25
ಯೆಹೂದ್ಯರ ದ್ರೋಹ
ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ, ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ, ಪ್ರವಾದಿಯಾದ ಯೆರೆಮೀಯನು ಯೆಹೂದ್ಯರೆಲ್ಲರ ವಿಷಯವಾಗಿ ತನಗೆ ಉಂಟಾದ ಈ ದೈವೋಕ್ತಿಯನ್ನು ಸಕಲ ಯೆಹೂದ್ಯರಿಗೂ ಸಮಸ್ತ ಯೆರೂಸಲೇಮಿನವರಿಗೂ ಸಾರಿದನು.
ಆತನು, “ಆಮೋನನ ಮಗನೂ ಯೆಹೂದದ ಅರಸನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರ್ಷದಿಂದ ಈ ದಿನದವರೆಗೆ, ಇಪ್ಪತ್ತಮೂರು ವರ್ಷಗಳಿಂದಲೂ ಯೆಹೋವನು ತನ್ನ ವಾಕ್ಯವನ್ನು ನನಗೆ ದಯಪಾಲಿಸಿದ್ದಾನೆ; ಅದನ್ನು ನಿಮಗೆ ಪ್ರಕಟಿಸುತ್ತಲೇ ಬಂದಿದ್ದೇನೆ; ಆದರೆ ನೀವು ಅದಕ್ಕೆ ಕಿವಿಗೊಡಲಿಲ್ಲ. ಯೆಹೋವನು ತನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ತಪ್ಪದೆ ಕಳುಹಿಸುತ್ತಿದ್ದರೂ ನೀವು ಕೇಳಲಿಲ್ಲ, ಕಿವಿಗೊಡಲೂ ಇಲ್ಲ. ಆತನು ನಿಮಗೆ ಹೇಳಿದ ಮಾತೇನೆಂದರೆ, ‘ನೀವೆಲ್ಲರು ನಿಮ್ಮ ನಿಮ್ಮ ದುರ್ಮಾರ್ಗದಿಂದಲೂ ಮತ್ತು ದುಷ್ಕೃತ್ಯಗಳಿಂದಲೂ ಹಿಂದಿರುಗಿರಿ. ನಿಮಗೆ ಶಾಶ್ವತ ಸ್ವತ್ತಾಗಿರಲಿ ಎಂದು ಯೆಹೋವನು ಪುರಾತನ ಕಾಲದಲ್ಲಿ ನಿಮಗೂ ಮತ್ತು ನಿಮ್ಮ ಪೂರ್ವಿಕರಿಗೂ ಅನುಗ್ರಹಿಸಿದ ದೇಶದೊಳಗೆ ನೆಲೆಗೊಳ್ಳಿರಿ. ಅನ್ಯದೇವತೆಗಳನ್ನು ಹಿಂಬಾಲಿಸಿ, ಸೇವಿಸಿ ಪೂಜಿಸಬೇಡಿರಿ; ನಿಮ್ಮ ಕೈಕೆಲಸದ ಬೊಂಬೆಗಳಿಂದ ನನ್ನನ್ನು ರೇಗಿಸಬೇಡಿರಿ; ಹೀಗಾದರೆ ನಾನು ನಿಮಗೆ ಯಾವ ಕೇಡನ್ನೂ ಮಾಡುವುದಿಲ್ಲ’ ಎಂಬುದೇ. ಆದರೆ ನೀವು ನನ್ನ ಕಡೆಗೆ ಕಿವಿಗೊಡದೆ, ನಿಮ್ಮ ಕೈಕೆಲಸದ ಬೊಂಬೆಗಳಿಂದ ನನ್ನನ್ನು ಕೆಣಕಿ ನಿಮಗೆ ನೀವೇ ಕೇಡನ್ನು ತಂದುಕೊಂಡಿದ್ದೀರಿ” ಎಂದು ಹೇಳಿದನು.
