ಯೆಹೋವನ ದ್ರಾಕ್ಷೆಯ ತೋಟ
೧ ನನ್ನ ಪ್ರಿಯನಾದವನ ಬಗ್ಗೆ ಮತ್ತು ಅವನ ತೋಟವನ್ನೂ ಕುರಿತು
ಒಂದು ಗೀತೆಯನ್ನು ಹಾಡುವೆನು. ಕೇಳಿರಿ, ಫಲವತ್ತಾದ ಗುಡ್ಡದ ಮೇಲೆ ನನ್ನ ಅತಿಪ್ರಿಯನಿಗೆ ದ್ರಾಕ್ಷೆಯ ತೋಟವಿತ್ತು.
೨ ಅವನು ಅದನ್ನು ಅಗೆದು, ಕಲ್ಲುಗಳನ್ನು ತೆಗೆದುಹಾಕಿ, ಒಳ್ಳೆಯ ದ್ರಾಕ್ಷೆಯ ಸಸಿಗಳನ್ನು ನೆಟ್ಟು,
ಮಧ್ಯದಲ್ಲಿ ಗೋಪುರವನ್ನು ಕಟ್ಟಿ, ದ್ರಾಕ್ಷೆಯ ತೊಟ್ಟಿಯನ್ನು ಕೊರೆಯಿಸಿ,
ತೋಟವು ಒಳ್ಳೆಯ ಸಿಹಿ ದ್ರಾಕ್ಷೆಯ ಹಣ್ಣನ್ನು ಕೊಡುವುದೆಂದು ಎದುರುನೋಡುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತು.
೩ ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಜನರೇ,
ಈಗ ನನಗೂ, ನನ್ನ ದ್ರಾಕ್ಷೆಯ ತೋಟಕ್ಕೂ ನ್ಯಾಯತೀರಿಸಿರಿ.
೪ ನನ್ನ ದ್ರಾಕ್ಷೆಯ ತೋಟದಲ್ಲಿ ಹಿಂದೆ ನಾನು ಮಾಡಿದ್ದಕ್ಕಿಂತಲೂ ಇನ್ನೂ ಹೆಚ್ಚಾಗಿ ಇನ್ನೇನು ಮಾಡಬೇಕಾಗಿತ್ತು?
ಅದು ಒಳ್ಳೆಯ ದ್ರಾಕ್ಷೆಯ ಫಲವನ್ನು ಕೊಡುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಏಕೆ ಕೊಟ್ಟಿತು?
೫ ನನ್ನ ದ್ರಾಕ್ಷೆಯ ತೋಟವನ್ನು ಏನು ಮಾಡುವೆನು ಎಂದು ಈಗ ನಿಮಗೆ ತಿಳಿಸುತ್ತೇನೆ.
ಅದರ ಮುಳ್ಳು ಬೇಲಿಯನ್ನು ಕೀಳುವೆನು. ದನಗಳು ಅದನ್ನು ಮೇಯ್ದುಬಿಡುವುದು. ಅದರ ಗೋಡೆಯನ್ನು ಕೆಡವಿ ಹಾಕುವೆನು. ಅದು ಜನರ ತುಳಿದಾಟಕ್ಕೆ ಈಡಾಗುವುದು.
೬ ಅದನ್ನು ಹಾಳುಮಾಡುವೆನು. ದ್ರಾಕ್ಷೆಯ ತೋಟವನ್ನು ಯಾರೂ ಕುಡಿ ಕತ್ತರಿಸಿ ಅಗೆಯುವುದಿಲ್ಲ. ಅದರಲ್ಲಿ ಮುಳ್ಳುಕಳೆ ಬೆಳೆಯುವುದು.
ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಅಪ್ಪಣೆ ಕೊಡುವೆನು.
೭ ಸೇನಾಧೀಶ್ವರನಾದ ಯೆಹೋವನ ದ್ರಾಕ್ಷೆಯ ತೋಟವು ಇಸ್ರಾಯೇಲರ ಮನೆಯೇ,
ಯೆಹೂದದ ಜನವೇ, ಆತನ ಇಷ್ಟದ ಗಿಡ.
ಆತನು ನ್ಯಾಯವನ್ನು ನಿರೀಕ್ಷಿಸಲು ನರಹತ್ಯೆ, ನೀತಿಯನ್ನು ನಿರೀಕ್ಷಿಸಿಲು ಗೋಳಾಟವೂ ಸಿಕ್ಕಿತ್ತು.
