16
ಯೇಸುವಿನ ಪುನರುತ್ಥಾನ
ಮತ್ತಾ 28:1-8; ಲೂಕ 24:1-10; ಯೋಹಾ 20:1
1 ಸಬ್ಬತ್ ದಿನ ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಮರಿಯಳೂ ಮತ್ತು ಸಲೋಮಿಯೂ ಯೇಸುವಿನ ದೇಹಕ್ಕೆ ಹಚ್ಚುವುದಕ್ಕಾಗಿ ಸುಗಂಧ ದ್ರವ್ಯಗಳನ್ನು ಕೊಂಡರು.
2 ಮತ್ತು ವಾರದ ಮೊದಲನೆಯ ದಿನದ ಬೆಳಿಗ್ಗೆ ಹೊತ್ತು ಮೂಡುವಾಗ ಅವರು ಸಮಾಧಿಯ ಬಳಿಗೆ ಬಂದರು.
3 “ಸಮಾಧಿಯ ಬಾಗಿಲಿನಿಂದ ಕಲ್ಲನ್ನು ನಮಗೋಸ್ಕರ ಉರುಳಿಸುವವರು ಯಾರು?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
4 ಸಮಾಧಿಯ ಕಡೆಗೆ ನೋಡಿದಾಗ ಆ ದೊಡ್ಡ ಕಲ್ಲು ಉರುಳಿಸಲ್ಪಟ್ಟಿರುವುದನ್ನು ಕಂಡರು.
5 ಅವರು ಸಮಾಧಿಯೊಳಗೆ ಹೋಗಿ, ಒಬ್ಬ ಯೌವನಸ್ಥನು ಬಿಳಿ ನಿಲುವಂಗಿಯನ್ನು ಧರಿಸಿಕೊಂಡು ಬಲ ಭಾಗದಲ್ಲಿ ಕುಳಿತಿರುವುದನ್ನು ಕಂಡು ಬೆಚ್ಚಿಬೆರಗಾದರು.
6 ಅವನು ಅವರಿಗೆ, “ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟಿದ್ದ ನಜರೇತಿನ ಯೇಸುವನ್ನು ಹುಡುಕುತ್ತಿರಲ್ಲವೇ. ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ; ಆತನನ್ನು ಇಟ್ಟಿದ್ದ ಸ್ಥಳ ಇದೇ ನೋಡಿರಿ,
7 ಆದರೆ ನೀವು ಹೋಗಿ ಆತನ ಶಿಷ್ಯರಿಗೂ ಪೇತ್ರನಿಗೂ ಆತನು ನಿಮಗೆ ಹೇಳಿದಂತೆ ನಿಮಗಿಂತ ಮೊದಲು ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ ಎಂದು ತಿಳಿಸಿರಿ” ಎಂದು ಹೇಳಿದನು.
8 ಅವರು ವಿಸ್ಮಯಗೊಂಡು ನಡುಗುತ್ತಾ ಹೊರಕ್ಕೆ ಬಂದು ಸಮಾಧಿಯ ಬಳಿಯಿಂದ ಓಡಿಹೋದರು; ಅವರು ಹೆದರಿಕೊಂಡಿದ್ದರಿಂದ ಯಾರಿಗೂ ಏನೂ ಹೇಳಲಿಲ್ಲ.
9 ವಾರದ ಮೊದಲನೆಯ ದಿನ ಬೆಳಿಗ್ಗೆ ಯೇಸು ಜೀವಿತನಾಗಿ ಎದ್ದ ಮೇಲೆ ಮಗ್ದಲದ ಮರಿಯಳಿಗೆ ಮೊದಲು ಕಾಣಿಸಿಕೊಂಡನು. ಆತನು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದ್ದನು.
10 ಆಕೆ ಹೋಗಿ ಆತನು ಕಾಣಿಸಿಕೊಂಡದ್ದನ್ನು ಆತನ ಜೊತೆಯಲ್ಲಿದ್ದವರಿಗೆ ತಿಳಿಸಿದಳು; ಅವರು ಶೋಕಿಸುತ್ತಾ ಅಳುತ್ತಿದ್ದರು.
