6
ದಾನಧರ್ಮದ ವಿಧಾನ
“ಜನರು ನೋಡಲಿ ಎಂದು ನಿಮ್ಮ ‘ಧರ್ಮಕಾರ್ಯಗಳನ್ನು’ ಅವರ ಮುಂದೆ ಮಾಡಬಾರದು; ಹಾಗೆ ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯ ಹತ್ತಿರ ನಿಮಗೆ*ಫಲದೊರೆಯುವುದಿಲ್ಲ.
“ಆದುದರಿಂದ ನೀನು ದಾನಕೊಡುವಾಗ ಅದನ್ನು ಪ್ರಚಾರಪಡಿಸಬೇಡ; ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ನೀನು ದಾನ ಕೊಡುವಾಗ ನಿನ್ನ ಬಲಗೈ ದಾನಕೊಟ್ಟದ್ದು ಎಡಗೈಗೂ ತಿಳಿಯದಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.
ಪ್ರಾರ್ಥನೆಯ ವಿಧಾನ
“ನೀವು ಪ್ರಾರ್ಥನೆಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ. ಜನರು ನೋಡಬೇಕೆಂದು ಅವರು ಸಭಾಮಂದಿರಗಳಲ್ಲಿಯೂ ಬೀದಿಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡುವುದಕ್ಕೆ ಇಷ್ಟಪಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀನು ಪ್ರಾರ್ಥನೆಮಾಡುವಾಗನಿನ್ನ ಕೋಣೆಯೊಳಗೆ ಹೋಗಿ ಬಾಗಿಲನ್ನು ಮುಚ್ಚಿಕೊಂಡು ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು. ಆದರೆ ಪ್ರಾರ್ಥನೆಮಾಡುವಾಗ ಅನ್ಯಜನಗಳ ಹಾಗೆ ಹೇಳಿದ್ದನ್ನೇ ಸುಮ್ಮನೆ ಮತ್ತೆ ಮತ್ತೆ ಹೇಳಬೇಡ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ಭಾವಿಸುತ್ತಾರೆ. ಆದುದರಿಂದ ನೀವು ಅವರ ಹಾಗೆ ಆಗಬೇಡಿರಿ. ನೀವು ನಿಮ್ಮ ತಂದೆಯನ್ನು ಬೇಡಿಕೊಳ್ಳುವುದಕ್ಕಿಂತ ಮೊದಲೇ ನಿಮಗೆ ಏನೇನು ಅಗತ್ಯವೆಂಬುದು ಆತನಿಗೆ ತಿಳಿದಿದೆ. ಆದುದರಿಂದ ನೀವು ಹೀಗೆ ಪ್ರಾರ್ಥನೆಮಾಡಬೇಕು,
10 “ಪರಲೋಕದಲ್ಲಿರುವ ನಮ್ಮ ತಂದೆಯೇ,
ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.
ನಿನ್ನ ರಾಜ್ಯವು ಬರಲಿ.
ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ
ಭೂಲೋಕದಲ್ಲಿಯೂ ನೆರವೇರಲಿ.
11 ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು.
12 §ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ
ನಮ್ಮ*ತಪ್ಪುಗಳನ್ನು ಕ್ಷಮಿಸು.
13 ನಮ್ಮನ್ನು ಶೋಧನೆಯೊಳಗೆ ಸೇರಿಸದೆ
ಕೆಡುಕನಿಂದ; ನಮ್ಮನ್ನು ತಪ್ಪಿಸು
14 ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. 15 ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೇ ಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.
16 “ಇದಲ್ಲದೆನೀವು ಉಪವಾಸಮಾಡುವಾಗ ಕಪಟಿಗಳಂತೆ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿರಿ. ಅವರು ತಾವು ಉಪವಾಸಿಗಳೆಂದು ಜನರಿಗೆ ತೋರಿಬರುವಂತೆ ತಮ್ಮ ಮುಖವನ್ನು ವಿಕಾರಮಾಡಿಕೊಳ್ಳುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 17 ಆದರೆ ನೀನು ಉಪವಾಸಮಾಡುವಾಗ ತಲೆಗೆ ಎಣ್ಣೆ ಹಚ್ಚಿಕೊಂಡು ಮುಖವನ್ನು ತೊಳೆದುಕೋ. 18 ಹೀಗೆ ಮಾಡಿದರೆ ನೀನು ಉಪವಾಸಿಯೆಂದು ಜನರಿಗೆ ಕಾಣದೆ ಹೋದಾಗ್ಯೂ ಅಂತರಂಗದಲ್ಲಿರುವ ನಿನ್ನ ತಂದೆಗೆ ಉಪವಾಸಿಯೆಂದು ಕಾಣಿಸಿಕೊಳ್ಳುವಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಪ್ರತಿಫಲಕೊಡುವನು.
ಶಾಶ್ವತ ಸಂಪತ್ತು
19 §“ಭೂಲೋಕದಲ್ಲಿ ಸಂಪತ್ತು ಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅದು ನುಸಿ ಹಿಡಿದು, ಕಿಲುಬು ಹತ್ತಿ ಕೆಟ್ಟುಹೋಗುವುದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು. 20 ಆದರೆ ಪರಲೋಕದಲ್ಲಿ ಸಂಪತ್ತು ಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿ ಹಿಡಿದು, ಕಿಲುಬು ಹತ್ತಿ ಕೆಟ್ಟುಹೋಗುವುದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವುದೂ ಇಲ್ಲ. ಕದಿಯುವುದೂ ಇಲ್ಲ, 21 ನಿನ್ನ ಸಂಪತ್ತು ಇದ್ದಲ್ಲಿಯೇ ನಿನ್ನ ಮನಸ್ಸು ಇರುತ್ತದಷ್ಟೆ.
