೬೬
೧ ಯೆಹೋವನು ಹೀಗೆನ್ನುತ್ತಾನೆ:
“ಆಕಾಶವು ನನಗೆ ಸಿಂಹಾಸನ, ಭೂಮಿಯು ನನಗೆ ಪಾದಪೀಠ. ನೀವು ನನಗೆ ಇನ್ನೆಂಥಾ, ಮನೆಯನ್ನು ಕಟ್ಟಿಕೊಡುವಿರಿ?
ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಎಂಥದು?
೨ ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತು, ಹೌದು, ನನ್ನ ಕೈಯಿಂದಲೇ ಇವುಗಳೆಲ್ಲಾ ಉಂಟಾದವು.
ನಾನು ಕಟಾಕ್ಷಿಸುವವನು ಎಂಥವನೆಂದರೆ ದೀನನೂ, ಮನಮುರಿದವನೂ ನನ್ನ ಮಾತಿಗೆ ಭಯಪಡುವವನೂ ಆಗಿರುವವನೇ.
೩ ಹೋರಿಯನ್ನು ವಧಿಸುವವನು ನರಬಲಿಯನ್ನು ಕೊಡುತ್ತಾನೆ; ಕುರಿಯನ್ನು ಕಡಿಯುವವನು ನಾಯಿಯ ಕತ್ತನ್ನು ಮುರಿಯುತ್ತಾನೆ;
ನೈವೇದ್ಯಮಾಡುವವನು ಹಂದಿಯ ರಕ್ತವನ್ನು ಅರ್ಪಿಸುತ್ತಾನೆ; ಧೂಪಹಾಕುವವನು ವಿಗ್ರಹಾರಾಧನೆ ಮಾಡುತ್ತಾನೆ;
ಇವರು ಮನಸ್ಸಿಗೆ ಬಂದ ಮಾರ್ಗಗಳನ್ನು ಆರಿಸಿಕೊಂಡು ತಮ್ಮ ಅಸಹ್ಯಕಾರ್ಯಗಳಲ್ಲಿ ಮನಃಪೂರ್ವಕವಾಗಿ ಆನಂದಿಸುತ್ತಾರೆ;
೪ ಅದಕ್ಕೆ ತಕ್ಕಂತೆ ನಾನು ಇವರಿಗೋಸ್ಕರ ಕುತಂತ್ರಗಳನ್ನು ಆರಿಸಿಕೊಂಡು ಇವರು ಅಂಜುತ್ತಿದ್ದ ವಿಪತ್ತುಗಳನ್ನು ಬರಮಾಡುವೆನು;
ಏಕೆಂದರೆ ನಾನು ಕೂಗಿದಾಗ ಯಾರೂ ಉತ್ತರಕೊಡಲಿಲ್ಲ, ನಾನು ಹೇಳಿದಾಗ ಇವರು ಕೇಳಲಿಲ್ಲ;
ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡೆಸಿ ನನಗೆ ಇಷ್ಟವಿಲ್ಲದ್ದನ್ನು ಆರಿಸಿಕೊಂಡರು.”
೫ ಯೆಹೋವನ ಮಾತಿಗೆ ಭಯಪಡುವವರೇ, ಆತನ ಮಾತನ್ನು ಕೇಳಿರಿ!
ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ದ್ವೇಷಿಸಿ ಬಹಿಷ್ಕರಿಸಿದ ನಿಮ್ಮ ಸಂಬಂಧಿಗಳು,
“ಯೆಹೋವನು ಮಹಿಮೆಪಡಲಿ, ನಿಮಗಾಗುವ ಉತ್ಸಾಹವನ್ನು ನೋಡೋಣ” ಎಂದು ಹೇಳಿದ್ದಾರಲ್ಲಾ;
ಅವರಿಗಂತು ಅವಮಾನವಾಗುವುದು.
೬ ಇಗೋ, ಪಟ್ಟಣದ ಕಡೆಯಿಂದ ಗದ್ದಲದ ಶಬ್ದ! ದೇವಾಲಯದಲ್ಲಿ ಶಬ್ದ!
