22
ಯೆಹೂದದ ಅರಸರ ವಿಷಯವಾದ ದೈವೋಕ್ತಿಗಳು
1 ಯೆಹೋವನು ನನಗೆ ಹೀಗೆ ಅಪ್ಪಣೆಕೊಟ್ಟನು, “ನೀನು ಯೆಹೂದದ ಅರಸನ ಮನೆಗೆ ಇಳಿದು ಹೋಗಿ ಈ ಮಾತನ್ನು ಅಲ್ಲಿ ಹೇಳು,
2 ದಾವೀದನ ಸಿಂಹಾಸನರೂಢನಾದ ಯೆಹೂದದ ಅರಸನೇ, ಯೆಹೋವನ ಮಾತನ್ನು ಕೇಳು; ನಿನ್ನ ಸೇವಕರೂ ಮತ್ತು ಈ ಬಾಗಿಲುಗಳಲ್ಲಿ ಸೇರುವ ನಿನ್ನ ಪ್ರಜೆಗಳೂ ಕೇಳಲಿ.
3 ಯೆಹೋವನು, ನೀತಿ, ನ್ಯಾಯಗಳನ್ನು ಆಚರಿಸಿರಿ, ಸುಲಿಗೆಯಾದವನನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ. ವಿದೇಶಿ, ಅನಾಥ, ವಿಧವೆ ಇವರಿಗೆ ಯಾವ ಅನ್ಯಾಯವನ್ನೂ ಮತ್ತು ಹಿಂಸೆಯನ್ನೂ ಮಾಡಬೇಡಿರಿ; ನಿರ್ದೋಷಿಯ ರಕ್ತವನ್ನು ಈ ಸ್ಥಳದಲ್ಲಿ ಸುರಿಸಬೇಡಿರಿ” ಎಂದು ಹೇಳುತ್ತಾನೆ.
4 “ನೀವು ಈ ಆಜ್ಞೆಗಳನ್ನು ಮನಃಪೂರ್ವಕವಾಗಿ ಕೈಗೊಂಡರೆ ದಾವೀದನ ಸಿಂಹಾಸನಾರೂಢರಾದ ಅರಸರು ರಥಾಶ್ವಗಳನ್ನೇರಿದವರಾಗಿ ತಮ್ಮ ಸೇವಕರೊಡನೆಯೂ, ಪ್ರಜೆಗಳೊಡನೆಯೂ ಈ ಅರಮನೆಯ ಬಾಗಿಲುಗಳಲ್ಲಿ ಪ್ರವೇಶಿಸುವರು.
5 ನೀವು ಈ ಮಾತುಗಳನ್ನು ಕೇಳದಿದ್ದರೆ ಈ ಅರಮನೆಯು ಹಾಳುಬೀಳುವುದು ಎಂದು ನನ್ನ ಮೇಲೆ ಆಣೆಯಿಡುತ್ತೇನೆ ಇದು ಯೆಹೋವನ ನುಡಿ” ಎಂಬುದೇ.
6 ಯೆಹೋವನು ಯೆಹೂದದ ಅರಸನ ಮನೆತನವನ್ನು ಕುರಿತು ಹೀಗೆನ್ನುತ್ತಾನೆ,
“ನೀನು ನನ್ನ ದೃಷ್ಟಿಯಲ್ಲಿ ಗಿಲ್ಯಾದಿನಂತೆಯೂ, ಲೆಬನೋನಿನ ಶಿಖರದ ಹಾಗೂ ಇದ್ದಿ,
ಆದರೂ ನಾನು ನಿನ್ನನ್ನು ಮರುಭೂಮಿಯನ್ನಾಗಿಯೂ ಮತ್ತು ನಿರ್ಜನ ಪಟ್ಟಣವನ್ನಾಗಿಯೂ ಮಾಡುವುದು ಖಂಡಿತ.
7 ಆಯುಧ ಸನ್ನದ್ಧರಾದ ಸಂಹಾರಕರನ್ನು ನಿನ್ನ ವಿರುದ್ಧವಾಗಿ ಸಿದ್ಧಪಡಿಸುವೆನು; ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಕಡಿದು ಬೆಂಕಿಯಲ್ಲಿ ಹಾಕುವರು.