ಆರು ಬಗೆಯ ಪಾಪಗಳಿಗೆ ಆಗುವ ದುರವಸ್ಥೆ
೮ ಅಯ್ಯೋ, ಮನೆಗೆ ಮನೆಯನ್ನೂ, ಹೊಲಕ್ಕೆ ಹೊಲವನ್ನೂ ಸೇರಿಸಿಕೊಳ್ಳುತ್ತಾ ಬಂದು,
ಇತರರಿಗೆ ಸ್ವಲ್ಪ ಸ್ಥಳವನ್ನೂ ಬಿಡದೆ ದೇಶದ ಮಧ್ಯದಲ್ಲಿ ತಾವೇ ತಾವಾಗಿ ವಾಸಿಸುವವರ ಗತಿಯನ್ನು ಏನು ಹೇಳಲಿ!
೯ ನನ್ನ ಕಿವಿಯಲ್ಲಿ ಸೇನಾಧೀಶ್ವರನಾದ ಯೆಹೋವನು ಹೇಳುವುದೇನೆಂದರೆ,
ಸೊಗಸಾದ ಅನೇಕ ದೊಡ್ಡ ಮನೆಗಳಲ್ಲಿ ಜನರು ವಾಸಮಾಡದೆ ಅವು ಖಂಡಿತವಾಗಿ ಹಾಳು ಬೀಳುವುವು.
೧೦ ಏಕೆಂದರೆ ಹತ್ತು ಎಕರೆ ಭಾಗಾಯಿತು. ಭೂಮಿಯು ನಾಲ್ಕು ಕೊಳಗದಷ್ಟೇ ದ್ರಾಕ್ಷಾರಸವನ್ನಿಯುವುದು. ಬಿತ್ತಿದ ಒಂದು ಖಂಡುಗ ಬೀಜದಿಂದ ಕಡಿಮೆ ದವಸವು ಬರುವುದು.
೧೧ ಅಯ್ಯೋ, ಮದ್ಯದ ಗೀಳಿನಿಂದಲೇ ಮುಂಜಾನೆ ಎದ್ದು,
ಸಂಜೆಯಾದ ಮೇಲೂ ದ್ರಾಕ್ಷಾರಸದಿಂದ ಅಮಲೇರಿದವರಾಗಿ ಕಾಲ ಕಳೆಯುವವರ ಗತಿಯನ್ನು ಏನೆಂದು ಹೇಳಲಿ!
೧೨ ಕಿನ್ನರಿ, ವೀಣೆ, ದಮ್ಮಡಿ, ಕೊಳಲು ದ್ರಾಕ್ಷಾರಸ ಇವುಗಳೇ ಅವರ ಔತಣಗಳ ಸೊಬಗು.
ಯೆಹೋವನ ಕೆಲಸವನ್ನೋ ಅವರು ಲಕ್ಷಿಸುವುದಿಲ್ಲ. ಆತನ ಕೈಕೆಲಸವನ್ನು ಆಲೋಚಿಸುವುದಿಲ್ಲ.
೧೩ ಆದಕಾರಣ ನನ್ನ ಜನರು ಜ್ಞಾನಹೀನರಾಗಿ ಸೆರೆಗೆ ಹೋಗುವುದು ಖಂಡಿತ.
ಘನವಂತರು ಹಸಿಯುವರು ಮತ್ತು ಜನಸಮೂಹವು ಬಾಯಾರಿಕೆಯಿಂದ ಒಣಗುವುದು.
೧೪ ಹೀಗಿರುವುದರಿಂದ ಪಾತಾಳವು ಹೆಚ್ಚು ಆತುರದಿಂದ ಅಗಾಧವಾಗಿ ಬಾಯಿ ತೆರೆಯಲು,
ಅವರ ಮಹಿಮೆ, ಕೋಲಾಹಲ, ಗದ್ದಲ, ಉಲ್ಲಾಸ ಇವೆಲ್ಲವುಗಳು ಅದರೊಳಗೆ ಬಿದ್ದುಹೋಗುವುವು.
೧೫ ಮನುಷ್ಯನು ಕುಗ್ಗಿಸಲ್ಪಡುವನು. ಅಹಂಭಾವದ ಕಣ್ಣುಗಳು ಕಂಗೆಡುವವು.