ಯೆಹೋವನು ತನ್ನ ಶತ್ರುಗಳಿಗೆ ಮುಯ್ಯಿತೀರಿಸುವ ಶಬ್ದ!
೭ ಆಹಾ, ಬೇನೆ ತಿನ್ನುವುದರೊಳಗೆ ಹೆರಿಗೆಯಾಯಿತು, ಪ್ರಸವವೇದನೆ ಇನ್ನು ಕಾಣದಿರುವಲ್ಲಿ ಗಂಡು ಮಗುವನ್ನು ಹೆತ್ತಳು.
೮ ಇಂಥಾ ಸುದ್ದಿಯನ್ನು ಯಾರು ಕೇಳಿದ್ದಾರೆ? ಇಂಥಾ ಸಂಗತಿಯನ್ನು ಕಂಡವರಾರು?
ಒಂದು ದಿನದಲ್ಲಿ ರಾಷ್ಟ್ರವು ಹುಟ್ಟೀತೇ? ಕ್ಷಣಮಾತ್ರದಲ್ಲಿ ಜನಾಂಗವನ್ನು ಹೆರಲಿಕ್ಕಾದೀತೇ?
ಹೌದು, ಚೀಯೋನೆಂಬಾಕೆಯು ಬೇನೆತಿಂದು ತನಗಾಗಿ ಮಕ್ಕಳನ್ನು ಹೆತ್ತಿದ್ದಾಳೆ.
೯ “ನಾನು ಗರ್ಭದ್ವಾರವನ್ನು ತೆರೆದ ಮೇಲೆ ಪ್ರಸವವಾಗದೆ ಇರಲು ಬಿಡುವೆನೆ?” ಎಂದು ಯೆಹೋವನು ಹೇಳುತ್ತಾನೆ.
“ಪ್ರಸವಮಾಡಿಸುವವನಾದ ನಾನು ಗರ್ಭವನ್ನು ಮುಚ್ಚೇನೋ?” ಎಂದು ನಿನ್ನ ದೇವರು ನುಡಿಯುತ್ತಾನೆ.
೧೦ ಯೆರೂಸಲೇಮ್ ನಗರವನ್ನು ಪ್ರೀತಿಸುವವರೇ, ನೀವೆಲ್ಲರೂ ಆಕೆಯೊಂದಿಗೆ ಆನಂದಿಸಿರಿ,
ಆಕೆಯ ವಿಷಯದಲ್ಲಿ ಹರ್ಷಗೊಳ್ಳಿರಿ!
೧೧ ಆಕೆಯ ನಿಮಿತ್ತ ದುಃಖಿಸುವವರೇ, ನೀವೆಲ್ಲರೂ, ಆಕೆಯ ಸಮಾಧಾನದ ಸ್ತನ್ಯವನ್ನು ಕುಡಿದು ತೃಪ್ತಿಗೊಳ್ಳುವೆವು ಎಂದುಕೊಳ್ಳುವಿರಿ.
ಹೌದು, ಆಕೆಯ ವೈಭವದ ಸಮೃದ್ಧಿಯನ್ನು ಹೀರುತ್ತಾ ಹಿಗ್ಗುವೆವು ಎಂದು ಆಕೆಯೊಂದಿಗೆ ಉತ್ಸಾಹದಿಂದ ಉಲ್ಲಾಸಿಸಿರಿ.
೧೨ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನಾನು ಆಕೆಗೆ ಸುಖವನ್ನು ನದಿಯಂತೆ ದಯಪಾಲಿಸಿ,
ತುಂಬಿ ತುಳುಕುವ ತೊರೆಯನ್ನೋ ಎಂಬಂತೆ ಜನಾಂಗಗಳ ವೈಭವವನ್ನು ನೀಡುವೆನು;
ನೀವು ಪಾನಮಾಡುವಿರಿ; ನಿಮ್ಮನ್ನು ಕಂಕುಳಲ್ಲಿ ಎತ್ತಿಕೊಂಡು ಹೋಗುವರು, ತೊಡೆಯ ಮೇಲೆ ನಲಿದಾಡಿಸುವರು.
