6
ಸೊಲೊಮೋನನು ದೇವಾಲಯವನ್ನು ಕಟ್ಟಿದ್ದು
ಇಸ್ರಾಯೇಲರು ಐಗುಪ್ತದೇಶವನ್ನು ಬಿಟ್ಟುಬಂದ ನಾನೂರ ಎಂಭತ್ತನೆಯ ವರ್ಷದಲ್ಲಿ ಅಂದರೆ, ಇಸ್ರಾಯೇಲರ ಅರಸನಾದ ಸೊಲೊಮೋನನ ಆಳ್ವಿಕೆಯ ನಾಲ್ಕನೆಯ ವರ್ಷದ, ಎರಡನೆಯ ತಿಂಗಳಿನ, ವೈಶಾಖ ಮಾಸದಲ್ಲಿ ಅರಸನಾದ ಸೊಲೊಮೋನನು ಯೆಹೋವನ ಆಲಯವನ್ನು ಕಟ್ಟುವುದಕ್ಕೆ ಪ್ರಾರಂಭಿಸಿದನು. ಅವನು ಯೆಹೋವನಿಗೋಸ್ಕರ ಕಟ್ಟಿಸಿದ ಆಲಯದ ಉದ್ದ ಅರುವತ್ತು ಮೊಳ*, ಅಗಲ ಇಪ್ಪತ್ತು ಮೊಳ, ಎತ್ತರ ಮೂವತ್ತು ಮೊಳ. ದೇವಾಲಯದ ಪರಿಶುದ್ಧ ಸ್ಥಳದ ಮುಂದುಗಡೆಯಲ್ಲಿ ಒಂದು ಮಂಟಪವಿತ್ತು. ಅದರ ಉದ್ದ ದೇವಾಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ,§ ಅಗಲ ಹತ್ತು ಮೊಳ*. ಇದಲ್ಲದೆ ಅವನು ಆಲಯಕ್ಕೆ ತೆರೆಯಲಾರದ ಜಾಲರಿಗಳುಳ್ಳ ಕಿಟಿಕಿಗಳನ್ನಿರಿಸಿದನು. ದೇವಾಲಯದ ಗೋಡೆಯ ಸುತ್ತಲೂ ಅಂದರೆ ಪರಿಶುದ್ಧ ಸ್ಥಳ ಮತ್ತು ಮಹಾಪರಿಶುದ್ಧ ಸ್ಥಳ ಇವುಗಳ ಗೋಡೆಯ ಸುತ್ತಲೂ ಇನ್ನೊಂದು ಗೋಡೆಯನ್ನು ಕಟ್ಟಿಸಿ, ಇವುಗಳ ನಡುವೆ ಅಂತಸ್ತುಗಳುಳ್ಳ ಕೊಠಡಿಗಳನ್ನು ಮಾಡಿಸಿದನು. ಕೆಳಗಿನ ಕೊಠಡಿಗಳ ಅಗಲವು ಐದು ಮೊಳ. ಮೊದಲನೆಯ ಅಂತಸ್ತುಗಳ ಕೊಠಡಿಗಳ ಅಗಲವು ಆರು ಮೊಳ. ಎರಡನೆಯ ಅಂತಸ್ತುಗಳ ಕೊಠಡಿಗಳ ಅಗಲವು ಏಳು ಮೊಳ. ಅಂತಸ್ತಿನ ತೊಲೆಗಳನ್ನಿಡುವಾಗ ದೇವಾಲಯದ ಗೋಡೆಗಳಲ್ಲಿ ತೂತಾಗಬಾರದು ಎಂದು ಗೋಡೆಯ ಹೊರಮೈಯನ್ನು ಸೋಪಾನಾಕಾರವಾಗಿ ಮಾಡಿಸಿದನು.
