ಬಾಬೆಲಿನ ನಾಶನ
ಬಾಬೆಲಿನ ಅಶಕ್ತ ದೇವತೆಗಳು ಮತ್ತು ಸರ್ವಶಕ್ತ ಯೆಹೋವ
೪೬
೧ ಬೇಲ್ ದೇವತೆಯು ಬಾಗಿದೆ, ನೆಬೋ ದೇವತೆಯು ಕುಗ್ಗಿದೆ,
ಅವುಗಳ ವಿಗ್ರಹಗಳು ಪಶುಗಳ ಮೇಲೆ ಹೊರಿಸಲ್ಪಟ್ಟಿವೆ, ನೀವು ಮೆರವಣಿಗೆಯಾಗಿ ಹೊರುತ್ತಿದ್ದವುಗಳು ಪಶುಗಳಿಗೆ ಭಾರವಾದ ಹೊರೆಯಾಗಿ ಅವುಗಳು ಬಳಲಿದವು.
೨ ಒಟ್ಟಿಗೆ ಕುಗ್ಗಿ, ಬಗ್ಗಿವೆ, ತಮ್ಮ ಮೇಲೆ ಬಿದ್ದ ಭಾರವನ್ನು ಹೊತ್ತು ನಿರ್ವಹಿಸಲಾರದೆ,
ಬಂಧನಕ್ಕೆ ಸ್ವಇಚ್ಚೆಯಿಂದ ಒಳಗಾದವು.
೩ ಯಾಕೋಬವಂಶವೇ, ಇಸ್ರಾಯೇಲ್ ಮನೆತೆನದವರಲ್ಲಿ ಉಳಿದ ಸಂತಾನವೇ,
ನಿಮ್ಮನ್ನು ಗರ್ಭದಿಂದ ಹೊತ್ತು, ಹುಟ್ಟಿದಂದಿನಿಂದ ಪಾಲಿಸುತ್ತಿದ್ದ ನನ್ನ ಮಾತಿಗೆ ಕಿವಿಗೊಡಿರಿ.
೪ ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು.
ನಾನೇ ಉಂಟುಮಾಡಿದೆನು, ನಾನೇ ಹೊರುವೆನು. ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.
೫ ನನ್ನನ್ನು ಯಾರಿಗೆ ಸಮಾನ ಎಂದು ತಿಳಿದಿದ್ದೀರಿ? ನಾನು ಯಾರಿಗೆ ಸಮಾನನೆಂದು, ನನ್ನನ್ನು ಯಾರೊಡನೆ ಹೊಲಿಸುತ್ತೀರಿ?
೬ ಚೀಲದಿಂದ ಚಿನ್ನವನ್ನು ಸುರಿದು, ತಕ್ಕಡಿಯಲ್ಲಿ ಬೆಳ್ಳಿಯನ್ನು ತೂಗಿ,
ಅಕ್ಕಸಾಲಿಗನಿಗೆ ಕೊಟ್ಟು ಕೂಲಿಯನ್ನು ಗೊತ್ತುಮಾಡಿದಾಗ, ಅವನು ಅದನ್ನು ದೇವರನ್ನಾಗಿ ಮಾಡಲು, ಅವರು ಅದಕ್ಕೆ ಎರಗಿ ಪೂಜೆಮಾಡುವರು.
೭ ಅವರು ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ, ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅಲ್ಲಿಂದ ಜರುಗದು.
ಒಬ್ಬನು ಕೂಗಿಕೊಂಡರೂ ಅದು ಅವನಿಗೆ ಉತ್ತರಕೊಡಲಾರದು. ಇಲ್ಲವೆ ಅವನನ್ನು ಕಷ್ಟದಿಂದ ಬಿಡಿಸಲಾರದು.
೮ “ದ್ರೋಹಿಗಳೇ, ಇದನ್ನು ಜ್ಞಾಪಕದಲ್ಲಿಟ್ಟುಕೊಂಡು ಗಮನಿಸಿ ಮನುಷ್ಯರಿಗೆ ತಕ್ಕಂತೆ ನಡೆಯಿರಿ!
೯ ಪುರಾತನವಾದ ಹಳೆಯ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ;
ನಾನೇ ದೇವರು, ಇನ್ನು ಯಾರೂ ಇಲ್ಲ; ನಾನೇ ದೇವರು, ನನಗೆ ಸರಿಸಮಾನನು ಇಲ್ಲ.
೧೦ ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ. ‘ನನ್ನ ಸಂಕಲ್ಪವು ನಿಲ್ಲುವುದು,
ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು’ ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ.
೧೧ ಮೂಡಲಿಂದ ಒಂದು ಪಕ್ಷಿಯನ್ನು ಬರಮಾಡು, ದೂರದೇಶದಿಂದ ನನ್ನ ಸಂಕಲ್ಪವನ್ನು ನೆರವೇರಿಸುವ ಮನುಷ್ಯನು ಬರಲಿ ಎಂದು ಕರೆದಿದ್ದೇನೆ.
ಎಂದು ನಾನೇ ನುಡಿದಿದ್ದೇನೆ, ನಾನು ಅದನ್ನು ಈಡೇರಿಸುವೆನು. ಆಲೋಚಿಸಿದ್ದೇನೆ, ನಾನು ಅದನ್ನು ಸಾಧಿಸುವೆನು.
೧೨ ಕಠಿಣ ಹೃದಯದವರೇ, ನೀತಿಗೆ ದೂರವಾದವರೇ, ನನ್ನ ಮಾತಿಗೆ ಕಿವಿಗೊಡಿರಿ.
೧೩ ನನ್ನ ನೀತಿಯನ್ನು ಹತ್ತಿರಕ್ಕೆ ಬರ ಮಾಡುವೆನು. ಅದು ಇನ್ನು ದೂರವಾಗಿರದು, ನನ್ನ ರಕ್ಷಣೆಯು ತಡವಾಗದು,
ಚೀಯೋನಿನಲ್ಲಿ ರಕ್ಷಣಾ ಕಾರ್ಯವನ್ನು ನಡೆಸಿ ಇಸ್ರಾಯೇಲಿಗೆ ನನ್ನ ಮಹಿಮೆಯನ್ನು ದಯಪಾಲಿಸುವೆನು.”