ಎಪ್ಪತ್ತು ವರ್ಷಗಳ ಸೆರೆ
ಹೀಗಿರಲು ಸೇನಾಧೀಶ್ವರನಾದ ಯೆಹೋವನ ಈ ನುಡಿಯನ್ನು ಕೇಳಿರಿ, “ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ, ನಾನು ಉತ್ತರ ದಿಕ್ಕಿನ ಜನಾಂಗಗಳನ್ನೆಲ್ಲಾ ಕರೆಯಿಸಿ, ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನು ಬರಮಾಡುವೆನು. ಇವರೆಲ್ಲರನ್ನು ಈ ದೇಶದ ಮೇಲೂ, ಇದರ ನಿವಾಸಿಗಳ ಮೇಲೂ ಸುತ್ತಲಿನ ಸಕಲ ಜನಾಂಗಗಳ ಮೇಲೂ ಬೀಳಿಸಿ, ಅವುಗಳನ್ನು ತುಂಬಾ ಹಾಳುಗೈದು, ಪರಿಹಾಸ್ಯಕ್ಕೂ, ನಿತ್ಯನಾಶನಕ್ಕೂ ಈಡುಮಾಡುವೆನು. 10 ಇದಲ್ಲದೆ ನಾನು ಅವುಗಳಲ್ಲಿ ಹರ್ಷಸಂಭ್ರಮಗಳ ಧ್ವನಿಯನ್ನೂ, ವಧೂವರರ ಸ್ವರವನ್ನೂ, ಬೀಸುವ ಕಲ್ಲಿನ ಶಬ್ದವನ್ನೂ, ದೀಪದ ಬೆಳಕನ್ನೂ ನಿಲ್ಲಿಸಿಬಿಡುವೆನು. 11 ಈ ದೇಶವೆಲ್ಲಾ ಹಾಳಾಗಿ ಬೆರಗಿಗೆ ಈಡಾಗುವುದು; ಮತ್ತು ಈ ಜನಾಂಗಗಳು ಎಪ್ಪತ್ತು ವರ್ಷ ಬಾಬೆಲಿನ ಅರಸನ ಅಡಿಯಾಳಾಗಿ ಬಿದ್ದಿರುವವು. 12 ಎಪ್ಪತ್ತು ವರ್ಷಗಳ ತರುವಾಯ ನಾನು ಬಾಬೆಲಿನ ಅರಸನನ್ನೂ, ಕಸ್ದೀಯರ ದೇಶವನ್ನೂ, ಆ ಜನಾಂಗದವರನ್ನೂ ಅವರ ದ್ರೋಹಕ್ಕಾಗಿ ದಂಡಿಸಿ, ಆ ದೇಶವನ್ನು ನಿತ್ಯನಾಶನಕ್ಕೆ ಗುರಿಮಾಡುವೆನು. ಇದು ಯೆಹೋವನ ನುಡಿ. 13 ನಾನು ಆ ದೇಶದ ವಿಷಯದಲ್ಲಿ ನುಡಿದದ್ದನ್ನೆಲ್ಲಾ ಅಂದರೆ ಯೆರೆಮೀಯನು ಸಕಲ ಜನಾಂಗಗಳ ವಿಷಯವಾಗಿ ಮಾಡಿರುವ ಈ ಪ್ರವಾದನೆಗಳ ಗ್ರಂಥದಲ್ಲಿ ಬರೆದದ್ದನ್ನೆಲ್ಲಾ ಅದರ ಮೇಲೆ ಬರಮಾಡುವೆನು. 14 ಅನೇಕ ಜನಾಂಗಗಳೂ ಮತ್ತು ಮಹಾರಾಜರೂ ಅವರನ್ನೇ ಅಡಿಯಾಳಾಗಿ ಮಾಡಿಕೊಳ್ಳುವರು; ಅವರ ಕೃತ್ಯಗಳಿಗೂ ಮತ್ತು ಕೈಕೆಲಸಗಳಿಗೂ ತಕ್ಕಂತೆ ಅವರಿಗೆ ಮುಯ್ಯಿತೀರಿಸುವೆನು” ಎಂಬುದೇ.
