44
ಯೋಸೇಫನ ಬೆಳ್ಳಿಯ ಪಾತ್ರೆ
ಯೋಸೇಫನು ತರುವಾಯ ತನ್ನ ಗೃಹನಿರ್ವಾಹಕನಿಗೆ, “ಆ ಮನುಷ್ಯರು ಚೀಲಗಳನ್ನು ಹೊರುವಷ್ಟು ಧಾನ್ಯವನ್ನು ತುಂಬಿಸಿ, ಒಬ್ಬೊಬ್ಬನ ಚೀಲದ ಬಾಯಲ್ಲಿ ಅವನವನ ಹಣದ ಗಂಟನ್ನು ಇಡಿರಿ. ಕಿರಿಯವನ ಚೀಲದಲ್ಲಿ ಅವನು ದವಸಕ್ಕೆ ತಂದ ಹಣವನ್ನಲ್ಲದೇ, ತನ್ನ ಬೆಳ್ಳಿಯ ಪಾನ ಪಾತ್ರೆಯನ್ನು ಇಡಬೇಕು” ಎಂದು ಅಪ್ಪಣೆಕೊಡಲು, ಗೃಹನಿರ್ವಾಹಕನು ಹಾಗೆಯೇ ಮಾಡಿದನು.
ಅವರೆಲ್ಲರೂ ಬೆಳಿಗ್ಗೆ ಹೊತ್ತು ಮೂಡುವಾಗ ಅಪ್ಪಣೆ ಪಡೆದು, ಕತ್ತೆಗಳ ಸಹಿತವಾಗಿ ಹೊರಟುಹೋದರು. ಅವರು ಪಟ್ಟಣವನ್ನು ಬಿಟ್ಟು ಸ್ವಲ್ಪ ದೂರ ಹೋಗುವಷ್ಟರಲ್ಲಿ, ಯೋಸೇಫನು ತನ್ನ ಗೃಹನಿರ್ವಾಹಕನಿಗೆ, “ನೀನು ಎದ್ದು ಆ ಮನುಷ್ಯರನ್ನು ಹಿಂದಟ್ಟು, ಅವರು ಸಿಕ್ಕಿದಾಗ ನೀವು ಉಪಕಾರಕ್ಕೆ ಪ್ರತಿಯಾಗಿ ಯಾಕೆ ಅಪಕಾರ ಮಾಡಿದ್ದೀರಿ? ಆ ಪಾತ್ರೆಯಲ್ಲಿ ನನ್ನ ದಣಿಯು ಪಾನಮಾಡುತ್ತಾನಲ್ಲವೇ? ಅವನು ದೈವೋಕ್ತಿಯನ್ನು ಹೇಳುವವನಲ್ಲವೆ? ನೀವು ಹೀಗೆ ಮಾಡಿದ್ದು ಕೆಟ್ಟಕೆಲಸ” ಎಂದು ಅವರಿಗೆ ಹೇಳು ಎಂದನು.
ಗೃಹನಿರ್ವಾಹಕನು ಅವರನ್ನು ಹಿಂದಟ್ಟಿ, ಅವರಿಗೆ ಈ ಮಾತುಗಳನ್ನು ಹೇಳಿದನು. ಅವರು ಅವನಿಗೆ, “ನಮ್ಮ ಒಡೆಯನೇ, ಇಂಥಾ ಮಾತುಗಳನ್ನು ಹೇಳುವುದೇನು? ನಿನ್ನ ಸೇವಕರು ಇಂಥಾ ಕೃತ್ಯವನ್ನು ಎಂದಿಗೂ ಮಾಡುವವರಲ್ಲ. ಮೊದಲು ನಮ್ಮ ಚೀಲಗಳ ಬಾಯಲ್ಲಿ ನಮಗೆ ಸಿಕ್ಕಿದ ಹಣವನ್ನು ನಾವು ಕಾನಾನ್ ದೇಶದಿಂದ ತಿರುಗಿ ನಿಮಗೆ ಕೊಡಲು ತಂದೆವು. ಹೀಗಿರುವಾಗ ನಾವು ನಿನ್ನ ದಣಿಯ ಮನೆಯೊಳಗಿಂದ ಬೆಳ್ಳಿ ಬಂಗಾರವನ್ನು ಹೇಗೆ ಕದ್ದುಕೊಂಡೇವು? ಆ ಪಾತ್ರೆಯು ನಿನ್ನ ಸೇವಕರೊಳಗೆ ಯಾರ ಬಳಿಯಲ್ಲಿ ಸಿಕ್ಕುತ್ತದೋ, ಅವನು ಮರಣ ದಂಡನೆಯನ್ನು ಹೊಂದಲಿ. ಅದಲ್ಲದೆ ನಾವೆಲ್ಲರೂ ನಮ್ಮ ಸ್ವಾಮಿಗೆ ದಾಸರಾಗುವೆವು” ಎಂದರು.
