24
ಯೋಬನ ಪ್ರತ್ಯುತ್ತರದ ಮುಂದುವರಿಕೆ
“ಸರ್ವಶಕ್ತನಾದ ದೇವರು ಏಕೆ ದುಷ್ಟರಿಗೆ ದಂಡನೆಯ ಕಾಲಗಳನ್ನು ನೇಮಿಸಿ ಇಟ್ಟುಕೊಂಡಿಲ್ಲ?
ಆತನನ್ನು ಅರಿತವರಿಗೆ ಆತನ ನ್ಯಾಯತೀರ್ಪಿನ ದಿನಗಳು ಏಕೆ ಗೋಚರವಾಗುವುದಿಲ್ಲ?
ಮೇರೆಗಳನ್ನು ದಾಟಿ ಆಶ್ರಯಿಸಿಕೊಳ್ಳುವವರು ಇದ್ದಾರೆ.
ದನಕುರಿಗಳನ್ನು ಅಪಹರಿಸಿ ಸಾಕಿಕೊಳ್ಳುವವರಿದ್ದಾರೆ.
ಅನಾಥರ ಕತ್ತೆಯನ್ನು ಹೊಡೆದುಕೊಂಡು ಹೋಗುತ್ತಾರೆ,
ವಿಧವೆಯ ಎತ್ತನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.
ದಿಕ್ಕಿಲ್ಲದವರನ್ನು ದಾರಿತಪ್ಪಿಸುತ್ತಾರೆ,
ನಾಡಿನ ಬಡವರು ಒಟ್ಟಾಗಿ ಅಡಗಿಕೊಳ್ಳುತ್ತಾರೆ.
ಇಗೋ, ಅಡವಿಯಲ್ಲಿ ಕಾಡುಕತ್ತೆಗಳು ಹೇಗೋ ಹಾಗೆಯೇ,
ಇವರು ತಮ್ಮ ಹೊಟ್ಟೇ ಪಾಡಿಗಾಗಿ ಹೊರಟು ಆಹಾರವನ್ನು ಆತುರವಾಗಿ ಹುಡುಕುವರು;
ಅರಣ್ಯವೇ ಇವರ ಮಕ್ಕಳಿಗಾಗಿ ಆಹಾರವನ್ನು ಒದಗಿಸುವುದು.
ತಮ್ಮ ಹೊಟ್ಟೆಗಾಗಿ ಬಯಲಿನಲ್ಲಿ ಸೊಪ್ಪನ್ನು ಕೊಯ್ದುಕೊಳ್ಳುವರು,
ದುಷ್ಟನ ದ್ರಾಕ್ಷಿತೋಟದಲ್ಲಿ ಹಕ್ಕಲಾಯುವರು.
ಹೊದಿಕೆ ಇಲ್ಲದೆ ಬೆತ್ತಲೆಯಾಗಿ ರಾತ್ರಿಯನ್ನು ಕಳೆಯುವರು,
ಚಳಿಗಾಲದಲ್ಲಿಯೂ ಅವರಿಗೆ ಬಟ್ಟೆಯಿಲ್ಲ.
ಮಲೆನಾಡಿನ ದೊಡ್ಡ ಮಳೆಯಿಂದ ನೆನೆದುಹೋಗಿ,
ಆಶ್ರಯವಿಲ್ಲದೆ ಬಂಡೆಯನ್ನು ಅಪ್ಪಿಕೊಳ್ಳುವರು.
ತಂದೆಯಿಲ್ಲದ ಮಗುವನ್ನು ತಾಯಿಯ ಮೊಲೆಯಿಂದ ಕಿತ್ತು,
ಬಡವರಿಂದ ಒತ್ತೆ ತೆಗೆದುಕೊಳ್ಳುವವರಿದ್ದಾರೆ.
10 ಬಟ್ಟೆಯಿಲ್ಲದೆ ಬೆತ್ತಲೆಯಾಗಿ ಅಲೆಯುವರು;
ಹಸಿವಿನಿಂದಲೇ ಸಿವುಡುಗಳನ್ನು ಹೊರುವರು.
11 ಯಜಮಾನರ ಪೌಳಿಗೋಡೆಗಳೊಳಗೇ ಇದ್ದುಕೊಂಡು ಎಣ್ಣೆಗಾಣವನ್ನು ತಿರುಗಿಸುವರು;
ದಾಹಗೊಂಡೇ ಅವರ ತೊಟ್ಟಿಗಳಲ್ಲಿ ದ್ರಾಕ್ಷಿಯನ್ನು ತುಳಿಯುವರು.
12 ತುಂಬಿದ ಪಟ್ಟಣದೊಳಗಿಂದ ಜನರು ನರಳುವರು,
ಗಾಯಪಟ್ಟವರು ಮೊರೆಯಿಡುವರು,
*ಆದರೆ ದೇವರಾದರೋ ಅವರ ಮೊರೆಗೆ ಕಿವಿಗೊಡನು.
13 ಬೆಳಕಿನ ವಿರುದ್ಧ ತಿರುಗಿ ಬಿದ್ದವರು ಇದ್ದಾರೆ;
ಇವರು ಹಗಲಿನ ದಾರಿಗಳನ್ನು ತಿಳಿಯದವರಾಗಿ,
ಅದರ ಹಾದಿಗಳಲ್ಲಿ ಇರುವುದಿಲ್ಲ.