8 ಅನೇಕ ಜನಾಂಗಗಳವರು ಈ ಪಟ್ಟಣದ ಮಾರ್ಗವಾಗಿ ಹೋಗುತ್ತಾ, ‘ಯೆಹೋವನು ಈ ಮಹಾ ಪಟ್ಟಣಕ್ಕೆ ಏಕೆ ಹೀಗೆ ಮಾಡಿದನು?’ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ,
9 ‘ಈ ಪಟ್ಟಣದವರು ತಮ್ಮ ದೇವರಾದ ಯೆಹೋವನ ಒಡಂಬಡಿಕೆಯನ್ನು ನಿರಾಕರಿಸಿ, ಅನ್ಯದೇವತೆಗಳನ್ನು ಪೂಜಿಸಿ ಸೇವಿಸಿದ್ದರಿಂದಲೇ ಇದಕ್ಕೆ ಈ ಗತಿಯಾಯಿತು’ ಎಂದು ಅಂದುಕೊಳ್ಳುವರು.”
ಅರಸನಾದ ಶಲ್ಲೂಮನು
10 ಸತ್ತವನಿಗಾಗಿ ಅಳಬೇಡಿರಿ, ಗೋಳಾಡಬೇಡಿರಿ;
ಸೆರೆಯಾದವನಿಗಾಗಿ ಬಿಕ್ಕಿಬಿಕ್ಕಿ ಅಳಿರಿ; ಅವನು ಇನ್ನು ಹಿಂದಿರುಗನು, ಜನ್ಮಭೂಮಿಯನ್ನು ನೋಡನು.
11 ಯೆಹೂದದ ಅರಸನಾದ ಯೋಷೀಯನ ತರುವಾಯ ಪಟ್ಟಕ್ಕೆ ಬಂದವನೂ ಇಲ್ಲಿಂದ ಸೆರೆಯಾಗಿ ಹೋದವನೂ ಆದ ಶಲ್ಲೂಮನ ವಿಷಯವಾಗಿ ಯೆಹೋವನು ಹೇಳುವುದೇನೆಂದರೆ, “ಅವನು ಇಲ್ಲಿಗೆ ಇನ್ನು ಹಿಂದಿರುಗಿ ಬಾರನು.
12 ಅವನನ್ನು ಎಲ್ಲಿಗೆ ಸೆರೆಯೊಯ್ದರೋ ಅಲ್ಲೇ ಸಾಯುವನು, ಈ ದೇಶವನ್ನು ಇನ್ನು ಕಾಣನು” ಎಂಬುದೇ.
ಅರಸನಾದ ಯೆಹೊಯಾಕೀಮನು
13 ತನ್ನ ಅರಮನೆಯನ್ನು ದುರ್ನೀತಿಯಿಂದಲೂ, ಮಹಡಿಗಳನ್ನು ಅನ್ಯಾಯದಿಂದಲೂ ಕಟ್ಟಿಸಿಕೊಳ್ಳುವವನ ಗತಿಯನ್ನು ಏನು ಹೇಳಲಿ!
ಕೂಲಿಕೊಡದೆ ನೆರೆಯವನಿಂದ ಬಿಟ್ಟಿಕೆಲಸವನ್ನು ಮಾಡಿಸಿ,
14 ಆಹಾ, “ನಾನು ವಿಸ್ತಾರವಾದ ಅರಮನೆಯನ್ನೂ ವಿಶಾಲವಾದ ಮಹಡಿಗಳನ್ನೂ ಕಟ್ಟಿಸಿಕೊಳ್ಳುವೆನು” ಎಂದು ಹೇಳಿ,
ಅಗಲಗಲವಾದ ಕಿಟಕಿಗಳನ್ನಿಡಿಸಿ, ಒಳಗೆ ಗೋಡೆಗೆಲ್ಲಾ ದೇವದಾರಿನ ಹಲಗೆಗಳನ್ನು ಹೊದಿಸಿ, ಕಿರಿಮಂಜಿಯ ಬಣ್ಣವನ್ನು ಬಳಿಸಿಕೊಳ್ಳುವವನ ಪಾಡನ್ನು ಏನು ಹೇಳಲಿ!
15 ನೀನು ದೇವದಾರುವಿನ ಕೆಲಸದಲ್ಲಿ ಸ್ಪರ್ಧಿಸುವುದರಿಂದಲೇ ಆಳತಕ್ಕವನಾಗಿದ್ದೀಯೋ?
ನಿನ್ನ ತಂದೆಯು ಎಷ್ಟೇ ಉಂಡು ಕುಡಿದರೂ ನೀತಿ ನ್ಯಾಯಗಳನ್ನಂತು ಕೈಕೊಳ್ಳುತ್ತಿದ್ದನು; ಆಗ ಅವನಿಗೆ ನೆಮ್ಮದಿಯಾಗಿತ್ತು.
16 ದೀನದರಿದ್ರರ ವ್ಯಾಜ್ಯವನ್ನು ತೀರಿಸುತ್ತಿದ್ದನು; ಆಗ ಸುಖವಾಗಿತ್ತು. ನನ್ನನ್ನು ಅರಿಯುವುದೆಂದರೆ ಇದೇ ಎಂಬುದು ಯೆಹೋವನ ನುಡಿ.
17 ಆದರೆ ನಿರ್ದೋಷಿಗಳ ರಕ್ತವನ್ನು ಸುರಿಸುವುದು, ದೋಚಿಕೊಳ್ಳುವುದು, ಹಿಂಸಿಸುವುದು, ಜಜ್ಜುವುದು, ಇವುಗಳನ್ನು ಮಾಡುವುದರಲ್ಲಿಯೇ ನಿನ್ನ ದೃಷ್ಟಿಯೂ, ನಿನ್ನ ಮನಸ್ಸೂ ನೆಲೆಗೊಂಡಿವೆ.
18 ಆದಕಾರಣ ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ವಿಷಯವಾಗಿ ಯೆಹೋವನು.
“ಅಯ್ಯೋ ಅಣ್ಣಾ, ಅಯ್ಯೋ ಅಕ್ಕಾ ಎಂದು ಗೋಳಾಡುವಂತೆ ಇವನಿಗಾಗಿ ಯಾರೂ ಗೋಳಾಡುವುದಿಲ್ಲ; ಅಯ್ಯೋ ನಮ್ಮೊಡೆಯಾ, ಅಯ್ಯೋ, ದೊರೆಯ ಮಹಿಮೆಯೇ ಎಂದು ಇವನಿಗಾಗಿ ಯಾರೂ ಪ್ರಲಾಪಿಸರು.
19 ಇವನನ್ನು ಯೆರೂಸಲೇಮಿನ ಬಾಗಿಲುಗಳ ಹೊರಗೆ ಕತ್ತೆಯಂತೆ ಎಳೆದು ಬಿಸಾಡಿ ಮಣ್ಣುಪಾಲು ಮಾಡುವರು” ಎನ್ನುತ್ತಾನೆ.
20 ಚೀಯೋನ್ ಯುವತಿಯೇ, ಲೆಬನೋನ್ ಪರ್ವತವನ್ನು ಹತ್ತಿ ಕೂಗಿಕೋ!
ಬಾಷಾನಿನಲ್ಲಿ ಮೊರೆಯಿಡು, ಅಬಾರೀಮಿನಲ್ಲಿ ಅರಚಿಕೋ! ನಿನ್ನೊಂದಿಗೆ ವ್ಯಭಿಚಾರ ಮಾಡಿದವರೆಲ್ಲಾ ಹಾಳಾಗಿ ಹೋದರಲ್ಲಾ.
21 ನಾನು ನೆಮ್ಮದಿಯಲ್ಲಿ ನಿನ್ನೊಡನೆ ಮಾತನಾಡಿದಾಗ “ನಾನು ಕೇಳುವುದಿಲ್ಲ” ಎಂದು ನೀನು ಹೇಳಿದಿ. ನನ್ನ ಮಾತನ್ನು ಕೇಳದಿರುವುದು ನಿನಗೆ ಬಾಲ್ಯದಿಂದಲೇ ಅಭ್ಯಾಸ.
22 ನಿನ್ನನ್ನು ಅಟ್ಟಿಕೊಂಡು ಹೋಗುವ ಕುರುಬರನ್ನು ಗಾಳಿಯು ಅಟ್ಟಿಬಿಡುವುದು.
ನಿನ್ನೊಂದಿಗೆ ವ್ಯಭಿಚಾರ ಮಾಡಿದವರು ಸೆರೆಹೋಗುವರು; ಆಗ ನಿನ್ನ ಸಕಲ ದುಷ್ಕೃತ್ಯಗಳ ನಿಮಿತ್ತ ನೀನು ಆಶಾಭಂಗಪಟ್ಟು ಅವಮಾನಕ್ಕೀಡಾಗುವುದು ಖಂಡಿತ.
23 ಲೆಬನೋನಿನಲ್ಲಿ ವಾಸಿಸುವವಳೇ, ದೇವದಾರುಗಳಲ್ಲಿ ಗೂಡು ಮಾಡಿಕೊಂಡಿರುವವಳೇ, ಪ್ರಸವವೇದನೆಯಂತಿರುವ ಸಂಕಟವು ನಿನಗೆ ಸಂಭವಿಸುವಾಗ ನಿನ್ನ ಸ್ಥಿತಿಯು ಎಷ್ಟೋ ದುಃಖಕರವಾಗಿರುವುದು!
24 ಯೆಹೋವನು ಹೀಗೆನ್ನುತ್ತಾನೆ, “ನನ್ನ ಜೀವದಾಣೆ, ಯೆಹೋಯಾಕೀಮನ ಮಗನೂ ಯೆಹೂದದ ಅರಸನೂ ಆದ ಕೊನ್ಯನೆಂಬ ನೀನು ನನ್ನ ಬಲಗೈಯ ಮುದ್ರೆಯುಂಗರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತುಹಾಕುತ್ತಿದ್ದೆನು!
25 ನಿನ್ನ ಪ್ರಾಣವನ್ನು ಹುಡುಕಿ ನಿನ್ನಲ್ಲಿ ಭಯವನ್ನು ಹುಟ್ಟಿಸುವವರ ಕೈಗೆ ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಮತ್ತು ಕಸ್ದೀಯರ ಕೈಗೆ ಕೊಟ್ಟುಬಿಡುವೆನು.
26 ನಿನ್ನನ್ನೂ ಮತ್ತು ನಿನ್ನ ಹೆತ್ತ ತಾಯಿಯನ್ನೂ ಜನ್ಮಭೂಮಿಯಲ್ಲದ ಅನ್ಯದೇಶಕ್ಕೆ ಎಸೆದುಬಿಡುವೆನು; ಅಲ್ಲೇ ಸಾಯುವಿರಿ.
27 ಹಿಂದಿರುಗಬೇಕೆಂದು ಹಂಬಲಿಸುವ ದೇಶಕ್ಕೆ ಅವರು ಹಿಂದಿರುಗುವುದೇ ಇಲ್ಲ” ಎಂಬುದೇ.
28 ಕೊನ್ಯನೆಂಬ ಈ ಮನುಷ್ಯನು ಬಿಸಾಡಿದ ಒಡಕು ಕುಡಿಕೆಯೋ? ಯಾರಿಗೂ ಇಷ್ಟವಿಲ್ಲದ ಮಣ್ಣಿನ ಮಡಿಕೆಯೋ? ಎಂಬಂತೆ,
ಅವನೂ ಅವನ ಸಂತತಿಯವರೂ ಏಕೆ ಬಿಸಾಡಲ್ಪಟ್ಟಿದ್ದಾರೆ?
ನೋಡದ ದೇಶಕ್ಕೆ ಏಕೆ ಎಸೆಯಲ್ಪಟ್ಟಿದ್ದಾರೆ?
29 ದೇಶವೇ, ದೇಶವೇ, ದೇಶವೇ ಯೆಹೋವನ ಮಾತನ್ನು ಕೇಳು!
30 ಯೆಹೋವನು, “ಇವನನ್ನು ಮಕ್ಕಳಿಲ್ಲದವನು, ವ್ಯರ್ಥಜನ್ಮದವನು ಎಂದು ಪಟ್ಟಿಯಲ್ಲಿ ಬರೆಯಿರಿ;
ಇವನ ಸಂತಾನದಲ್ಲಿ ಇನ್ನು ಮೇಲೆ ಯಾರೂ ದಾವೀದನ ಸಿಂಹಾಸನದಲ್ಲಿ ಕುಳಿತು ಯೆಹೂದವನ್ನು ಆಳಿ ಬಾಳನು” ಎಂದು ಹೇಳುತ್ತಾನೆ.