3
ಸ್ನಾನಿಕನಾದ ಯೋಹಾನನ ಉಪದೇಶ
ಮಾರ್ಕ 1:2-8; ಲೂಕ 3:1-18; ಯೋಹಾ 1:6-8,19-34
ಆ ದಿನಗಳಲ್ಲಿ* ಸ್ನಾನಿಕನಾದ ಯೋಹಾನನೆಂಬುವವನು ಯೂದಾಯದ ಅಡವಿಯಲ್ಲಿ ಬೋಧನೆ ಮಾಡುತ್ತಾ, ಹೇಳಿದ್ದೇನೆಂದರೆ, “ಪಶ್ಚಾತ್ತಾಪಪಡಿರಿ; ಏಕೆಂದರೆ ಪರಲೋಕ ರಾಜ್ಯವು ಸಮೀಪಿಸುತ್ತಿದೆ.”
“ ‘ಕರ್ತನ ದಾರಿಯನ್ನು ಸಿದ್ಧಮಾಡಿರಿ;
ಆತನ ಮಾರ್ಗವನ್ನು ಸರಾಗ ಮಾಡಿರಿ’ ಎಂದು ಅಡವಿಯಲ್ಲಿ
ಕೂಗುವವನ ಶಬ್ದವಿದೆ” ಎಂಬುದಾಗಿ ಪ್ರವಾದಿಯಾದ
ಯೆಶಾಯನಿಂದ ಸೂಚಿತನಾದವನು ಇವನೇ.
ಯೋಹಾನನ ಉಡುಪು ಒಂಟೆಯ ಕೂದಲಿನಿಂದ ಮಾಡಿತ್ತು, ಅವನು ಸೊಂಟಕ್ಕೆ ಒಂದು ಚರ್ಮದ ನಡುಕಟ್ಟನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆ ಮತ್ತು ಕಾಡುಜೇನು ಅವನ ಆಹಾರವಾಗಿತ್ತು.
ಆಗ ಯೆರೂಸಲೇಮಿನವರು, ಎಲ್ಲಾ ಯೂದಾಯದವರೂ ಮತ್ತು ಯೊರ್ದನ್ ಹೊಳೆಯ ಸುತ್ತಲಿರುವ ಎಲ್ಲಾ ಸೀಮೆಯ ಜನರು ಅವನ ಬಳಿಗೆ ಹೊರಟು ಬಂದು, ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.
ಆದರೆ ಯೋಹಾನನು ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುವುದಕ್ಕೆ ಬರುವುದನ್ನು ಕಂಡು ಅವರಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರಾರು? ನೀವು ಮಾನಸಾಂತರ ಹೊಂದಿರುವಿರಿ ಎಂಬುದಕ್ಕೆ ಯೋಗ್ಯವಾದ ಫಲವನ್ನು ತೋರಿಸಿರಿ. ಅಬ್ರಹಾಮನು ನಮ್ಮ ತಂದೆ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗಾಗಿ ಈ ಕಲ್ಲುಗಳಿಂದಲೂ ಮಕ್ಕಳನ್ನು ಸೃಷ್ಟಿಮಾಡಬಲ್ಲನೆಂದು ನಿಮಗೆ ಹೇಳುತ್ತೇನೆ. 10 ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿದೆ; ಆದ್ದರಿಂದ ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು. 11  ನಾನಂತೂ ಮಾನಸಾಂತರಕ್ಕಾಗಿ ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನ್ನ ನಂತರ ಬರುವವನು ನನಗಿಂತ ಶಕ್ತನು; ಆತನ ಪಾದರಕ್ಷೆಗಳನ್ನು ಹೊರಲಿಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನಮಾಡಿಸುವನು. 12 ಹೊಟ್ಟನು ತೂರುವ ಮೊರವನ್ನು ಆತನು ಕೈಯಲ್ಲಿ ಹಿಡಿದಿದ್ದಾನೆ; ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನು ಮಾಡಿ ತನ್ನ ಗೋದಿಯನ್ನು ಕಣಜದಲ್ಲಿ ತುಂಬಿಕೊಂಡು ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟು ಬಿಡುವನು” ಎಂದು ಹೇಳಿದನು.
ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡಿದ್ದು
ಮಾರ್ಕ 1:9-11; ಲೂಕ 3:21,22
13 ಆ ಕಾಲದಲ್ಲಿ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದನ್ ಹೊಳೆಯ ಬಳಿ ಬಂದನು. 14 ಆತನಿಗೆ ಯೋಹಾನನು§ ತಡೆಯುತ್ತಾ, “ನಾನೇ ನಿನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕಾಗಿತ್ತು, ಆದರೆ ನೀನು ನನ್ನ ಬಳಿಗೆ ಬರುವುದೇಕೆ?” ಎಂದು ಹೇಳಿದಕ್ಕೆ, 15 ಯೇಸು ಪ್ರತ್ಯುತ್ತರವಾಗಿ ಅವನಿಗೆ, “ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ನೀತಿಯನ್ನು ನೆರವೇರಿಸತಕ್ಕದ್ದಾಗಿದೆ” ಎಂದು ಹೇಳಿದಾಗ ಯೋಹಾನನು ಒಪ್ಪಿಕೊಂಡನು.
16 ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡ ನೀರಿನಿಂದ ಮೇಲಕ್ಕೆ ಬಂದ ಕೂಡಲೇ ಇಗೋ, ಆತನಿಗಾಗಿ ಪರಲೋಕವು ತೆರೆಯಿತು; ಮತ್ತು ದೇವರ ಆತ್ಮವು ಪಾರಿವಾಳದ ಹಾಗೆ ತನ್ನ ಮೇಲೆ ಇಳಿದು ಬರುವುದನ್ನು ಕಂಡನು. 17 ಆಗ * “ಈತನು ನನ್ನ ಪ್ರಿಯ ಮಗನು, ಈತನನ್ನು ನಾನು ಬಹಳವಾಗಿ ಮೆಚ್ಚಿದ್ದೇನೆ” ಎಂಬ ವಾಣಿ ಪರಲೋಕದಿಂದ ಕೇಳಿಬಂದಿತು.
* 3:1 3:1 ಯೇಸುವಿನ ಜನನದ ಹಲವು ವರ್ಷಗಳ ನಂತರ, ಸ್ನಾನಿಕನಾದ ಯೋಹಾನನು ಬೆಳೆದು ಯೌವನಸ್ಥನಾಗಿ ದೇವರ ಹಾಗೂ ಕ್ರಿಸ್ತನ ವಿಷಯವಾಗಿ ಸಾರಿದನು. 3:3 3:3 ಯೆಶಾ 40. 3 3:11 3:11 ಯೋಹಾ 1:26,33; ಅ. ಕೃ. 1:5 § 3:14 3:14 ಯೇಸು ಪಾಪವನ್ನೇ ಮಾಡದೆ ಇದ್ದರಿಂದ * 3:17 3:17 ಮತ್ತಾ 12:18; 17:5; ಕೀರ್ತ 2:7