ಮಾರ್ಕನು
ಗ್ರಂಥಕರ್ತೃತ್ವ
ಈ ಪುಸ್ತಕವು ಮಾರ್ಕನೆನಿಸಿಕೊಳ್ಳುವ ಯೋಹಾನನಿಂದ ಬರೆಯಲ್ಪಟ್ಟಿದೆ ಎಂದು ಆದಿ ಸಭೆಯ ಪಾದ್ರಿಗಳು ಒಮ್ಮತದಿಂದ ಒಪ್ಪಿಕೊಂಡಿದ್ದಾರೆ. ಮಾರ್ಕನೆನಿಸಿಕೊಳ್ಳುವ ಯೋಹಾನನ ಬಗ್ಗೆ ಹೊಸ ಒಡಂಬಡಿಕೆಯಲ್ಲಿ ಹತ್ತು ಬಾರಿ ಉಲ್ಲೇಖಿಸಲಾಗಿದೆ (ಅ.ಕೃ. 12:12,25; 13:5,13; 15:37,39; ಕೊಲೊ 4:10; 2 ತಿಮೊ. 4:11; ಫಿಲೆ. 24; 1 ಪೇತ್ರ. 5:13.) ಈ ಉಲ್ಲೇಖವು (ಕೊಲೊ 4:10) ಮಾರ್ಕನು ಬಾರ್ನಬನ ಸೋದರಸಂಬಂಧಿ ಎಂದು ಸೂಚಿಸುತ್ತದೆ. ಮಾರ್ಕನ ತಾಯಿಯ ಹೆಸರು ಮರಿಯಳು, ಆಕೆಯು ಯೆರೂಸಲೇಮಿನಲ್ಲಿ ಸಂಪತ್ತು ಮತ್ತು ಸ್ಥಾನಮಾನವು ಇದ್ದಂಥ ಸ್ತ್ರೀಯಾಗಿದ್ದಳು ಮತ್ತು ಅವರ ಮನೆಯು ಆದಿ ಕ್ರೈಸ್ತರು ಕೂಡಿಬರುತ್ತಿದ್ದಂಥ ಸ್ಥಳವಾಗಿತ್ತು (ಅ.ಕೃ. 12:12). ಪೌಲನ ಮೊದಲ ಮಿಷನರಿ ಪ್ರಯಾಣದಲ್ಲಿ ಮಾರ್ಕನೆನಿಸಿಕೊಳ್ಳುವ ಯೋಹಾನನು ಪೌಲನ ಮತ್ತು ಬಾರ್ನಬನ ಜೊತೆಯಲ್ಲಿ ಹೋಗಿದ್ದನು (ಅ.ಕೃ. 12:25; 13:5). ಸತ್ಯವೇದ ಆಧರಿತವಾದ ಪುರಾವೆಗಳು ಮತ್ತು ಆದಿ ಸಭೆಯ ಪಾದ್ರಿಗಳು ಪೇತ್ರನ ಮತ್ತು ಮಾರ್ಕನ (1 ಪೇತ್ರ 5:13) ನಡುವೆ ನಿಕಟವಾದ ಸಂಬಂಧವಿತ್ತು ಎಂದು ಪ್ರತಿಪಾದಿಸುತ್ತಾರೆ. ಮಾರ್ಕನು ಪೇತ್ರನ ಭಾಷ್ಯಾಕಾರನಾಗಿದ್ದನು ಮತ್ತು ಪೇತ್ರನ ಬೋಧನೆಯು ಮತ್ತು ಪ್ರತ್ಯಕ್ಷದರ್ಶಿಯಾದ ಅವನ ಸಾಕ್ಷಿಯು ಮಾರ್ಕನ ಸುವಾರ್ತೆಯ ಪ್ರಾಥಮಿಕ ಮೂಲವಾಗಿರುವ ಎಲ್ಲಾ ಸಾಧ್ಯತೆಗಳಿವೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 50-60 ರ ನಡುವೆ ಬರೆಯಲ್ಪಟ್ಟಿದೆ.
