18
ಇಸ್ಕರಿಯೋತ ಯೂದನು ಯೇಸುವನ್ನು ಹಿಡಿದುಕೊಟ್ಟದ್ದು
ಮತ್ತಾ 26:47-56; ಮಾರ್ಕ 14:45-50; ಲೂಕ 22:47-58
ಯೇಸು ಈ ಮಾತುಗಳನ್ನಾಡಿದ ಮೇಲೆ ತನ್ನ ಶಿಷ್ಯರ ಜೊತೆ ಕೆದ್ರೋನ್ ಹಳ್ಳದ ಆಚೆಗೆ ಹೋದನು. ಆತನೂ, ಆತನ ಶಿಷ್ಯರೂ ಅಲ್ಲಿದ್ದ ಒಂದು ತೋಟದೊಳಗೆ ಪ್ರವೇಶಿಸಿದರು. ಆತನನ್ನು ಹಿಡಿದುಕೊಡಲಿದ್ದ ಯೂದನಿಗೂ ಆ ಸ್ಥಳವು ಗೊತ್ತಿತ್ತು ಏಕೆಂದರೆ, ಆಗಾಗ ಯೇಸು ತನ್ನ ಶಿಷ್ಯರೊಂದಿಗೆ ಅಲ್ಲಿ ಸೇರಿಬರುತ್ತಿದ್ದರು. ಹೀಗಿರಲಾಗಿ ಯೂದನು ಮುಖ್ಯಯಾಜಕರಿಂದ ಮತ್ತು ಫರಿಸಾಯರಿಂದ ಸೈನಿಕರ ಗುಂಪನ್ನೂ, ಕಾವಲಾಳುಗಳನ್ನೂ ಕರೆದುಕೊಂಡು ದೀಪಗಳನ್ನೂ, ಪಂಜುಗಳನ್ನೂ ಮತ್ತು ಆಯುಧಗಳನ್ನೂ ಹಿಡಿದುಕೊಂಡು ಅಲ್ಲಿಗೆ ಬಂದನು. ಆಗ ಯೇಸು *ತನಗೆ ಸಂಭವಿಸಲಿರುವುದನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಿದನು. ಅದಕ್ಕೆ ಅವರು, “ನಜರೇತಿನ ಯೇಸುವನ್ನು ಹುಡುಕುತ್ತಿದ್ದೇವೆ” ಎಂದರು. ಯೇಸು ಅವರಿಗೆ “ನಾನೇ ಆತನು” ಎಂದು ಹೇಳಿದನು. ಆತನನ್ನು ಹಿಡಿದು ಕೊಡುವ ಯೂದನು ಸಹ ಅವರ ಜೊತೆಯಲ್ಲಿ ನಿಂತಿದ್ದನು. ಆತನು ಅವರಿಗೆ “ನಾನೇ ಆತನು” ಎಂದು ಹೇಳಿದಾಗ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು. ಆಗ ಆತನು ಪುನಃ ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು, ಅವರು, “ನಜರೇತಿನ ಯೇಸುವನ್ನು ಹುಡುಕುತ್ತೇವೆ” ಎಂದರು. ಅದಕ್ಕೆ ಯೇಸು, “ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ. ನೀವು ನನ್ನನ್ನೇ ಹುಡುಕುವುದಾದರೆ ಇವರನ್ನು ಹೋಗಲುಬಿಡಿರಿ” ಎಂದನು. ಹೀಗೆ “ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳೆದುಕೊಳ್ಳಲಿಲ್ಲ” ಎಂದು ತಾನೇ ಹೇಳಿದ ಮಾತು ನೆರವೇರಿತು. 10 ಸೀಮೋನ್ ಪೇತ್ರನ ಬಳಿಯಲ್ಲಿ ಒಂದು ಕತ್ತಿ ಇತ್ತು; ಆಗ ಅದನ್ನು ಅವನು ಹೊರಕ್ಕೆ ಎಳೆದುಕೊಂಡು, ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು. ಆ ಆಳಿನ ಹೆಸರು ಮಲ್ಕನು. 11 ಆಗ ಯೇಸು ಪೇತ್ರನಿಗೆ, “ಕತ್ತಿಯನ್ನುಒರೆಯಲ್ಲಿ ಹಾಕು.§ತಂದೆಯು ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೋ?” ಎಂದು ಹೇಳಿದನು.