ದೇವಾಲಯವನ್ನು ಕಟ್ಟುತ್ತಿರುವಾಗ ಕಲ್ಲುಗಳನ್ನು ಕಲ್ಲುಗಣಿಯಲ್ಲಿಯೇ ಸಿದ್ಧಮಾಡಿಕೊಂಡು ಬಂದು ಕಟ್ಟಿದ್ದರಿಂದ ಕಟ್ಟುವ ದಿನಗಳಲ್ಲಿ ಸುತ್ತಿಗೆ, ಉಳಿ ಮುಂತಾದ ಕಬ್ಬಿಣದ ಸಾಮಾನುಗಳ ಶಬ್ದವು ಕೇಳಿಸುತ್ತಿರಲಿಲ್ಲ. ಕೆಳಗಿನ ಕೊಠಡಿಗೆ ಹೋಗುವ ಬಾಗಿಲು ಆಲಯದ ಬಲಗಡೆಯಲ್ಲಿತ್ತು. ಅಲ್ಲಿಂದ ಮಧ್ಯದ ಅಂತಸ್ತಿಗೂ ಮತ್ತು ಮೂರನೆಯ ಅಂತಸ್ತಿಗೂ ಹೋಗಲು ಸುರುಳಿಯಾಕಾರದ ಮೆಟ್ಟಲುಗಳಿದ್ದವು. ಈ ಪ್ರಕಾರ ಅವನು ಮನೆಯನ್ನು ಕಟ್ಟಿಸಿ, ದೇವದಾರಿನ ತೊಲೆ ಮತ್ತು ಹಲಿಗೆಗಳಿಂದ ಮಾಳಿಗೆಯನ್ನು ಮಾಡಿಸಿ ಕೆಲಸ ಮುಗಿಸಿದನು. 10 ಅವನು ದೇವಾಲಯದ ಸುತ್ತಲೂ ಒಂದರ ಮೇಲೊಂದು ಐದೈದು ಮೊಳ ಎತ್ತರವಾದ ಕೊಠಡಿಗಳನ್ನು ಕಟ್ಟಿಸಿದನು. ಇವು ದೇವದಾರಿನ ತೊಲೆಗಳಿಂದ ದೇವಾಲಯಕ್ಕೆ ಸೇರಿಸಲ್ಪಟ್ಟಿದ್ದವು.
11 ಯೆಹೋವನು ಸೊಲೊಮೋನನಿಗೆ ಈ ಮಾತುಗಳನ್ನು ತಿಳಿಸಿದನು. 12 “ನೀನು ಈಗ ಒಂದು ಆಲಯವನ್ನು ಕಟ್ಟಿಸುತ್ತಿರುವಿಯಷ್ಟೆ. ನೀನು ನನ್ನ ನಿಯಮ ವಿಧಿಗಳನ್ನು ಅನುಸರಿಸಿ, ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವುದಾದರೆ, ನಾನು ನಿನ್ನನ್ನು ಕುರಿತು ನಿನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು. 13 ನನ್ನ ಪ್ರಜೆಗಳಾದ ಇಸ್ರಾಯೇಲರನ್ನು ಕೈಬಿಡದೆ ಅವರ ಮಧ್ಯದಲ್ಲೇ ವಾಸಿಸುವೆನು” ಎಂದು ಹೇಳಿದನು. 14 ಸೊಲೊಮೋನನು ದೇವಾಲಯವನ್ನು ಕಟ್ಟಿಸಿ ಮುಗಿಸಿದನು.
ದೇವಾಲಯದ ಒಳಗಿನ ಅಲಂಕಾರ
15 ಅನಂತರ ಅವನು ಅದರ ಗೋಡೆಗಳ ಒಳಮೈಯನ್ನು ನೆಲದಿಂದ ಮಾಳಿಗೆಯವರೆಗೆ ದೇವದಾರಿನ ಹಲಗೆಗಳಿಂದ ಹೊದಿಸಿದನು. ನೆಲಕ್ಕೆ ತುರಾಯಿ ಮರದ ಹಲಗೆಗಳನ್ನು ಹಾಕಿದನು. 16 ಇದಲ್ಲದೆ ಅವನು ದೇವಾಲಯದೊಳಗೆ ಹಿಂದಿನ ಇಪ್ಪತ್ತು ಮೊಳ ಸ್ಥಳವನ್ನು ಬಿಟ್ಟು ನೆಲದಿಂದ ತೊಲೆಗಳವರೆಗೆ ದೇವದಾರಿನ ಹಲಗೆಗಳಿಂದ ಒಂದು ಗೋಡೆಯನ್ನು ಮಾಡಿಸಿದನು. ಅದರ ಹಿಂದಿನ ಭಾಗವನ್ನು ಗರ್ಭಗೃಹ ಅಥವಾ ಮಹಾಪರಿಶುದ್ಧ ಸ್ಥಳ ಎಂದು ಪ್ರತ್ಯೇಕಿಸಿದನು. 17 ದೇವಾಲಯದ ಪರಿಶುದ್ಧ ಸ್ಥಳ ಎನ್ನಿಸಿಕೊಳ್ಳುವ ಮುಂದಿನ ಭಾಗವು ನಲ್ವತ್ತು ಮೊಳ ಉದ್ದವಿತ್ತು. 