16
ದೋಷಪರಿಹಾರಕದ ಮಹಾದಿನ
1 ಆರೋನನ ಇಬ್ಬರು ಮಕ್ಕಳು ಯೆಹೋವನ ಸನ್ನಿಧಿಗೆ ಬಂದು ನಾಶವಾದ ಮೇಲೆ ಯೆಹೋವನು ಮೋಶೆಯ ಸಂಗಡ ಮಾತನಾಡಿ,
2 “ನಿನ್ನ ಅಣ್ಣನಾದ ಆರೋನನು ಮನಸ್ಸಿಗೆ ಬಂದಾಗೆಲ್ಲಾ ತೆರೆಯನ್ನು ದಾಟಿ ಮಹಾಪವಿತ್ರವಾದ ಸ್ಥಾನದೊಳಕ್ಕೆ ಮಂಜೂಷದ ಮೇಲಣ ಕೃಪಾಸನದ ಹತ್ತಿರಕ್ಕೆ ಬರಬಾರದೆಂದು ಅವನಿಗೆ ಹೇಳು. ನಾನು ಕೃಪಾಸನದ ಮೇಲೆ ಮೇಘದಲ್ಲಿ ಕಾಣಿಸಿಕೊಳ್ಳುವುದರಿಂದ ಅವನು ನಾಶವಾಗುವನು.
3 ಆರೋನನು ಮಹಾಪವಿತ್ರಸ್ಥಾನದೊಳಗೆ ಬರುವಾಗ ಮುಂದೆ ಹೇಳುವ ರೀತಿಯಲ್ಲಿ ಬರಬೇಕು. ಅವನು ದೋಷಪರಿಹಾರಕ ಯಜ್ಞಕ್ಕಾಗಿ ಹೋರಿಯನ್ನು ಮತ್ತು ಸರ್ವಾಂಗಹೋಮಕ್ಕಾಗಿ ಟಗರನ್ನು ತರಬೇಕು.
4 ಅವನು ಪರಿಶುದ್ಧವಾದ ನಾರಿನ ನಿಲುವಂಗಿಯನ್ನು ತೊಟ್ಟುಕೊಂಡು, ನಾರಿನ ಒಳಉಡುಪನ್ನು ಹಾಕಿಕೊಂಡು, ನಾರಿನ ನಡುಕಟ್ಟನ್ನು ಕಟ್ಟಿಕೊಂಡು ಮತ್ತು ತಲೆಗೆ ನಾರಿನ ಪೇಟವನ್ನು ಸುತ್ತಿಕೊಳ್ಳಬೇಕು. ಅವು ದೀಕ್ಷಾವಸ್ತ್ರಗಳಾದುದರಿಂದ ಅವನು ಅವುಗಳನ್ನು ಧರಿಸಿಕೊಳ್ಳುವುದಕ್ಕೆ ಮುಂಚೆ ಸ್ನಾನಮಾಡಬೇಕು.
5 ಇಸ್ರಾಯೇಲರ ಜನಸಮೂಹದಿಂದ ದೋಷಪರಿಹಾರಕ ಯಜ್ಞಕ್ಕಾಗಿ ಎರಡು ಹೋತಗಳನ್ನು ಮತ್ತು ಸರ್ವಾಂಗಹೋಮಕ್ಕಾಗಿ ಒಂದು ಟಗರನ್ನು ತೆಗೆದುಕೊಂಡು ಬರಬೇಕು.
6 ಆರೋನನು ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರ ಮಾಡಬೇಕು.
7 ಆ ಎರಡು ಹೋತಗಳನ್ನು ಅವನು ದೇವದರ್ಶನದ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲಿ ನಿಲ್ಲಿಸಬೇಕು.
8 ಆಗ ಅವನು ಆ ಹೋತಗಳಲ್ಲಿ ಒಂದು ಯೆಹೋವನಿಗೋಸ್ಕರವೆಂದು ಮತ್ತೊಂದು ಅಜಾಜೇಲನಿಗೋಸ್ಕರವೆಂದು ಚೀಟುಗಳನ್ನು ಬರೆದು ಹಾಕಬೇಕು.
9 ಯಾವ ಹೋತ ಯೆಹೋವನದೆಂದು ಗೊತ್ತಾಗುವುದೋ ಅದನ್ನು ಆರೋನನು ದೋಷಪರಿಹಾರಕ ಯಜ್ಞವಾಗಿ ಸಮರ್ಪಿಸಬೇಕು.
10 ಯಾವ ಹೋತ ಅಜಾಜೇಲನದೆಂದು ಗೊತ್ತಾಗುವುದೋ ಅದನ್ನು ಯೆಹೋವನ ಸನ್ನಿಧಿಯಲ್ಲಿ ಸಜೀವವಾಗಿಯೇ ನಿಲ್ಲಿಸಿ, ಅದರ ಮೇಲೆ ದೋಷವನ್ನು ಹೊರಿಸಿ ಅರಣ್ಯಕ್ಕೆ ಅಜಾಜೇಲನಿಗಾಗಿ ಬಿಡಬೇಕು.
11 “ಆರೋನನು ತನಗಾಗಿ ದೋಷಪರಿಹಾರಕ ಯಜ್ಞದ ಹೋರಿಯನ್ನು ಸಮರ್ಪಿಸಿ ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರವನ್ನು ಮಾಡಬೇಕು.
12 ಅವನು ತನಗೋಸ್ಕರ ಹೋರಿಯನ್ನು ವಧಿಸಿದ ಮೇಲೆ ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ, ಪರಿಮಳಧೂಪದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ಅವುಗಳನ್ನು ತೆರೆಯೊಳಗೆ ತರಬೇಕು.
13 ಅವನು ಆ ಧೂಪವನ್ನು ಯೆಹೋವನ ಸನ್ನಿಧಿಯಲ್ಲಿಯೇ ಕೆಂಡಗಳ ಮೇಲೆ ಹಾಕಬೇಕು. ಅವನಿಗೆ ಪ್ರಾಣನಷ್ಟವಾಗದಂತೆ ಆ ಧೂಪದ ಹೊಗೆಯು ಮೇಘದೋಪಾದಿಯಲ್ಲಿ ಆಜ್ಞಾಶಾಸನಗಳ ಮೇಲಣ ಕೃಪಾಸನವನ್ನು ಆವರಿಸಿಕೊಳ್ಳುವುದು.
14 ಆಗ ಅವನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಕೃಪಾಸನದ ಪೂರ್ವಭಾಗದ ಮೇಲೆ ಬೆರಳಿನಿಂದ ಚಿಮುಕಿಸಿ ಕೃಪಾಸನದ ಎದುರಾಗಿಯೂ ಏಳು ಸಾರಿ ಚಿಮುಕಿಸಬೇಕು.
15 “ತರುವಾಯ ಅವನು ಜನರಿಗಾಗಿ ಮಾಡಿದ ದೋಷಪರಿಹಾರಕ ಯಜ್ಞದ ಹೋತವನ್ನು ವಧಿಸಿ, ಅದರ ರಕ್ತವನ್ನು ತೆರೆಯೊಳಗೆ ತಂದು, ಹೋರಿಯ ರಕ್ತದಿಂದ ಮಾಡಿದಂತೆಯೇ ಇದರ ರಕ್ತದಿಂದಲೂ ಮಾಡಿ, ಕೃಪಾಸನದ ಮೇಲೆಯೂ ಮತ್ತು ಅದರ ಎದುರಾಗಿಯೂ ಚಿಮುಕಿಸಬೇಕು.
16 ಹೀಗೆ ಇಸ್ರಾಯೇಲರು ನಾನಾ ವಿಧವಾದ ಅಶುದ್ಧತ್ವ, ಅಪರಾಧ, ದ್ರೋಹ ಇವುಗಳಿಂದ ಮಹಾಪವಿತ್ರಸ್ಥಾನಕ್ಕೆ ಉಂಟುಮಾಡಿದ ದೋಷವನ್ನು ಆರೋನನು ಪರಿಹರಿಸುವನು. ಅಶುದ್ಧರಾದ ಅವರ ನಡುವೆ ಇರುವ ದೇವದರ್ಶನದ ಗುಡಾರಕ್ಕೋಸ್ಕರವೂ ಅವನು ಹಾಗೆಯೇ ದೋಷಪರಿಹಾರ ಮಾಡುವನು.
17 ಅವನು ದೋಷಪರಿಹಾರ ಮಾಡುವುದಕ್ಕಾಗಿ ಮಹಾ ಪವಿತ್ರಸ್ಥಾನದೊಳಗೆ ಹೋಗಿ ಹೊರಗೆ ಬರುವ ತನಕ ಯಾರೂ ದೇವದರ್ಶನದ ಗುಡಾರದಲ್ಲಿ ಹೋಗಬಾರದು. ಹಾಗೆ ತನಗಾಗಿಯೂ, ತನ್ನ ಮನೆತನದವರಿಗಾಗಿಯೂ ಮತ್ತು ಇಸ್ರಾಯೇಲರ ಎಲ್ಲಾ ಜನಸಮೂಹಕ್ಕಾಗಿಯೂ ದೋಷಪರಿಹಾರ ಮಾಡುವನು.
18 ತರುವಾಯ ಅವನು ಹೊರಗೆ ಬಂದು ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯ ಬಳಿಗೆ ಹೋಗಿ ಅದಕ್ಕಾಗಿ ದೋಷಪರಿಹಾರ ಮಾಡಬೇಕು. ಆ ಹೋರಿಯ ರಕ್ತದಲ್ಲಿಯೂ ಹಾಗೂ ಆ ಹೋತದ ರಕ್ತದಲ್ಲಿಯೂ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಬೇಕು.
19 ಅವನು ಆ ರಕ್ತದಲ್ಲಿ ಸ್ವಲ್ಪವನ್ನು ಅದರ ಮೇಲೆ ಏಳು ಸಾರಿ ಬೆರಳಿನಿಂದ ಚಿಮುಕಿಸಿ ಇಸ್ರಾಯೇಲರಿಂದ ಅದಕ್ಕೆ ಉಂಟಾದ ಅಶುದ್ಧತ್ವವನ್ನು ಹೋಗಲಾಡಿಸಿ ಅದನ್ನು ಪರಿಶುದ್ಧಪಡಿಸಬೇಕು.
20 “ಆರೋನನು ಮಹಾಪವಿತ್ರಸ್ಥಾನ, ದೇವದರ್ಶನದ ಗುಡಾರ, ಯಜ್ಞವೇದಿ ಇವುಗಳಿಗೋಸ್ಕರ ದೋಷಪರಿಹಾರ ಮಾಡಿ ಮುಗಿಸಿದ ಮೇಲೆ ಆ ಸಜೀವವಾದ ಹೋತವನ್ನು ತರಿಸಬೇಕು.
21 ಅವನು ಅದರ ತಲೆಯ ಮೇಲೆ ಎರಡು ಕೈಗಳನ್ನು ಇಟ್ಟು, ಇಸ್ರಾಯೇಲರ ಎಲ್ಲಾ ಪಾಪಗಳನ್ನು, ದ್ರೋಹಗಳನ್ನು ಮತ್ತು ಅಪರಾಧಗಳನ್ನು ಯೆಹೋವನಿಗೆ ಅರಿಕೆಮಾಡಿ ಆ ಹೋತದ ತಲೆಯ ಮೇಲೆ ಹೊರಿಸಿ, ಅದನ್ನು ಆ ಕೆಲಸಕ್ಕೆ ನೇಮಕವಾದವನ ಕೈಯಿಂದ ಅರಣ್ಯಕ್ಕೆ ಕಳುಹಿಸಿಬಿಡಬೇಕು.
22 ಆ ಹೋತ ಅವರ ಎಲ್ಲಾ ಪಾಪಗಳನ್ನು ತನ್ನ ಮೇಲೆ ಹೊತ್ತುಕೊಂಡು ನಿರ್ಜನವಾದ ಪ್ರದೇಶಕ್ಕೆ ಹೋಗುವಂತೆ ಆ ಮನುಷ್ಯನು ಅದನ್ನು ಅರಣ್ಯಕ್ಕೆ ತೆಗೆದುಕೊಂಡುಹೋಗಿ ಅಲ್ಲೇ ಬಿಟ್ಟುಬಿಡಬೇಕು.
23 “ತರುವಾಯ ಆರೋನನು ದೇವದರ್ಶನದ ಗುಡಾರದೊಳಗೆ ಬಂದು ತಾನು ಮಹಾಪವಿತ್ರಸ್ಥಾನದೊಳಗೆ ಹೋಗುವುದಕ್ಕಾಗಿ ಧರಿಸಿಕೊಂಡಿದ್ದ ನಾರುಮಡಿಗಳನ್ನು ತೆಗೆದು ಅಲ್ಲೇ ಇಡಬೇಕು.
24 ಅವನು ಪವಿತ್ರ ಸ್ಥಳದ ಪ್ರಾಕಾರದಲ್ಲಿ ಸ್ನಾನಮಾಡಿ, ತನ್ನ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ಆಗ ಅವನು ಹೊರಗೆ ಬಂದು ತನಗಾಗಿಯೂ ಮತ್ತು ಜನಸಮೂಹಕ್ಕಾಗಿಯೂ ಸರ್ವಾಂಗಹೋಮಗಳನ್ನು ಸಮರ್ಪಿಸಿ, ತನಗಾಗಿಯೂ ಮತ್ತು ಜನರಿಗಾಗಿಯೂ ದೋಷಪರಿಹಾರ ಮಾಡಬೇಕು.
25 ಅವನು ದೋಷಪರಿಹಾರಕ ಯಜ್ಞಪಶುಗಳ ಕೊಬ್ಬನ್ನು ಯಜ್ಞವೇದಿಯ ಮೇಲೆ ಹೋಮಮಾಡಬೇಕು.
26 “ಅಜಾಜೇಲನಿಗೆ ಹೋತವನ್ನು ಬಿಟ್ಟುಬಂದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯಕ್ಕೆ ಬರಬೇಕು.
27 ದೋಷಪರಿಹಾರಕ ಯಜ್ಞಪಶುಗಳಾದ ಹೋರಿ ಮತ್ತು ಹೋತಗಳ ರಕ್ತವನ್ನು ಮಹಾಪವಿತ್ರಸ್ಥಾನದಲ್ಲಿ ದೋಷಪರಿಹಾರ ಮಾಡುವುದಕ್ಕಾಗಿ ತಂದ ಮೇಲೆ ಅವುಗಳ ಶರೀರಗಳನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿ, ಚರ್ಮ, ಮಾಂಸ ಮತ್ತು ಕಲ್ಮಷಗಳೆಲ್ಲವನ್ನು ಬೆಂಕಿಯಿಂದ ಸುಡಿಸಬೇಕು.
28 ಅವುಗಳನ್ನು ಸುಟ್ಟವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯದೊಳಗೆ ಬರಬೇಕು.
ಪ್ರಾಯಶ್ಚಿತ್ತ ದಿನಾಚರಣೆ
29 “ಸ್ವದೇಶಸ್ಥರಾದ ನೀವೂ ಮತ್ತು ನಿಮ್ಮಲ್ಲಿ ವಾಸವಾಗಿರುವ ಅನ್ಯದೇಶದವರು, ಎಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಸಕಲ ವಿಧವಾದ ಕೆಲಸಗಳನ್ನು ಬಿಟ್ಟು ಉಪವಾಸಮಾಡಿ ನಿಮ್ಮ ಆತ್ಮಗಳನ್ನು ಕುಂದಿಸಿಕೊಳ್ಳಬೇಕು. ಇದು ನಿಮಗೆ ಶಾಶ್ವತವಾದ ನಿಯಮ.
30 ಏಕೆಂದರೆ ನೀವು ಪರಿಶುದ್ಧರಾಗುವುದಕ್ಕಾಗಿ ಈ ದಿನದಲ್ಲಿ ನಿಮಗೋಸ್ಕರ ದೋಷಪರಿಹಾರವಾಗುವುದು, ಯೆಹೋವನ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗುವವು.
31 ಈ ದಿನ ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿರಬೇಕು; ಇದರಲ್ಲಿ ನೀವು ಉಪವಾಸ ಮಾಡಬೇಕು; ಇದೇ ನಿಮಗೆ ಶಾಶ್ವತನಿಯಮ.
32 “ಆರೋನನ ವಂಶದವರಲ್ಲಿ ಯಾವನಿಗೆ ಪಿತೃಸ್ಥಾನದಲ್ಲಿ ಮಹಾಯಾಜಕನ ಸೇವಾವೃತ್ತಿಯನ್ನು ನಡೆಸುವುದಕ್ಕೆ ಪಟ್ಟಾಭಿಷೇಕವಾಗುವುದೋ ಅವನೇ ಈ ದೋಷಪರಿಹಾರ ಕಾರ್ಯವನ್ನು ಆಚರಿಸಬೇಕು. ಅವನೇ ಆ ಪರಿಶುದ್ಧವಾದ ನಾರುಮಡಿಗಳನ್ನು ಧರಿಸಿಕೊಳ್ಳಬೇಕು.
33 ಅವನು ದೇವಸ್ಥಾನ, ದೇವದರ್ಶನದ ಗುಡಾರ, ಯಜ್ಞವೇದಿ, ಯಾಜಕರು, ಜನಸಮೂಹದವರು ಈ ಎಲ್ಲರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು.
34 ಇಸ್ರಾಯೇಲರ ಎಲ್ಲಾ ದೋಷಗಳನ್ನು ನಿವಾರಣೆಮಾಡುವುದಕ್ಕಾಗಿ ಅವರಿಗೋಸ್ಕರ ವರ್ಷಕ್ಕೆ ಒಂದಾವರ್ತಿ ದೋಷಪರಿಹಾರವನ್ನು ಮಾಡಬೇಕೆಂಬುದೇ ನಿಮಗೆ ಶಾಶ್ವತನಿಯಮ” ಎಂದು ಹೇಳಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು.