೨೧
ನಾಬೋತನ ಮರಣ
೧ ಅನಂತರ ಸಂಭವಿಸಿದ್ದೇನೆಂದರೆ, ಇಜ್ರೇಲಿನಲ್ಲಿ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಹತ್ತಿರ ಇಜ್ರೇಲಿನವನಾದ ನಾಬೋತನೆಂಬ ಮನುಷ್ಯನ ದ್ರಾಕ್ಷೇತೋಟವಿತ್ತು. ೨ ಅಹಾಬನು ನಾಬೋತನಿಗೆ, “ನಿನ್ನ ದ್ರಾಕ್ಷೇತೋಟವನ್ನು ನನಗೆ ಕೊಡು, ಅದು ನನ್ನ ಅರಮನೆಯ ಹತ್ತಿರವಿರುವುದರಿಂದ ಅದನ್ನು ಕಾಯಿಪಲ್ಯದ ತೋಟವನ್ನಾಗಿ ಮಾಡಿಕೊಳ್ಳುವೆನು. ಅದಕ್ಕೆ ಬದಲಾಗಿ ನಿನಗೆ ಅದಕ್ಕಿಂತ ಉತ್ತಮವಾದ ತೋಟವನ್ನು ಕೊಡುತ್ತೇನೆ. ಅದು ಬೇಡವಾದರೆ ಕ್ರಯವನ್ನು ಕೊಡುತ್ತೇನೆ” ಎಂದು ಹೇಳಿದನು. ೩ ಅದಕ್ಕೆ ನಾಬೋತನು ಅಹಾಬನಿಗೆ, “ನಾನು ಪಿತ್ರಾರ್ಜಿತ ಸ್ವಾಸ್ತ್ಯವನ್ನು ಮಾರದಂತೆ ಯೆಹೋವನು ನನ್ನನ್ನು ತಡೆಯಲಿ” ಎಂದು ಉತ್ತರಕೊಟ್ಟನು. ೪ “ನನ್ನ ಪಿತ್ರಾರ್ಜಿತ ಸ್ವಾಸ್ತ್ಯವನ್ನು ನಿನಗೆ ಕೊಡುವುದಿಲ್ಲ” ಎಂದು ಇಜ್ರೇಲಿನವನಾದ ನಾಬೋತನು ಹೇಳಿದ್ದರಿಂದ ಅಹಾಬನು ಸಿಟ್ಟಿನಿಂದ ಗಂಟುಮುಖ ಮಾಡಿಕೊಂಡು ಮನೆಗೆ ಹೋಗಿ ಊಟಮಾಡಲೊಲ್ಲದೆ, ಮಂಚದ ಮೇಲೆ ಮಲಗಿ ಗೋಡೆಯ ಕಡೆಗೆ ಮುಖ ತಿರುಗಿಸಿಕೊಂಡನು. ೫ ಆಗ ಅವನ ಹೆಂಡತಿಯಾದ ಈಜೆಬೆಲಳು ಅವನ ಬಳಿಗೆ ಬಂದು ಅವನನ್ನು, “ನೀನು ಯಾಕೆ ಊಟಮಾಡುವುದಿಲ್ಲ? ನಿನಗೆ ಯಾವ ಚಿಂತೆ ಇರುತ್ತದೆ?” ಎಂದು ಕೇಳಿದಳು. ೬ ಅವನು, “ನಾನು ಇಜ್ರೇಲಿನವನಾದ ನಾಬೋತನಿಗೆ ‘ನಿನ್ನ ದ್ರಾಕ್ಷೇತೋಟವನ್ನು ನನಗೆ ಮಾರಿಬಿಡು, ಹಣ ಬೇಡವಾದರೆ ನಿನಗೆ ಬೇರೊಂದು ದ್ರಾಕ್ಷೇತೋಟವನ್ನು ಕೊಡುತ್ತೇನೆ’ ಎಂಬುದಾಗಿ ಹೇಳಿದೆನು. ಆದರೆ ಅವನು ಕೊಡುವುದಿಲ್ಲ ಎಂದನು” ಎಂದು ಉತ್ತರಕೊಟ್ಟನು. ೭ ಆಗ ಅವನ ಹೆಂಡತಿಯಾದ ಈಜೆಬೆಲಳು ಅವನಿಗೆ, “ಇಸ್ರಾಯೇಲರ ಅರಸನಾದ ನೀನು ಹೀಗೆ ಮಾಡುವುದು ಸರಿಯೇ? ಎದ್ದು ಊಟ ಮಾಡಿ ಸಂತೋಷದಿಂದಿರು. ನಾನು