18 ದೇವಾಲಯದೊಳಗೆ ಕಲ್ಲು ಕಾಣಿಸದಂತೆ ಗೋಡೆಗಳನ್ನೆಲ್ಲಾ ಬಳ್ಳಿಗಳು ಮತ್ತು ಹೂವುಗಳು ಕೆತ್ತಿರುವ ದೇವದಾರಿನ ಹಲಿಗೆಗಳಿಂದ ಹೊದಿಸಿದನು. 19 ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಇಡುವುದಕ್ಕಾಗಿ ದೇವಾಲಯದೊಳಗೆ ಒಂದು ಭಾಗವನ್ನು ಗರ್ಭಗೃಹವೆಂದು ಪ್ರತ್ಯೇಕಿಸಿದನು. 20 ಆ ಗರ್ಭಗೃಹವು ಇಪ್ಪತ್ತು ಮೊಳ ಉದ್ದವೂ, ಇಪ್ಪತ್ತು ಮೊಳ ಅಗಲವೂ, ಇಪ್ಪತ್ತು ಮೊಳ ಎತ್ತರವೂ ಆಗಿತ್ತು. ಅದನ್ನು ಚೊಕ್ಕ ಬಂಗಾರದ ತಗಡಿನಿಂದಲೂ, ಧೂಪವೇದಿಯನ್ನು ದೇವದಾರು ಮರದಿಂದಲೂ ಹೊದಿಸಿದನು. 21 ಸೊಲೊಮೋನನು ದೇವಾಲಯದ ಒಳಮೈಯನ್ನು ಚೊಕ್ಕ ಬಂಗಾರದ ತಗಡಿನಿಂದ ಹೊದಿಸಿದನು. ಮಹಾಪರಿಶುದ್ಧ ಸ್ಥಳದ ಎದುರಿನಲ್ಲಿ ಒಂದು ಗೋಡೆಯನ್ನು ಮತ್ತು ಇನ್ನೊಂದು ಗೋಡೆಗೆ ಬಂಗಾರದ ಸರಪಣಿಗಳನ್ನು ಕಟ್ಟಿಸಿದನು. 22 ದೇವಾಲಯದ ಎಲ್ಲಾ ಗೋಡೆಗಳನ್ನೂ ಮಹಾಪರಿಶುದ್ಧ ಸ್ಥಳಕ್ಕೆ ಸೇರಿದ ವೇದಿಯನ್ನೂ ಪೂರ್ಣವಾಗಿ ಬಂಗಾರದ ತಗಡಿನಿಂದ ಹೊದಿಸಿದನು.
23 ಇದಲ್ಲದೆ ಅವನು ಎಣ್ಣೇ ಮರದಿಂದ ಹತ್ತು ಮೊಳ ಎತ್ತರವಾದ ಎರಡು ಕೆರೂಬಿಗಳನ್ನು ಮಾಡಿಸಿ, ಅವುಗಳನ್ನು ಗರ್ಭಗೃಹದಲ್ಲಿ ಇರಿಸಿದನು. 24 ಪ್ರತಿಯೊಂದು ಕೆರೂಬಿಯ ರೆಕ್ಕೆಗಳು ಐದೈದು ಮೊಳ ಉದ್ದವಿದ್ದವು. ಎರಡು ರೆಕ್ಕೆಗಳ ಅಂತರವು ಒಂದು ತುದಿಯಿಂದ ಇನ್ನೊಂದು ತುದಿಗೆ ಹತ್ತು ಮೊಳಗಳಾಗಿದ್ದವು. 25 ಇನ್ನೊಂದು ಕೆರೂಬಿಯ ರೆಕ್ಕೆಗಳ ಅಂತರವು ಹತ್ತು ಮೊಳವಾಗಿತ್ತು. ಎರಡೂ ಕೆರೂಬಿಗಳ ಅಳತೆಯೂ ಆಕಾರವೂ ಒಂದೇಯಾಗಿದ್ದವು. 26 ಅವೆರಡು ಹತ್ತತ್ತು ಮೊಳ ಎತ್ತರವಾಗಿದ್ದವು. 27 ಅವನು ಅವುಗಳನ್ನು ದೇವಾಲಯದ ಗರ್ಭಗೃಹದಲ್ಲಿಡಿಸಿದನು. ಅವುಗಳ ರೆಕ್ಕೆಗಳು ಚಾಚಿದಂತಿದ್ದುದರಿಂದ ಮೊದಲನೆಯ ಕೆರೂಬಿಯ ಒಂದು ರೆಕ್ಕೆಯು ಈಚೆಯ ಗೋಡೆಗೂ, ಎರಡನೆಯ ಕೆರೂಬಿಯ ಒಂದು ರೆಕ್ಕೆಯು ಆಚೆಯ ಗೋಡೆಗೂ ತಗುಲಿದ್ದವು. ಅವುಗಳ ಬೇರೆ ಎರಡು ರೆಕ್ಕೆಗಳು ಮನೆಯ ಮಧ್ಯದಲ್ಲಿ ಒಂದನ್ನೊಂದು ತಗುಲಿದಂತೆ ಇತ್ತು. 