ಯೆಹೋವನು ವಿಧಿಸುವ ದುರ್ಗತಿ
15 ಇಸ್ರಾಯೇಲರ ದೇವರಾದ ಯೆಹೋವನು ನನಗೆ, “ರೋಷರೂಪ ಮದ್ಯದ ಈ ಪಾತ್ರೆಯನ್ನು ನೀನು ನನ್ನ ಕೈಯಿಂದ ತೆಗೆದುಕೊಂಡು ಯಾವ ಜನಾಂಗಗಳ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೋ ಆ ಸಕಲ ಜನಾಂಗಗಳು ಇದರಲ್ಲಿ ಕುಡಿಯುವಂತೆ ಮಾಡು. 16 ನಾನು ಅವರಲ್ಲಿಗೆ ಖಡ್ಗವನ್ನು ಕಳುಹಿಸುವೆನು. ಆ ನನ್ನ ರೋಷವನ್ನು ಅವರು ಕುಡಿದು ಓಲಾಡುವರು, ಹುಚ್ಚುಚ್ಚಾಗುವರು” ಎಂದು ಅಪ್ಪಣೆಕೊಟ್ಟನು. 17 ಆಗ ನಾನು ಯೆಹೋವನ ಕೈಯಿಂದ ಆ ಪಾತ್ರೆಯನ್ನು ತೆಗೆದುಕೊಂಡು ಯೆಹೋವನು ಯಾವ ಜನಾಂಗಗಳ ಬಳಿಗೆ ನನ್ನನ್ನು ಕಳುಹಿಸಿದನೋ, ಆ ಸಕಲ ಜನಾಂಗಗಳು ಅದರಲ್ಲಿ ಕುಡಿಯುವಂತೆ ಮಾಡಿದೆನು. 18 ಅದನ್ನು ಯೆರೂಸಲೇಮಿಗೂ, ಯೆಹೂದದ ಪಟ್ಟಣಗಳಿಗೂ, ಅರಸರಿಗೂ ಮತ್ತು ಪ್ರಧಾನರಿಗೂ ಕುಡಿಸಿದೆನು. ಇದರಿಂದ ಅವರು ಹಾಳಾಗಿ ಪರಿಹಾಸ್ಯಕ್ಕೂ ಮತ್ತು ಶಾಪಕ್ಕೂ ಗುರಿಯಾಗುವುದಕ್ಕೆ ಆಸ್ಪದವಾಯಿತು. 19 ಅದು ಈ ದಿನ ನೆರವೇರಿದೆ. ಇದರೊಂದಿಗೆ ಐಗುಪ್ತದ ಅರಸನಾದ ಫರೋಹನು, ಅವನ ಸೇವಕರು, ಪ್ರಧಾನರು, ಅವನ ಎಲ್ಲಾ ಜನರು, 20 ಬಗೆಬಗೆಯ ಎಲ್ಲಾ ವಿದೇಶೀಯರು, ಊಚ್ ದೇಶದ ಎಲ್ಲಾ ಅರಸರು, ಫಿಲಿಷ್ಟಿಯ ದೇಶದ ಎಲ್ಲಾ ಅರಸರು, ಅಷ್ಕೆಲೋನ್, ಗಾಜಾ, ಎಕ್ರೋನ್, ಹಾಳಾಗದೆ ಉಳಿದ ಸ್ವಲ್ಪ ಅಷ್ಡೋದ್, 21 ಎದೋಮ್ಯರು, ಮೋವಾಬ್ಯರು, ಅಮ್ಮೋನ್ಯರು, 22 ತೂರಿನ ಎಲ್ಲಾ ಅರಸರು, ಚೀದೋನಿನ ಎಲ್ಲಾ ಅರಸರು, ಸಮುದ್ರದ ಆಚೆಯ ಕರಾವಳಿಯ ಅರಸರು, 23 ದೆದಾನ್ಯರು, ತೇಮಾ ದೇಶದವರು, ಬೂಜ್ ದೇಶದವರು, ಚಂಡಿಕೆ ಬಿಟ್ಟುಕೊಂಡಿರುವವರೆಲ್ಲರು, 24 ಅರಬಿಯದ ಎಲ್ಲಾ ಅರಸರು, ಅರಣ್ಯವಾಸಿಗಳಾದ ಮಿಶ್ರಜಾತಿಯವರ ಎಲ್ಲಾ ಅರಸರು, 25 ಜಿಮ್ರಿಯ ಎಲ್ಲಾ ಅರಸರು, ಏಲಾಮಿನ ಎಲ್ಲಾ ಅರಸರು, ಮೇದ್ಯರ ಎಲ್ಲಾ ಅರಸರು, 26 ದೂರ ಮತ್ತು ಸಮೀಪವಿರುವ ಉತ್ತರದೇಶದ ಎಲ್ಲಾ ಅರಸರು, ಭೂಲೋಕದಲ್ಲಿರುವ ಸಕಲರಾಜ್ಯಗಳವರು ಇವರೆಲ್ಲರಿಗೂ ಕುಡಿಸು; ಇವರು ಕುಡಿದ ಮೇಲೆ ಶೇಷಕಿನ* ಅರಸನೂ ಕುಡಿಯಲಿ ಎಂಬುದೇ ನನಗಾದ ಅಪ್ಪಣೆ. 27 ಇದಲ್ಲದೆ ನನಗೆ ಈ ಅಪ್ಪಣೆಯಾಯಿತು, ನೀನು ಅವರಿಗೆ ನುಡಿಯತಕ್ಕದ್ದೇನೆಂದರೆ, “ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನಾನು ನಿಮ್ಮಲ್ಲಿಗೆ ಖಡ್ಗವನ್ನು ಕಳುಹಿಸುವೆನು; ಆ ನನ್ನ ರೋಷವನ್ನು ಕುಡಿದು ಅಮಲೇರಿದವರಾಗಿ ಕಕ್ಕಿ ಬಿದ್ದು ಏಳದಿರಿ.” 28 ಅವರು ಒಂದು ವೇಳೆ ಪಾತ್ರೆಯನ್ನು ನಿನ್ನ ಕೈಯಿಂದ ತೆಗೆದುಕೊಳ್ಳಲಿಕ್ಕೂ, ಕುಡಿಯಲಿಕ್ಕೂ ಕೇಳದಿದ್ದರೆ ನೀನು ಅವರಿಗೆ ಹೀಗೆ ಹೇಳು, “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ನೀವು ಕುಡಿಯಲೇ ಬೇಕು. 29 ಇಗೋ, ನನ್ನ ಹೆಸರುಗೊಂಡಿರುವ ಪಟ್ಟಣದಲ್ಲಿ ಬಾಧಿಸಲು ಪ್ರಾರಂಭಿಸುತ್ತೇನೆ. ನೀವು ಆ ದಂಡನೆಗೆ ತಪ್ಪಿಸಿಕೊಂಡೀರೋ? ಆಗುವುದೇ ಇಲ್ಲ. ಖಡ್ಗವೇ, ಭೂನಿವಾಸಿಗಳನ್ನೆಲ್ಲ ಸಂಹರಿಸಲಿಕ್ಕೆ ಬಾ” ಎಂದು ಕೂಗುವೆನು. ಇದು ಸೇನಾಧೀಶ್ವರನಾದ ಯೆಹೋವನೆಂಬ ನನ್ನ ನುಡಿ. 30 ಇಂತಿರಲು ನೀನು ಪ್ರವಾದಿಸುತ್ತಾ ಈ ಮಾತುಗಳನ್ನೆಲ್ಲಾ ಅವರಿಗೆ ಹೇಳು,
“ಯೆಹೋವನು ಉನ್ನತಲೋಕದಿಂದ ಗರ್ಜಿಸುವನು, ತನ್ನ ಘನನಿವಾಸದಿಂದ ಧ್ವನಿಗೈಯುವನು.
ಆತನು ಗಟ್ಟಿಯಾಗಿ ಗರ್ಜಿಸಿ, ತನ್ನ ಹುಲ್ಗಾವಲಿನ ಮಂದೆಯನ್ನು ಬೆದರಿಸುವನು.
ದ್ರಾಕ್ಷಿಯ ಹಣ್ಣನ್ನು ತುಳಿಯುವವರು ಕೂಗಾಡುವಂತೆ ಭೂನಿವಾಸಿಗಳೆಲ್ಲರಿಗೂ ಭಯಂಕರನಾಗಿ ಕೂಗುವನು.
31 ಆ ಶಬ್ದವು ಭೂಮಿಯ ಕಟ್ಟಕಡೆಯವರೆಗೆ ವ್ಯಾಪಿಸುವುದು,
ಯೆಹೋವನಿಗೂ ಜನಾಂಗಗಳಿಗೂ ವ್ಯಾಜ್ಯವುಂಟಷ್ಟೆ,
ಅವನು ನರಜನ್ಮದವರೆಲ್ಲರ ಸಂಗಡ ನ್ಯಾಯಕ್ಕೆ ನಿಲ್ಲುವನು, ದುಷ್ಟರನ್ನು ಖಡ್ಗಕ್ಕೆ ಗುರಿಮಾಡುವನು” ಇದು ಯೆಹೋವನ ನುಡಿ.
ಜನಾಂಗಕ್ಕೆ ಬರುವ ಕೇಡು
32 ಸೇನಾಧೀಶ್ವರನಾದ ಯೆಹೋವನು, “ಆಹಾ, ಕೇಡು ಜನಾಂಗದಿಂದ ಜನಾಂಗಕ್ಕೆ ಹರಡುವುದು; ದೊಡ್ಡ ಬಿರುಗಾಳಿಯು ಲೋಕದ ಕಟ್ಟಕಡೆಯಿಂದ ಎದ್ದು ಬರುವುದು.
33 ಆ ದಿನದಲ್ಲಿ ಯೆಹೋವನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೂ ಬಿದ್ದಿರುವರು;
ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಅವರನ್ನು ಯಾರೂ ಒಟ್ಟುಗೂಡಿಸುವುದಿಲ್ಲ, ಯಾರು ಹೂಣಿಡುವುದಿಲ್ಲ, ಅವರು ಭೂಮಿಯ ಮೇಲೆ ಗೊಬ್ಬರವಾಗುವರು.
ಯೆಹೂದ್ಯ ನಾಯಕರಿಗಾಗುವ ಶಿಕ್ಷೆ
34 ಕುರುಬರೇ, ಅರಚಿ ಗೋಳಾಡಿರಿ! ಮಂದೆಯಲ್ಲಿನ ಹಿರಿಯ ನಾಯಕರೇ, ಬೂದಿಯಲ್ಲಿ ಬಿದ್ದು ಹೊರಳಾಡಿರಿ!
ನಿಮ್ಮನ್ನು ವಧಿಸುವ ಕಾಲವು ಬಂದಿದೆ; ನಾನು ನಿಮ್ಮನ್ನು ಭಂಗಪಡಿಸುವೆನು;
ನೀವು ಬಿದ್ದು ಒಡೆದುಹೋದ ಅಂದವಾದ ಪಾತ್ರೆಯಂತೆ ಚೂರುಚೂರಾಗುವಿರಿ.
35 ಕುರುಬರು ಓಡಿಹೋಗುವುದಕ್ಕೆ ಮಾರ್ಗವು ಸಿಕ್ಕದು, ಮಂದೆಯ ಹಿರಿಯ ನಾಯಕರು ತಪ್ಪಿಸಿಕೊಳ್ಳುವುದಕ್ಕೆ ಆಸ್ಪದ ದೊರೆಯದು.
36 ಆಹಾ, ಕುರುಬರ ಕೂಗಾಟ! ಮಂದೆಯ ಹಿರಿಯ ನಾಯಕರ ಅರಚಾಟ!
ಯೆಹೋವನು ಆ ಹುಲ್ಗಾವಲನ್ನು ಹಾಳುಮಾಡುತ್ತಿದ್ದಾನಲ್ಲಾ.
37 ನೆಮ್ಮದಿಯ ಗೋಮಾಳಗಳು ಯೆಹೋವನ ರೋಷಾಗ್ನಿಯಿಂದ ನಿಶ್ಯಬ್ದವಾಗಿವೆ.
38 ಆತನು ಸಿಂಹದಂತೆ ತನ್ನ ಗವಿಯನ್ನು ಬಿಟ್ಟು ಬಂದಿದ್ದಾನೆ.
ಹಿಂಸಿಸುವ ಖಡ್ಗದಿಂದಲೂ ಆತನ ರೋಷಾಗ್ನಿಯಿಂದಲೂ ಅವರ ದೇಶವು ಬೆರಗಿಗೆ ಈಡಾಗಿದೆ” ಎಂದು ನುಡಿಯುತ್ತಾನೆ.
* 25:26 ಶೇಷಕಿನ ಬಾಬೆಲಿನ ರಹಸ್ಯವಾದ ಹೆಸರು.