10 ಅದಕ್ಕೆ ಅವನು, “ಒಳ್ಳೆಯದು, ನೀವು ಹೇಳಿದಂತೆ ಆಗಲಿ. ಆ ಪಾತ್ರೆ ಯಾವನ ಬಳಿಯಲ್ಲಿ ಸಿಕ್ಕುತ್ತದೋ, ಅವನು ನನಗೆ ದಾಸನಾಗಬೇಕು. ಉಳಿದವರು ನಿರಪರಾಧಿಗಳು” ಎಂದು ಹೇಳಿದಾಗ,
11 ಅವರು ತಟ್ಟನೆ, ಪ್ರತಿಯೊಬ್ಬನೂ ತನ್ನ ತನ್ನ ಚೀಲವನ್ನು ನೆಲಕ್ಕಿಳಿಸಿ ಅವುಗಳನ್ನು ಬಿಚ್ಚಿದರು. 12 ಅವನು ಹಿರಿಯವನಿಂದ ಹಿಡಿದು ಕಿರಿಯವನ ತನಕ ಪರೀಕ್ಷಿಸಿ ನೋಡಿದನು. ಆ ಪಾತ್ರೆಯು ಬೆನ್ಯಾಮೀನನ ಚೀಲದಲ್ಲಿ ಸಿಕ್ಕಿತು. 13 ಸಿಕ್ಕಿದಾಗ, ಅವರು ದುಃಖಾಕ್ರಾಂತರಾಗಿ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಕತ್ತೆಗಳ ಮೇಲೆ ಚೀಲಗಳನ್ನು ಹೇರಿ ಪಟ್ಟಣಕ್ಕೆ ಹಿಂತಿರುಗಿ ಬಂದರು.
14 ಯೆಹೂದನೂ ಅವನ ಅಣ್ಣತಮ್ಮಂದಿರೂ ಯೋಸೇಫನ ಮನೆಗೆ ಬಂದಾಗ ಅವನು ಇನ್ನು ಅಲ್ಲೇ ಇದ್ದನು. ಅವರು ಅವನೆದುರಿಗೆ ಅಡ್ಡಬಿದ್ದರು. 15 ಯೋಸೇಫನು ಅವರಿಗೆ, “ನೀವು ಮಾಡಿರುವ ಈ ಕೃತ್ಯವು ಏನು? ನನ್ನಂಥ ಮನುಷ್ಯನು ದೈವೋಕ್ತಿಗಳನ್ನು ಬಲ್ಲೆನೆಂದು ನಿಮಗೆ ತಿಳಿದಿರಲಿಲ್ಲವೋ?” ಎಂದು ಕೇಳಲು,
16 ಯೆಹೂದನು, “ನಾವು ನಮ್ಮ ಸ್ವಾಮಿಗೆ ಏನು ಹೇಳೋಣ? ನಾವು ಏನು ಮಾತನಾಡೋಣ? ನಾವು ನೀತಿವಂತರಾಗಿ ತೋರುವಂತೆ ಏನು ಮಾಡೋಣ? ನಿನ್ನ ಸೇವಕರ ಪಾಪಕೃತ್ಯವನ್ನು ದೇವರು ಹೊರಪಡಿಸಿದ್ದಾನೆ. ಈ ಪಾತ್ರೆಯು ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರವಲ್ಲದೆ ನಾವೆಲ್ಲರೂ ನಮ್ಮ ಸ್ವಾಮಿಗೆ ಗುಲಾಮರಾದೆವು” ಎಂದನು.
17 ಯೋಸೇಫನು, “ಹಾಗೆ ಎಂದಿಗೂ ಆಗಬಾರದು. ಈ ಪಾತ್ರೆಯು ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರವೇ ನನಗೆ ಗುಲಾಮನಾಗಿರಲಿ. ನೀವಾದರೋ ಸಮಾಧಾನವಾಗಿ ನಿಮ್ಮ ತಂದೆಯ ಬಳಿಗೆ ಹೋಗಿರಿ” ಎಂದನು.