೧೩ ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು;
ಯೆರೂಸಲೇಮಿನಲ್ಲೇ ನಿಮಗೆ ದುಃಖಶಮನವಾಗುವುದು.
೧೪ ನೀವು ಇದನ್ನು ಕಣ್ಣಾರೆ ಕಾಣುವಿರಿ, ನಿಮ್ಮ ಹೃದಯವು ಉಲ್ಲಾಸಿಸುವುದು, ನಿಮ್ಮ ಎಲುಬುಗಳು ಹಸಿ ಹುಲ್ಲಿನಂತೆ ರಸವತ್ತಾಗುವವು;
ಆಗ ಯೆಹೋವನು ತನ್ನ ಸೇವಕರ ಮೇಲೆ ಕೃಪಾಹಸ್ತವನ್ನು ವ್ಯಕ್ತಪಡಿಸಿ ತನ್ನ ಶತ್ರುಗಳ ಮೇಲೆ ರೋಷಗೊಳ್ಳುವನು.
೧೫ ಆಹಾ, ಯೆಹೋವನು ಬೆಂಕಿಯನ್ನು ಕಟ್ಟಿಕೊಂಡು ಬರುವನು; ಆತನ ರಥಗಳು ಬಿರುಗಾಳಿಯಂತಿರುವವು;
ರೌದ್ರಾವೇಶದಿಂದ ತನ್ನ ಸಿಟ್ಟನ್ನು ತೀರಿಸುವನು, ಅಗ್ನಿ ಜ್ವಾಲೆಯಿಂದ ಖಂಡಿಸುವನು.
೧೬ ಯೆಹೋವನು ಅಗ್ನಿಯಿಂದಲೂ ಮತ್ತು ತನ್ನ ಖಡ್ಗದಿಂದಲೂ ಎಲ್ಲಾ ನರಜನ್ಮದವರಿಗೂ ನ್ಯಾಯತೀರಿಸುವನು;
ಆಗ ಆತನಿಂದ ಹತರಾಗುವವರು ಬಹು ಜನರು.
೧೭ ತಮ್ಮ ಮಧ್ಯದಲ್ಲಿನ ಒಬ್ಬನನ್ನು ಅನುಸರಿಸಿ, ತೋಟಗಳೊಳಗೆ ಪ್ರವೇಶಿಸುವುದಕ್ಕೆ ತಮ್ಮನ್ನು ಪವಿತ್ರಮಾಡಿಕೊಂಡು,
ಹಂದಿಯ ಮಾಂಸವನ್ನು, ಅಶುದ್ಧಪದಾರ್ಥವನ್ನೂ,
ಇಲಿಯನ್ನೂ ತಿನ್ನುವವರು ಒಟ್ಟಿಗೆ ಅಂತ್ಯಕಾಣುವರು” ಎಂದು ಯೆಹೋವನು ನುಡಿಯುತ್ತಾನೆ.
೧೮ “ಅವರ ಕೃತ್ಯಗಳಿಗೂ, ಆಲೋಚನೆಗಳಿಗೂ ತಕ್ಕದ್ದನ್ನು ಮಾಡುವೆನು; ನಾನು ಇನ್ನು ಮುಂದೆ ಸಮಸ್ತ ಜನಾಂಗಗಳನ್ನೂ ಸಕಲ ಭಾಷೆಯವರನ್ನೂ ಒಟ್ಟಿಗೆ ಬರಮಾಡುವೆನು; ಅವರು ಬಂದು ನನ್ನ ಮಹಿಮೆಯನ್ನು ನೋಡುವರು. ೧೯ ಅವರ ಮಧ್ಯದಲ್ಲಿ ಒಂದು ಸೂಚಕಕಾರ್ಯವನ್ನು ಮಾಡುವೆನು; ನನ್ನ ಸುದ್ದಿಯನ್ನು ಕೇಳದೆಯೂ, ನನ್ನ ಮಹಿಮೆಯನ್ನು ನೋಡದೆಯೂ ಇರುವ ತಾರ್ಷೀಷ್, ಪೂಲ್, ಬಿಲ್ಲುಗಾರರಿಗೆ ಪ್ರಸಿದ್ಧಸ್ಥಳವಾದ ಲೂದ್, ತೂಬಲ್, ಯಾವಾನ್ ಎಂಬ ಜನಾಂಗಗಳು ಮತ್ತು ದೂರವಾದ ದ್ವೀಪನಿವಾಸಿಗಳು ಇವರೆಲ್ಲರ ಬಳಿಗೆ ಹತಶೇಷರನ್ನು ಕಳುಹಿಸುವೆನು; ಇವರು ಜನಾಂಗಗಳಲ್ಲಿ ನನ್ನ ಮಹಿಮೆಯನ್ನು ಪ್ರಕಟಿಸುವರು.”
