿವಿಗೊಟ್ಟು ನನ್ನ ಅಪ್ಪಣೆಯಂತೆ ಮಾಡು. ೯ ಆಡಿನ ಹಿಂಡಿನೊಳಗೆ ಹೋಗಿ ಎರಡು ಒಳ್ಳೆ ಆಡಿನ ಮರಿಗಳನ್ನು ಬೇಗ ತೆಗೆದುಕೊಂಡು ಬಾ; ಅವುಗಳಿಂದ ನಿನ್ನ ತಂದೆಗೆ ಇಷ್ಟವಾಗಿರುವ ರುಚಿಪದಾರ್ಥವನ್ನು ನಾನೇ ಸಿದ್ಧಮಾಡುತ್ತೇನೆ. ೧೦ ನೀನು ಅದನ್ನು ಅವನ ಬಳಿಗೆ ತೆಗೆದುಕೊಂಡು ಹೋಗಿ ಬಡಿಸಬೇಕು; ಹೀಗೆ ಮಾಡಿದರೆ ಅವನು ಸಾಯುವುದಕ್ಕಿಂತ ಮೊದಲು ನಿನ್ನನ್ನೇ ಆಶೀರ್ವದಿಸುವನು” ಎಂದಳು.
೧೧ ಅದಕ್ಕೆ ಯಾಕೋಬನು ತನ್ನ ತಾಯಿ ರೆಬೆಕ್ಕಳಿಗೆ, “ನನ್ನ ಅಣ್ಣನಾದ ಏಸಾವನು ಮೈತುಂಬ ಅಧಿಕವಾಗಿ ರೋಮವುಳ್ಳವನಾಗಿದ್ದಾನೆ. ನಾನು ನುಣುಪಾದ ಚರ್ಮವುಳ್ಳವನು. ೧೨ ಒಂದು ವೇಳೆ ತಂದೆಯು ನನ್ನನ್ನು ಮುಟ್ಟಿ ನೋಡಿದರೆ ನಾನು ಅವನಿಗೆ ಮೋಸ ಮಾಡುವವನಾಗಿ ಕಂಡು ಬಂದರೆ, ಆಶೀರ್ವಾದಕ್ಕಿಂತ ಶಾಪವನ್ನೇ ಹೊಂದುವೆನು” ಎಂದನು.
೧೩ ಅವನ ತಾಯಿಯು ಅವನಿಗೆ, “ಮಗನೇ, ಅವನು ನಿನಗೆ ಶಾಪಕೊಟ್ಟರೆ ಆ ಶಾಪ ನನಗಿರಲಿ; ನೀನು ನನ್ನ ಮಾತನ್ನು ಕೇಳಿ ಆಡಿನ ಮರಿಗಳನ್ನು ತೆಗೆದುಕೊಂಡು ಬಾ” ಎಂದು ಹೇಳಿದಳು.
೧೪ ಅವನು ಹೋಗಿ ಅವುಗಳನ್ನು ತಂದು ತಾಯಿಗೆ ಕೊಟ್ಟನು. ರೆಬೆಕ್ಕಳು ಅವನ ತಂದೆಗೆ ಇಷ್ಟವಾಗಿದ್ದ ಸವಿಯೂಟವನ್ನು ಸಿದ್ಧಪಡಿಸಿದಳು. ೧೫ ಆಮೇಲೆ ರೆಬೆಕ್ಕಳು ಮನೆಯಲ್ಲಿ ತನ್ನ ವಶದಲ್ಲಿದ್ದ ಹಿರೀಮಗನಾದ ಏಸಾವನ ಶ್ರೇಷ್ಠ ವಸ್ತ್ರಗಳನ್ನು ತೆಗೆದು, ತನ್ನ ಕಿರಿಯ ಮಗನಾದ ಯಾಕೋಬನಿಗೆ ಹೊದಿಸಿದಳು. ೧೬ ಆ ಆಡಿನ ಮರಿಗಳ ಚರ್ಮಗಳನ್ನು ಅವನ ಕೈಗಳಿಗೂ, ನುಣುಪಾದ ಕೊರಳಿಗೂ ಸುತ್ತಿದಳು. ೧೭ ನಂತರ ತಾನು ಸಿದ್ಧಮಾಡಿದ್ದ ರುಚಿಪದಾರ್ಥವನ್ನೂ ರೊಟ್ಟಿಯನ್ನೂ ತನ್ನ ಮಗನಾದ ಯಾಕೋಬನ ಕೈಯಲ್ಲಿ ಕೊಟ್ಟಳು.