ಮಹಾಯಾಜಕನು ಯೇಸುವನ್ನು ವಿಚಾರಿಸಿದ್ದು; ಪೇತ್ರನು ಆತನನ್ನು ನಾನರಿಯೆ ಎಂದು ಹೇಳಿದ್ದು
ಮತ್ತಾ 26:69-75; ಮಾರ್ಕ 14:66-72; ಲೂಕ 22:54-62
12 ಆಮೇಲೆ ಆ ಸೈನಿಕರ ಗುಂಪು ಮತ್ತು *ಸಹಸ್ರಾಧಿಪತಿಯೂ, ಯೆಹೂದ್ಯರ ಓಲೇಕಾರರೂ ಯೇಸುವನ್ನು ಹಿಡಿದು ಕಟ್ಟಿದರು. 13 ಆತನನ್ನು ಮೊದಲು ಅನ್ನನ ಬಳಿಗೆ ಕರೆದುಕೊಂಡು ಹೋದರು. ಅವನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು. 14  ಆ ಕಾಯಫನೇ, ಜನರಿಗೋಸ್ಕರ ಒಬ್ಬ ಮನುಷ್ಯನು ಸಾಯುವುದು ಹಿತ ಎಂದು ಯೆಹೂದ್ಯರಿಗೆ ಸಲಹೆ ಕೊಟ್ಟವನು.
15 ಸೀಮೋನ್ ಪೇತ್ರನೂ ಮತ್ತು ಇನ್ನೊಬ್ಬ ಶಿಷ್ಯನೂ ಯೇಸುವನ್ನು ಹಿಂಬಾಲಿಸಿದರು. ಆ ಶಿಷ್ಯನಿಗೆ ಮಹಾಯಾಜಕನ ಪರಿಚಯವಿದ್ದುದರಿಂದ ಯೇಸುವಿನ ಜೊತೆ ಮಹಾಯಾಜಕನ ಅಂಗಳದೊಳಗೆ ಹೋದನು. 16 ಆದರೆ ಪೇತ್ರನು ಹೊರಗೆ ಬಾಗಿಲಿನ ಬಳಿಯಲ್ಲಿ ನಿಂತಿದ್ದನು. ಮಹಾಯಾಜಕನ ಪರಿಚಯವಿದ್ದ ಆ ಇನ್ನೊಬ್ಬ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು. 17 ಆಗ ದ್ವಾರಪಾಲಕಿಯು, “ನೀನು ಸಹ ಆ ಮನುಷ್ಯನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಪೇತ್ರನನ್ನು ಕೇಳಲು, ಅವನು, “ನಾನಲ್ಲ” ಎಂದನು. 18 ಚಳಿಯಿದ್ದುದರಿಂದ ಆಳುಗಳೂ, ಓಲೇಕಾರರೂ ಇದ್ದಲಿನ ಬೆಂಕಿ ಮಾಡಿ ಚಳಿ ಕಾಯಿಸಿಕೊಳ್ಳುತ್ತಾ ನಿಂತಿರಲಾಗಿ; ಪೇತ್ರನೂ ಅವರ ಜೊತೆಯಲ್ಲಿ ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಿದ್ದನು.
