11
ದೇವರ ಪುತ್ರವಾತ್ಸಲ್ಯ
ಇಸ್ರಾಯೇಲ್ ಇನ್ನೂ ಬಾಲ್ಯದಲ್ಲಿದ್ದಾಗ ನಾನು ಅದರ ಮೇಲೆ ಪ್ರೀತಿಯಿಟ್ಟು, ಆ ನನ್ನ ಮಗನನ್ನು ಐಗುಪ್ತ ದೇಶದಿಂದ ಕರೆದೆನು.
ನಾನು* ಕರೆದ ಹಾಗೆಲ್ಲಾ ನನ್ನ ಜನರು ದೂರದೂರ ಹೋಗುತ್ತಲೇ ಬಂದರು.
ಬಾಳ್ ದೇವತೆಗಳಿಗೆ ಯಜ್ಞಮಾಡಿ, ಬೊಂಬೆಗಳಿಗೆ ಧೂಪ ಹಾಕಿದರು.
ನಾನೇ ಎಫ್ರಾಯೀಮಿಗೆ ನಡೆದಾಟವನ್ನು ಕಲಿಸಿದೆನು; ಅದನ್ನು ಕೈಯಲ್ಲಿ ಎತ್ತಿಕೊಂಡೆನು.
ತನ್ನನ್ನು ಸ್ವಸ್ಥಮಾಡಿದವನು ನಾನೇ ಎಂದು ಅದಕ್ಕೆ ತಿಳಿಯಲಿಲ್ಲ.
ನಾನು ನನ್ನ ಜನರನ್ನು ಮಾನವರಿಗೆ ತಕ್ಕ ಮೂಗುದಾರದಿಂದ, ಅಂದರೆ ಮಮತೆಯ ಹಗ್ಗದಿಂದ ಸೆಳೆದುಕೊಂಡೆನು.
ನೊಗವನ್ನು ತಲೆಯ ಈಚೆಗೆ ತೆಗೆಯುವವರಂತೆ ನಾನು ಅವರನ್ನು ಸುಧಾರಿಸಿ,
ಅವರಿಗೆ ಆಹಾರವನ್ನು ಉಣಿಸಿದೆನು.
ಇಸ್ರಾಯೇಲ್ ಐಗುಪ್ತ ದೇಶಕ್ಕೆ ಹಿಂದಿರುಗದು;
ಅದು ನನ್ನ ಕಡೆಗೆ ಹಿಂದಿರುಗಲು ಒಪ್ಪದ ಕಾರಣ ಅಶ್ಶೂರವೇ ಅದಕ್ಕೆ ರಾಜನಾಗಬೇಕು.
ಅದರ ದುರಾಲೋಚನೆಗಳ ನಿಮಿತ್ತ ಖಡ್ಗವು ಅದರ ಪಟ್ಟಣಗಳ ಮೇಲೆ ಬೀಸಲ್ಪಟ್ಟು,
ಅಲ್ಲಿನ ಕೋಟೆಗಳನ್ನು ಧ್ವಂಸಮಾಡಿ ನುಂಗಿಬಿಡುವುದು.
ನನ್ನ ಕಡೆಯಿಂದ ತಿರಿಗಿಕೊಳ್ಳುವುದು ನನ್ನ ಜನರ ಗುಣವೇ;
ಅವರನ್ನು ಮೇಲಕ್ಕೆ ಕರೆಯುವವರು ಇದ್ದರೂ, ಮೇಲಕ್ಕೆತ್ತುವವರು ಯಾರೂ ಇಲ್ಲ.
ಎಫ್ರಾಯೀಮೇ, ನಾನು ನಿನ್ನನ್ನು ಹೇಗೆ ತ್ಯಜಿಸಲಿ! ಇಸ್ರಾಯೇಲೇ, ಹೇಗೆ ನಿನ್ನನ್ನು ಕೈಬಿಡಲಿ!
ಅಯ್ಯೋ, ನಿನ್ನನ್ನು ಅದ್ಮಾದ ಗತಿಗೆ ಹೇಗೆ ತರಲಿ! ಚೆಬೋಯಿಮಿನಂತೆ ಹೇಗೆ ನಾಶಮಾಡಲಿ!
ನನ್ನ ಮನಸ್ಸು ನನ್ನೊಳಗೆ ತಿರುಗಿತು, ಕರುಳು ತೀರಾ ಮರುಗಿತು.
ನನ್ನ ಉಗ್ರಕೋಪವನ್ನು ತೀರಿಸೆನು, ಎಫ್ರಾಯೀಮನ್ನು ನಾಶಮಾಡಲು ತಿರಿಗಿಕೊಳ್ಳೆನು.
ನಾನು ಮನುಷ್ಯನಲ್ಲ, ದೇವರೇ; ನಾನು ನಿಮ್ಮಲ್ಲಿ ನೆಲೆಯಾಗಿರುವ ಸದಮಲಸ್ವಾಮಿ, ನಾನು ನಿನ್ನ ಬಳಿಗೆ ರೋಷದಿಂದ ಬಾರೆನು.
10 ಸಿಂಹದಂತೆ ಗರ್ಜಿಸುತ್ತಿರುವ ಯೆಹೋವನನ್ನು ಆತನ ಜನರು ಹಿಂಬಾಲಿಸುವರು;
ಆತನು ಆರ್ಭಟಿಸಲು ಆತನ ಮಕ್ಕಳು ಪಶ್ಚಿಮದಿಂದ ನಡಗುತ್ತಾ ಬರುವರು;
11 ಗುಬ್ಬಿಗಳಂತೆ ಐಗುಪ್ತದಿಂದಲೂ, ಪಾರಿವಾಳಗಳಂತೆ ಅಶ್ಶೂರದಿಂದಲೂ ಅದರುತ್ತಾ ತ್ವರೆಪಡುವರು;
ಅವರು ತಮ್ಮ ತಮ್ಮ ನಿವಾಸಗಳಲ್ಲಿ ವಾಸಿಸುವಂತೆ ಮಾಡುವೆನು; ಇದು ಯೆಹೋವನ ನುಡಿ.
ಇಸ್ರಾಯೇಲರ ಪಾಪ
12 ಎಫ್ರಾಯೀಮು ಸುಳ್ಳಿನಿಂದಲೂ, ಇಸ್ರಾಯೇಲ್ ವಂಶವು ಮೋಸದಿಂದಲೂ ನನ್ನನ್ನು ಮುತ್ತಿಕೊಂಡಿವೆ;
ಯೆಹೂದವು ಸತ್ಯಸಂಧನೂ, ಸದಮಲಸ್ವಾಮಿಯೂ ಆದ ದೇವರ ಕಡೆಯಿಂದ ಇನ್ನೂ ಅಲೆದಾಡುತ್ತಿದೆ.
* 11:2 11:2 ನಾನು ಅಥವಾ ಅವರು. 11:9 11:9 ನಿನ್ನ ಬಳಿಗೆ ಪಟ್ಟಣಗಳಿಗೆ ವಿರುದ್ಧವಾಗಿ.