28 ಈ ಕೆರೂಬಿಗಳು ಬಂಗಾರದ ತಗಡುಗಳಿಂದ ಹೊದಿಸಲ್ಪಟ್ಟಿದ್ದವು. 29 ಅವನು ದೇವಾಲಯದ ಎಲ್ಲಾ ಗೋಡೆಗಳಲ್ಲಿ ಹೊರಗೂ ಮತ್ತು ಒಳಗೂ ಕೆರೂಬಿ, ಖರ್ಜೂರವೃಕ್ಷ ಮತ್ತು ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿದನು. 30 ದೇವಾಲಯದ ಒಳಗಣ ಮತ್ತು ಹೊರಗಣ ನೆಲವನ್ನು ಬಂಗಾರದ ತಗಡುಗಳಿಂದ ಹೊದಿಸಿದನು. 31 ಗರ್ಭಗೃಹದ ಬಾಗಿಲಿಗೆ ಎಣ್ಣೇ ಮರದ ಬಾಗಿಲುಗಳನ್ನು ಇಡಿಸಿದನು. ಚೌಕಟ್ಟು ಪಂಚಕೋನಗಳಿಂದ ಕೂಡಿತ್ತು. 32 ಎಣ್ಣೇ ಮರದ ಆ ಎರಡು ಬಾಗಿಲುಗಳಲ್ಲಿಯೂ ಕೆರೂಬಿ, ಖರ್ಜೂರವೃಕ್ಷ ಮತ್ತು ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿ ಬಾಗಿಲುಗಳಿಗೆ ಬಂಗಾರದ ತಗಡುಗಳನ್ನು ಹೊದಿಸಿ, ಚಿತ್ರಗಳಿದ್ದಲ್ಲಿ ಆ ತಗಡನ್ನು ಇಡಿಸಿದನು.
33 ಇದಲ್ಲದೆ ಅವನು ಪರಿಶುದ್ಧ ಸ್ಥಳದ ಬಾಗಿಲಿಗೆ ಎಣ್ಣೇ ಮರದಿಂದ ಚತುಷ್ಕೋಣದ ಚೌಕಟ್ಟನ್ನು ಮಾಡಿಸಿ 34 ಅದಕ್ಕೆ ತುರಾಯಿಮರದ ಎರಡು ಬಾಗಿಲುಗಳನ್ನು ಇಡಿಸಿದನು. ಪ್ರತಿಯೊಂದು ಬಾಗಿಲು ಎರಡು ಭಾಗವುಳ್ಳದ್ದಾಗಿ ಮಡಿಚಬಹುದಾಗಿತ್ತು. 35 ಈ ಬಾಗಿಲುಗಳಲ್ಲಿ ಕೆರೂಬಿ, ಖರ್ಜೂರವೃಕ್ಷ ಮತ್ತು ಅರಳಿದ ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿ, ಅವುಗಳಿಗೆ ಬಂಗಾರದ ತಗಡನ್ನು ಹೊದಿಸಿ, ಕೆತ್ತನೆಯಿದ್ದಲ್ಲಿ ಆ ತಗಡನ್ನು ಇಡಿಸಿದನು. 36 ದೇವಾಲಯದ ಪ್ರಾಕಾರದಲ್ಲಿ ಮೂರು ಸಾಲು ಕಲ್ಲಿನ ಕಂಬಗಳನ್ನೂ, ಒಂದು ಸಾಲು ದೇವದಾರಿನ ಕಂಬಗಳನ್ನೂ ಇರಿಸಿದನು. 37 ಸೊಲೊಮೋನನ ಆಳ್ವಿಕೆಯ ನಾಲ್ಕನೆಯ ವರ್ಷದ ವೈಶಾಖ ಮಾಸದಲ್ಲಿ ಯೆಹೋವನ ಆಲಯದ ಅಸ್ತಿವಾರವನ್ನು ಹಾಕಿದರು. 38 ಹನ್ನೊಂದನೆಯ ವರ್ಷದ ಎಂಟನೆಯ ತಿಂಗಳಾದ ಕಾರ್ತಿಕ ಮಾಸದಲ್ಲಿ ದೇವಾಲಯವೂ ಮತ್ತು ಅದರ ಎಲ್ಲಾ ಕಟ್ಟಡಗಳೂ ನೇಮದ ಪ್ರಕಾರ ಸಿದ್ಧವಾದವು. ದೇವಾಲಯವನ್ನು ಕಟ್ಟುವುದಕ್ಕೆ ಏಳು ವರ್ಷ ಹಿಡಿಯಿತು.
* 6:2 ಮೊಳ 27 ಮೀಟರ್. 6:2 ಇಪ್ಪತ್ತು ಮೊಳ, 9 ಮೀಟರ್. 6:2 ಎತ್ತರ ಮೂವತ್ತು ಮೊಳ 13.5 ಮೀಟರ್. § 6:3 ಇಪ್ಪತ್ತು ಮೊಳ, 9 ಮೀಟರ್. * 6:3 ಹತ್ತು ಮೊಳ 4.5 ಮೀಟರ್