11 “ಆತನು ಬದುಕಿದ್ದಾನೆ ನನಗೆ ಕಾಣಿಸಿಕೊಂಡನು” ಎಂದು ಅವಳು ಹೇಳಿದ ಮಾತನ್ನು ಅವರು ನಂಬಲಿಲ್ಲ.
ಯೇಸು ಜೀವಿತನಾಗಿ ಎದ್ದ ಮೇಲೆ ತನ್ನ ಶಿಷ್ಯರಿಗೆ ಕಾಣಿಸಿಕೊಂಡಿದ್ದು
12 ಇದಾದ ಮೇಲೆ ಶಿಷ್ಯರಲ್ಲಿ ಇಬ್ಬರು ಊರಿಗೆ ಪ್ರಯಾಣ ಮಾಡುತ್ತಿರುವಾಗ ಆತನು ಅವರಿಗೆ ಬೇರೆ ರೂಪದಲ್ಲಿ ಕಾಣಿಸಿಕೊಂಡನು.
13 ಅವರು ಹೋಗಿ ಉಳಿದ ಶಿಷ್ಯರಿಗೆ ತಿಳಿಸಿದರು. ಆದರೆ ಶಿಷ್ಯರು ಅವರನ್ನೂ ನಂಬಲಿಲ್ಲ.
14 ಅನಂತರ ಹನ್ನೊಂದು ಮಂದಿ ಶಿಷ್ಯರು ಊಟಕ್ಕೆ ಕುಳಿತಿದ್ದಾಗ ಆತನು ಅವರಿಗೂ ಕಾಣಿಸಿಕೊಂಡನು. ತಾನು ಜೀವಿತನಾಗಿ ಎದ್ದು ಬಂದ ಮೇಲೆ ತನ್ನನ್ನು ನೋಡಿದವರ ಮಾತನ್ನು ಅವರು ನಂಬಲಿಲ್ಲವಾದ ಕಾರಣ ಆತನು ಅವರ ಅಪನಂಬಿಕೆಗೂ ಅವರ ಮನಸ್ಸಿನ ಕಾಠಿಣ್ಯಕ್ಕೂ ಅವರನ್ನು ಗದರಿಸಿದನು.
15 ಆ ಮೇಲೆ ಅವರಿಗೆ, “ನೀವು ಲೋಕದ ಎಲ್ಲಾ ಕಡೆಗಳಿಗೂ ಹೋಗಿ ಸೃಷ್ಟಿಗಳಿಗೆಲ್ಲಾ ಸುವಾರ್ತೆಯನ್ನು ಸಾರಿರಿ.
16 ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು; ನಂಬದೇ ಹೋಗುವವನು ದಂಡನೆಗೆ ಗುರಿಯಾಗುವನು.
17 “ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು, ಹೊಸ ಭಾಷೆಗಳಲ್ಲಿ ಮಾತನಾಡುವರು;
18 ಹಾವುಗಳನ್ನು ಕೈಗಳಿಂದ ಎತ್ತಿಕೊಳ್ಳುವರು; ವಿಷಪದಾರ್ಥಗಳನ್ನೇನಾದರು ಕುಡಿದರೂ ಅವರಿಗೆ ಯಾವ ಹಾನಿಯೂ ಆಗುವುದಿಲ್ಲ. ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಸ್ವಸ್ಥವಾಗುವುದು” ಎಂದು ಹೇಳಿದನು.
ಯೇಸು ಪರಲೋಕಕ್ಕೆ ಒಯ್ಯಲ್ಪಟ್ಟದ್ದು
19 ಕರ್ತನಾದ ಯೇಸು ಅವರೊಂದಿಗೆ ಮಾತನಾಡಿದ ಮೇಲೆ ಪರಲೋಕಕ್ಕೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಆಸನಾರೂಢನಾದನು.
20 ಅನಂತರ ಅವರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು; ಮತ್ತು ಕರ್ತನು ಅವರ ಸಂಗಡ ಕೆಲಸ ಮಾಡುತ್ತಾ ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ದೃಢಪಡಿಸುತ್ತಾ ಇದ್ದನು.