ಯೆರೆಮೀಯನ ಮಾತಿಗೆ ಅವಿಧೇಯರಾದ ಜನರು
೪೩
೧ ಯೆರೆಮೀಯನು ಸಮಸ್ತ ಜನರನ್ನು ಸಂಬೋಧಿಸಿ ಅವರ ದೇವರಾದ ಯೆಹೋವನು ತನ್ನ ಮೂಲಕ ಅವರಿಗೆ ಹೇಳಿಕಳುಹಿಸಿದ ಈ ಮಾತುಗಳನ್ನೆಲ್ಲಾ ತಿಳಿಸಿದನು. ೨ ಆಮೇಲೆ ಹೋಷಾಯನ ಮಗನಾದ ಅಜರ್ಯನೂ, ಕಾರೇಹನ ಮಗನಾದ ಯೋಹಾನಾನನೂ, ಸೊಕ್ಕೇರಿದವರೆಲ್ಲರೂ ಅವನಿಗೆ, “ನಿನ್ನ ಮಾತು ಸುಳ್ಳು, ‘ಐಗುಪ್ತಕ್ಕೆ ಹೋಗಿ ವಾಸಮಾಡಬಾರದು’ ಎಂದು ತಿಳಿಸುವಂತೆ ನಮ್ಮ ದೇವರಾದ ಯೆಹೋವನು ನಿನ್ನನ್ನು ಕಳುಹಿಸಲಿಲ್ಲ. ೩ ಕಸ್ದೀಯರು ನಮ್ಮನ್ನು ಕೊಲ್ಲುವುದಕ್ಕೋ, ಬಾಬೆಲಿಗೆ ಸೆರೆ ಒಯ್ಯುವುದಕ್ಕೋ ನಮ್ಮನ್ನು ಅವರ ಕೈಗೆ ಸಿಕ್ಕಿಸಬೇಕೆಂದು ನೇರೀಯನ ಮಗನಾದ ಬಾರೂಕನೇ ನಿನ್ನನ್ನು ನಮ್ಮ ಮೇಲೆ ನೂಕಿದ್ದಾನೆ” ಎಂದು ಹೇಳಿದರು. ೪ ಹೀಗೆ ಯೆಹೂದ ದೇಶದಲ್ಲಿಯೇ ವಾಸಮಾಡಿರಿ ಎನ್ನುವ ಯೆಹೋವನ ಮಾತನ್ನು ಕಾರೇಹನ ಮಗನಾದ ಯೋಹಾನಾನನೂ, ಸಮಸ್ತ ಸೇನಾಧಿಪತಿಗಳೂ ಮತ್ತು ಸಕಲಜನರೂ ಕೇಳದೆಹೋದರು. ೫ ಆಗ ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನ ವಶಕ್ಕೆ ಒಪ್ಪಿಸಿದ ಜನರು, ಅನ್ಯದೇಶಗಳಿಗೆ ಅಟ್ಟಲ್ಪಟ್ಟು ಯೆಹೂದದಲ್ಲಿ ವಾಸಿಸುವುದಕ್ಕೆ ಹಿಂದಿರುಗಿ ಬಂದಿದ್ದ ಯೆಹೂದದ ಉಳಿದ ಜನರು, ಪ್ರವಾದಿಯಾದ ಯೆರೆಮೀಯನು, ೬ ನೇರೀಯನ ಮಗನಾದ ಬಾರೂಕನು, ರಾಜಕುಮಾರ್ತೆಯರು ಅಂತು ಗಂಡಸರು, ಹೆಂಗಸರು, ಮಕ್ಕಳು, ೭ ಇವರೆಲ್ಲರನ್ನೂ ಕಾರೇಹನ ಮಗನಾದ ಯೋಹಾನಾನನೂ, ಸಕಲ ಸೇನಾಧಿಪತಿಗಳೂ ಕರೆದುಕೊಂಡು ಐಗುಪ್ತಕ್ಕೆ ಹೋಗಿ ತಹಪನೇಸ್ ಊರಿಗೆ ಸೇರಿದರು. ಯೆಹೋವನ ಮಾತನ್ನು ಕೇಳಲೇ ಇಲ್ಲ.
ನೆಬೂಕದ್ನೆಚ್ಚರನು ಐಗುಪ್ತವನ್ನು ಸ್ವಾಧೀನಮಾಡಿಕೊಳ್ಳುವನು ಎಂದು ಯೆರೆಮೀಯನು ಮುಂತಿಳಿಸಿದ್ದು
೮ ಯೆರೆಮೀಯನು ತಹಪನೇಸಿನಲ್ಲಿರುವಾಗ ಯೆಹೋವನು ಈ ವಾಕ್ಯವನ್ನು ಅವನಿಗೆ ದಯಪಾಲಿಸಿದನು. ೯ ಆತನು, “ನೀನು ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಬಾಗಿಲ ಮುಂದೆ ಯೆಹೂದ್ಯರ ಕಣ್ಣೆದುರಿಗೆ ನೆಲಗಟ್ಟಿನ ಕೆಳಗೆ ಇಟ್ಟು ಗಾರೆಯಿಂದ ಮುಚ್ಚಿ ಬಿಟ್ಟು ಅವರಿಗೆ ಹೀಗೆ ಹೇಳು, ೧೦ ‘ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಇಗೋ, ನಾನು ಬಾಬೆಲಿನ ಅರಸನೂ, ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನು ಕರೆಯಿಸಿ, ನಾನು ಮರೆಮಾಡಿಸಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಹಾಕಿಸುವೆನು; ಅವನು ಈ ಕಲ್ಲುಗಳ ಮೇಲೆಯೇ ತನ್ನ ರತ್ನಗಂಬಳಿಯನ್ನು ಹಾಸುವನು. ೧೧ ಅವನು ಬಂದು ಐಗುಪ್ತ ದೇಶವನ್ನು ಹೊಡೆಯುವನು. ಮರಣಕ್ಕೆ ನೇಮಕವಾದವರು ಮರಣಕ್ಕೆ, ಸೆರೆಗೆ ನೇಮಕವಾದವರು ಸೆರೆಗೆ, ಖಡ್ಗಕ್ಕೆ ನೇಮಕವಾದವರು ಖಡ್ಗಕ್ಕೆ ಗುರಿಯಾಗುವರು. ೧೨ ನಾನು ಐಗುಪ್ತದ ದೇವಾಲಯಗಳಲ್ಲಿ ಬೆಂಕಿಹೊತ್ತಿಸುವೆನು, ಅವನು ಅವುಗಳನ್ನು ಸುಟ್ಟು ದೇವತೆಗಳನ್ನು ಸೆರೆ ಒಯ್ಯುವನು; ಕುರುಬನು ತನ್ನ ಕಂಬಳಿಯನ್ನು ಸುತ್ತಿಕೊಳ್ಳುವಂತೆ ಅವನು ಐಗುಪ್ತ ದೇಶವನ್ನು ಸುತ್ತಿಕೊಳ್ಳುವನು; ಸಮಾಧಾನವಾಗಿ ಅಲ್ಲಿಂದ ಹೊರಟು ಹೋಗುವನು. ೧೩ ಐಗುಪ್ತ ದೇಶದಲ್ಲಿರುವ ಸೂರ್ಯಪುರಿಯ ಸ್ತಂಭಗಳನ್ನು ಒಡೆದುಹಾಕಿ, ಐಗುಪ್ತದ ದೇವಾಲಯಗಳನ್ನು ಬೆಂಕಿಯಿಂದ ಸುಟ್ಟುಬಿಡುವನು.’ ”