19
ಮನುಷ್ಯನ ಶವವು ಸೋಂಕಿದಾಗ ಮಾಡಬೇಕಾದ ಆಚಾರವನ್ನು ಕುರಿತದ್ದು
ಯೆಹೋವನು ಮೋಶೆ ಮತ್ತು ಆರೋನರಿಗೆ ಹೀಗೆ ಆಜ್ಞಾಪಿಸಿದನು, “ಯೆಹೋವನಾದ ನಾನು ಒಂದು ನಿಯಮವನ್ನು ನೇಮಿಸಿದ್ದೇನೆ, ಅದೇನೆಂದರೆ: ಎಂದೂ ನೊಗವನ್ನು ಹೊರದ ಮತ್ತು ಯಾವ ದೋಷವಿಲ್ಲದ ಪೂರ್ಣಾಂಗವಾದ ಕೆಂದಾಕಳನ್ನು ನಿಮಗೆ ತಂದುಕೊಡಬೇಕೆಂದು ಇಸ್ರಾಯೇಲರಿಗೆ ಆಜ್ಞಾಪಿಸು. ಅದನ್ನು ನೀವು ಯಾಜಕನಾದ ಎಲ್ಲಾಜಾರನ ಕೈಗೆ ಒಪ್ಪಿಸಬೇಕು. ಅವನು ಅದನ್ನು ಪಾಳೆಯದ ಹೊರಗೆ ಹೊರಡಿಸಿಕೊಂಡು ಹೋಗಿ ತನ್ನ ಎದುರೇ ಒಬ್ಬನ ಕೈಯಿಂದ ವಧೆಮಾಡಿಸಬೇಕು. ತರುವಾಯ ಯಾಜಕನಾದ ಎಲ್ಲಾಜಾರನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ದೇವದರ್ಶನದ ಗುಡಾರದ ಮುಂಭಾಗದ ಕಡೆಗೆ ಏಳು ಸಾರಿ ಚಿಮಿಕಿಸಬೇಕು. ಆಗ ಅವನು ಆ ಆಕಳನ್ನು ಚರ್ಮ, ಮಾಂಸ, ರಕ್ತ, ಕಲ್ಮಷಗಳ ಸಹಿತವಾಗಿ ತನ್ನ ಎದುರಿನಲ್ಲಿಯೇ ಸುಡಿಸಿಬಿಡಬೇಕು. ಯಾಜಕನು ದೇವದಾರುಮರದ ಕಟ್ಟಿಗೆಯನ್ನೂ, ಹಿಸ್ಸೋಪ್ ಗಿಡದ ಬರಲನ್ನೂ, ರಕ್ತವರ್ಣವುಳ್ಳ ದಾರವನ್ನೂ ತೆಗೆದುಕೊಂಡು ಆ ಆಕಳನ್ನು ಸುಡುವ ಬೆಂಕಿಯಲ್ಲಿ ಹಾಕಬೇಕು. ಆ ಯಾಜಕನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿದ ನಂತರ ಪಾಳೆಯದೊಳಗೆ ಬರಬಹುದು. ಆದರೆ ಆ ದಿನದ ಸಾಯಂಕಾಲದವರೆಗೆ ಅವನು ಅಶುದ್ಧನಾಗಿರಬೇಕು. ಆ ಆಕಳನ್ನು ಸುಟ್ಟವನೂ ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿ ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು.
“ಶುದ್ಧನಾದವನೊಬ್ಬನು ಆ ಆಕಳಿನ ಬೂದಿಯನ್ನು ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಸ್ಥಳದಲ್ಲಿ ಇಡಬೇಕು. ಅದನ್ನು ಇಸ್ರಾಯೇಲರ ಸಮೂಹದವರ ಉಪಯೋಗಕ್ಕಾಗಿ ನೀವು ಜೋಪಾನಮಾಡಬೇಕು. ಆದುದರಿಂದ ಶುದ್ಧೀಕರಣದ ನೀರನ್ನು ಸಿದ್ಧಪಡಿಸುವುದಕ್ಕಾಗಿ ಅದನ್ನು ಅಲ್ಲೇ ಇಟ್ಟಿರಬೇಕು. ಅದು ಅಶುದ್ಧವಾದದ್ದು. 10 ಆ ಕೆಂದಾಕಳ ಬೂದಿಯನ್ನು ಕೂಡಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು. ಇದು ಇಸ್ರಾಯೇಲರಿಗೂ ಮತ್ತು ಅವರಲ್ಲಿರುವ ಪ್ರವಾಸಿಗರಿಗೂ ಶಾಶ್ವತ ನಿಯಮವಾಗಿದೆ.
11 “ಮನುಷ್ಯನ ಶವ ಸೋಂಕಿದವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು. 12 ಮೂರನೆಯ ದಿನದಲ್ಲಿ ಆ ಬೂದಿಯಿಂದ ದೋಷಪರಿಹಾರ ಮಾಡಿಕೊಂಡು ಏಳನೆಯ ದಿನದಲ್ಲಿ ಶುದ್ಧನಾಗುವನು. ಮೂರನೆಯ ದಿನದಲ್ಲಿ ಅವನು ದೋಷಪರಿಹಾರ ಮಾಡಿಕೊಳ್ಳದೆ ಹೋದರೆ ಏಳನೆಯ ದಿನದಲ್ಲಿಯೂ ಶುದ್ಧನಾಗುವುದಿಲ್ಲ. 13 ಮನುಷ್ಯನ ಶವ ಸೋಂಕಿದವನು ದೋಷಪರಿಹಾರವನ್ನು ಮಾಡಿಕೊಳ್ಳದೆಹೋದರೆ ಅವನು ಯೆಹೋವನ ಗುಡಾರವನ್ನು ಅಪವಿತ್ರಪಡಿಸುವನು. ಅಂಥವನನ್ನು ಇಸ್ರಾಯೇಲರಿಂದ ತೆಗೆದುಹಾಕಬೇಕು. ಶುದ್ಧೀಕರಣದ ನೀರನ್ನು ತನ್ನ ಮೇಲೆ ಚಿಮಿಕಿಸಿಕೊಳ್ಳದೆ ಇರುವುದರಿಂದ ಅವನು ಅಶುದ್ಧನು. ಅವನ ಅಶುದ್ಧತ್ವವು ಇನ್ನೂ ಅವನ ಮೇಲೆ ಇರುವುದು.
14 “ಯಾರಾದರೂ ಡೇರೆಯಲ್ಲಿ ಸತ್ತರೆ ಅವನ ವಿಷಯವಾದ ನಿಯಮವೇನೆಂದರೆ: ಆ ಡೇರೆಯಲ್ಲಿರುವವರೆಲ್ಲರೂ ಮತ್ತು ಅದರೊಳಗೆ ಪ್ರವೇಶಿಸುವವರು ಏಳು ದಿನಗಳವರೆಗೆ ಅಶುದ್ಧರಾಗಿರಬೇಕು. 15 ಮುಚ್ಚಳ ಹಾಕದೆ ತೆರೆದಿರುವ ಎಲ್ಲಾ ಪಾತ್ರೆಗಳು ಅಶುದ್ಧವಾಗಿರುವವು. 16 ಬಯಲಿನಲ್ಲಿರುವ ಯಾವನಾದರೂ ಕತ್ತಿಯಿಂದ ಕೊಲ್ಲಲ್ಪಟ್ಟವನಾದರೂ, ಯಾವನಿಗಾದರೂ ಮನುಷ್ಯನ ಶವವಾಗಲಿ, ಮನುಷ್ಯನ ಎಲುಬಾಗಲಿ, ಸಮಾಧಿಯಾಗಲಿ ಸೋಂಕಿದರೆ ಅವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.