೧೮ ಅವನು ತಂದೆಯ ಬಳಿಗೆ ಹೋಗಿ, “ಅಪ್ಪಾ” ಎಂದು ಕರೆಯಲು, ತಂದೆಯು, “ಏನು ಮಗನೇ, ನೀನು ಯಾರು?” ಎಂದು ಕೇಳಿದನು.
೧೯ ಯಾಕೋಬನು ಅವನಿಗೆ, “ನಾನು ನಿನ್ನ ಹಿರೀಮಗನಾದ ಏಸಾವನು; ನಿನ್ನ ಅಪ್ಪಣೆಯಂತೆ ಊಟ ಸಿದ್ಧಪಡಿಸಿಕೊಂಡು ತಂದಿದ್ದೇನೆ. ಎದ್ದು, ಕುಳಿತುಕೊಂಡು ನಾನು ತಂದಿರುವ ಬೇಟೆ ಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸು” ಎಂದು ಹೇಳಲು,
೨೦ ಇಸಾಕನು, “ಏನು ಮಗನೇ, ಇಷ್ಟು ಬೇಗ ಬೇಟೆ ಹೇಗೆ ಸಿಕ್ಕಿತು” ಎಂದು ಕೇಳಿದ್ದಕ್ಕೆ ಅವನು, “ನಿನ್ನ ದೇವರಾದ ಯೆಹೋವನು ಅದನ್ನು ನನ್ನೆದುರಿಗೆ ಬರಮಾಡಿದನು” ಎಂದನು.
೨೧ ಇಸಾಕನು ಯಾಕೋಬನಿಗೆ, “ಕಂದಾ, ನನ್ನ ಬಳಿಗೆ ಬಾ; ನೀನು ನನ್ನ ಮಗನಾದ ಏಸಾವನೋ ಅಲ್ಲವೋ ನಿನ್ನನ್ನು ಮುಟ್ಟಿ ತಿಳಿದುಕೊಳ್ಳಬೇಕು” ಎಂದು ಹೇಳಿದನು.
೨೨ ಯಾಕೋಬನು ತನ್ನ ತಂದೆಯ ಹತ್ತಿರಕ್ಕೆ ಬಂದಾಗ ಇಸಾಕನು ಅವನನ್ನು ಮುಟ್ಟಿ ನೋಡಿ, “ಸ್ವರವೇನೋ ಯಾಕೋಬನ ಸ್ವರವಾಗಿದೆ, ಕೈಗಳು ಏಸಾವನ ಕೈಗಳು” ಎಂದು ಹೇಳಿದನು. ೨೩ ಯಾಕೋಬನ ಕೈಗಳು ಏಸಾವನ ಕೈಗಳಂತೆ ರೋಮವುಳ್ಳವುಗಳಾಗಿದ್ದರಿಂದ ಇಸಾಕನು ಅವನ ಗುರುತನ್ನು ಹಿಡಿಯಲಾರದೆ ಅವನನ್ನು ಆಶೀರ್ವದಿಸಿದನು. ೨೪ ಅವನು, “ನೀನು ನಿಜವಾದ ನನ್ನ ಮಗನಾದ ಏಸಾವನೋ” ಎಂದು ಕೇಳಿದ್ದಕ್ಕೆ ಯಾಕೋಬನು, “ಹೌದು” ಎನ್ನಲು,
೨೫ ಇಸಾಕನು, “ಆ ಪದಾರ್ಥವನ್ನು ಹತ್ತಿರಕ್ಕೆ ತೆಗೆದುಕೊಂಡು ಬಾ; ನೀನು ತಂದ ಬೇಟೆ ಮಾಂಸವನ್ನು ನಾನು ಊಟಮಾಡಿದ ಮೇಲೆ ನಿನ್ನನ್ನು ಆಶೀರ್ವದಿಸುವೆನು” ಎಂದು ಹೇಳಿದನು. ಯಾಕೋಬನು ಅದನ್ನು ಅವನ ಹತ್ತಿರಕ್ಕೆ ತೆಗೆದುಕೊಂಡು ಬರಲು ಅವನು ತಿಂದನು; ದ್ರಾಕ್ಷಾರಸವನ್ನು ಕುಡಿದನು. ೨೬ ಆಮೇಲೆ ಅವನ ತಂದೆಯಾದ ಇಸಾಕನು ಅವನಿಗೆ, “ಮಗನೇ, ನೀನು ಹತ್ತಿರ ಬಂದು ನನಗೆ ಮುದ್ದಿಡು” ಎಂದು ಹೇಳಲು ಅವನು ಹತ್ತಿರ ಬಂದು ತಂದೆಗೆ ಮುದ್ದಿಟ್ಟನು.
