16
ಯೋಬನ ಐದನೆಯ ಸಂಭಾಷಣೆ: ಎಲೀಫಜನಿಗೆ ನೀಡಿದ ಪ್ರತ್ಯುತ್ತರ
ಆಗ ಯೋಬನು ಹೀಗೆ ಉತ್ತರಕೊಟ್ಟನು,
“ಇಂಥಾ ಮಾತುಗಳನ್ನು ಬಹಳವಾಗಿ ಕೇಳಿದ್ದೇನೆ,
ನೀವೆಲ್ಲರೂ ಬೇಸರಿಕೆಯನ್ನು ಹುಟ್ಟಿಸುವ ಮಾತನಾಡುವಿರಿ.
ಆದರಣೆಗೆ ಬದಲಾಗಿ ಬಾಧಿಸುವವರು ನೀವು.
ನೀವಾಡುವ ಒಣಮಾತುಗಳಿಗೆ ಇತಿಮಿತಿ ಇಲ್ಲವೇ?
ಇಂತಹ ಮಾತನಾಡಲು ಒತ್ತಾಯಪಡಿಸಿದ್ದೇನೆಯೇ?
ನಾನೂ ನಿಮ್ಮ ಹಾಗೆ ಮಾತನಾಡಬಲ್ಲೆನು;
ನಾನು ನಿಮ್ಮಂತೆ ಇದ್ದಿದ್ದರೆ,
ನಾನು ನಿಮ್ಮ ವಿರುದ್ಧವಾಗಿ ಮಾತುಗಳನ್ನು ಹೆಣೆದು
ನಿಮ್ಮ ವಿಷಯದಲ್ಲಿ ತಲೆಯಾಡಿಸಬಹುದಾಗಿತ್ತು.
ನಾನೂ ಬಾಯಿಮಾತಿಗಾಗಿ ನಿಮ್ಮನ್ನು ಧೈರ್ಯಗೊಳಿಸಿ,
ತುಟಿಗಳ ಆದರಣೆಯಿಂದ ನಿಮ್ಮ ದುಃಖವನ್ನು ಶಮನಪಡಿಸಬಹುದಾಗಿತ್ತು.
ನಾನು ಮಾತನಾಡಿದರೂ,
ನನ್ನ ಮನೋವ್ಯಥೆಯು ಶಾಂತವಾಗುವುದಿಲ್ಲ.
ಸುಮ್ಮನಾದರೂ, ಕಷ್ಟ ನಿವಾರಣೆಯಾಗುವುದಿಲ್ಲ.
ಆದರೆ ಈಗ ಆತನು ನನ್ನನ್ನು ಕುಂದಿಸಿದ್ದಾನೆ;
(ದೇವಾ) ನೀನು ನನ್ನ ಬಳಗದವರನ್ನೆಲ್ಲಾ ಹಾಳು ಮಾಡಿದ್ದಿ.
ನೀನು ನನ್ನನ್ನು ಹಿಡಿದಿರುವುದು ನನಗೆ ಪ್ರತಿಸಾಕ್ಷಿಯಾಗಿದೆ,
ನನ್ನ ಬಲಹೀನವು ನನ್ನ ವಿರುದ್ಧವಾಗಿ
ನನ್ನ ಮುಖದ ಮುಂದೆ ಸಾಕ್ಷಿಕೊಡುತ್ತದೆ.
ಆತನ ಸಿಟ್ಟು ನನ್ನನ್ನು ಸೀಳಿ ಹಿಂಸಿಸುತ್ತಿದೆ; ಆತನು ನನ್ನ ಮೇಲೆ ಹಲ್ಲು ಕಡಿದಿದ್ದಾನೆ, ಆತನು ನನ್ನ ಮೇಲೆ ದೃಷ್ಟಿಯನ್ನು ತೀಕ್ಷ್ಣ ಮಾಡಿದ್ದಾನೆ.
10 ನನಗೆ ವಿರುದ್ಧವಾಗಿ ಹಲವರು ಗುಂಪುಕೂಡಿ
ನನ್ನನ್ನು ಅಣಕಿಸಿ ಛೀಮಾರಿ ಹಾಕಿ,
ನನ್ನ ದವಡೆಯ ಮೇಲೆ ಬಡಿದಿದ್ದಾರೆ.
11 ದೇವರು ನನ್ನನ್ನು ಅಪರಿಶುದ್ಧರಿಗೆ ಒಪ್ಪಿಸಿ,
ದುಷ್ಟರ ಕೈಗೆ ಒಪ್ಪಿಸಿಬಿಟ್ಟಿದ್ದಾನೆ.
