13
ಯೋಬನ ಪ್ರತ್ಯುತ್ತರದ ಮುಂದುವರಿಕೆ
ಇಗೋ, ಇವುಗಳನ್ನೆಲ್ಲಾ ನನ್ನ ಕಣ್ಣು ಕಂಡಿದೆ,
ಕಿವಿಯು ಕೇಳಿ ಗ್ರಹಿಸಿದೆ.
ನೀವು ತಿಳಿದಿರುವುದನ್ನು ನಾನೂ ತಿಳಿದಿದ್ದೇನೆ.
ನಿಮಗಿಂತ ನಾನು ಕಡೆಯಲ್ಲ.
ಆದರೆ ನಾನು ಸರ್ವಶಕ್ತನಾದ ದೇವರ ಸಂಗಡ ಮಾತನಾಡಬೇಕು,
ದೇವರೊಂದಿಗೆ ವಾದಿಸಲು ಅಪೇಕ್ಷಿಸುತ್ತೇನೆ.
ನೀವಾದರೋ ಸುಳ್ಳನ್ನು ಪ್ರತಿಪಾದಿಸುವವರಾಗಿದ್ದೀರಿ,
ನೀವೆಲ್ಲರೂ ವ್ಯರ್ಥ ವೈದ್ಯರೇ.
ನೀವು ಬಾಯಿಮುಚ್ಚಿ ಸುಮ್ಮನಾದರೆ ಎಷ್ಟೋ ಉತ್ತಮ!
ಮೌನವೇ ನಿಮಗೆ ಜ್ಞಾನವು.
ದಯಮಾಡಿ ನನ್ನ ಆಕ್ಷೇಪಣೆಯನ್ನು ಕೇಳಿರಿ,
ನನ್ನ ತುಟಿಗಳ ವಾದಕ್ಕೆ ಕಿವಿಗೊಡಿರಿ.
ದೇವರ ಪಕ್ಷವಾಗಿ ಅನ್ಯಾಯವನ್ನು ನುಡಿಯುವಿರೋ?
ಆತನಿಗೋಸ್ಕರ ಮೋಸದ ಮಾತುಗಳನ್ನಾಡುವಿರೋ?
ಆತನಿಗೆ ಮುಖದಾಕ್ಷಿಣ್ಯವನ್ನು ತೋರಿಸುವಿರಾ?
ದೇವರಿಗಾಗಿ ವಾದಿಸುವಿರಾ?
ಆತನು ನಿಮ್ಮನ್ನು ಶೋಧಿಸಿದರೆ ನಿಮಗೆ ಒಳ್ಳೆಯದಾಗುವುದೋ?
ಮನುಷ್ಯನನ್ನು ಮೋಸಗೊಳಿಸುವಂತೆ ಆತನನ್ನೂ ಮೋಸಗೊಳಿಸುವಿರೋ?
10 ನೀವು ರಹಸ್ಯವಾಗಿ ಪಕ್ಷಪಾತ ಮಾಡಿದರೆ ಆತನು ನಿಮ್ಮನ್ನು ಖಂಡಿಸೇ ಖಂಡಿಸುವನು.
11 ಆತನ ಶ್ರೇಷ್ಠತೆಯು ನಿಮ್ಮನ್ನು ಹೆದರಿಸುವುದಿಲ್ಲವೋ?
ಆತನ ಭಯವು ನಿಮ್ಮ ಮೇಲೆ ಬೀಳುವುದಿಲ್ಲವೋ?
12 ನಿಮ್ಮ ಸ್ಮೃತಿಗಳು ಬೂದಿಗೆ ಸಮಾನವಾದ ಉದಾಹರಣೆ;
ನಿಮ್ಮ ಕೋಟೆಯು ಬರೀ ಮಣ್ಣಿನದೇ.
13 ಸುಮ್ಮನಿರಿ, ನನ್ನನ್ನು ಬಿಡಿರಿ, ನಾನು ಮಾತನಾಡಬೇಕು,
ನನಗೇನಾದರೂ ಆಗಲಿ.
14 ನನ್ನ ಪ್ರಾಣವನ್ನು ಬಾಯಿಂದ ಕಚ್ಚಿಕೊಂಡಿರುವೆನು,
ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.
15 ಆಹಾ, ಆತನು ನನ್ನನ್ನು ಕೊಲ್ಲುವನು, ಅದಕ್ಕಾಗಿ ಕಾದಿರುತ್ತೇನೆ,
ಆದರೂ ನನ್ನ ನಡತೆಯ ಒಳ್ಳೆಯತನವನ್ನು ಆತನ ಮುಂದೆ ಸ್ಥಾಪಿಸುವೆನು.
16 ಭ್ರಷ್ಟನು ಆತನ ಮುಂದೆ ಬರುವುದಿಲ್ಲವೆಂಬುದೇ,
ನಾನು ರಕ್ಷಣೆಯನ್ನು ಹೊಂದುವೆನೆಂಬುವುದಕ್ಕೆ ಆಧಾರವಾಗಿದೆ.
17 ನನ್ನ ಮಾತುಗಳನ್ನು ಚೆನ್ನಾಗಿ ಕೇಳಿರಿ, ನನ್ನ ಅರಿಕೆಗೆ ಕಿವಿಗೊಡಿರಿ.
18 ಇಗೋ, ನನ್ನ ನ್ಯಾಯವನ್ನು ಸಿದ್ಧಪಡಿಸಿದ್ದೇನೆ;
ನಾನು ನೀತಿವಂತನೆಂಬುದಾಗಿ ನಿರ್ಣಯವಾಗುವುದೆಂದು ನನಗೆ ಗೊತ್ತೇ ಇದೆ.
19 ನನಗೆ ಪ್ರತಿವಾದಿ ಇದ್ದಾನೋ?
ಇದ್ದರೆ, ನಾನು ನನ್ನನ್ನು ನಿನ್ನ ದೃಷ್ಟಿಗೆ ಮರೆಮಾಡಿಕೊಂಡು, ಮೌನನಾಗಿ ಪ್ರಾಣಬಿಡುವೆನು.
20 ಈ ನನ್ನೆರಡು ಕೋರಿಕೆಗಳನ್ನು ಈಡೇರಿಸು.
ಆಗ ನಿನ್ನ ದೃಷ್ಟಿಗೆ ನಾನು ಮರೆಮಾಡಿಕೊಳ್ಳುವುದಿಲ್ಲ.
21 ನನ್ನ ಮೇಲೆತ್ತಿರುವ ನಿನ್ನ ಕೈಯನ್ನು ದೂರಮಾಡು,
ನಿನ್ನ ಭಯವು ನನ್ನನ್ನು ಹೆದರಿಸದಿರಲಿ.
22 ಆಗ ನೀನು ಕರೆದರೆ ನಾನು ಉತ್ತರಕೊಡುವೆನು,
ಇಲ್ಲವೆ ನಾನು ಮಾತನಾಡುವೆ, ನೀನು ಉತ್ತರಕೊಡು.
23 ನನ್ನ ಪಾಪದೋಷಗಳೆಷ್ಟು?
ನನ್ನ ಪಾಪವನ್ನೂ, ದ್ರೋಹವನ್ನೂ ನನಗೆ ತಿಳಿಯಪಡಿಸು.
24 ಏಕೆ ನಿನ್ನ ಮುಖವನ್ನು ಮರೆಮಾಡುತ್ತಿ?
ನನ್ನನ್ನು ಶತ್ರುವೆಂದೆಣಿಸಿರುವುದೇಕೆ?
25 ಹಾರಿಹೋಗುವ ಎಲೆಯನ್ನು ನಡುಗಿಸುವಿಯಾ?
ಒಣಗಿದ ಹೊಟ್ಟನ್ನು ಅಟ್ಟಿಬಿಡುವಿಯಾ?
26 ನನ್ನ ವಿಷಯವಾಗಿ ಕಠಿಣವಾದ ತೀರ್ಪುಗಳನ್ನು ಬರೆದು,
ನನ್ನ ಯೌವನದ ಪಾಪಗಳ ಬಾಧ್ಯತೆಯನ್ನು ನನಗೆ ಕೊಟ್ಟಿದ್ದಿ.
27 ನೀನು ನನ್ನ ಕಾಲುಗಳಿಗೆ ಕೋಳವನ್ನು ಹಾಕಿದ್ದಿ;
ನನ್ನ ದಾರಿಗಳನ್ನೆಲ್ಲಾ ಮನದಟ್ಟುಮಾಡಿ ನನ್ನ ಹೆಜ್ಜೆಗಳ ಸುತ್ತಲೂ ಗೆರೆಯೆಳೆದಿದ್ದಿ.
28 ಕೊಳೆಯುವ ಪದಾರ್ಥದಂತೆಯೂ,
ನುಸಿ ಹಿಡಿದ ಬಟ್ಟೆಯ ಹಾಗೂ ಕ್ಷಯಿಸಿಹೋಗುತ್ತಿದ್ದೇನೆ.