ನಿನಗೆ ಇಜ್ರೇಲಿನವನಾದ ನಾಬೋತನ ದ್ರಾಕ್ಷೇತೋಟವನ್ನು ಕೊಡಿಸುತ್ತೇನೆ” ಎಂದು ಹೇಳಿದಳು. ೮ ಆಮೇಲೆ ಈಜೆಬೆಲಳು ಅಹಾಬನ ಹೆಸರಿನಲ್ಲಿ ಒಂದು ಪತ್ರ ಬರೆದು, ಅದಕ್ಕೆ ಅವನ ಮುದ್ರೆ ಹಾಕಿ, ಅದನ್ನು ನಾಬೋತನ ಊರಿನಲ್ಲಿದ್ದ ಎಲ್ಲಾ ಪ್ರಧಾನ ಪುರುಷರಿಗೂ ಹಿರಿಯರಿಗೂ ಕಳುಹಿಸಿದಳು. ೯ ಅದರಲ್ಲಿ, “ಎಲ್ಲರೂ ಉಪವಾಸಮಾಡಬೇಕೆಂದು ಪ್ರಕಟಿಸಿ, ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿ, ೧೦ ಅವನು ದೇವರನ್ನೂ ಮತ್ತು ಅರಸನನ್ನೂ ಶಪಿಸಿದನು ಎಂಬುದಾಗಿ ಇಬ್ಬರ ಸಾಕ್ಷಿ ಹೇಳಿಸಿ, ಅವನನ್ನು ಹೊರಗೆ ಒಯ್ದು ಕಲ್ಲೆಸೆದು ಕೊಲ್ಲಿರಿ” ಎಂದು ಬರೆದಿದ್ದಳು. ೧೧ ಆಗ ಊರಿನ ಹಿರಿಯರು ಪ್ರಧಾನ ಪುರುಷರೂ ಈಜೆಬೆಲಳು ಕಳುಹಿಸಿದ ಪತ್ರದಲ್ಲಿ ಬರೆದಿದ್ದಂತೆಯೇ ಮಾಡಿದರು. ೧೨ ಅವರು ಉಪವಾಸವನ್ನು ಪ್ರಕಟಿಸಿ, ನೆರೆದ ಸಭೆಯ ಮುಂದೆ ನಾಬೋತನನ್ನು ನಿಲ್ಲಿಸಿದರು. ೧೩ ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತು ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆ ಎಂಬುದಾಗಿ ಜನರ ಎದುರಿನಲ್ಲಿ ಅವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು. ೧೪ ನಾಬೋತನು ಕಲ್ಲೆಸೆಯಲ್ಪಟ್ಟು ಸತ್ತ ವರ್ತಮಾನವನ್ನು ಹಿರಿಯರು ಈಜೆಬೆಲಳಿಗೆ ತಿಳಿಸಿದರು. ೧೫ ಆಕೆಯು ಇದನ್ನು ಕೇಳಿ ಅಹಾಬನಿಗೆ, “ನೀನು ಹೋಗಿ ನಾಬೋತನು ಮಾರುವುದಿಲ್ಲವೆಂದು ಹೇಳಿದ ದ್ರಾಕ್ಷೇ ತೋಟವನ್ನು ಸ್ವಾಧೀನ ಮಾಡಿಕೋ, ಅವನು ಜೀವದಿಂದಿಲ್ಲ ಸತ್ತನು” ಎಂದು ಹೇಳಿದಳು. ೧೬ ಇಜ್ರೇಲಿನವನಾದ ನಾಬೋತನ ಮರಣವಾರ್ತೆಯನ್ನು ಅಹಾಬನು ಕೇಳಿ ದ್ರಾಕ್ಷೇ ತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೋಸ್ಕರ ಇಳಿದು ಹೋದನು.
೧೭ ಆಗ ತಿಷ್ಬೀಯನಾದ ಎಲೀಯನಿಗೆ ಯೆಹೋವನ ವಾಕ್ಯವುಂಟಾಯಿತು. ೧೮ ಆತನು ಅವನಿಗೆ, “ನೀನು ಹೋಗಿ ಸಮಾರ್ಯದಲ್ಲಿ ವಾಸಿಸುವ ಇಸ್ರಾಯೇಲ್ ರಾಜನನ್ನು ಕಾಣು. ಅವನು ಈಗ ನಾಬೋತನ ದ್ರಾಕ್ಷೇತೋಟವನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೋಸ್ಕರ ಅಲ್ಲಿಗೆ ಹೋಗಿದ್ದಾನೆ. ೧೯ ಅವನಿಗೆ ನೀನು ಕೊಲೆ ಮಾಡಿ ಸ್ವಾಸ್ತ್ಯವನ್ನು ಸಂಪಾದಿಸಿಕೊಂಡಿಯಲ್ಲವೋ? ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವವು ಎಂಬುದಾಗಿ ಯೆಹೋವನು ಅನ್ನುತ್ತಾನೆ ಎಂದು ಅವನಿಗೆ ಹೇಳು” ಎಂಬದೇ. ೨೦ ಅಹಾಬನು ಎಲೀಯನನ್ನು ಕಂಡು ಅವನನ್ನು, “ನನ್ನ ವೈರಿಯೇ, ನೀನು ನನ್ನನ್ನು ಕಂಡುಹಿಡಿದೆಯಾ” ಎಂದು ಕೇಳಲು ಅವನು, “ಹೌದು ಕಂಡುಹಿಡಿದೇನು. ನೀನು ನಿನ್ನನ್ನು ಪಾಪಕ್ಕೆ ಮಾರಿಕೊಂಡು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದಿಯಲ್ಲಾ. ೨೧ ಯೆಹೋವನು ನಿನ್ನನ್ನು ಕುರಿತು, ‘ನಾನು ನಿನ್ನ ಮೇಲೆ ಕೇಡನ್ನು ಬರಮಾಡಿ ನಿನ್ನನ್ನು ಕಸವನ್ನೋ ಎಂಬಂತೆ ತೆಗೆದುಹಾಕುವೆನು. ನಿನ್ನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ದಾಸರಾಗಲಿ ಎಲ್ಲರನ್ನೂ ಇಸ್ರಾಯೇಲರೊಳಗಿಂದ ಕಡಿದುಬಿಡುವೆನು. ೨೨ ನೀನು ಇಸ್ರಾಯೇಲ್ಯರನ್ನು ಪಾಪಕ್ಕೆ ಪ್ರೇರೇಪಿಸಿ ನನಗೆ ಕೋಪವನ್ನೆಬಿಸಿದ್ದರಿಂದ ನೆಬಾಟನ ಮಗನಾದ ಯಾರೊಬ್ಬಾಮನ ಮನೆಗೂ ಅಹೀಯನ ಮಗನಾದ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದು’ ಅನ್ನುತ್ತಾನೆ ೨೩ ಇದಲ್ಲದೆ ಆತನು ಈಜೆಬೆಲಳನ್ನು ಕುರಿತು, ‘ನಾಯಿಗಳು ಇಜ್ರೇಲ್ ಪಟ್ಟಣದ ಗೋಡೆಯ ಬಳಿಯಲ್ಲಿ ಆಕೆಯ ಶವವನ್ನು ತಿನ್ನುವವು. ೨೪ ಅಹಾಬನ ಮನೆಯವರಲ್ಲಿ ಊರೊಳಗೆ ಸಾಯುವಂಥವರನ್ನು ನಾಯಿಗಳೂ, ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದು ಬಿಡುವವು’ ಎಂದು ಹೇಳುತ್ತಾನೆ” ಅಂದನು. ೨೫ ಹೆಂಡತಿಯಾದ ಈಜೆಬೆಲಳಿಂದ ಪ್ರೇರೇಪಿತನಾಗಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ. ೨೬ ಯೆಹೋವನು ಇಸ್ರಾಯೇಲರ ಎದುರಿನಿಂದ ಓಡಿಸಿಬಿಟ್ಟ ಅಮೋರಿಯರಂತೆ ವಿಗ್ರಹಗಳನ್ನು ಪೂಜಿಸಿದ ಅಹಾಬನ ನಡತೆಯು ಕೇವಲ ಅಸಹ್ಯವಾಗಿತ್ತು.
೨೭ ಅಹಾಬನು ಎಲೀಯನ ಮಾತುಗಳನ್ನು ಕೇಳಿ ತನ್ನ ಬಟ್ಟೆಗಳನ್ನು ಹರಿದುಕೊಂಡು, ಹಗಲಿರುಳು ಮೈಮೇಲೆ ಗೋಣಿತಟ್ಟನ್ನು ಹಾಕಿಕೊಂಡು, ಉಪವಾಸಮಾಡುತ್ತಾ ದೀನಮನಸ್ಸಿನಿಂದ ಪ್ರವರ್ತಿಸಿದನು. ೨೮ ಆದುದರಿಂದ ಯೆಹೋವನು ತಿಷ್ಬೀಯನಾದ ಎಲೀಯನಿಗೆ, “ಅಹಾಬನು ನನ್ನ ಮುಂದೆ ತಗ್ಗಿಸಿಕೊಂಡಿದ್ದನ್ನು ಕಂಡಿಯಾ? ೨೯ ಅವನು ನನ್ನ ಮುಂದೆ ತಗ್ಗಿಸಿಕೊಂಡಿದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡದೆ ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಅದನ್ನು ಬರಮಾಡುವೆನು” ಎಂದು ಹೇಳಿದನು.