೨೭ ಇಸಾಕನು ಅವನ ವಸ್ತ್ರಗಳ ವಾಸನೆಯನ್ನು ಮೂಸಿ ನೋಡಿ ಅವನನ್ನು ಆಶೀರ್ವದಿಸಿ,
“ಆಹಾ, ನನ್ನ ಮಗನ ಸುವಾಸನೆಯು,
ಯೆಹೋವನು ಆಶೀರ್ವದಿಸಿದ ಹೊಲದ ಸುವಾಸನೆಯಂತಿರುವುದು.
೨೮ ದೇವರು ನಿನಗೆ ಆಕಾಶದ ಮಂಜನ್ನೂ,
ಸಾರವುಳ್ಳ ಭೂಮಿಯನ್ನೂ ಕೊಟ್ಟು
ದವಸಧಾನ್ಯಗಳನ್ನೂ, ದ್ರಾಕ್ಷಾರಸವನ್ನೂ ಹೇರಳವಾಗಿ ಅನುಗ್ರಹಿಸಲಿ.
೨೯ ಜನಗಳು ನಿನ್ನನ್ನು ಆರಾಧಿಸಲಿ,
ಜನಾಂಗಗಳು ನಿನಗೆ ಅಧೀನವಾಗಲಿ.
ನಿನ್ನ ಅಣ್ಣತಮ್ಮಂದಿರಿಗೆ ನೀನು ದೊರೆಯಾಗಿರು,
ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ.
ನಿನ್ನನ್ನು ಶಪಿಸುವವರಿಗೆ ಶಾಪವೂ,
ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದವೂ ಉಂಟಾಗಲಿ” ಎಂದನು.
೩೦ ಇಸಾಕನು ಅವನನ್ನು ಆಶೀರ್ವದಿಸಿದ ಮೇಲೆ ಯಾಕೋಬನು ತನ್ನ ತಂದೆಯ ಬಳಿಯಿಂದ ಹೊರಟುಹೋದ ಕ್ಷಣವೇ ಅವನ ಅಣ್ಣನಾದ ಏಸಾವನು ಬೇಟೆಯಿಂದ ಬಂದನು. ೩೧ ಅವನೂ ಸವಿಯೂಟವನ್ನು ಸಿದ್ಧಮಾಡಿ ತನ್ನ ತಂದೆಯ ಬಳಿಗೆ ತಂದು ಅವನಿಗೆ, “ಅಪ್ಪಾ, ನೀನು ಎದ್ದು ನಿನ್ನ ಮಗನಾದ ನಾನು ಬೇಟೆಯಿಂದ ತಂದಿರುವ ಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸು” ಎಂದು ಹೇಳಿದನು.
೩೨ ಅವನ ತಂದೆಯಾದ ಇಸಾಕನು, “ನೀನು ಯಾರು?” ಎಂದು ಅವನನ್ನು ಕೇಳಲು ಅವನು, “ನಾನು ನಿನ್ನ ಚೊಚ್ಚಲ ಮಗನಾದ ಏಸಾವನು” ಎಂದನು.
೩೩ ಅದಕ್ಕೆ ಇಸಾಕನು ಬಹಳವಾಗಿ ಗಡಗಡನೆ ನಡುಗುತ್ತಾ, “ಯಾರೋ ಬೇರೊಬ್ಬನು ಬೇಟೆ ಮಾಂಸವನ್ನು ತಂದು ನನಗೆ ಕೊಟ್ಟುಹೋದನಲ್ಲಾ. ನೀನು ಬರುವುದಕ್ಕಿಂತ ಮೊದಲೇ ಅವನು ತಂದಿದ್ದರಲ್ಲಿ ನಾನು ಊಟಮಾಡಿ ಅವನನ್ನೇ ಆಶೀರ್ವದಿಸಿದೆನು; ಅವನಿಗೆ ಮಾಡಿದ ಆಶೀರ್ವಾದ ತಪ್ಪಲಾರದು” ಎಂದನು.