17 “ಅಶುದ್ಧನಾದವನನ್ನು ಶುದ್ಧಪಡಿಸಬೇಕಾದರೆ ಆ ದೋಷಪರಿಹಾರಕವಾದ ಬೂದಿಯಲ್ಲಿ ಸ್ವಲ್ಪವನ್ನು ಪಾತ್ರೆಯಲ್ಲಿ ಇಟ್ಟು, ಅದರ ಮೇಲೆ ಶುದ್ಧವಾದ ನೀರನ್ನು ಹಾಕಬೇಕು. 18 ಆಗ ಶುದ್ಧನಾದವನೊಬ್ಬನು ಆ ನೀರನ್ನು ಹಿಸ್ಸೋಪ್ ಗಿಡದ ಬರಲಿಂದ ಮನುಷ್ಯನು ಸತ್ತ ಆ ಡೇರೆಯ ಮೇಲೆಯೂ, ಅದರಲ್ಲಿದ್ದ ಸಾಮಾನುಗಳ ಮತ್ತು ಮನುಷ್ಯರ ಮೇಲೆಯೂ ಚಿಮಿಕಿಸಬೇಕು. ಹಾಗೆಯೇ ಎಲುಬಾಗಲಿ, ಹತವಾದವನ ಅಥವಾ ಬೇರೆ ಮನುಷ್ಯನ ಶವವಾಗಲಿ, ಸಮಾಧಿಯಾಗಲಿ ಯಾವನಿಗೆ ಸೋಂಕುವುದೋ ಅವನ ಮೇಲೆಯೂ ನೀರನ್ನು ಚಿಮಿಕಿಸಬೇಕು. 19 ಶುದ್ಧನಾದವನು ಮೂರನೆಯ ದಿನದಲ್ಲಿಯೂ, ಏಳನೆಯ ದಿನದಲ್ಲಿಯೂ ಅಶುದ್ಧನಾದವನ ಮೇಲೆ ಅದನ್ನು ಚಿಮಿಕಿಸಬೇಕು. ಅಶುದ್ಧನಾದವನು ಏಳನೆಯ ದಿನದಲ್ಲಿ ದೋಷಪರಿಹಾರ ಹೊಂದಿದವನಾಗಿ ತನ್ನ ಬಟ್ಟೆಗಳನ್ನು ಒಗೆದುಕೊಂಡು, ಸ್ನಾನಮಾಡಿ ಸಾಯಂಕಾಲದಲ್ಲಿ ಶುದ್ಧನಾಗುವನು. 20 ಅಶುದ್ಧನಾಗಿ ದೋಷಪರಿಹಾರ ಮಾಡಿಕೊಳ್ಳದವನು ಯೆಹೋವನ ಆಲಯವನ್ನು ಅಪವಿತ್ರಪಡಿಸಿದ ಕಾರಣ ಸಭೆಯಿಂದ ತೆಗೆಯಲ್ಪಡಬೇಕು. ಶುದ್ಧೀಕರಣದ ನೀರನ್ನು ತನ್ನ ಮೇಲೆ ಚಿಮಿಕಿಸಿಕೊಳ್ಳದೆ ಹೋದುದರಿಂದ ಅವನು ಅಶುದ್ಧನಾಗುವನು.
21 “ಇದು ಇಸ್ರಾಯೇಲರಿಗೆ ಶಾಶ್ವತ ನಿಯಮವಾಗಿರುವುದು. ಶುದ್ಧೀಕರಣದ ಆ ನೀರನ್ನು ಚಿಮಿಕಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಮತ್ತು ಆ ನೀರು ಯಾರಿಗೆ ಸೋಂಕುವುದೋ ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು. 22 ಅಶುದ್ಧನಿಗೆ ಸೋಂಕಿದ ವಸ್ತು ಯಾವುದೇ ಆಗಲಿ ಅಶುದ್ಧವೆಂದು ನೀವು ತಿಳಿದುಕೊಳ್ಳಬೇಕು. ಅದು ಯಾರಿಗೆ ಸೋಂಕುವುದೋ ಅವನೂ ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು.”