ಸಭಾ ಪಾದ್ರಿಗಳ (ಐರೆನೇಯಸ್, ಅಲೆಕ್ಸಾಂಡ್ರಿಯಾದ ಕ್ಲೆಮೆಂಟ್ ಮತ್ತು ಇತರರು) ಹಲವಾರು ಬರಹಗಳು ಮಾರ್ಕನ ಸುವಾರ್ತೆಯು ರೋಮ್ನಲ್ಲಿ ಬರೆಯಲ್ಪಟ್ಟಿದೆ ಎಂದು ದೃಢಪಡಿಸುತ್ತವೆ. ಈ ಸುವಾರ್ತೆಯು ಪೇತ್ರನ ಸಾವಿನ ನಂತರ (ಕ್ರಿ.ಶ. 67-68) ಬರೆಯಲ್ಪಟ್ಟಿದೆ ಎಂದು ಆದಿ ಸಭೆಯ ಮೂಲಗಳು ತಿಳಿಸುತ್ತವೆ.
ಸ್ವೀಕೃತದಾರರು
ಈ ಕಥನವನ್ನು ರೂಪಿಸುವಂಥ ಪುರಾವೆಯು, ಮಾರ್ಕನು ಈ ಸುವಾರ್ತೆಯನ್ನು ಸಾಮಾನ್ಯವಾಗಿ ಅನ್ಯಜನರ ಓದುಗರಿಗೆ ಮತ್ತು ನಿರ್ದಿಷ್ಟವಾಗಿ ರೋಮನ್ ವಾಚಕರಿಗೆ ಬರೆದಿದ್ದಾನೆಂದು ಸೂಚಿಸುತ್ತದೆ. ಇದೇ ಕಾರಣಕ್ಕಾಗಿ ಯೇಸುವಿನ ವಂಶಾವಳಿಯನ್ನು ಇದರಲ್ಲಿ ಸೇರಿಸಲಾಗಿಲ್ಲ, ಏಕೆಂದರೆ ಇದು ಅನ್ಯಜನರ ಜಗತ್ತಿಗೆ ಅಷ್ಟೊಂದು ಮುಖ್ಯವೇನು ಅಲ್ಲ.
ಉದ್ದೇಶ
ಕ್ರಿ.ಶ. 67-68 ರಲ್ಲಿ ನೀರೋ ಚಕ್ರವರ್ತಿಯ ಆಳ್ವಿಕೆಯಲ್ಲಿ ಕ್ರೈಸ್ತರನ್ನು ಕಠೋರವಾಗಿ ಹಿಂಸಿಸಿಲಾಯಿತು ಮತ್ತು ಕೊಂದುಹಾಕಲಾಯಿತು, ಆ ಕಠೋರವಾದ ಹಿಂಸೆಯ ನಡುವೆ ಜೀವಿಸುತ್ತಿದ್ದ ರೋಮನ್ ಕ್ರೈಸ್ತರು ಮಾರ್ಕನ ಸುವಾರ್ತೆಯ ಓದುಗರು ಆಗಿದ್ದರು. ಅಂತಹ ಸನ್ನಿವೇಶದಲ್ಲಿ ಮಾರ್ಕನು ಈ ಸುವಾರ್ತೆಯನ್ನು ಬರೆದನು. ಅಂತಹ ಕಷ್ಟದಲ್ಲಿ ಹಾದುಹೋಗುತ್ತಿದ್ದ ಕ್ರೈಸ್ತರನ್ನು ಪ್ರೋತ್ಸಾಹಿಸಲು ಇದನ್ನು ಬರೆದನು. ಇದರಲ್ಲಿ ಯೇಸುವನ್ನು ಸಂಕಟವನ್ನು ಅನುಭವಿಸುತ್ತಿರುವ ಸೇವಕನನ್ನಾಗಿ ವರ್ಣಿಸಿದ್ದಾನೆ (ಯೆಶಾ 53).
ಮುಖ್ಯಾಂಶ
ಯೇಸು - ಸಂಕಟವನ್ನು ಅನುಭವಿಸುತ್ತಿರುವ ಸೇವಕ
ಪರಿವಿಡಿ
1. ಸೇವೆಗಾಗಿ ಅಡವಿಯಲ್ಲಿ ಯೇಸುವಿನ ಸಿದ್ಧತೆ — 1:1-13
2. ಗಲಿಲಾಯದಲ್ಲಿನ ಮತ್ತು ಅದರ ಸುತ್ತಮುತ್ತಲಿನ ಯೇಸುವಿನ ಸೇವೆ — 1:14-8:30
3. ಯೇಸುವಿನ ನಿಯೋಗ: ಶ್ರಮೆ ಮತ್ತು ಮರಣ — 8:31-10:52
4. ಯೆರೂಸಲೇಮಿನಲ್ಲಿನ ಯೇಸುವಿನ ಸೇವೆ — 11:1-13:37
5. ಶಿಲುಬೆಗೇರಿಸುವಿಕೆಯ ವಿವರಣೆ — 14:1-15:47
6. ಯೇಸುವಿನ ಪುನರುತ್ಥಾನ ಮತ್ತು ಪ್ರತ್ಯಕ್ಷತೆ — 16:1-20
1
ಸ್ನಾನಿಕನಾದ ಯೋಹಾನನು
ಮತ್ತಾ 3:1-12; ಲೂಕ 3:1-18; ಯೋಹಾ 1:19-28
*ದೇವಕುಮಾರನಾದ ಯೇಸು ಕ್ರಿಸ್ತನ ಕುರಿತಾದ ಸುವಾರ್ತೆಯ ಪ್ರಾರಂಭವು.
ಪ್ರವಾದಿಯಾದ ಯೆಶಾಯನ ಗ್ರಂಥದಲ್ಲಿ ಬರೆದಿರುವ ಪ್ರಕಾರ,
“ಇಗೋ, ನಾನು ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ;
ಅವನು ನಿನ್ನ ದಾರಿಯನ್ನು ಸಿದ್ಧಮಾಡುವನು.”
“ ‘ಕರ್ತನ ದಾರಿಯನ್ನು ಸಿದ್ಧಮಾಡಿರಿ;
ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ’
ಎಂದು §ಅಡವಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ.
* ಯೋಹಾನನು ಬಂದು ಜನರಿಗೆ, ನೀವು ಪಾಪಗಳ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಉಪದೇಶಿಸುತ್ತಾ ಅಡವಿಯಲ್ಲಿ ದೀಕ್ಷಾಸ್ನಾನಮಾಡಿಸುತ್ತಾ ಇದ್ದನು. ಆಗ ಯೂದಾಯ ಸೀಮೆಯೆಲ್ಲವೂ ಯೆರೂಸಲೇಮಿನವರೆಲ್ಲರೂ ಅವನ ಬಳಿಗೆ ಹೊರಟುಹೋಗಿ ತಮ್ಮ ತಮ್ಮ ಪಾಪಗಳನ್ನು ಒಪ್ಪಿಕೊಂಡು ಯೊರ್ದನ್ ಹೊಳೆಯಲ್ಲಿ ಅವನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುತ್ತಿದ್ದರು. ಈ ಯೋಹಾನನು ಒಂಟೆಯ ರೋಮದ ಹೊದಿಕೆಯನ್ನು ಧರಿಸಿಕೊಂಡು ಸೊಂಟಕ್ಕೆ ಚರ್ಮದ ನಡುಕಟ್ಟನ್ನು ಕಟ್ಟಿಕೊಂಡಿದ್ದನು; ಅವನು ಮಿಡತೆಯನ್ನೂ ಕಾಡುಜೇನನ್ನೂ ಆಹಾರವನ್ನಾಗಿ ಸೇವಿಸುತ್ತಿದ್ದನು. ಅವನು “ನನಗಿಂತ ಶಕ್ತನು ನನ್ನ ಹಿಂದೆ ಬರುತ್ತಾನೆ; ಆತನ ಕೆರಗಳ ಪಟ್ಟಿಗಳನ್ನು ಬಗ್ಗಿ ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ನಾನು ನಿಮಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೇನೆ; ಆತನಾದರೋ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುತ್ತಾನೆ” ಎಂದು ಸಾರಿ ಹೇಳಿದನು.
ಯೇಸುವಿನ ದೀಕ್ಷಾಸ್ನಾನ
ಮತ್ತಾ 3:13-4:17; ಲೂಕ 3:21,22; 4:1-15; ಯೋಹಾ 1:31-33
ಆ ದಿನಗಳಲ್ಲಿ ಯೇಸು ಗಲಿಲಾಯ ಸೀಮೆಗೆ ಸೇರಿದ ನಜರೇತೆಂಬ ಊರಿನಿಂದ ಬಂದು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡನು. 10 ಯೇಸುವು ನೀರಿನೊಳಗಿನಿಂದ ಮೇಲಕ್ಕೆ ಬಂದ ಕೂಡಲೇ ಪರಲೋಕವು ತೆರೆಯಲ್ಪಟ್ಟು ದೇವರಾತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿಯುವುದನ್ನು ಕಂಡನು. 11 ಆಗ “ನೀನು ಪ್ರಿಯನಾಗಿರುವ ನನ್ನ ಮಗನು, ನಾನು ನಿನ್ನನ್ನು ಬಹಳವಾಗಿ ಮೆಚ್ಚಿದ್ದೇನೆ” ಎಂಬ ದೈವ ವಾಣಿ ಪರಲೋಕದಿಂದ ಕೇಳಿಸಿತು.
12 ಕೂಡಲೇ ಪವಿತ್ರಾತ್ಮ ಪ್ರೇರಿತನಾಗಿ ಯೇಸು ಅಡವಿಗೆ ಹೋದನು. 13 ಆತನು ನಲವತ್ತು ದಿನ ಅಡವಿಯಲ್ಲಿ ಕಾಡುಮೃಗಗಳೊಂದಿಗೆ ಇದ್ದು ಸೈತಾನನಿಂದ ಶೋಧಿಸಲ್ಪಟ್ಟನು ಮತ್ತು ದೇವದೂತರು ಯೇಸುವಿಗೆ ಉಪಚಾರ ಮಾಡಿದರು. 14 ಯೋಹಾನನು ಬಂಧಿತನಾದ ತರುವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ಸುವಾರ್ತೆಯನ್ನು ಹೀಗೆ ಸಾರಿ ಹೇಳಿದನು, 15 §“ಕಾಲವು ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು; ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ.”
ಯೇಸು ಪ್ರಥಮ ಶಿಷ್ಯರನ್ನು ಕರೆದದ್ದು
ಮತ್ತಾ 4:18-22; ಲೂಕ 5:1-11
16 ಯೇಸು ಗಲಿಲಾಯ ಸಮುದ್ರದ ಬಳಿಯಲ್ಲಿ ಹೋಗುತ್ತಿರುವಾಗ ಸೀಮೋನನು ಮತ್ತು ಅವನ ತಮ್ಮನಾದ ಅಂದ್ರೆಯನು ಸಮುದ್ರದಲ್ಲಿ ಬಲೆ ಬೀಸುವುದನ್ನು ಕಂಡನು. ಅವರು ಬೆಸ್ತರಾಗಿದ್ದರು. 17 ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳಿದನು. 18 ಕೂಡಲೆ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
19 ಯೇಸು ಇನ್ನು ಸ್ವಲ್ಪ ಮುಂದೆ ಹೋಗಿ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನನ್ನೂ ಕಂಡನು; ಅವರು ದೋಣಿಯೊಳಗೆ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. 20 ಅವನು ಕೂಡಲೇ ಅವರನ್ನೂ ಕರೆದನು. ಅವರು ತಮ್ಮ ತಂದೆಯಾದ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಆತನನ್ನು ಹಿಂಬಾಲಿಸಿದರು.
ಯೇಸು ದೆವ್ವವನ್ನು ಬಿಡಿಸಿದ್ದು
ಮತ್ತಾ 8:14-16; ಲೂಕ 4:31-41
21 ಬಳಿಕ ಅವರು ಕಪೆರ್ನೌಮೆಂಬ ಊರಿಗೆ ಹೋದರು. ಸಬ್ಬತ್ ದಿನವಾದಾಗ ಯೇಸು ಸಭಾಮಂದಿರಕ್ಕೆ ಹೋಗಿ ಉಪದೇಶ ಮಾಡತೊಡಗಿದನು. 22 ಜನರು ಆತನ ಬೋಧನೆಯನ್ನು ಕೇಳಿ ಆತ್ಯಾಶ್ಚರ್ಯಪಟ್ಟರು; ಏಕೆಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಿದ್ದವನಂತೆ ಅವರಿಗೆ ಬೋಧಿಸುತ್ತಿದ್ದನು. 23 ಆಗ ಅವರ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. 24 ಆ ದೆವ್ವವು, “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನೀನು ನಮ್ಮನ್ನು ನಾಶಮಾಡುವುದಕ್ಕೆ ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಬಂದ ಪರಿಶುದ್ಧನು” ಎಂದು ಕೂಗಿ ಹೇಳಿತು. 25 ಯೇಸು ಅದನ್ನು ಗದರಿಸಿ, “ಸುಮ್ಮನಿರು, ಅವನನ್ನು ಬಿಟ್ಟು ಹೊರಗೆ ಬಾ” ಎಂದನು. 26 ಆ ದೆವ್ವವು ಅವನನ್ನು ಒದ್ದಾಡಿಸಿ ಗಟ್ಟಿಯಾಗಿ ಕೂಗುತ್ತಾ, ಅವನೊಳಗಿಂದ ಹೊರಗೆ ಬಂದಿತು. 27 ಜನರೆಲ್ಲರೂ ಬೆರಗಾಗಿ, “ಇದೇನು? ಅಧಿಕಾರಸಹಿತವಾದ ಹೊಸ ಬೋಧನೆ! ಈತನು ದೆವ್ವಗಳಿಗೂ ಸಹ ಆಜ್ಞಾಪಿಸುತ್ತಾನೆ, ಅವು ಈತನಿಗೆ ವಿಧೇಯವಾಗುತ್ತವೆ!” ಎಂದು ತಮ್ಮತಮ್ಮೊಳಗೆ ವಿಚಾರಮಾಡಿಕೊಂಡರು. 28 ಕೂಡಲೆ ಆತನ ಸುದ್ದಿಯು ಗಲಿಲಾಯ ಸೀಮೆಯಲ್ಲೆಲ್ಲಾ ಹಬ್ಬಿತು.
ರೋಗಿಗಳನ್ನು ಸ್ವಸ್ಥಮಾಡಿದ್ದು
29 *ಆ ಮೇಲೆ ಅವರು ಸಭಾಮಂದಿರದಿಂದ ಹೊರಟು ಯಾಕೋಬ ಯೋಹಾನರ ಸಂಗಡ ಸೀಮೋನ ಅಂದ್ರೆಯರ ಮನೆಗೆ ಹೋದರು. 30 ಅಲ್ಲಿ ಸೀಮೋನನ ಅತ್ತೆ ಜ್ವರದಿಂದ ಮಲಗಿರಲಾಗಿ ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು. 31 ಆತನು ಹತ್ತಿರಕ್ಕೆ ಬಂದು ಆಕೆಯ ಕೈಯನ್ನು ಹಿಡಿದು ಎಬ್ಬಿಸಲು ಜ್ವರವು ಆಕೆಯನ್ನು ಬಿಟ್ಟುಹೋಯಿತು; ಆಕೆಯು ಅವರಿಗೆ ಉಪಚಾರಮಾಡಿದಳು.
32 ಸಂಜೆಯಾಗಿ ಹೊತ್ತು ಮುಳುಗಿದ ಮೇಲೆ ಜನರು ಅಸ್ವಸ್ಥರಾದವರನ್ನೂ, ದೆವ್ವಹಿಡಿದವರನ್ನೂ ಆತನ ಬಳಿಗೆ ಕರತಂದರು. 33 ಊರಿನವರೆಲ್ಲಾ ಬಾಗಿಲಿನ ಮುಂದೆ ಒಟ್ಟುಗೂಡಿದ್ದರು. 34 ಆಗ ಆತನು ನಾನಾ ರೀತಿಯ ರೋಗಗಳಿಂದ ಅಸ್ವಸ್ಥರಾಗಿದ್ದ ಬಹು ಜನರನ್ನು ಸ್ವಸ್ಥಮಾಡಿ ಅನೇಕ ದೆವ್ವಗಳನ್ನು ಬಿಡಿಸಿದನು. ಆದರೆ ಅವುಗಳಿಗೆ ತಾನು ಇಂಥವನೆಂದು ತಿಳಿದಿದ್ದರಿಂದ ಆತನು ಅವುಗಳನ್ನು ಮಾತನಾಡಗೊಡಿಸಲಿಲ್ಲ.