12 ನಾನು ನೆಮ್ಮದಿಯಿಂದಿದ್ದಾಗ ಆತನು ನನ್ನನ್ನು ಒಡೆದು ಹಾಕಿದನು;
ಕತ್ತುಹಿಡಿದು ನನ್ನನ್ನು ಚೂರು ಚೂರು ಮಾಡಿದನು. ಬಾಣ ಪ್ರಯೋಗಿಸಲು
ನನ್ನನ್ನು ಗುರಿಮಾಡಿಕೊಂಡಿದ್ದಾನೆ.
13 ಆತನ ಬಾಣಗಳು ನನ್ನನ್ನು ಮುತ್ತಿಕೊಂಡಿವೆ.
ಆತನು ಕರುಣೆಯಿಲ್ಲದೆ ನನ್ನ ಅಂತರಂಗವನ್ನು ಇರಿದು,
ಭೂಮಿಯ ಮೇಲೆ ನನ್ನ ಪಿತ್ತವನ್ನು ಸುರಿಸುತ್ತಾನೆ.
14 ಮೇಲಿಂದ ಮೇಲೆ ನನಗೆ ಪೆಟ್ಟುಕೊಟ್ಟು ನನ್ನನ್ನು ಶಕ್ತಿಹೀನನಾಗಿ ಮಾಡಿದ್ದಾನೆ
ಶೂರನ ಹಾಗೆ ನನ್ನ ಮೇಲೆ ಎರಗುತ್ತಾನೆ.
15 ಗೋಣಿಯನ್ನು ಹೊಲೆದು ಮೈಮೇಲೆ ಹಾಕಿಕೊಂಡಿದ್ದೇನೆ;
ನನ್ನ ಕೊಂಬನ್ನು ಧೂಳಿನಲ್ಲಿ ತಗ್ಗಿಸಿಕೊಂಡಿದ್ದೇನೆ.
16 ಕಣ್ಣೀರು ಸುರಿಯುವುದರಿಂದ ನನ್ನ ಮುಖವು ಕೆಂಪಾಗಿ ಹೋಗಿದೆ.
ರೆಪ್ಪೆಯ ಮೇಲೆ ಮರಣಾಂಧಕಾರವು ಕವಿದಿದೆ.
17 ಆದರೆ ನನ್ನ ಕೈ ಯಾವ ಬಲಾತ್ಕಾರವನ್ನೂ ಮಾಡಿಲ್ಲವಲ್ಲಾ,
ನನ್ನ ವಿಜ್ಞಾಪನೆಯು ನಿರ್ಮಲವಾದದ್ದು.
18 ಭೂಮಿಯೇ, ನನ್ನ ರಕ್ತವನ್ನು* ಮುಚ್ಚಬೇಡ!
ನನ್ನ ಮೊರೆಗೆ ಬಿಡುವು ಸಿಕ್ಕದಿರಲಿ!
19 ಆಹಾ, ಈಗಲೂ ನನ್ನ ಕಡೆಯ ಸಾಕ್ಷಿಯು ಆಕಾಶದಲ್ಲಿ ಉಂಟು,
ನನ್ನ ಪಕ್ಷದ ಹೊಣೆಗಾರನು ಮೇಲಣ ಲೋಕದಲ್ಲಿದ್ದಾನೆ.
20 ಗೆಳೆಯರೋ ನನ್ನನ್ನು ಹೀನೈಸುವವರಾಗಿದ್ದಾರೆ,
ನಾನಾದರೋ ದೇವರ ಮುಂದೆ ಕಣ್ಣೀರು ಸುರಿಸುತ್ತಿರುವೆನು.
21 ನನ್ನ ನ್ಯಾಯವನ್ನು ದೇವರ ಮುಂದೆಯೂ,
ಮಾನವನ ನ್ಯಾಯವನ್ನು ಅವನ ಮಿತ್ರನ ಮುಂದೆಯೂ ಸ್ಥಾಪಿಸಲಿ ಎಂದು ದೇವರಿಗೆ ಕಣ್ಣೀರು ಸುರಿಸುತ್ತೇನೆ.
22 ನಾನು ಹಿಂದಿರುಗದ ದಾರಿಯನ್ನು,
ಕೆಲವು ವರ್ಷಗಳೊಳಗೆ ಹಿಡಿಯುವೆನು.”
* 16:18 ನನ್ನ ರಕ್ತವನ್ನು ಅಥವಾ ನನಗೆ ಮಾಡಿದ ಅಪರಾಧಗಳನ್ನು.