೨೦ ಯೆಹೋವನು ಹೀಗೆನ್ನುತ್ತಾನೆ, “ಇಸ್ರಾಯೇಲರು ಯೆಹೋವನ ಆಲಯಕ್ಕೆ ಶುದ್ಧಪಾತ್ರೆಯಲ್ಲಿ ನೈವೇದ್ಯವನ್ನು ತೆಗೆದುಕೊಂಡು ಬರುವ ಪ್ರಕಾರ ಸಮಸ್ತ ಜನಾಂಗಗಳಲ್ಲಿ ಚದರಿಹೋಗಿರುವ ನಮ್ಮ ಸಹೋದರರನ್ನು ಕುದುರೆ, ತೇರು, ಪಲ್ಲಕಿ, ಹೇಸರಗತ್ತೆ, ಒಂಟೆ ಇವುಗಳ ಮೇಲೆ ಯೆಹೋವನ ನೈವೇದ್ಯಕ್ಕಾಗಿ ಯೆರೂಸಲೇಮೆಂಬ ನನ್ನ ಪರಿಶುದ್ಧಪರ್ವತಕ್ಕೆ ಕರೆತರುವರು.
೨೧ ಇದಲ್ಲದೆ ಇವರಲ್ಲಿ ಯಾಜಕರು ಮತ್ತು ಲೇವಿಯರು ಆಗತಕ್ಕವರನ್ನು ಆರಿಸಿಕೊಳ್ಳುವೆನು” ಎಂದು ಯೆಹೋವನು ಹೇಳುತ್ತಾನೆ.
೨೨ “ನಾನು ಸೃಷ್ಟಿಸಿದ ನೂತನ ಆಕಾಶಮಂಡಲವೂ ಮತ್ತು ನೂತನ ಭೂಮಂಡಲವೂ ನನ್ನ ಮುಂದೆ ಸ್ಥಿರವಾಗಿ ನಿಲ್ಲುವ ಪ್ರಕಾರ ನಿಮ್ಮ ಸಂತತಿಯೂ ಹಾಗು ನಿಮ್ಮ ಹೆಸರೂ ಸ್ಥಿರವಾಗಿ ನಿಲ್ಲುವವು.
೨೩ ಪ್ರತಿಯೊಂದು ಅಮಾವಾಸ್ಯೆಯಲ್ಲಿಯೂ, ಒಂದೊಂದು ಸಬ್ಬತ್ ದಿನದಲ್ಲಿಯೂ,
ಸಕಲ ನರಜನ್ಮದವರೂ ನನ್ನ ಸನ್ನಿಧಿಯಲ್ಲಿ ಆರಾಧಿಸುವುದಕ್ಕೆ ಬರುವರು” ಇದು ಯೆಹೋವನ ನುಡಿ.
೨೪ “ಅವರು ಹೊರಗೆ ಹೋಗಿ ನನಗೆ ದ್ರೋಹ ಮಾಡಿದವರ ಹೆಣಗಳನ್ನು ನೋಡುವರು;
ಅವುಗಳನ್ನು ಕಡಿಯುವ ಹುಳವು ಸಾಯುವುದಿಲ್ಲ, ಸುಡುವ ಬೆಂಕಿಯು ಆರುವುದಿಲ್ಲ;
ಅವುಗಳು ಲೋಕದವರಿಗೆಲ್ಲಾ ಅಸಹ್ಯವಾಗಿರುವವು.”