19 ಅಷ್ಟರೊಳಗೆ ಮಹಾಯಾಜಕನು ಯೇಸುವನ್ನು ಆತನ ಶಿಷ್ಯರ ವಿಷಯವಾಗಿಯೂ ಆತನ ಉಪದೇಶದ ವಿಷಯವಾಗಿಯೂ ವಿಚಾರಿಸಿದನು. 20 ಅದಕ್ಕೆ ಯೇಸು, “ನಾನು ಬಹಿರಂಗವಾಗಿ ಲೋಕದ ಮುಂದೆ ಮಾತನಾಡಿದ್ದೇನೆ. ಯೆಹೂದ್ಯರೆಲ್ಲರು ಕೂಡಿ ಬರುವ ಸಭಾಮಂದಿರಗಳಲ್ಲಿಯೂ, ದೇವಾಲಯದಲ್ಲಿಯೂ ನಾನು ಯಾವಾಗಲೂ ಉಪದೇಶಿಸಿದ್ದೇನೆ, ಗುಪ್ತವಾಗಿ ಯಾವುದನ್ನೂ ನಾನು ಮಾತನಾಡಲಿಲ್ಲ. 21  ನೀನು ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತನಾಡಿದೆನೋ ಅದನ್ನು ಕೇಳಿದವರನ್ನೇ ವಿಚಾರಿಸು. ನಾನು ಹೇಳಿದ್ದನ್ನು ಅವರು ತಿಳಿದಿದ್ದಾರೆ” ಎಂದು ಉತ್ತರಕೊಟ್ಟನು. 22 ಯೇಸು ಈ ಮಾತನ್ನು ಹೇಳಿದಾಗ ಹತ್ತಿರ ನಿಂತಿದ್ದ ಕಾವಲಾಳುಗಳಲ್ಲಿ ಒಬ್ಬನು ತನ್ನ ಕೈಯಿಂದ ಯೇಸುವಿನ ಕೆನ್ನೆಗೆ ಹೊಡೆದು, “ನೀನು ಮಹಾಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯೋ?” ಎಂದನು. 23 ಯೇಸು ಅವನಿಗೆ “ನಾನು ಏನಾದರೂ ತಪ್ಪನ್ನು ಮಾತನಾಡಿದ್ದರೆ, ಆ ತಪ್ಪಿನ ವಿಷಯವಾಗಿ ಸಾಕ್ಷಿಕೊಡು; ಸತ್ಯವಾಗಿದ್ದರೆ ಏಕೆ ಹೊಡೆಯುತ್ತೀ?” ಎಂದು ಕೇಳಿದನು. 24  §ಆಗ ಅನ್ನನು ಆತನನ್ನು ಇನ್ನೂ ಕಟ್ಟಿರಲಾಗಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು. 25 ಇತ್ತ, ಸೀಮೋನ್ ಪೇತ್ರನು ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಾ ಇದ್ದನು. ಆಗ ಅಲ್ಲಿದ್ದವರು ಅವನನ್ನು, “ನೀನು ಸಹ ಆತನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಕೇಳಲು, ಅವನು ಅದನ್ನು ನಿರಾಕರಿಸಿ, “ನಾನಲ್ಲ” ಎಂದನು. 26 ಮಹಾಯಾಜಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧುವಾಗಿದ್ದ ಒಬ್ಬನು, ಪೇತ್ರನಿಗೆ, “ನಾನು ನಿನ್ನನ್ನು ತೋಟದಲ್ಲಿ ಆತನ ಜೊತೆಯಲ್ಲಿ ನೋಡಿದೆನಲ್ಲವೇ?” ಎಂದನು. 27 ಅದಕ್ಕೆ ಪೇತ್ರನು ಪುನಃ ನಿರಾಕರಿಸಿ “ನಾನಲ್ಲ” ಎಂದನು. ಆಗ ಕೂಡಲೇ ಕೋಳಿ ಕೂಗಿತು.
