19
ಹಿಜ್ಕೀಯನು ಪ್ರವಾದಿಯಾದ ಯೆಶಾಯನನ್ನು ವಿಚಾರಿಸಿದ್ದು
1 ಅರಸನಾದ ಹಿಜ್ಕೀಯನು ಅದನ್ನು ಕೇಳಿ, ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಕಟ್ಟಿಕೊಂಡು ಯೆಹೋವನ ಆಲಯಕ್ಕೆ ಹೋದನು.
2 ಇದಲ್ಲದೆ, ಅವನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಕಾರ್ಯದರ್ಶಿಯೂ, ಲೇಖಕನಾದ ಶೆಬ್ನ, ವೃದ್ಧ ಯಾಜಕರು ಇವರನ್ನು ಕರೆಯಿಸಿ ಅವರಿಗೆ ಆಜ್ಞಾಪಿಸಿದ್ದೇನೆಂದರೆ, ನೀವು ಗೋಣಿತಟ್ಟನ್ನು ಕಟ್ಟಿಕೊಂಡು ಆಮೋಚನ ಮಗನೂ, ಪ್ರವಾದಿಯೂ ಆಗಿರುವ ಯೆಶಾಯನ ಬಳಿಗೆ ಹೋಗಿರಿ.
3 ಅವರು ಹಿಜ್ಕೀಯನಿಗೆ, “ಈ ದಿನದಲ್ಲಿ ನಮಗೆ ಮಹಾಕಷ್ಟವು ಸಂಭವಿಸಿರುತ್ತದೆ. ನಾವು ಅಪಮಾನವನ್ನು, ನಿಂದೆಯನ್ನು ಅನುಭವಿಸಬೇಕಾಗಿ ಬಂದಿದೆ. ಹೆರಿಗೆಯ ಕಾಲ ಬಂದಿದೆ; ಆದರೆ ಹೆರುವುದಕ್ಕೆ ಬಲ ಸಾಲದು.
4 ಜೀವಸ್ವರೂಪನಾದ ದೇವರನ್ನು ದೂಷಿಸುವುದಕ್ಕಾಗಿ ತನ್ನ ಯಜಮಾನನಾದ ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ನಿಂದನೆಯ ಮಾತುಗಳನ್ನು, ನಿನ್ನ ದೇವರಾದ ಯೆಹೋವನು ಕೇಳಿರುವನು. ನಿನ್ನ ದೇವರಾದ ಯೆಹೋವನು ತಾನು ಹೇಳಿದ ಮಾತುಗಳ ನಿಮಿತ್ತ ಮುಯ್ಯಿತೀರಿಸುವನು. ಆದುದರಿಂದ ಉಳಿದಿರುವ ಸ್ವಲ್ಪ ಜನರಿಗಾಗಿಯಾದರೂ ಆತನನ್ನು ಪ್ರಾರ್ಥಿಸು ಎಂಬುದಾಗಿ ಹಿಜ್ಕೀಯನು ಹೇಳುತ್ತಾನೆ” ಎಂದು ಹೇಳಿರಿ ಅಂದನು.
5 ಅರಸನಾದ ಹಿಜ್ಕೀಯನ ಸೇವಕರು ಯೆಶಾಯನ ಬಳಿಗೆ ಬಂದಾಗ,
6 ಯೆಶಾಯನು ಅವರಿಗೆ, “ನೀವು ಹಿಂತಿರುಗಿ ಹೋಗಿ ನಿಮ್ಮ ರಾಜನಿಗೆ, ‘ಯೆಹೋವನು ಹೀಗೆ ಹೇಳುತ್ತಾನೆ, ನೀನು ಕೇಳಿದ ಮಾತುಗಳ ದೆಸೆಯಿಂದ ಹೆದರಬೇಡ, ಅಶ್ಶೂರದ ಅರಸನ ಸೇವಕರು ಆ ಮಾತುಗಳಿಂದ ನನ್ನನ್ನೇ ದೂಷಿಸಿದ್ದಾರೆ.
7 ಆದುದರಿಂದ, ನಾನು ಅವನ ಮೇಲೆ ಭಯದ ಆತ್ಮವನ್ನು ಬರಮಾಡುವೆನು. ಅವನು ಒಂದು ಸುದ್ದಿಯನ್ನು ಕೇಳಿ ಸ್ವದೇಶಕ್ಕೆ ಹಿಂದಿರುಗಿ ಹೋಗಿ ಅಲ್ಲಿ ಕತ್ತಿಯಿಂದ ನಾಶವಾಗುವಂತೆ ಮಾಡುವೆನು’ ಎಂಬುದಾಗಿ ಯೆಹೋವನು ನಿಮ್ಮ ಯಜಮಾನನಿಗೆ ಹೇಳುತ್ತಾನೆ” ಎಂದು ಉತ್ತರಕೊಟ್ಟನು.
