2 ಥೆಸಲೋನಿಕದವರಿಗೆ
ಗ್ರಂಥಕರ್ತೃತ್ವ
1 ಥೆಸಲೋನಿಕದಂತೆ, ಈ ಪತ್ರಿಕೆಯು ಪೌಲ, ಸೀಲ ಮತ್ತು ತಿಮೊಥೆಯರಿಂದ ಬರೆಯಲ್ಪಟ್ಟದ್ದಾಗಿದೆ. ಈ ಪತ್ರಿಕೆಯ ಗ್ರಂಥಕರ್ತನು 1 ಥೆಸಲೋನಿಕದಲ್ಲಿರುವ ಮತ್ತು ಪೌಲನು ಬರೆದ ಇತರ ಪತ್ರಿಕೆಗಳಲ್ಲಿರುವಂತಹ ಅದೇ ಶೈಲಿಯನ್ನು ಬಳಸಿದ್ದಾನೆ. ಇದು ಪೌಲನೇ ಮುಖ್ಯ ಗ್ರಂಥಕರ್ತನು ಎಂದು ತೋರಿಸುತ್ತದೆ. ಸೀಲ ಮತ್ತು ತಿಮೊಥೆಯರು ವಂದನೆ ಭಾಗದಲ್ಲಿ ಸೇರ್ಪಡೆಗೊಂಡಿದ್ದಾರೆ (2 ಥೆಸ. 1:1). ಅನೇಕ ವಚನಗಳಲ್ಲಿ, ನಾವು ಬರೆಯುತ್ತೇವೆ ಎಂಬ ವಿಷಯವು, ಅವರು ಮೂವರು ಒಪ್ಪಿಗೆಯನ್ನು ಸೂಚಿಸಿದ್ದಾರೆ ಎಂಬುದನ್ನು ತೋರಿಸುತ್ತದೆ. ಪೌಲನ ಅಂತಿಮ ವಂದನೆ ಮತ್ತು ಪ್ರಾರ್ಥನೆಯನ್ನು ಬರೆದಿರುವುದರಿಂದ ಕೈಬರಹವು ಅವನದಲ್ಲ (2 ಥೆಸ. 3:17). ಈ ಪತ್ರಿಕೆಯನ್ನು ಪೌಲನು ತಿಮೊಥೆಗೆ ಅಥವಾ ಸೀಲನಿಗೆ ಹೇಳಿ ಬರೆಯಿಸಿರುವುದು ಎಂದು ತೋರುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 51-52 ರ ನಡುವೆ ಬರೆಯಲ್ಪಟ್ಟಿದೆ.
1 ಥೆಸಲೋನಿಕದವರಿಗೆ ಬರೆದ ಪತ್ರಿಕೆಯನ್ನು ಬರೆದಂತಹ ಸ್ಥಳವಾದ ಕೊರಿಂಥದಲ್ಲಿಯೇ 2 ಥೆಸಲೋನಿಕದವರಿಗೆ ಬರೆದ ಪತ್ರಿಕೆಯನ್ನು ಪೌಲನು ಬರೆದನು.
ಸ್ವೀಕೃತದಾರರು
2 ಥೆಸ. 1:1 ರ ಪ್ರಕಾರ ಥೆಸಲೋನಿಕದವರಿಗೆ ಬರೆದ ಪತ್ರಿಕೆಯ ಉದ್ದೇಶಿತ ಓದುಗರು “ಥೆಸಲೋನಿಕದ ಸಭೆಯ” ಸದಸ್ಯರಾಗಿದ್ದಾರೆ.
ಉದ್ದೇಶ
ಕರ್ತನ ದಿನದ ಕುರಿತಾದ ಸೈದ್ಧಾಂತಿಕ ದೋಷವನ್ನು ಸರಿಪಡಿಸುವುದು ಇದರ ಉದ್ದೇಶವಾಗಿತ್ತು. ವಿಶ್ವಾಸಿಗಳನ್ನು ಪ್ರಶಂಸಿಸಲು ಮತ್ತು ನಂಬಿಕೆಯಲ್ಲಿನ ಅವರ ದೃಢನಿಷ್ಠೆಕ್ಕಾಗಿ ಅವರನ್ನು ಪ್ರೋತ್ಸಾಹಿಸಲು ಮತ್ತು ಅವರ ಅಂತಿಮಗತಿಶಾಸ್ತ್ರದ ಸ್ವಯಂ ವಂಚನೆಯ ನಿಮಿತ್ತ, ಕರ್ತನ ದಿನವು ಬಂದಿರುವುದರಿಂದ ಕರ್ತನ ಪುನರಾಗಮನವು ಶೀಘ್ರದಲ್ಲೇ ಉಂಟಾಗುತ್ತದೆ ಎಂದು ನಂಬಿದಂಥವರನ್ನು ಮತ್ತು ಈ ಸಿದ್ಧಾಂತವನ್ನು ತಮ್ಮ ಸ್ವಂತ ಲಾಭಕ್ಕಾಗಿ ದುರ್ಪಯೋಗ ಮಾಡಿಕೊಂಡವರನ್ನು ಗದರಿಸುವುದಕ್ಕಾಗಿ ಬರೆದನು.
ಮುಖ್ಯಾಂಶ
ನಿರೀಕ್ಷೆಯಲ್ಲಿ ಜೀವಿಸುವುದು
ಪರಿವಿಡಿ
1. ವಂದನೆ — 1:1-2
2. ಸಂಕಷ್ಟದಲ್ಲಿ ಸಾಂತ್ವನ — 1:3-12
3. ಕರ್ತನ ದಿನಕ್ಕೆ ಸಂಬಂಧಿಸಿದಂತೆ ಸರಿಪಡಿಸುವಿಕೆ — 2:1-12
4. ಅವರ ಅಂತ್ಯಾವಸ್ಥೆಗೆ ಸಂಬಂಧಿಸಿದ ಜ್ಞಾಪನೆ — 2:13-17
5. ಪ್ರಾಯೋಗಿಕ ವಿಷಯಗಳ ಬಗ್ಗೆ ಪ್ರಬೋಧನೆಗಳು — 3:1-15
6. ಅಂತಿಮ ವಂದನೆಗಳು — 3:16-18
1
ಪೀಠಿಕೆ
1 ನಮ್ಮ ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲ, ಸಿಲ್ವಾನ, ಮತ್ತು ತಿಮೊಥೆ ಎಂಬ ನಾವು ಬರೆಯುವುದೇನಂದರೆ,
2 ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ.
ದೇವರಿಗೆ ಕೃತಜ್ಞತಾಸ್ತುತಿ
3 ಸಹೋದರರೇ, ನಾವು ಯಾವಾಗಲೂ ನಿಮ್ಮನ್ನು ಕುರಿತು ದೇವರಿಗೆ ಕೃತಜ್ಞತಾಸ್ತುತಿ ಮಾಡುವುದಕ್ಕೆ ಬದ್ಧರಾಗಿದ್ದೇವೆ, ಹಾಗೆ ಮಾಡುವುದು ಯೋಗ್ಯವಾಗಿದೆ. ಏಕೆಂದರೆ ನೀವು ನಂಬಿಕೆಯಲ್ಲಿ ಬಹಳ ಅಭಿವೃದ್ಧಿ ಹೊಂದುತ್ತಾ, ಪರಸ್ಪರವಾದ ಪ್ರೀತಿ ನಿಮ್ಮೆಲ್ಲರಲ್ಲಿಯೂ ಹೆಚ್ಚಾಗುತ್ತಿದೆ.
4 ಹೀಗಿರುವುದರಿಂದ ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಎಲ್ಲಾ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳ ನಿಮಿತ್ತ ದೇವ ಜನರ ಸಭೆಗಳಲ್ಲಿ ನಾವೇ ಹೆಮ್ಮೆಯಿಂದ ಮಾತನಾಡುತ್ತೇವೆ.
5 ದೇವರ ನೀತಿಯುಳ್ಳ ತೀರ್ಪಿಗೆ ಪ್ರಮಾಣ ಯಾವುದೆಂದರೆ, ನೀವು ಪ್ರಯಾಸಪಡುತ್ತಿರುವ ದೇವರ ರಾಜ್ಯಕ್ಕೆ ನಿಮ್ಮನ್ನು ಯೋಗ್ಯರನ್ನಾಗಿಸುವುದು.
6 ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟವನ್ನೂ, ಸಂಕಟಪಡುವವರಾದ ನಿಮಗೆ ನಮ್ಮೊಡನೆ ಉಪಶಮನವನ್ನೂ ಕೊಡುವುದು ದೇವರ ಎಣಿಕೆಯಲ್ಲಿ ನ್ಯಾಯವಾಗಿದೆಯಷ್ಟೆ.
7 ಯೇಸು ಕರ್ತನು ತನ್ನ ಶಕ್ತಿಯುತ ದೇವದೂತರೊಂದಿಗೆ ಅಗ್ನಿ ಜ್ವಾಲೆಗಳ ಮೂಲಕ ಪರಲೋಕದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು.
8 ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ವಿಧೇಯರಾಗದವರಿಗೂ ಪ್ರತಿಕಾರ ಮಾಡುವನು.
9 ಅವರು ಕರ್ತನ ಸಮ್ಮುಖಕ್ಕೂ ಆತನ ಪರಾಕ್ರಮದ ವೈಭವಕ್ಕೂ ದೂರವಾಗಿ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.
10 ಆ ದಿನದಲ್ಲಿ ಆತನು ಬರುವಾಗ ತನ್ನ ಪರಿಶುದ್ಧ ಜನರಿಂದ ಮಹಿಮೆ ಹೊಂದಿದವನಾಗಿಯೂ ಮತ್ತು ನಾವು ನಿಮಗೆ ಹೇಳಿದ ಸಾಕ್ಷಿಯನ್ನು ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವನು.
11 ಆದುದರಿಂದ ನಿಮಗೋಸ್ಕರ ಯಾವಾಗಲೂ ಪ್ರಾರ್ಥನೆಮಾಡಿ, ನಮ್ಮ ದೇವರು ನಿಮ್ಮನ್ನು ಕರೆದದ್ದಕ್ಕೆ ತಾನೇ ನಿಮ್ಮನ್ನು ಯೋಗ್ಯರೆಂದು ಎಣಿಸಬೇಕೆಂತಲೂ, ಸತ್ಕ್ರಿಯೆಗಳಿಗಾಗಿರುವ ನಿಮ್ಮ ಸಕಲ ಆಸೆಗಳನ್ನೂ, ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಶಕ್ತಿಪೂರ್ವಕವಾಗಿ ಈಡೇರಿಸಬೇಕೆಂತಲೂ ಬೇಡಿಕೊಳ್ಳುತ್ತೇವೆ.
12 ಹೀಗಿರಲಾಗಿ ನಮ್ಮ ದೇವರು ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಗೆ ಅನುಸಾರವಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದುವುದು ನೀವೂ ಆತನಲ್ಲಿ ಮಹಿಮೆ ಹೊಂದುವಿರಿ.