೩೪ ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿ ದುಃಖಾಕ್ರಾಂತನಾಗಿ ಬಹಳವಾಗಿ ಅಳುತ್ತಾ, “ಅಪ್ಪಾ, ತಂದೆಯೇ, ನನ್ನನ್ನು ಸಹ ಆಶೀರ್ವದಿಸು” ಎಂದು ಬೇಡಿಕೊಳ್ಳಲು ಇಸಾಕನು,
೩೫ “ನಿನ್ನ ತಮ್ಮನು ಮೋಸದಿಂದ ಬಂದು ನಿನಗಾಗಬೇಕಾಗಿದ್ದ ಆಶೀರ್ವಾದವನ್ನು ಪಡೆದುಕೊಂಡನು” ಎಂದನು.
೩೬ ಅದಕ್ಕೆ ಏಸಾವನು, “ಯಾಕೋಬನೆಂಬ ಹೆಸರು ಅವನಿಗೆ ಉಂಟಾದದ್ದು ನ್ಯಾಯವಲ್ಲವೋ? ಎರಡು ಸಾರಿ ನನ್ನನ್ನು ವಂಚಿಸಿದ್ದಾನೆ, ಹಿಂದೆ ನನ್ನ ಚೊಚ್ಚಲತನದ ಹಕ್ಕನ್ನು ಅಪಹರಿಸಿದನು; ಈಗ ಬಂದು ನನಗಾಗ ಬೇಕಾಗಿದ್ದ ಆಶೀರ್ವಾದವನ್ನೂ ತೆಗೆದುಕೊಂಡಿದ್ದಾನೆ” ಎಂದು ಹೇಳಿ ತನ್ನ ತಂದೆಯನ್ನು, “ನನಗೋಸ್ಕರವೂ ನಿನ್ನ ಬಳಿ ಆಶೀರ್ವಾದವಿಲ್ಲವೋ” ಎಂದು ಕೇಳಲು,
೩೭ ಇಸಾಕನು ಏಸಾವನಿಗೆ, “ನನ್ನ ಮಗನೇ, ಅವನನ್ನು ನಿನ್ನ ದೊರೆಯನ್ನಾಗಿ ನೇಮಿಸಿದ್ದೇನೆ; ಅವನ ಅಣ್ಣತಮ್ಮಂದಿರನ್ನು ಅವನಿಗೆ ಸೇವಕನನ್ನಾಗಿ ಕೊಟ್ಟಿದ್ದೇನೆ; ದವಸಧಾನ್ಯಗಳನ್ನೂ ದ್ರಾಕ್ಷಾರಸವನ್ನೂ ಅವನ ಪೋಷಣೆಗಾಗಿ ಕೊಟ್ಟಿದ್ದೇನೆ ನೋಡು. ಹೀಗಿರುವಲ್ಲಿ ನಾನು ನಿನಗೋಸ್ಕರ ಏನು ಮಾಡಲಿ” ಎಂದನು.
೩೮ ಏಸಾವನು ಅವನಿಗೆ, “ಅಪ್ಪಾ, ತಂದೆಯೇ, ನಿನ್ನಲ್ಲಿ ಒಂದೇ ಒಂದು ಆಶೀರ್ವಾದ ಮಾತ್ರ ಇರುವುದೋ? ಅಪ್ಪಾ, ನನ್ನನ್ನೂ ಆಶೀರ್ವದಿಸಬೇಕು” ಎಂದು ಹೇಳಿ ಗೋಳಾಡುತ್ತಾ ಅಳಲು
೩೯ ಅವನ ತಂದೆಯಾದ ಇಸಾಕನು ಅವನಿಗೆ,
“ಸಾರವುಳ್ಳ ಭೂಮಿಯೂ ಮೇಲಿನಿಂದ ಬೀಳುವ ಆಕಾಶದ ಮಂಜು
ಇರುವ ಸ್ಥಳದಲ್ಲಿ ನಿನ್ನ ನಿವಾಸವಿರುವುದು.