ಯೇಸುವಿನ ಏಕಾಂತ ಪ್ರಾರ್ಥನೆ
ಲೂಕ 4:42-44
35 ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ನಿರ್ಜನ ಸ್ಥಳಕ್ಕೆ ಹೋಗಿ ಪ್ರಾರ್ಥನೆಮಾಡುತ್ತಿದ್ದನು. 36 ಸೀಮೋನನೂ ಅವನ ಸಂಗಡ ಇದ್ದವರೂ ಆತನನ್ನು ಹುಡುಕಿಕೊಂಡು ಆತನಿದ್ದಲ್ಲಿಗೆ ಬಂದು, 37 ಆತನನ್ನು ಕಂಡಾಗ “ಎಲ್ಲರೂ ನಿನ್ನನ್ನು ಎದುರುನೋಡುತ್ತಿದ್ದಾರೆ” ಎಂದರು.
38 ಆತನು ಅವರಿಗೆ, “ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಇಲ್ಲಿಗೆ ಹೊರಟು ಬಂದಿದ್ದೇನೆ” ಎಂದು ಹೇಳಿದನು. 39 ಬಳಿಕ ಆತನು ಗಲಿಲಾಯದಲ್ಲೆಲ್ಲಾ ಹೋಗಿ ಅವರ ಸಭಾಮಂದಿರಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ದೆವ್ವಗಳನ್ನು ಬಿಡಿಸುತ್ತಾ ಇದ್ದನು.
ಯೇಸು ಕುಷ್ಠರೋಗಿಯನ್ನು ಸ್ವಸ್ಥಮಾಡಿದ್ದು
ಮತ್ತಾ 8:2-4; ಲೂಕ 5:12-16
40 ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿಕೊಂಡು, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು.
41 ಯೇಸು ಕನಿಕರಪಟ್ಟು ತನ್ನ ಕೈ ಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧನಾಗು” ಅಂದನು. 42 ಕೂಡಲೆ ಅವನ ಕುಷ್ಠವು ಹೋಗಿ, ಅವನು ಶುದ್ಧನಾದನು. 43 ಆಗ ಯೇಸು ಅವನಿಗೆ, “ಯಾರಿಗೂ ಏನೂ ಹೇಳಬೇಡ ನೋಡು; 44 ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ನಿನ್ನ ಶುದ್ಧಿಗಾಗಿಮೋಶೆಯು ಆಜ್ಞಾಪಿಸಿರುವಂಥವುಗಳನ್ನು ಅರ್ಪಿಸು. ಅದು ಜನರಿಗೆ ಸಾಕ್ಷಿಯಾಗಿರಲಿ ಎಂದು ಖಂಡಿತವಾಗಿ” ಹೇಳಿ ಅವನನ್ನು ಕೂಡಲೆ ಕಳುಹಿಸಿ ಬಿಟ್ಟನು. 45 ಆದರೆ ಅವನು ಹೊರಟುಹೋಗಿ ಎಲ್ಲಾ ಕಡೆಗೂ ಈ ಸಂಗತಿಯನ್ನು ಬಹಳವಾಗಿ ಸಾರಿ ಹಬ್ಬಿಸುವುದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಬಹಿರಂಗವಾಗಿ ಬೇರೆ ಊರುಗಳಿಗೆ ಹೋಗಲಾರದೆ ನಿರ್ಜನ ಸ್ಥಳಗಳಲ್ಲಿ ಇದ್ದನು. ಆದರೂ ಜನರು ಎಲ್ಲಾ ಕಡೆಯಿಂದಲೂ ಆತನ ಬಳಿಗೆ ಬರುತ್ತಿದ್ದರು.
* 1:1 ಕೆಲವು ಪ್ರತಿಗಳಲ್ಲಿ ದೇವಕುಮಾರನಾದ ಎಂಬ ಪದವು ಇಲ್ಲ. 1:2 ಮಲಾ. 3:1. 1:3 ಯೆಶಾ 40:3. § 1:3 ಮೂಲಭಾಷೆಯಲ್ಲಿ ಮರುಭೂಮಿಯೆಂದು ಉಪಯೋಗಿಸಲಾಗಿದೆ. * 1:4 ಕೆಲವು ಪ್ರತಿಗಳಲ್ಲಿ, ಪ್ರವಾದಿಗಳ ಎಂದು ಬರೆದಿದೆ. 1:12 ಮತ್ತಾ 4:1-11; ಲೂಕ 4:1-13. 1:14 ಯೋಹಾ 3:24. § 1:15 ಮತ್ತಾ 4:17. * 1:29 ಪಾಠಾಂತರ ಆ ಮೇಲೆ ಆತನು ಬಂದನು. 1:44 ಯಾಜ 14:1-32.