೧೬ ಸೇನಾಧೀಶ್ವರನಾದ ಯೆಹೋವನೋ ನ್ಯಾಯತೀರಿಸುವುದರಲ್ಲಿ ಉನ್ನತೋನ್ನತನಾಗಿ ಕಾಣಿಸಿಕೊಳ್ಳುವನು. ಪರಿಶುದ್ಧನಾದ ದೇವರು ಧರ್ಮವನ್ನು ನಡೆಸುವುದರಲ್ಲಿ ಪರಿಶುದ್ಧನು ಎಂದು ಅನಿಸಿಕೊಳ್ಳುವನು.
೧೭ ಪಟ್ಟಣ ಪ್ರದೇಶಗಳು ಹಾಳಾಗಿ ಪಶುಪಾಲಕರಿಗೆ ಹುಲ್ಲುಗಾವಲುಗಳಾಗುವವು. ಕುರಿಮರಿಗಳು ಅಲ್ಲಿ ಮೇಯುವವು.
೧೮ ಅಯ್ಯೋ, ವ್ಯರ್ಥವಾದ ಹಗ್ಗಗಳಿಂದ ಅಪರಾಧ ದಂಡನೆಯನ್ನು, ರಥವನ್ನು ಹಗ್ಗಗಳಿಂದಲೋ ಎಂಬಂತೆ ಪಾಪವನ್ನು ಎಳೆದುಕೊಳ್ಳುತ್ತಾ,
೧೯ ನಾವು ಆತನ ಕೆಲಸವನ್ನು ನೋಡುವಂತೆ ಆತನು ತ್ವರೆಯಾಗಿ ಅದನ್ನು ನಡೆಸಲಿ.
ಇಸ್ರಾಯೇಲರ ಸದಮಲಸ್ವಾಮಿಯ ಪವಿತ್ರ ಉದ್ದೇಶವನ್ನು ನಾವು ತಿಳಿಯಬೇಕು. ಅದು ಆದಷ್ಟು ಬೇಗ ಬರಲಿ ಎಂದು ನುಡಿಯುವವರ ದುರವಸ್ಥೆಯನ್ನು ಏನು ಹೇಳಲಿ!
೨೦ ಅಯ್ಯೋ, ಕೆಟ್ಟದ್ದನ್ನು ಒಳ್ಳೆಯದೆಂದೂ, ಒಳ್ಳೆಯದನ್ನು ಕೆಟ್ಟದೆಂದೂ ಬೋಧಿಸಿ;
ಕತ್ತಲನ್ನು ಬೆಳಕೆಂದೂ, ಬೆಳಕನ್ನು ಕತ್ತಲೆಂದೂ ಸಾಧಿಸಿ; ಕಹಿಯನ್ನು ಸಿಹಿಯೆಂದು,
ಸಿಹಿಯನ್ನು ಕಹಿ ಎಂದು ಎಣಿಸುವವರ ಗತಿಯನ್ನು ಏನೆಂದು ಹೇಳಲಿ!
೨೧ ಅಯ್ಯೋ, ತಮ್ಮನ್ನು ತಾವೇ ಜ್ಞಾನಿಗಳೆಂದೂ, ಸ್ವಂತ ದೃಷ್ಟಿಯಲ್ಲಿ ವಿವೇಕಿಗಳೆಂದೂ ಭಾವಿಸಿಕೊಳ್ಳುವವರ ಗತಿಯನ್ನು ಏನು ಹೇಳಲಿ!.
೨೨ ಅಯ್ಯೋ, ಸುರಾಪಾನದಲ್ಲಿ ಶೂರರೂ, ಮದ್ಯಮಿಶ್ರಣದಲ್ಲಿ ಸಾಹಸಿಗಳೂ;
೨೩ ಲಂಚಕ್ಕೋಸ್ಕರ ದೋಷಿಗಳನ್ನು ನಿರ್ದೋಷಿಗಳೆಂದು ತೀರ್ಪುಮಾಡಿ, ನ್ಯಾಯವಂತರ ನ್ಯಾಯವನ್ನು ಹಾಳುಮಾಡುವವರ ಗತಿಯನ್ನು ಏನು ಹೇಳಲಿ!