22 “ಕಣ್ಣು ದೇಹಕ್ಕೆ ದೀಪವಾಗಿದೆ; ಹೀಗಿರುವುದರಿಂದ ನಿನ್ನ ಕಣ್ಣು ಚೆನ್ನಾಗಿದ್ದರೆ ನಿನ್ನ ದೇಹವೆಲ್ಲಾ ಬೆಳಕಾಗಿರುವುದು. 23 ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ ನಿನ್ನ ದೇಹವೆಲ್ಲಾ ಕತ್ತಲಾಗಿರುವುದು. ನಿನ್ನೊಳಗಿರುವ ಬೆಳಕೇ ಕತ್ತಲಾದರೆ ಆ ಕತ್ತಲು ಎಷ್ಟು ಮಹತ್ತರವಾಗಿರಬೇಕು!
24 “ಯಾರೊಬ್ಬನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು*ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನಿಗೆ ಶ್ರದ್ಧೆಯಿಂದ ಸೇವೆಮಾಡಿ ಮತ್ತೊಬ್ಬನನ್ನು ತಾತ್ಸಾರ ಮಾಡಬಹುದು. ನೀವು ದೇವರನ್ನೂ ಐಶ್ವರ್ಯವನ್ನೂ ಒಟ್ಟಾಗಿ ಸೇವಿಸಲಾರಿರಿ.
ನಿಮ್ಮ ಅಗತ್ಯಗಳಿಗಾಗಿ ಚಿಂತಿಸಬೇಡಿರಿ
25 “ಈ ಕಾರಣದಿಂದ, ನಮ್ಮ ಜೀವನಕ್ಕೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗಾಗಿ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂದು ನಿಮಗೆ ಹೇಳುತ್ತೇನೆ. ಊಟಕ್ಕಿಂತ ಪ್ರಾಣವು ಉಡುಪಿಗಿಂತ ದೇಹವು ಮೇಲಾದುದಲ್ಲವೇ. 26 ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವುದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ? 27 ಚಿಂತೆಮಾಡಿ ನಿಮ್ಮ ಜೀವಿತಾವಧಿಯನ್ನು ಒಂದು ಮೊಳಉದ್ದ ಬೆಳೆಸಲು ನಿಮ್ಮಲ್ಲಿ ಯಾರಿಂದಾದೀತು? 28 ಇದಲ್ಲದೆ ನೀವು ಉಡುಪಿನ ವಿಷಯದಲ್ಲಿ ಚಿಂತೆಮಾಡುವುದೇಕೆ? ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿದುಕೊಳ್ಳಿರಿ; ಅವು ದುಡಿಯುವುದಿಲ್ಲ, ನೂಲುವುದಿಲ್ಲ; 29 ಆದಾಗ್ಯೂ ಆ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರ ಅರಸನಾದ ಸೊಲೊಮೋನನಿಗೆ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಸಹ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ. 30 ಎಲೈ ಅಲ್ಪ ವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೇ ದೇವರು ಹೀಗೆ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನಲ್ಲವೇ! 31 ಹೀಗಿರುವುದರಿಂದ, ‘ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಧರಿಸಿಕೊಳ್ಳಬೇಕು’ ಎಂದು ಚಿಂತೆಮಾಡಬೇಡಿರಿ. 32 ಇವೆಲ್ಲವುಗಳಿಗಾಗಿ ಅನ್ಯಜನಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಅಗತ್ಯವಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆಯಷ್ಟೆ. 33 ಹೀಗಿರುವುದರಿಂದ, ನೀವು ಮೊದಲು ದೇವರ ರಾಜ್ಯವನ್ನೂ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು. 34 ಆದುದರಿಂದ ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವುದು. ಆ ಹೊತ್ತಿನ ಪಾಡೇ ಆ ಹೊತ್ತಿಗೆ ಸಾಕು.
* 6:1 ಆಶೀರ್ವಾದ 6:4 ಮತ್ತಾ 6:6,18 6:6 2 ಅರಸು 4:33; ದಾನಿ 6:10 § 6:12 ನಮ್ಮ ಸಾಲಗಾರರನ್ನು * 6:12 ಸಾಲಗಳನ್ನು 6:13 ಕೆಲವು ಪತ್ರಿಕೆಗಳಲ್ಲಿ: ಏಕೆಂದರೆ ರಾಜ್ಯವೂ ಬಲವೂ ಮಹಿಮೆಯೂ ಸದಾಕಾಲ ನಿಮ್ಮವೇ. ಆಮೆನ್; 1ಪೂರ್ವ 29:11 6:16 ಯೆಶಾ 58:5 § 6:19 ಲೂಕ 12:33; 1 ತಿಮೊ 6:17-19; ರೋಮಾ 9:13 * 6:24 ಅಲಕ್ಷ್ಯಮಾಡಿ 6:27 ಲೂಕ 12:25-31 6:27 ಆಯುಸ್ಸು ಹೆಚ್ಚು ಮಾಡಿಕೊಳ್ಳುವುದು