ಪಿಲಾತನು ಯೇಸುವನ್ನು ವಿಚಾರಿಸಿ ಆತನಿಗೆ ಮರಣ ದಂಡನೆಯನ್ನು ವಿಧಿಸಿದ್ದು
ಮತ್ತಾ 27:2,11-26; ಮಾರ್ಕ 15:1-15; ಲೂಕ 23:1-25
28 ಮುಂಜಾನೆ ಅವರು ಯೇಸುವನ್ನು ಕಾಯಫನ ಬಳಿಯಿಂದ *ಅರಮನೆಗೆ ಕರೆದುಕೊಂಡು ಹೋದರು. ಅವರು ತಮಗೆ ಮೈಲಿಗೆಯಾಗಿ ಪಸ್ಕದ ಊಟ ಮಾಡುವುದಕ್ಕೆ ಅಡ್ಡಿಯಾದೀತೆಂದು ಅರಮನೆಯ ಒಳಗೆ ಹೋಗಲಿಲ್ಲ. 29 ಹೀಗಿರಲಾಗಿ ಪಿಲಾತನು ಹೊರಗೆ ಅವರ ಬಳಿಗೆ ಬಂದು, “ಈ ಮನುಷ್ಯನ ಮೇಲೆ ಏನು ದೂರು ತಂದಿದ್ದೀರಿ?” ಎಂದು ಕೇಳಿದನು. 30 ಯೆಹೂದ್ಯರು ಅವನಿಗೆ, “ಈತನು ದುಷ್ಕರ್ಮಿಯಲ್ಲದಿದ್ದರೆ ನಾವು ಈತನನ್ನು ನಿನಗೆ ಒಪ್ಪಿಸಿ ಕೊಡುತ್ತಿರಲಿಲ್ಲ” ಎಂದು ಉತ್ತರಕೊಟ್ಟರು. 31 ಆಗ ಪಿಲಾತನು ಅವರಿಗೆ, “ನೀವೇ ಆತನನ್ನು ತೆಗೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ಆತನಿಗೆ ತೀರ್ಪು ಮಾಡಿರಿ” ಎಂದು ಹೇಳಿದನು. ಅದಕ್ಕೆ ಯೆಹೂದ್ಯರು, “ಮರಣ ದಂಡನೆಯನ್ನು ವಿಧಿಸುವ ಅಧಿಕಾರವು ನಮಗೆ ಇಲ್ಲ” ಎಂದರು. 32  ಇದರಿಂದ ಯೇಸು ತಾನು ಎಂಥಾ ಮರಣವನ್ನು ಹೊಂದುವನೆಂದು ಸೂಚಿಸಿ ಹೇಳಿದ ಮಾತು ನೆರವೇರಿತು.
33 ಆಗ ಪಿಲಾತನು ಪುನಃ ಅರಮನೆಯೊಳಗೆ ಹೋಗಿ ಯೇಸುವನ್ನು ಕರೆದು ಆತನಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. 34 ಯೇಸು, “ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ? ಇಲ್ಲವೇ ಬೇರೆಯವರು ನನ್ನ ವಿಷಯದಲ್ಲಿ ನಿನಗೆ ಹೇಳಿದ್ದಾರೋ?” ಎಂದನು. 35 ಪಿಲಾತನು, “ನಾನೇನು ಯೆಹೂದ್ಯನೋ? ನಿನ್ನ ಸ್ವಂತ ಜನಾಂಗವೂ, ಮುಖ್ಯಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ. ನೀನು ಏನು ಮಾಡಿದ್ದೀಯಾ?” ಎಂದು ಕೇಳಿದ್ದಕ್ಕೆ, 36 ಯೇಸು, “ನನ್ನ ರಾಜ್ಯವು ಈ ಲೋಕದ್ದಲ್ಲ. ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಗೆ ಒಪ್ಪಿಸಲ್ಪಡದಂತೆ ನನ್ನ ಸೇವಕರು ನನ್ನ ಪರವಾಗಿ ಹೋರಾಡುತ್ತಿದ್ದರು, ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ” ಎಂದು ಉತ್ತರಕೊಟ್ಟನು. 37 ಅದಕ್ಕೆ ಪಿಲಾತನು, “ಹಾಗಾದರೆ ನೀನು ಅರಸನೋ?” ಎಂದನು. ಯೇಸು, “ನನ್ನನ್ನು ಅರಸನೆಂದು ನೀನೇ ಹೇಳುತ್ತೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಕೊಡುವುದಕ್ಕಾಗಿ ಹುಟ್ಟಿದವನು, ಇದಕ್ಕಾಗಿಯೇ ಲೋಕಕ್ಕೆ ಬಂದಿದ್ದೇನೆ. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನು ನನ್ನ ಸ್ವರವನ್ನು ಕೇಳುತ್ತಾನೆ” ಎಂದು ಉತ್ತರಕೊಟ್ಟನು. 38 ಪಿಲಾತನು, “ಸತ್ಯ ಎಂದರೇನು?” ಎಂದನು. ಇದನ್ನು ಹೇಳಿ ಪಿಲಾತನು ಪುನಃ ಯೆಹೂದ್ಯರ ಬಳಿ ಹೊರಗೆ ಬಂದು, “ನನಗೆ ಈತನಲ್ಲಿ ಯಾವ ಅಪರಾಧವೂ ಕಾಣುತ್ತಿಲ್ಲ. 39 ಆದರೆ ಪಸ್ಕ ಹಬ್ಬದಲ್ಲಿ ನಾನು ನಿಮಗೆ ಒಬ್ಬನನ್ನು ಬಿಟ್ಟು ಕೊಡುವ ಪದ್ಧತಿ ಉಂಟಷ್ಟೆ. ಆದಕಾರಣ ನಾನು ಯೆಹೂದ್ಯರ ಅರಸನನ್ನು ಬಿಟ್ಟು ಕೊಡುವುದು ನಿಮಗೆ ಇಷ್ಟವೋ?” ಎಂದು ಅವರನ್ನು ಕೇಳಿದನು. 40 ಅದಕ್ಕೆ ಅವರೆಲ್ಲರೂ, “ಆತನನ್ನು ಬೇಡ ನಮಗೆ ಬರಬ್ಬನನ್ನು ಬಿಟ್ಟುಕೊಡಬೇಕು” ಎಂದು ಪುನಃ ಕೂಗಿಕೊಂಡರು. ಈ ಬರಬ್ಬನು ದರೋಡೆಗಾರನಾಗಿದ್ದನು.
* 18:4 18:4 ಯೋಹಾ 13:1: 18:9 18:9 ಯೋಹಾ 17:12: 18:11 18:11 ಕತ್ತಿಯ ಕೋಶ, ಅಥವಾ, ಕತ್ತಿಯನ್ನು ಇಡಲು ಚರ್ಮದಿಂದ ಮಾಡಿದ ಚೀಲ. § 18:11 18:11 ಮತ್ತಾ 20:22; 26:42; ಮಾರ್ಕ 14:36; ಲೂಕ 22:42: * 18:12 18:12 ಅಥವಾ, ಸೈನ್ಯಾಧಿಕಾರಿ. 18:12 18:12 ಅಥವಾ, ಕಾವಲಾಳುಗಳೂ. 18:14 18:14 ಯೋಹಾ 11:5 0. § 18:24 18:24 ಯೋಹಾ 18:13; ಮತ್ತಾ 26:57: * 18:28 18:28 ಅಥವಾ, ರಾಜ್ಯಪಾಲನ ನಿವಾಸಕ್ಕೆ. 18:28 18:28 ಅಥವಾ, ಅಶುದ್ಧವಾದ, ಮಡಿಗೆಟ್ಟು. 18:32 18:32 ಯೋಹಾ 12:32,33; ಮತ್ತಾ 20:19; 26:2; ಮಾರ್ಕ 10:33; ಲೂಕ 18:32: