8
ಅಶ್ಶೂರದ ಆಕ್ರಮಣದ ಕುರಿತು ಮುನ್ನೆಚ್ಚರಿಕೆ
ಆ ಮೇಲೆ ಯೆಹೋವನು ನನಗೆ, “ದೊಡ್ಡ ಹಲಗೆಯನ್ನು ತೆಗೆದುಕೊಂಡು ಸಾಧಾರಣ ಲೇಖನಿಯಿಂದಲೇ ವಿಷಯ ಸೂಚಕವಾದ ಈ ಪದವನ್ನು ಬರೆ, ‘ಮಹೇರ್ ಶಾಲಾಲ್ ಹಾಷ್ ಬಜ್*’ ಅಂದರೆ ಸೂರೆಗೆ ಅತುರ, ಕೊಳ್ಳೆಗೆ ಅವಸರ. ನೀನು ಹೀಗೆ ಬರೆದದ್ದಕ್ಕೆ ಯಾಜಕನಾದ ಊರೀಯ, ಯೆಬೆರೆಕ್ಯನ ಮಗನಾದ ಜೆಕರ್ಯ ಈ ನಂಬಿಗಸ್ತರಾದ ಸಾಕ್ಷಿಗಳನ್ನು ಕರೆಯುವೆನು” ಎಂದು ಹೇಳಿದನು.
ಅನಂತರ, “ನಾನು ನನ್ನ ಹೆಂಡತಿಯೊಡನೆ ಸಂಗಮಿಸಲು ಆಕೆಯು ಬಸುರಾಗಿ ಗಂಡು ಮಗುವನ್ನು ಹೆತ್ತಳು. ಆಗ ಯೆಹೋವನು ನನಗೆ, ಅದಕ್ಕೆ ‘ಮಹೇರ್ ಶಾಲಾಲ್ ಹಾಷ್ ಬಜ್ ಎಂದು ಹೆಸರಿಡು’ ಎಂದು ಹೇಳಿದನು. ಆ ಮಗುವು, ‘ಅಪ್ಪಾ, ಅಮ್ಮಾ’ ಎಂದು ಕೂಗಬಲ್ಲವನಾಗುವುದಕ್ಕಿಂತ ಮೊದಲೇ ಅಶ್ಶೂರದ ಅರಸನು ದಮಸ್ಕದ ಆಸ್ತಿಯನ್ನೂ, ಸಮಾರ್ಯದ ಸೂರೆಯನ್ನೂ ತೆಗೆದುಕೊಂಡು ಹೋಗುವನು” ಎಂದು ಹೇಳಿದನು.
ಯೆಹೋವನು ಮತ್ತೊಂದಾವರ್ತಿ ನನಗೆ ಹೀಗೆ ನುಡಿದನು,
“ಈ ಜನರು ನಿಧಾನವಾಗಿ ಹರಿಯುವ ಸಿಲೋವದ ನೀರನ್ನು ತ್ಯಜಿಸಿ, ರೆಚೀನನನ್ನೂ,
ರೆಮಲ್ಯನ ಮಗನನ್ನೂ ನಂಬಿ ಮೆರೆದಿದ್ದರಿಂದ,
ಇಗೋ ಕರ್ತನು ಪೂರ್ಣ ಪ್ರತಾಪದಿಂದ ಕೂಡಿದ ಅಶ್ಶೂರದ ಅರಸನೆಂಬ ಮಹಾನದಿಯ ರಭಸವಾದ ದೊಡ್ಡ ಪ್ರವಾಹವನ್ನು ಇವರ ಮೇಲೆ ಬರಮಾಡುವನು.
ಅದು ತನ್ನ ಕಾಲುವೆಗಳನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ಮೀರಿ,
ಯೆಹೂದದಲ್ಲಿಯೂ ನುಗ್ಗಿ, ತುಂಬಿತುಳುಕಿ ಹಬ್ಬಿಕೊಂಡು ಕತ್ತಿನವರೆಗೂ ಏರುವುದು.
ಇಮ್ಮಾನುವೇಲನೇ, ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶವನ್ನೆಲ್ಲಾ ಆವರಿಸಿಕೊಳ್ಳುವುದು.”
ಜನಾಂಗಗಳೇ, ನೀವು ಒಟ್ಟಾಗಿ ಸೇರಿಕೊಳ್ಳಿರಿ, ಇಲ್ಲದಿದ್ದರೆ ನೀವು ಒಡೆದು ತುಂಡಾಗುವಿರಿ; ದೂರದೇಶಿಯರೇ, ಕಿವಿಗೊಡಿರಿ;
ನಡುಕಟ್ಟಿರಿ, ಭಂಗಪಡುವಿರಿ; ಹೌದು ನಡುಕಟ್ಟಿರಿ, ಭಂಗಪಡುವಿರಿ.
10 ಆಲೋಚನೆ ಮಾಡಿಕೊಳ್ಳಿರಿ, ಅದು ಮುರಿದುಹೋಗುವುದು. ಅಪ್ಪಣೆ ಮಾಡಿರಿ, ಅದು ನಿಲ್ಲುವುದಿಲ್ಲ.
ಏಕೆಂದರೆ ದೇವರು ನಮ್ಮ ಕೂಡ ಇದ್ದಾನಷ್ಟೆ.
ದೇವರಿಗೆ ಭಯಪಡಿರಿ
11 ಯೆಹೋವನು ನನ್ನ ಮೇಲೆ ಬಲವಾಗಿ ಕೈಯನ್ನಿಟ್ಟು, ಈ ಜನರ ಮಾರ್ಗದಲ್ಲಿ ನಡೆಯಬಾರದೆಂದು ನನಗೆ ಉಪದೇಶಿಸುತ್ತಾ ಹೀಗೆಂದನು,
12 “ಇವರು ಯಾವುದನ್ನು ಒಪ್ಪಂದವೆನ್ನುತ್ತಾರೋ ನೀವು ಅದನ್ನು ಒಪ್ಪಂದವೆನ್ನಬೇಡಿರಿ;
ಇವರು ಯಾವುದಕ್ಕೆ ಹೆದರುತ್ತಾರೋ ನೀವು ಅದಕ್ಕೆ ಹೆದರಬೇಡಿರಿ, ನಡುಗಬೇಡಿರಿ.
13 ಸೇನಾಧೀಶ್ವರನಾದ ಯೆಹೋವನನ್ನೇ ಪ್ರತಿಷ್ಠೆಪಡಿಸಿರಿ; ಆತನಿಗೆ ಹೆದರಿಕೊಳ್ಳಿರಿ, ನಡುಗಿರಿ.
14 ಆತನು ಆಶ್ರಯವಾಗುವನು; ಆದರೆ ಇಸ್ರಾಯೇಲಿನ ಎರಡು ಮನೆತನಕ್ಕೆ ಎಡವುವ ಕಲ್ಲೂ,
ಮುಗ್ಗರಿಸುವ ಬಂಡೆಯೂ ಯೆರೂಸಲೇಮಿನ ನಿವಾಸಿಗಳಿಗೆ ಬಲೆಯೂ, ಪಂಜರವಾಗುವುದು.
15 ಅವರಲ್ಲಿ ಅನೇಕರು ಎಡವಿ ಬಿದ್ದು ಭಂಗಪಡುವರು, ಬಲೆಗೆ ಸಿಕ್ಕಿ ವಶವಾಗುವರು.”
16  ಬೋಧನೆಯನ್ನು ಕಟ್ಟಿಡು, ನನ್ನ ಶಿಷ್ಯರೊಳಗೆ ಉಪದೇಶವನ್ನು ಮುಚ್ಚಿ ಮುದ್ರಿಸು.
17 ಯಾಕೋಬಿನ ಮನೆತನದವರಿಗೆ ಮುಖವನ್ನು ಮರೆಮಾಡಿಕೊಂಡಿರುವ ಯೆಹೋವನಿಗಾಗಿ ನಾನು ಕಾದುಕೊಂಡು ಎದುರು ನೋಡುತ್ತಿರುವೆನು.
18 ಆಹಾ, ನಾನೂ, ನನಗೆ ಯೆಹೋವನು ದಯಪಾಲಿಸಿರುವ ಮಕ್ಕಳೂ ಚೀಯೋನ್ ಪರ್ವತದಲ್ಲಿ ವಾಸವಾಗಿರುವ
ಸೇನಾಧೀಶ್ವರನಾದ ಯೆಹೋವನಿಂದ ಉಂಟಾದ ಗುರುತುಗಳಾಗಿಯೂ, ಅದ್ಭುತಗಳಾಗಿಯೂ ಇಸ್ರಾಯೇಲರ ಮಧ್ಯದಲ್ಲಿದ್ದೇವೆ.
19 “ಗುಣಗುಟ್ಟುವ, ಪಿಸುಮಾತನಾಡುವ, ಪ್ರೇತವಿಚಾರಕರನ್ನೂ, ಬೇತಾಳಿಕರನ್ನೂ ಆಶ್ರಯಿಸಿರಿ” ಎಂದು ಒಂದು ವೇಳೆ ನಿಮಗೆ ಹೇಳಾರು, “ಜನರು ತಮ್ಮ ದೇವರನ್ನೇ ಆಶ್ರಯಿಸಬಾರದೋ? ಜೀವಿತರಿಗಾಗಿ ಸತ್ತವರಲ್ಲಿ ವಿಚಾರಿಸುವುದು ಯುಕ್ತವೋ? 20 ದೇವರ ಉಪದೇಶವನ್ನೂ, ದೇವರ ಸಾಕ್ಷಿಯನ್ನೂ ವಿಚಾರಿಸುವ” ಎಂದು ಅವರು ಹೇಳದಿದ್ದರೆ ಅವರಿಗೆ ಎಂದಿಗೂ ಬೆಳಗಾಗುವುದಿಲ್ಲ.
21 ಅವರು ಘೋರ ಕಷ್ಟಕ್ಕೊಳಗಾಗಿ ಹಸಿವೆಯಿಂದ ದೇಶದಲ್ಲಿ ಅಲೆಯುವರು. ಅವರು ಹಸಿದಾಗ ಸಿಟ್ಟುಗೊಂಡು
ತಮ್ಮ ಅರಸನನ್ನೂ, ತಮ್ಮ ದೇವರನ್ನೂ ಶಪಿಸಿ ಮೇಲಕ್ಕೆ ನೋಡುವರು.
22 ಮೇಲಕ್ಕೆ ಕಣ್ಣೆತ್ತಿದ್ದರೂ, ಭೂಮಿಯನ್ನು ದೃಷ್ಟಿಸಿದರೂ ಇಗೋ,
ಇಕ್ಕಟ್ಟೆಂಬ ಕತ್ತಲೂ, ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವುದು. ಕಾರ್ಗತ್ತಲೆಗೆ ತಳ್ಳಲ್ಪಡುವರು.
* 8:1 8:1 ಮಹೇರ್ ಶಾಲಾಲ್ ಹಾಷ್ ಬಜ್ ಅಂದರೆ ಸೂರೆಗ ಅತುರ ಕೊಳ್ಳೆಗೆ ಅವಸರ. 8:14 8:14 ಎರಡು ಮನೆತನಕ್ಕೆ ಇಸ್ರಾಯೇಲ್ ಮತ್ತು ಯೆಹೂದ. 8:16 8:16 ಕಟ್ಟಿಡು ಎಂಬುದು ಸುರುಳಿಯನ್ನು ಸುತ್ತಿಡುವ ಮತ್ತು ಕಟ್ಟಿಡುವ ಕ್ರಿಯೆಯನ್ನು ವಿವರಿಸುತ್ತದೆ. ಉಪದೇಶವು ಪ್ರಾಯಶಃ, ಸುರುಳಿಯಲ್ಲಿ ಬರೆದಿಟ್ಟಿರುವ ಯೆಶಾಯನ ಮುಂಚಿನ ಮಾತುಗಳನ್ನು ಸೂಚಿಸುತ್ತದೆ.