ಅಶ್ಶೂರದವರು ಹಾಕಿದ ಇನ್ನೊಂದು ಬೆದರಿಕೆ
8 ರಬ್ಷಾಕೆಯು ಹಿಂದಿರುಗಿ ಹೋಗುವಾಗ ದಾರಿಯಲ್ಲಿ ಅಶ್ಶೂರದ ಅರಸನು ಲಾಕೀಷನ್ನು ಬಿಟ್ಟು ಹೋದನೆಂಬ ವರ್ತಮಾನ ಕೇಳಿ ಲಿಬ್ನಕ್ಕೆ ಹೋಗಿ, ಅಲ್ಲಿ ಅವನನ್ನು ಕಂಡನು. ಆಗ ಅವನು ಆ ಪಟ್ಟಣಕ್ಕೆ ವಿರುದ್ಧವಾಗಿ ಯುದ್ಧಮಾಡುತ್ತಾ ಇದ್ದನು.
9 ಅಷ್ಟರಲ್ಲಿ ಐಗುಪ್ತದ ಅರಸನೂ ಮತ್ತು ಕೂಷಿನ ಅರಸನಾದ ತಿರ್ಹಾಕನು ತನಗೆ ವಿರೋಧವಾಗಿ ಯುದ್ಧಮಾಡಲು ಹೊರಟಿದ್ದಾನೆ ಎಂಬ ಸುದ್ದಿಯನ್ನು ಸನ್ಹೇರೀಬನು ಕೇಳಿದಾಗ, ಯೆಹೂದದ ಅರಸನಾದ ಹಿಜ್ಕೀಯನ ಬಳಿಗೆ ಪುನಃ ದೂತರನ್ನು ಕಳುಹಿಸಿ,
10 ಅವರ ಮುಖಾಂತರ, “ಯೆಹೂದದ ಅರಸನಾದ ಹಿಜ್ಕೀಯನಿಗೆ, ‘ಯೆರೂಸಲೇಮನ್ನು ಅಶ್ಶೂರದ ಅರಸನಿಗೆ ಒಪ್ಪಿಸುವುದಿಲ್ಲವೆಂದು ನೀನು ನಂಬಿರುವ ನಿನ್ನ ದೇವರು ನಿನ್ನನ್ನು ಮೋಸಗೊಳಿಸದಿರಲಿ
11 ಅಶ್ಶೂರದ ಅರಸುಗಳು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಮಾಡಿರುವರೆಂದು ಕೇಳಿರುವೆಯಲ್ಲಾ. ಹೀಗಿದ್ದ ಮೇಲೆ ನೀನು ತಪ್ಪಿಸಿಕೊಳ್ಳುವೆಯೋ?
12 ನನ್ನ ಪೂರ್ವಿಕರು ಗೋಜಾನ್, ಖಾರಾನ್, ರೆಚೆಫ್ ಎಂಬ ಪಟ್ಟಣಗಳ ಜನರನ್ನೂ ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಎದೆನಿನ ಜನರನ್ನೂ ನಾಶಮಾಡುವುದಕ್ಕೆ ಹೋದಾಗ ಅವರ ದೇವತೆಗಳು ಅವರನ್ನು ಕಾಪಾಡಿದವೋ?
13 ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ ಎಂಬ ಪಟ್ಟಣಗಳ ಅರಸರು ಏನಾದರು? ಎಂದು ನಿನಗೆ ತಿಳಿಯದೋ ಎಂದು ಪತ್ರವನ್ನು ದೂತರ ಮೂಲಕ ಕಳುಹಿಸಿದ.’ ”
ಹಿಜ್ಕೀಯನ ಪ್ರಾರ್ಥನೆ
14 ಹಿಜ್ಕೀಯನು ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ ಯೆಹೋವನ ಆಲಯಕ್ಕೆ ಹೋಗಿ ಅದನ್ನು ಯೆಹೋವನ ಮುಂದೆ ತೆರೆದಿಟ್ಟನು.
15 ಹಿಜ್ಕೀಯನು ಯೆಹೋವನ ಮುಂದೆ ಪ್ರಾರ್ಥನೆ ಮಾಡಿ ಹೇಳಿದ್ದೇನೆಂದರೆ, “ಕೆರೂಬಿಗಳ ಮೇಲೆ ಆಸೀನನಾಗಿರುವಾತನೇ, ಇಸ್ರಾಯೇಲರ ದೇವರೇ, ಯೆಹೋವನೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀನೊಬ್ಬನೇ, ಪರಲೋಕಭೂಲೋಕಗಳನ್ನು ಉಂಟುಮಾಡಿದವನು ನೀನೇ.
16 ಯೆಹೋವನೇ, ಕಿವಿಗೊಟ್ಟು ಕೇಳು; ಯೆಹೋವನೇ, ಕಣ್ಣಿಟ್ಟು ನೋಡು. ಸನ್ಹೇರೀಬನು ಜೀವಸ್ವರೂಪದೇವರಾದ ನಿನ್ನನ್ನು ನಿಂದಿಸುವುದಕ್ಕೋಸ್ಕರ ಹೇಳಿ ಕಳುಹಿಸಿದ ಮಾತುಗಳನ್ನು ಮನಸ್ಸಿಗೆ ತಂದುಕೋ.
17 ಯೆಹೋವನೇ, ಅಶ್ಶೂರದ ಅರಸರು ದೇಶಗಳನ್ನೂ ಜನಾಂಗಗಳನ್ನೂ ಹಾಳುಮಾಡಿದರು.
18 ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದ್ದು ನಿಜ. ಅವು ದೇವತೆಗಳಲ್ಲ. ಮನುಷ್ಯರು ಕೆತ್ತಿದ ಕಲ್ಲು ಮತ್ತು ಮರಗಳ ಬೊಂಬೆಗಳಷ್ಟೇ. ಆದುದರಿಂದ ಅವುಗಳನ್ನು ಹಾಳುಮಾಡುವುದು ಅವರಿಗೆ ಸಾಧ್ಯವಾಯಿತು.
19 ಯೆಹೋವನೇ, ನಮ್ಮ ದೇವರೇ, ನೀನೊಬ್ಬನೇ ದೇವರೆಂಬುದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು” ಎಂದು ಪ್ರಾರ್ಥಿಸಿದನು.
ಸನ್ಹೇರೀಬನ ಪತನವನ್ನು ಯೆಶಾಯನು ಮುಂತಿಳಿಸಿದ್ದು
20 ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ, “ಇಸ್ರಾಯೇಲರ ದೇವರಾದ ಯೆಹೋವನು ಹೀಗೆ ಅನ್ನುತ್ತಾನೆ, ‘ನೀನು ಅಶ್ಶೂರದ ಅರಸನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹವನ್ನು ಕೇಳಿದ್ದೇನೆ.’
21 ಯೆಹೋವನು ಅವನನ್ನು ಕುರಿತು,
“ಕನ್ನಿಕೆಯಾಗಿರುವ ಚೀಯೋನಿನ ಕುಮಾರ್ತೆಯು ನಿನ್ನನ್ನು ತಿರಸ್ಕರಿಸಿ ಪರಿಹಾಸ್ಯಮಾಡುತ್ತಾಳೆ.
ಯೆರೂಸಲೇಮಿನ ಕುಮಾರ್ತೆಯು ನಿನ್ನ ಹಿಂದಿನಿಂದ ತಲೆಯಾಡಿಸುತ್ತಾಳೆ.
22 ನೀನು ಯಾರನ್ನು ನಿಂದಿಸಿ ಯಾರನ್ನು ದೂಷಿಸಿದ್ದೀ?
ಯಾರ ವಿರುದ್ಧವಾಗಿ ಬಾಯ್ದೆರೆದು ಹೀಯಾಳಿಸಿದ್ದಿ?
ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾಯೇಲರ
ಸದಮಲಸ್ವಾಮಿಯನ್ನಲ್ಲವೇ!
23 ನೀನು ನಿನ್ನ ದೂತರ ಮುಖಾಂತರವಾಗಿ ಕರ್ತನನ್ನು ನಿಂದಿಸಿ,
ರಥಸಮೂಹದೊಡನೆ ಪರ್ವತಶಿಖರಗಳನ್ನು ಹತ್ತಿದ್ದೇನೆ.
ಲೆಬನೋನಿನ ದುರ್ಗಮಸ್ಥಳಗಳಿಗೆ ಹೋಗಿದ್ದೇನೆ. ಅದರ
ಎತ್ತರವಾದ ದೇವದಾರುವೃಕ್ಷಗಳನ್ನೂ ಶ್ರೇಷ್ಠವಾದ ತುರಾಯಿಮರಗಳನ್ನೂ ಕಡಿದುಬಿಟ್ಟಿದ್ದೇನೆ.
ಅಲ್ಲಿನ ಬಹು ದೂರ ನಿವಾಸಸ್ಥಳಗಳನ್ನೂ,
ಉದ್ಯಾನವನಗಳನ್ನೂ ಪ್ರವೇಶಿಸಿದ್ದೇನೆ.
24 ನಾನು ಅನ್ಯದೇಶದಲ್ಲಿ ಬಾವಿಗಳನ್ನು ಅಗೆದು ನೀರು ತೆಗೆದು ಕುಡಿದಿದ್ದೇನೆ!
ನನ್ನ ಪಾದಗಳಿಂದ ಐಗುಪ್ತದ ಎಲ್ಲಾ ನದಿಗಳನ್ನು ಬತ್ತಿಸಿದ್ದೇನೆ ಎಂಬುದಾಗಿ ನೀನು ಕೊಚ್ಚಿಕೊಂಡಿದ್ದೀಯಲ್ಲವೇ?”
25 ಬಹು ಕಾಲದ ಹಿಂದೆಯೇ ಇದನೆಲ್ಲ ಗೊತ್ತುಮಾಡಿದವನು ನಾನಲ್ಲವೇ?
ಪೂರ್ವಕಾಲದಲ್ಲಿ ನಿರ್ಣಯಿಸಿದ್ದನ್ನು ಈಗ ನೆರವೇರಿಸಿದ್ದೇನೆ.
ಆದುದರಿಂದ ಕೋಟೆ, ಕೊತ್ತಲುಗಳುಳ್ಳ ಪಟ್ಟಣಗಳನ್ನು
ಹಾಳುದಿಬ್ಬಗಳನ್ನಾಗಿ ಮಾಡುವುದು ನಿನಗೆ ಸಾಧ್ಯವಾಯಿತೋ?
26 ಅವುಗಳ ನಿವಾಸಿಗಳು ಬಲವಿಲ್ಲದವರಾಗಿ
ಹೆದರಿ ಆಶಾಭಂಗಪಟ್ಟು ಕಳವಳಗೊಂಡರು;
ಅವರು ಹೊಲದ ಗಿಡಕ್ಕೂ ಕಾಯಿ ಪಲ್ಯಕ್ಕೂ
ಹಸಿರು ಹುಲ್ಲಿಗೂ, ಮನೆಯ ಮೇಲೆ ಬೆಳೆಯುವ ಹಾಗೂ, ಹೊಲದ ಹುಲ್ಲಿನ ಹಾಗೆ ಬೆಳೆಯುವುದಕ್ಕಿಂತ
ಮೊದಲೇ ಸುಟ್ಟುಹೋದ ಪೈರಿಗೆ ಸಮಾನರಾದರು.
27 “ನೀನು ಕುಳಿತುಕೊಳ್ಳುವುದು,
ಹೋಗುವುದು, ಬರುವುದೂ ನನಗೆ ಗೊತ್ತುಂಟು.
ನೀನು ನನ್ನ ಮೇಲೆ ರೌದ್ರಾವೇಷವಾಗಿರುವುದನ್ನು ಬಲ್ಲೆನು.
28 ನೀನು ನನಗೆ ವಿರುದ್ಧವಾಗಿ ಉಬ್ಬಿಕೊಂಡಿರುವುದೂ,
ಕೋಪವುಳ್ಳವನಾಗಿರುವುದೂ ನನಗೆ ತಿಳಿದು ಬಂದಿದೆ.
ಆದುದರಿಂದ ನಿನ್ನ ಮೂಗಿಗೂ, ನಿನ್ನ ಬಾಯಿಗೂ ಕಡಿವಾಣವನ್ನೂ
ಹಾಕಿ, ಬಂದ ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು” ಎಂಬುದಾಗಿ ಹೇಳಿದ್ದಾನೆ.
29 ಈ ಮಾತುಗಳು ನೆರವೇರುವವು ಎಂಬುದಕ್ಕೆ
ನೀವು ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ
ಮುಂದಿನ ವರ್ಷದಲ್ಲಿ ಮಿಕ್ಕಿರುವ ಬೆಳೆಯನ್ನೂ,
ಮೂರನೆಯ ವರ್ಷ ನೀವು ಹೊಲಗಳಲ್ಲಿ ಬಿತ್ತಿ ಬೆಳೆದದ್ದನ್ನು,
ದ್ರಾಕ್ಷಿತೋಟಗಳಲ್ಲಿ ವ್ಯವಸಾಯ ಮಾಡಿ ಕೂಡಿಸಿದ್ದನ್ನೂ ಅನುಭವಿಸುವುದೇ ಗುರುತಾಗಿರುವುದು.
30 ತಪ್ಪಿಸಿಕೊಂಡು ಉಳಿದ ಯೆಹೂದ್ಯರು
ದೇಶದಲ್ಲಿ ನೆಲೆಗೊಂಡು ಅಭಿವೃದ್ದಿಯಾಗುವರು.
31 ಯೆರೂಸಲೇಮಿನಲ್ಲಿ ಉಳಿದವರು ಹಬ್ಬಿ ಹರಡಿಕೊಳ್ಳುವರು,
ಚೀಯೋನ್ ಪರ್ವತದಲ್ಲಿ ತಪ್ಪಿಸಿಕೊಂಡವರು ಅಭಿವೃದ್ದಿಹೊಂದುವರು. ಸೇನಾಧೀಶ್ವರನಾದ ಯೆಹೋವನ ಅನುಗ್ರಹವೇ ಇದನ್ನು ನೆರವೇರಿಸುವುದು.
32 ಯೆಹೋವನು ಅಶ್ಶೂರದ ಅರಸನ ವಿಷಯವಾಗಿ,
“ನನ್ನ ಮಾತನ್ನು ಕೇಳು
ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ.
ಅದಕ್ಕೆ ಬಾಣವನ್ನೆಸೆಯುವುದಿಲ್ಲ.
ಗುರಾಣಿ ಹಿಡಿದಿರುವವರನ್ನು ಕಳುಹಿಸುವುದಿಲ್ಲ.
ಅದನ್ನು ಕೆಡವಿಬಿಡುವುದಕ್ಕೋಸ್ಕರ ಅದರ ಎದುರಾಗಿ ಮಣ್ಣಿನ ದಿಬ್ಬವನ್ನು ಸೃಷ್ಟಿಸುವುದಿಲ್ಲ.
33 ಅವನು ಬಂದ ದಾರಿಯಿಂದಲೇ
ಹಿಂದಿರುಗಿ ಹೋಗುವನು.
ಈ ಪಟ್ಟಣಕ್ಕೆ ಬರುವುದೇ ಇಲ್ಲ ಎಂದು ಹೇಳಿದ್ದಲ್ಲದೆ
34 ನನಗಾಗಿಯೂ, ನನ್ನ ಸೇವಕನಾದ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು” ಎಂದು ವಾಗ್ದಾನ ಮಾಡಿದ್ದಾನೆ.
35 ಅದೇ ರಾತ್ರಿಯಲ್ಲಿ ಯೆಹೋವನ ದೂತನು ಹೊರಟು ಬಂದು ಅಶ್ಶೂರ್ಯದ ಪಾಳೆಯದಲ್ಲಿ ಒಂದು ಲಕ್ಷದ ಎಂಭತ್ತೈದು ಸಾವಿರ ಸೈನಿಕರನ್ನು ಸಂಹರಿಸಿದನು. ಅಶ್ಶೂರ್ಯರು ಬೆಳಿಗ್ಗೆ ಎದ್ದು ನೋಡಿದಾಗ ಪಾಳೆಯದ ತುಂಬಾ ಹೆಣಗಳು ಬಿದ್ದಿದ್ದವು.
36 ಆಗ ಅಶ್ಶೂರ್ಯರ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಮಾಡಿದನು.
37 ಅವನು ಒಂದು ದಿನ ದೇವಾಲಯಕ್ಕೆ ಹೋಗಿ ತನ್ನ ದೇವರಾದ ನಿಸ್ರೋಕನನ್ನು ಆರಾಧಿಸುತ್ತಿದ್ದಾಗ ಅದ್ರಮ್ಮೆಲೆಕ್, ಸರೆಚೆರ್ ಎಂಬುವವರು ಅವನನ್ನು ಕತ್ತಿಯಿಂದ ಕೊಂದು ಅರರಾಟ್ ದೇಶಕ್ಕೆ ಓಡಿಹೋದರು. ಅವನ ನಂತರ ಅವನ ಮಗನಾದ ಏಸರ್ ಹದ್ದೋನನು ಅರಸನಾದನು.