೧೨
ಮಿರ್ಯಾಮಳಿಗೆ ಉಂಟಾದ ತೊನ್ನು
೧ ಮೋಶೆ ಕೂಷ್ ದೇಶದ ಸ್ತ್ರೀಯನ್ನು ಮದುವೆ ಮಾಡಿಕೊಂಡಿದ್ದನು. ಆ ಕಾರಣಕ್ಕಾಗಿ ಮಿರ್ಯಾಮಳೂ ಹಾಗೂ ಆರೋನನೂ ಅವನಿಗೆ ವಿರುದ್ಧವಾಗಿ ಮಾತನಾಡಿದರು. ೨ ಅವರು, “ಯೆಹೋವನು ಮೋಶೆಯ ಮೂಲಕವಾಗಿ ಮಾತ್ರವೇ ಮಾತನಾಡುತ್ತಾನೋ? ನಮ್ಮ ಮೂಲಕ ಆತನು ಮಾತನಾಡುವುದಿಲ್ಲವೇ?” ಎಂದು ಹೇಳಿಕೊಂಡರು. ಅವರು ಆಡಿದ ಮಾತು ಯೆಹೋವನಿಗೆ ಕೇಳಿಸಿತು. ೩ ಮೋಶೆಯು ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹು ಸಾತ್ವಿಕನು.
೪ ಹೀಗಿರಲಾಗಿ ಅವರು ಆಡಿದ ಮಾತನ್ನು ಯೆಹೋವನು ಕೇಳಿ ಫಕ್ಕನೆ ಮೋಶೆ, ಆರೋನ್ ಮತ್ತು ಮಿರ್ಯಾಮರಿಗೆ, “ನೀವು ಮೂರು ಮಂದಿಯೂ ದೇವದರ್ಶನದ ಗುಡಾರಕ್ಕೆ ಬರಬೇಕು” ಎಂದು ಆಜ್ಞಾಪಿಸಿದನು. ಆಗ ಆ ಮೂವರು ಹೊರಗೆ ಬಂದರು. ೫ ಯೆಹೋವನು ಮೇಘಸ್ತಂಭದೊಳಗೆ ಇಳಿದು ಬಂದು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ನಿಂತು ಆರೋನನ್ನು ಮತ್ತು ಮಿರ್ಯಾಮಳನ್ನು ಹತ್ತಿರಕ್ಕೆ ಕರೆದನು. ಅವರು ಮುಂದೆ ಬಂದರು.
೬ ಯೆಹೋವನು ಅವರಿಗೆ, “ನನ್ನ ಮಾತನ್ನು ಕೇಳಿರಿ.
ನಿಮ್ಮಲ್ಲಿ ಪ್ರವಾದಿಯಿದ್ದರೆ ನಾನು ಅವನಿಗೆ
ಜ್ಞಾನದೃಷ್ಟಿಯಲ್ಲಿ ಪ್ರಕಟಿಸುವೆನು,
ಮತ್ತು ಕನಸಿನಲ್ಲಿ ಅವನ ಸಂಗಡ ಮಾತನಾಡುವೆನು.
೭ ನನ್ನ ಸೇವಕನಾದ ಮೋಶೆಯು ಅಂಥವನಲ್ಲ.
ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಾನೆ.
೮ ನಾನು ಅವನ ಸಂಗಡ ಗುಪ್ತವಾಗಿ ಅಲ್ಲ,
ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ಅವನ ಸಂಗಡ ಮಾತನಾಡುತ್ತೇನೆ.
ಅವನು ಯೆಹೋವನ ಸ್ವರೂಪವನ್ನೇ ದೃಷ್ಟಿಸುವನು.
ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರುದ್ದವಾಗಿ ಮಾತನಾಡುವುದಕ್ಕೆ ಏಕೆ ಭಯಪಡಲಿಲ್ಲ?” ಎಂದನು.