೨೪ ಅವರು ಸೇನಾಧೀಶ್ವರನಾದ ಯೆಹೋವನ ಉಪದೇಶವನ್ನು ನಿರಾಕರಿಸಿ,
ಇಸ್ರಾಯೇಲರ ಸದಮಲಸ್ವಾಮಿಯ ಪವಿತ್ರ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದ ಅಗ್ನಿಯ ನಾಲಿಗೆಗಳು ಒಣಕೊಳೆಯನ್ನು ನುಂಗಿಬಿಡುವಂತೆಯೂ,
ಒಣಹುಲ್ಲು ಬೆಂಕಿಯಲ್ಲಿ ಸುಟ್ಟುಬಿಡುವಂತೆಯೂ, ಅದರ ಬೇರು ಕೊಳೆತು ಹೋಗುವಂತೆಯೂ, ಅದರ ಚಿಗುರು ಧೂಳಿನಂತೆಯೂ ತೂರಿ ಹೋಗುವುದು.
ಯೆಹೋವನು ತನ್ನ ಜನರನ್ನು ದಂಡಿಸಲು ಶತ್ರುಗಳನ್ನು ಬರಮಾಡುವುದು
೨೫ ಹೀಗಿರಲು ಯೆಹೋವನು ತನ್ನ ಜನರ ಮೇಲೆ ಕೋಪಗೊಂಡು, ಅವರ ಮೇಲೆ ಕೈಯೆತ್ತಿ, ಅವರನ್ನು ಹೊಡೆದುಬಿಡುವನು.
ಆಗ ಬೆಟ್ಟಗಳು ನಡಗುವವು. ಹೆಣಗಳು ಬೀದಿಗಳಲ್ಲಿ ಕಸವಾಗಿ ಬಿದ್ದಿರುವವು.
ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೇ ಕೈಯೆತ್ತಿಯೇ ಇರುವುದು.
೨೬ ಆತನು ದೂರದ ಜನಾಂಗದವರಿಗೆ ಗುರುತಾಗಿ ಧ್ವಜವೆತ್ತಿ, ಅವರನ್ನು ಭೂಲೋಕದ ಅಂಚಿನಿಂದ ಸಿಳ್ಳು ಹಾಕಿ ಕರೆಯುವನು.
ಇಗೋ ಅವರೆಲ್ಲ ತ್ವರೆಪಟ್ಟು ವೇಗವಾಗಿ ಬರುತ್ತಾರೆ.
೨೭ ಅವರಲ್ಲಿ ಯಾರೂ ಬಳಲಿ ಮುಗ್ಗರಿಸುವುದಿಲ್ಲ. ಯಾರೂ ತೂಕಡಿಸಿ ನಿದ್ರಿಸುವುದಿಲ್ಲ.
ಅವರ ನಡುಕಟ್ಟು ಬಿಚ್ಚಿಲ್ಲ. ಅವರ ಕೆರದ ಬಾರು ಹರಿಯುವುದಿಲ್ಲ.
೨೮ ಅವರ ಬಾಣಗಳು ಹದವಾಗಿವೆ. ಅವರ ಬಿಲ್ಲುಗಳು ಬಿಗಿದಿವೆ.
ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ, ಚಕ್ರಗಳು ಬಿರುಗಾಳಿಯಂತೆಯೂ ರಭಸವಾಗಿವೆ.
೨೯ ಅವರು ಸಿಂಹದಂತೆ ಘರ್ಜಿಸುತ್ತಾರೆ. ಪ್ರಾಯದ ಸಿಂಹಗಳ ಹಾಗೆ ಆರ್ಭಟಿಸುತ್ತಾರೆ.
ಗುರುಗುಟ್ಟುತ್ತಾ ಬೇಟೆ ಹಿಡಿದು ಹೊತ್ತುಕೊಂಡು ಹೋಗುತ್ತಾರೆ. ರಕ್ಷಿಸುವವರು ಯಾರೂ ಇಲ್ಲ.
೩೦ ಸಮುದ್ರವು ಭೋರ್ಗರೆಯುವಂತೆ ಆ ದಿನದಲ್ಲಿ ಇವರು ಯೆಹೂದ್ಯರನ್ನು ಕಂಡು ಗರ್ಜಿಸುವರು.
ಭೂಮಿಯನ್ನು ದೃಷ್ಟಿಸಿದರೆ ಅಂಧಕಾರವೂ, ವ್ಯಾಕುಲವೂ ತುಂಬಿರುವುದು. ಮೋಡ ಕವಿದು ಬೆಳಕು ಕತ್ತಲಾಗುವುದು.