18 ಯೆಹೂದನು ಹತ್ತಿರಕ್ಕೆ ಬಂದು, “ನನ್ನ ಒಡೆಯನೇ, ನಿನ್ನ ಸೇವಕನಾದ ನಾನು ಒಂದು ಮಾತನ್ನು ನನ್ನ ಒಡೆಯನಿಗೆ ಬಿಡಿಸಿ ಹೇಳುವುದಕ್ಕೆ ಅಪ್ಪಣೆಯಾಗಬೇಕು. ನಿನ್ನ ದಾಸನ ಮೇಲೆ ಕೋಪಗೊಳ್ಳಬಾರದು. ಏಕೆಂದರೆ ನೀನು ಫರೋಹನಿಗೆ ಸಮಾನನು ಎಂದು ನಾನು ಬಲ್ಲೇ. 19 ತಾವು ತಮ್ಮ ಸೇವಕರಾದ ನಮ್ಮನ್ನು ಕುರಿತು, ‘ನಿಮಗೆ ತಂದೆಯಾಗಲಿ, ತಮ್ಮನಾಗಲಿ ಇದ್ದಾನೋ?’ ಎಂದು ಕೇಳಲು, 20 ನಾವು ‘ನಮಗೆ ಮುದುಕನಾದ ತಂದೆಯಿದ್ದಾನೆ, ಅವನಿಗೆ ಮುಪ್ಪಿನಲ್ಲಿ ಹುಟ್ಟಿದ ಒಬ್ಬ ಚಿಕ್ಕ ಮಗನೂ ಇದ್ದಾನೆ, ಅವನ ಒಡಹುಟ್ಟಿದವನು ಸತ್ತು ಹೋಗಿದ್ದಾನೆ. ಆದುದರಿಂದ ಅವನ ತಾಯಿಯಲ್ಲಿ ಹುಟ್ಟಿದವರೊಳಗೆ ಅವನೊಬ್ಬನೇ ಉಳಿದಿದ್ದಾನೆ. ಅವನ ಮೇಲೆ ತಂದೆಗೆ ಬಹಳ ಪ್ರೀತಿಯುಂಟು’ ಎಂದು ಹೇಳಿದೆವು.
21 “ಅದಕ್ಕೆ ತಾವು, ‘ನಾನು ಆ ಹುಡುಗನನ್ನು ನೋಡಬೇಕು ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ’ ಎಂದು ಅಪ್ಪಣೆಕೊಡಲು, 22 ನಾವು ಸ್ವಾಮಿಯವರಿಗೆ, ‘ಆ ಹುಡುಗನು ತನ್ನ ತಂದೆಯನ್ನು ಬಿಟ್ಟು ಬರುವುದಿಲ್ಲ. ಅವನು ತಂದೆಯನ್ನು ಅಗಲಿದರೆ ತಂದೆಯು ಸಾಯುವನು’ ಎಂದು ಹೇಳಿದೆವು. 23 ಅದಕ್ಕೆ ನೀವು, ‘ನಿಮ್ಮ ತಮ್ಮನು ನಿಮ್ಮ ಸಂಗಡ ಬಾರದಿದ್ದರೆ ನೀವು ಇನ್ನೊಂದು ಸಾರಿ ನನ್ನ ಮುಖವನ್ನು ನೋಡಬಾರದು’ ಎಂದು ಅಪ್ಪಣೆಕೊಟ್ಟಿರಿ. 24 ನಾವು ನಿಮ್ಮ ಸೇವಕನಾದ ನಮ್ಮ ತಂದೆಯ ಬಳಿಗೆ ಹೋಗಿ ಸ್ವಾಮಿಯ ಮಾತುಗಳನ್ನು ತಿಳಿಸಿದೆವು.