೯ ನಂತರ ಯೆಹೋವನು ಅವರ ಮೇಲೆ ಕೋಪಗೊಂಡು ಹೊರಟುಹೋದನು. ೧೦ ಆ ಮೇಘವು ದೇವದರ್ಶನದ ಗುಡಾರದ ಮೇಲಿನಿಂದ ಬಿಟ್ಟುಹೋಯಿತು. ಪಕ್ಕನೆ ಮಿರ್ಯಾಮಳಿಗೆ ತೊನ್ನು ಹತ್ತಿದ್ದರಿಂದ ಆಕೆಯ ಚರ್ಮ ಹಿಮದಂತೆ ಬೆಳ್ಳಗಾಗಿ ಹೋಯಿತು. ಆರೋನನು ಮಿರ್ಯಾಮಳನ್ನು ನೋಡಿದಾಗ ಆಕೆಗೆ ತೊನ್ನು ಹಿಡಿದಿದೆ ಎಂದು ತಿಳಿದುಕೊಂಡನು. ೧೧ ಆಗ ಆರೋನನು ಮೋಶೆಗೆ, “ನನ್ನ ಒಡೆಯನೇ, ನಾವು ವಿವೇಕವಿಲ್ಲದೆ ನಡೆದು ದೋಷಿಗಳಾದೆವು. ಈ ದೋಷದ ಫಲವನ್ನು ನಾವು ಅನುಭವಿಸುವಂತೆ ಮಾಡಬೇಡ ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ೧೨ ಅರ್ಧ ಮಾಂಸ ಕೊಳೆತುಹೋಗಿ ಹುಟ್ಟಿದ ಶಿಶುವಿನಂತೆ ಈಕೆ ಆಗಬಾರದು” ಎಂದು ಬೇಡಿದನು. ೧೩ ಆಗ ಮೋಶೆ ಯೆಹೋವನಿಗೆ, “ದೇವಾ, ಆಕೆಯನ್ನು ವಾಸಿಮಾಡಬೇಕೆಂದು ಬೇಡುತ್ತೇನೆ” ಎಂದು ಮೊರೆಯಿಟ್ಟನು.
೧೪ ಅದಕ್ಕೆ ಯೆಹೋವನು ಮೋಶೆಗೆ, “ಆಕೆಯ ತಂದೆ ಆಕೆಯ ಮುಖದ ಮೇಲೆ ಉಗುಳಿದರೆ, ಆಕೆ ಏಳು ದಿನ ನಾಚಿಕೆಯಿಂದ ಮರೆಯಾಗುತ್ತಿದ್ದಳಲ್ಲವೇ? ಹಾಗಾದರೆ ಆಕೆ ಏಳು ದಿನ ಪಾಳೆಯದ ಹೊರಗೆ ಇರಲಿ, ತರುವಾಯ ನೀನು ಆಕೆಯನ್ನು ಪಾಳೆಯದೊಳಗೆ ಸೇರಿಸಿಕೊಳ್ಳಬಹುದು” ಎಂದು ಉತ್ತರಕೊಟ್ಟನು. ೧೫ ಹಾಗೆಯೇ ಮಿರ್ಯಾಮಳು ಏಳು ದಿನಗಳವರೆಗೆ ಪಾಳೆಯದ ಹೊರಗೆ ಇರಬೇಕಾಯಿತು. ಆಕೆಯನ್ನು ತಿರುಗಿ ಸೇರಿಸಿಕೊಳ್ಳುವ ವರೆಗೆ ಇಸ್ರಾಯೇಲರು ಪ್ರಯಾಣಮಾಡಲಿಲ್ಲ. ೧೬ ತರುವಾಯ ಅವರು ಹಚೇರೋತಿನಿಂದ ಹೊರಟು ಪಾರಾನ್ ಅರಣ್ಯದಲ್ಲಿ ಇಳಿದುಕೊಂಡರು.