೪೦ ನೀನು ಕತ್ತಿಯಿಂದಲೇ ಜೀವನ ಮಾಡುವಿ. ನಿನ್ನ ತಮ್ಮನಿಗೆ
ಸೇವಕನಾಗಿರುವಿ. ಆದರೂ ನೀನು ತಾಳ್ಮೆ ಮೀರುವಾಗ, ಅವನು ನಿನ್ನ ಹೆಗಲಿನ
ಮೇಲೆ ಹೊರಿಸಿರುವ ನೊಗವನ್ನು ಮುರಿದು ಹಾಕುವಿ” ಎಂದು ಹೇಳಿದನು.
೪೧ ತಂದೆಯು ಯಾಕೋಬನಿಗೆ ಮಾಡಿದ ಆಶೀರ್ವಾದದ ನಿಮಿತ್ತ ಏಸಾವನು ಯಾಕೋಬನನ್ನು ಹಗೆಮಾಡಿ ತನ್ನ ಮನಸ್ಸಿನೊಳಗೆ, “ತಂದೆಗೋಸ್ಕರ ದುಃಖಿಸುವ ಕಾಲ ಸಮೀಪಿಸಿತು. ತರುವಾಯ ನನ್ನ ತಮ್ಮನಾದ ಯಾಕೋಬನನ್ನು ಕೊಲ್ಲುವೆನು” ಎಂದುಕೊಂಡನು.
೪೨ ಹಿರಿಮಗನಾದ ಏಸಾವನು ಹೇಳಿದ ಮಾತು ರೆಬೆಕ್ಕಳಿಗೆ ತಿಳಿದುಬಂದಾಗ ಆಕೆಯು ತನ್ನ ಕಿರಿಯ ಮಗನಾದ ಯಾಕೋಬನನ್ನು ಕರೆದು ಅವನಿಗೆ, “ನೋಡು, ನಿನ್ನ ಅಣ್ಣನಾದ ಏಸಾವನು ನಿನ್ನನ್ನು ಕೊಂದು ಸಮಾಧಾನದಿಂದ ಇರಬೇಕೆಂದುಕೊಂಡಿದ್ದಾನೆ. ೪೩ ಆದುದರಿಂದ ಮಗನೇ, ನನ್ನ ಮಾತಿಗೆ ವಿಧೇಯನಾಗು; ನೀನು ಎದ್ದು ಹಾರಾನಿನಲ್ಲಿರುವ ನನ್ನ ಅಣ್ಣನಾದ ಲಾಬಾನನ ಬಳಿಗೆ ಹೊರಟುಹೋಗು. ೪೪ ಕೆಲವು ಕಾಲ, ನಿನ್ನ ಅಣ್ಣನ ಕೋಪವು ಶಮನವಾಗುವ ವರೆಗೂ ಅವನ ಬಳಿಯಲ್ಲೇ ಇರು. ೪೫ ನಿನ್ನ ಅಣ್ಣನು ನೀನು ಮಾಡಿರುವುದನ್ನು ಮರೆತು, ತನ್ನ ಕೋಪವನ್ನು ಮರೆತು ಬಿಟ್ಟಾಗ ನಾನು ನಿನ್ನನ್ನು ಅಲ್ಲಿಂದ ಕರೆಯಿಸುವೆನು. ನಾನು ಒಂದೇ ದಿನದಲ್ಲಿ ನಿಮ್ಮಿಬ್ಬರನ್ನೂ ಕಳೆದುಕೊಳ್ಳುವುದು ಏಕೆ?” ಎಂದು ಹೇಳಿದಳು.
೪೬ ರೆಬೆಕ್ಕಳು ಇಸಾಕನಿಗೆ, “ಹಿತ್ತಿಯರಾದ ಈ ಸ್ತ್ರೀಯರ ದೆಸೆಯಿಂದ ನನಗೆ ಬೇಸರವಾಗಿದೆ, ಯಾಕೋಬನೂ ಈ ದೇಶದಲ್ಲಿರುವ ಹಿತ್ತಿಯ ಸ್ತ್ರೀಯನ್ನು ಆರಿಸಿಕೊಂಡು ಮದುವೆ ಮಾಡಿಕೊಂಡರೆ, ನಾನು ಇನ್ನೂ ಬದುಕುವುದರಿಂದ ಪ್ರಯೋಜನವೇನು?” ಎಂದು ಹೇಳಿದಳು.