25 “ನಮ್ಮ ತಂದೆಯು, ‘ನೀವು ಪುನಃ ಹೋಗಿ ನಮಗೆ ಧಾನ್ಯವನ್ನು ಕೊಂಡು ಕೊಂಡು ಬನ್ನಿ’ ಎಂದು ಹೇಳಿದಾಗ, 26 ನಾವು ಆತನಿಗೆ, ‘ಹೇಗೆ ಹೋಗುವುದು, ತಮ್ಮನು ನಮ್ಮ ಸಂಗಡ ಇದ್ದರೆ ಮಾತ್ರ ನಾವು ಹೋಗುತ್ತೇವೆ. ಇಲ್ಲವಾದರೇ, ನಾವು ಆ ಮನುಷ್ಯನ ಮುಖವನ್ನು ನೋಡಲು ಆಗುವುದಿಲ್ಲ’ ಎಂದು ಹೇಳಿದೆವು. 27 ಅದಕ್ಕೆ ನಿನ್ನ ಸೇವಕನಾದ, ನಮ್ಮ ತಂದೆಯು, ‘ನನ್ನ ಪತ್ನಿಯಲ್ಲಿ ನನಗೆ ಇಬ್ಬರು ಗಂಡು ಮಕ್ಕಳು ಹುಟ್ಟಿರುವುದು ನಿಮಗೆ ತಿಳಿದೇ ಇದೆ. 28 ಅವರಲ್ಲಿ ಒಬ್ಬನು ನನ್ನ ಬಳಿಯಿಂದ ಹೊರಟು ಹೋದನು. ಅವನು ಸಂದೇಹವಿಲ್ಲದೆ ಮೃಗದಿಂದ ಸೀಳಿ ಹಾಕಲ್ಪಟ್ಟಿರಬೇಕೆಂದು ತಿಳಿದೆನು. ಅಂದಿನಿಂದ ನಾನು ಅವನನ್ನು ಕಾಣಲಿಲ್ಲ. 29 ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಇವನಿಗೂ ಕೇಡು ಬಂದರೆ ಈ ಮುದಿ ತಲೆಯು ದುಃಖದಿಂದ ಸಮಾಧಿಗೆ ಸೇರಲು ನೀವು ಕಾರಣರಾಗುವಿರಿ’ ಎಂದನು.
30 “ನಮ್ಮ ತಂದೆಯ ಪ್ರಾಣವು ಇವನ ಪ್ರಾಣವು ಒಂದೇ ಆಗಿರುವುದರಿಂದ ನಾವು ನಿನ್ನ ಸೇವಕನಾದ ನಮ್ಮ ತಂದೆಯ ಬಳಿಗೆ ಹೋದಾಗ, 31 ಈ ಹುಡುಗನು ನಮ್ಮ ಸಂಗಡ ಇಲ್ಲದೆ ಇರುವುದನ್ನು ತಿಳಿದ ಕೂಡಲೇ ನಮ್ಮ ತಂದೆಯು ಸಾಯುವನು. ತಮ್ಮ ಸೇವಕರಾದ ನಾವು ನಮ್ಮ ಮುಪ್ಪಾದ ತಂದೆ ದುಃಖದಿಂದಲೇ ಸಮಾಧಿಗೆ ಸೇರಲು ಕಾರಣರಾಗುವೆವು. 32 ಸೇವಕನಾದ ನಾನು ತಂದೆಯ ಬಳಿಯಲ್ಲಿ ಈ ಹುಡುಗನಿಗೆ ಹೊಣೆಯಾಗಿ, ‘ನಾನು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬಾರದೆ ಹೋದರೆ, ಎಂದೆಂದಿಗೂ ತಂದೆಗೆ ದೋಷಿಯಾಗಿರುವೆನು’ ಎಂದು ಮಾತು ಕೊಟ್ಟಿದ್ದೇನೆ.
33 “ಆದುದರಿಂದ ಸೇವಕನಾದ ನಾನು ಈ ಹುಡುಗನ ಬದಲಾಗಿ ಸ್ವಾಮಿಗೆ ಗುಲಾಮನಾಗುವಂತೆಯೂ ಇವನು ತನ್ನ ಅಣ್ಣಂದಿರ ಸಂಗಡ ಹೋಗುವಂತೆಯೂ ಅನುಗ್ರಹ ಮಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. 34 ಈ ಹುಡುಗನನ್ನು ಬಿಟ್ಟು ನಾನು ನನ್ನ ತಂದೆಯ ಬಳಿಗೆ ಹೇಗೆ ಹೋಗಲಿ? ಹೋದರೆ, ನನ್ನ ತಂದೆಗೆ ಆಗುವ ಆಘಾತ, ದುಃಖ ನನ್ನಿಂದ ನೋಡಲಾಗದು” ಎಂದನು.