14 ಕೊಲೆಪಾತಕನು ಮುಂಜಾನೆ ಎದ್ದು,
ದಿಕ್ಕಿಲ್ಲದ ಬಡವರನ್ನು ಕೊಂದು,
ರಾತ್ರಿಯಲ್ಲಿ ಕಳ್ಳನಂತಿರುವನು.
15 ಜಾರನು ತಾನು, ಯಾರ ಕಣ್ಣಿಗೂ ಬೀಳಬಾರದು ಎಂದು,
ಸಂಜೆಯನ್ನು ಎದುರು ನೋಡುತ್ತಿದ್ದು ಮುಖಕ್ಕೆ ಮುಸುಕು ಹಾಕಿಕೊಳ್ಳುವನು.
16 ಅವರು ಕತ್ತಲಲ್ಲಿ ಕನ್ನಕೊರೆದು ಮನೆಗಳೊಳಗೆ ನುಗ್ಗಿ;
ಹಗಲಿನಲ್ಲಿ ಅಡಗಿಕೊಂಡಿದ್ದು;
ಬೆಳಕನ್ನು ತಿಳಿಯದೆ ಇರುವರು.
17 ಅವರೆಲ್ಲರಿಗೂ ಬೆಳಕು ಕಾರ್ಗತ್ತಲಿನಂತಿರುವುದು,
ಕಾರ್ಗತ್ತಲಿನ ಅಪಾಯಗಳನ್ನು ಅವರು ಬಲ್ಲರಷ್ಟೆ.
18 (ನೀವು ಹೇಳುವುದೇನೆಂದರೆ) ದುಷ್ಟನು ಪ್ರವಾಹದಲ್ಲಿ ವೇಗವಾಗಿ ಕೊಚ್ಚಿಕೊಂಡು ಹೋಗುವನು,
ಭೂಲೋಕದ ಅವನ ಆಸ್ತಿಯು ಶಾಪಗ್ರಸ್ತವಾಗಿರುವುದು.
ದ್ರಾಕ್ಷಿತೋಟಗಳ ಕಡೆಗೆ ತಿರುಗಲಾರನು.
19 ಬರಗಾಲವೂ, ಬಿಸಿಲೂ ಹಿಮದ ನೀರನ್ನು ಹೀರುವ ಹಾಗೆ,
ಪಾತಾಳವು ಪಾಪಿಗಳನ್ನು ಎಳೆದುಕೊಳ್ಳುವುದು.
20 ಹೆತ್ತ ಹೊಟ್ಟೆಯೇ ಅವನನ್ನು ಮರೆತುಬಿಡುವುದು;
ಹುಳವು ಅವನ ಹೆಣವನ್ನು ಸವಿದು ತಿನ್ನುವುದು;
ಇನ್ನು ಮೇಲೆ ಯಾರಿಗೂ ಅವನ ನೆನಪಿರದು;
ಅನ್ಯಾಯವು ಮರದ ಹಾಗೆ ಮುರಿಯಲ್ಪಡುವುದು.
21 ಅವನು ಮಕ್ಕಳಿಲ್ಲದ ಬಂಜೆಯರನ್ನು ನುಂಗಿಬಿಟ್ಟು,
ವಿಧವೆಯರನ್ನು ಉದ್ಧರಿಸದೆ ಹೋದನಷ್ಟೆ (ಎಂಬುದೇ).
22 ದೇವರಂತು ತನ್ನ ಶಕ್ತಿಯಿಂದ ಬಲಿಷ್ಠರನ್ನು ಉಳಿಸುತ್ತಾನೆ,
ಅವರು ತಮ್ಮ ಜೀವವು ಇನ್ನು ಉಳಿಯುವುದಿಲ್ಲವೆಂದು ನಂಬಿದ್ದರೂ ಉದ್ಧಾರವಾಗುವರು.
23 ದೇವರು ಅವರಿಗೆ ಅಭಯವನ್ನು ಕೊಟ್ಟಿದ್ದರಿಂದ ಅವರು ಅದನ್ನು ಆಧಾರಮಾಡಿಕೊಳ್ಳುವರು;
ಆತನ ಕಟಾಕ್ಷವು ಅವರ ಮಾರ್ಗಗಳ ಮೇಲಿರುವುದು.
24 ಅವರು ಉನ್ನತಿಗೆ ಬರುವರು;
ಸ್ವಲ್ಪ ಕಾಲದ ಮೇಲೆ ಅವರು ಎಲ್ಲಿಯೋ?
ಸರ್ವ ಮನುಷ್ಯರೊಂದಿಗೆ ಸುಗ್ಗಿಯ ತೆನೆಗಳಂತೆ ಕೊಯ್ಯಲ್ಪಟ್ಟು ಕೆಳಕ್ಕೆ ಬಿದ್ದು ಕೂಡಿಸಲ್ಪಡುವರು.
25 ಹೀಗಲ್ಲವೆಂದು ನೀವು ನಂಬಿದರೆ ನಾನು ಸುಳ್ಳುಗಾರನೆಂದೂ ನನ್ನ ಮಾತುಗಳು ನಿರರ್ಥಕವೆಂದೂ;
ನಿಮ್ಮಲ್ಲಿ ಯಾರು ಸ್ಥಾಪಿಸಬಲ್ಲರು?.”
* 24:12 ಅಥವಾ ದೇವರು ದುಷ್ಟರಾದ ಧನಿಕರನ್ನು ಆರೋಪಿಸುವುದಿಲ್ಲ.