೫೩
೧ ನಾವು ಕೇಳಿದ ಸಂಗತಿಯನ್ನು ನಮ್ಮಲ್ಲಿ ಯಾರು ನಂಬಿದ್ದರು? ಯೆಹೋವನ ಬಾಹುವು ಯಾರಿಗೆ ಗೋಚರವಾಗಿತ್ತು?
೨ ಒಣನೆಲದೊಳಗೆ ಬೇರಿನಿಂದ ಹೊರಡುವ ಸಸಿಯಂತೆಯೂ, ಬುಡದಿಂದ ಒಡೆಯುವ ಚಿಗುರಿನ ಹಾಗೂ ಅವನು ಯೆಹೋವನ ದೃಷ್ಟಿಯಲ್ಲಿ ಬೆಳೆದನು.
ಅವನಲ್ಲಿ ಯಾವ ಅಂದಚಂದಗಳೂ ಇರಲಿಲ್ಲ; ನಾವು ಅವನನ್ನು ನೋಡಿದಾಗ ನೋಡತಕ್ಕ ಯಾವ ಲಕ್ಷಣವೂ ಕಾಣಲಿಲ್ಲ.
೩ ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು,
ಸಂಕಟಪಡುವವನು, ವ್ಯಾಧಿಪೀಡಿತನು, ಜನರು ಮುಖವನ್ನು ಓರೆಮಾಡಿಕೊಳ್ಳುವ ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು.
೪ ನಿಜವಾಗಿಯೂ ನಮ್ಮ ವ್ಯಾಧಿಗಳನ್ನು ಸಂಕಷ್ಟವನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ ಹೌದು,
ನಾವಾದರೋ ಅವನು ದೇವರಿಂದ ಬಾಧಿತನು, ಪೆಟ್ಟು ತಿಂದವನು, ಕುಗ್ಗಿಸಲ್ಪಟ್ಟವನು ಎಂದು ಭಾವಿಸಿಕೊಂಡೆವು.
೫ ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು;
ನಮಗೆ ಸುಕ್ಷೇಮವನ್ನು ಉಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು.
೬ ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ಹೋಗಿದ್ದೆವು, ಪ್ರತಿಯೊಬ್ಬನೂ ತನ್ನ ತನ್ನ ದಾರಿಯನ್ನು ಹಿಡಿಯುತ್ತಿದ್ದನು;
ನಮ್ಮೆಲ್ಲರ ದೋಷಫಲವನ್ನೂ ಯೆಹೋವನು ಅವನ ಮೇಲೆ ಹಾಕಿದನು.
೭ ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ;
ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ, ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು,
ಬಾಯಿ ತೆರೆಯಲೇ ಇಲ್ಲ.
೮ ಹಿಂಸೆಯ ನ್ಯಾಯದಿಂದ ಕೊಲ್ಲಲ್ಪಟ್ಟನು, ಆಹಾ, ಇವನು ಜೀವಲೋಕದಿಂದ ತೆಗೆದುಹಾಕಲ್ಪಟ್ಟಿದ್ದಾನೆ.
ನಮ್ಮ ಜನಗಳ ದ್ರೋಹಗಳ ದೆಸೆಯಿಂದ ಈ ಪೆಟ್ಟು ಅವನ ಮೇಲೆ ಬಿತ್ತಲ್ಲಾ ಎಂದು ಅವನ ಕಾಲದವರಲ್ಲಿ ಯಾರು ಮನಮುಟ್ಟಿ ಮರುಗಿದರು?
೯ ಅವನು ಯಾವ ಅನ್ಯಾಯವನ್ನು ಮಾಡದಿದ್ದರೂ, ಅವನ ಬಾಯಲ್ಲಿ ಯಾವ ವಂಚನೆಯು ಇಲ್ಲದಿದ್ದರೂ,
ಅವನು ಸತ್ತಾಗ ದುಷ್ಟರ ಮಧ್ಯೆ ಪುಷ್ಟರ ನಡುವೆ ಅವನನ್ನು ಹೂಣಿಟ್ಟರು.
೧೦ ಅವನನ್ನು ಜಜ್ಜುವುದು ಯೆಹೋವನ ಸಂಕಲ್ಪವಾಗಿತ್ತು. ಆತನು ಅವನನ್ನು ವ್ಯಾಧಿಯಿಂದ ಬಾಧಿಸಿ ಹೀಗೆಂದುಕೊಂಡನು,
ಇವನು ತನ್ನ ಆತ್ಮವನ್ನು ಪ್ರಾಯಶ್ಚಿತ್ತಯಜ್ಞಕ್ಕಾಗಿ ಒಪ್ಪಿಸಿದ ಮೇಲೆ ತನ್ನ ಸಂತಾನವನ್ನು ನೋಡುವನು, ಚಿರಂಜೀವಿಯಾಗುವನು,
ನನ್ನ ಸಂಕಲ್ಪವು ಇವನ ಕೈಯಿಂದ ನೆರವೇರುವುದು;
೧೧ ತನ್ನ ಆತ್ಮವು ಅನುಭವಿಸಿದ ಶ್ರಮೆಯ ಫಲವನ್ನು ಕಂಡು ತೃಪ್ತನಾಗುವನು; ಧರ್ಮಾತ್ಮನಾದ ನನ್ನ ಸೇವಕನು ತನ್ನ ಜ್ಞಾನದ ಮೂಲಕ ಬಹು ಜನರನ್ನು ಧರ್ಮಮಾರ್ಗಕ್ಕೆ ತರುವನು;
ಅವರ ಅಪರಾಧಗಳನ್ನು ಹೊತ್ತುಕೊಂಡು ಹೋಗುವನು.
೧೨ ಇವನು ಇಂಥವನಾಗಿರುವುದರಿಂದ ನಾನು ಇವನಿಗೆ ದೊಡ್ಡವರ ಸಂಗಡ ಪಾಲು ಕೊಡುವೆನು,
ಇವನು ಬಲಿಷ್ಠರೊಡನೆ ಸೂರೆಯನ್ನು ಹಂಚಿಕೊಳ್ಳುವನು; ತನ್ನ ಪ್ರಾಣವನ್ನು ಧಾರೆಯೆರೆದು, ಮರಣಹೊಂದಿ, ದ್ರೋಹಿಗಳೊಂದಿಗೆ ತನ್ನನ್ನೂ ಎಣಿಸಿಕೊಂಡು,
ಬಹು ಜನ ದ್ರೋಹಿಗಳ ಪಾಪವನ್ನು ಹೊರುತ್ತಾ ಅವರಿಗಾಗಿ ವಿಜ್ಞಾಪನೆ ಮಾಡಿದನು.