6
ಪಶ್ಚಾತ್ತಾಪ ಪಡದ ಇಸ್ರಾಯೇಲರು
ಅವರು, “ಯೆಹೋವನ ಕಡೆಗೆ ಹಿಂದಿರುಗಿ ಹೋಗೋಣ ಬನ್ನಿರಿ;
ನಮ್ಮನ್ನು ಸೀಳಿಬಿಟ್ಟವನು ಆತನೇ, ಆತನೇ ಸ್ವಸ್ಥ ಮಾಡುವನು;
ಹೊಡೆದವನು ಆತನೇ, ಆತನೇ ನಮ್ಮ ಗಾಯಗಳನ್ನು ಕಟ್ಟುವನು.
ಒಂದೆರಡು ದಿನದ ಮೇಲೆ ಆತನು ನಮ್ಮನ್ನು ಬದುಕಿಸುವನು;
ಮೂರನೆಯ ದಿನದಲ್ಲಿ ಆತನು ನಮ್ಮನ್ನೆಬ್ಬಿಸಲು ಆತನ ಸಾನ್ನಿಧ್ಯದಲ್ಲಿ ಬಾಳುವೆವು.
ಯೆಹೋವನನ್ನು ತಿಳಿದುಕೊಳ್ಳೋಣ, ನಿರಂತರವಾಗಿ ಹುಡುಕಿ ತಿಳಿದುಕೊಳ್ಳೋಣ,
ಆತನ ಆಗಮನವು ಉದಯದಂತೆ ನಿಶ್ಚಯ;
ಆತನು ಮುಂಗಾರಿನಂತೆಯೂ,
ಭೂಮಿಯನ್ನು ತಂಪುಮಾಡುವ ಹಿಂಗಾರಿನಂತೆಯೂ ನಮಗೆ ಸಿಕ್ಕುವನು” ಅಂದುಕೊಂಡು ನನ್ನನ್ನು ಮೊರೆಹೋಗುವರು.
ಎಫ್ರಾಯೀಮೇ, ನಾನು ನಿನ್ನನ್ನು ಹೇಗೆ ತಿದ್ದಲಿ?
ಯೆಹೂದವೇ, ನಿನ್ನನ್ನು ಹೇಗೆ ಸರಿಮಾಡಲಿ?
ನಿಮ್ಮ ಭಕ್ತಿಯು ಪ್ರಾತಃಕಾಲದ ಮೋಡಕ್ಕೂ, ಬೇಗನೆ ಮಾಯವಾಗುವ ಇಬ್ಬನಿಗೂ ಸಮಾನವಾಗಿದೆ.
ಆದಕಾರಣ ನಾನು ನಿಮ್ಮ ಜನರನ್ನು ಪ್ರವಾದಿಗಳ ಮೂಲಕ ಹತಿಸಿದ್ದೇನೆ,
ನನ್ನ ಬಾಯಿಯ ಮಾತುಗಳಿಂದ ಸಂಹರಿಸಿದ್ದೇನೆ;
ನನ್ನ ನ್ಯಾಯದಂಡನೆಯು ಮಿಂಚಿನಂತೆ ಹೊರಡುವುದು.
ನನಗೆ ಯಜ್ಞವು ಬೇಡ, ಕರುಣೆಯೇ ಬೇಕು; ಹೋಮಗಳಿಗಿಂತ ದೇವಜ್ಞಾನವೇ ಇಷ್ಟ.
ಇಸ್ರಾಯೇಲರ ದುರ್ನಡತೆಗಳು
ಅವರು ಆದಾಮನಂತೆ ನನ್ನ ನಿಬಂಧನೆಯನ್ನು ಮೀರಿದ್ದಾರೆ; ಅಲ್ಲಲ್ಲಿ ನನಗೆ ದ್ರೋಹಮಾಡಿದ್ದಾರೆ.
ಗಿಲ್ಯಾದು ಅಧರ್ಮಿಗಳು ತುಂಬಿದ ಪಟ್ಟಣ, ಅಲ್ಲಿನ ಹೆಜ್ಜೆಜಾಡುಗಳು ರಕ್ತಮಯವೇ.
ಕಳ್ಳರ ಗುಂಪು ಒಬ್ಬನಿಗೆ ಹೊಂಚು ಹಾಕುವಂತೆ ಯಾಜಕರು ಗುಂಪಾಗಿ ದಾರಿಯಲ್ಲಿ ಹೊಂಚಿಕೊಂಡಿದ್ದು,
ಶೆಕೆಮಿಗೆ ಯಾತ್ರೆ ಹೋಗುವವರನ್ನು ದೋಚಿ ಕೊಂದುಹಾಕುತ್ತಾರೆ;
ಹೌದು, ಘೋರಕೃತ್ಯವನ್ನು ನಡೆಸುತ್ತಾರೆ.
10 ನಾನು ಇಸ್ರಾಯೇಲ್ ಮನೆತನದಲ್ಲಿ ಅಸಹ್ಯವನ್ನು ನೋಡಿದ್ದೇನೆ;
ಎಫ್ರಾಯೀಮಿನೊಳಗೆ ವ್ಯಭಿಚಾರವು ನಡೆಯುತ್ತದೆ, ಇಸ್ರಾಯೇಲು ಹೊಲೆಯಾಗಿದೆ.
11 ಯೆಹೂದವೇ, ನಿನಗೂ ಅಧರ್ಮಫಲದ ಸುಗ್ಗಿಯು ನೇಮಕವಾಗಿದೆ.