2
ಇಸ್ರಾಯೇಲರು ಪಾಳೆಯದಲ್ಲಿ ಗುಡಾರಗಳನ್ನು ಹಾಕಿಕೊಳ್ಳುವ ಕ್ರಮ
1 ಯೆಹೋವನು ಮಾತನಾಡಿ ಮೋಶೆ ಮತ್ತು ಆರೋನರಿಗೆ ಹೇಳಿದ್ದೇನೆಂದರೆ,
2 “ಇಸ್ರಾಯೇಲರೆಲ್ಲರೂ ಒಬ್ಬೊಬ್ಬರಾಗಿ ಕುಟುಂಬದ ಗುರುತುಗಳ ಪ್ರಕಾರ ದೇವದರ್ಶನದ ಗುಡಾರದ ಸುತ್ತಲೂ ಸ್ವಲ್ಪ ದೂರವಾಗಿ ಡೇರೆಗಳನ್ನು ತಮ್ಮ ತಮ್ಮ ದಂಡಿನ ಧ್ವಜದ ಹತ್ತಿರದಲ್ಲಿ ಹಾಕಿಕೊಳ್ಳಬೇಕು. ಅವರು ದೇವದರ್ಶನದ ಗುಡಾರದ ಎದುರಿನಲ್ಲಿ ಇಳಿದುಕೊಳ್ಳಬೇಕು.”
3 ದೇವದರ್ಶನ ಗುಡಾರದ ಪೂರ್ವದಿಕ್ಕಿನಲ್ಲಿ ಸೂರ್ಯೋದಯವಾಗುವ ಕಡೆಗೆ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ತಮ್ಮ ದಂಡಿನ ಧ್ವಜದ ಹತ್ತಿರ ಡೇರೆಗಳನ್ನು ಹಾಕಿಕೊಳ್ಳಬೇಕು. ಯೆಹೂದ ಕುಲದ ಸೈನ್ಯಾಧಿಪತಿಯು ಅಮ್ಮೀನಾದಾಬನ ಮಗನಾದ ನಹಶೋನನು.
4 ಅವನ ಸೈನಿಕರ ಸಂಖ್ಯೆ 74,600 ಮಂದಿ.
5 ಯೆಹೂದ ಕುಲದ ಬಳಿಯಲ್ಲಿ ಇಳಿದುಕೊಳ್ಳುವವರು ಇಸ್ಸಾಕಾರನ ಕುಲದವರು. ಚೂವಾರನ ಮಗನಾದ ನೆತನೇಲನು ಇಸ್ಸಾಕಾರರ ಸೈನ್ಯಾಧಿಪತಿ.
6 ಅವನ ಸೈನಿಕರ ಸಂಖ್ಯೆ 54,400 ಮಂದಿ.
7 ಇಸ್ಸಾಕಾರರ ಬಳಿಯಲ್ಲಿ ಇಳಿದುಕೊಳ್ಳುವವರು ಜೆಬುಲೂನ್ ಕುಲದವರು. ಹೇಲೋನನ ಮಗನಾದ ಎಲೀಯಾಬನು ಜೆಬುಲೂನ್ಯರ ಸೈನ್ಯಾಧಿಪತಿ.
8 ಅವನ ಸೈನಿಕರ ಸಂಖ್ಯೆ 57,400 ಮಂದಿ.
9 ಹೀಗೆ ಯೆಹೂದ ಕುಲದ ದಂಡಿಗೆ ಸೇರಿದವರ ಸೈನಿಕರ ಒಟ್ಟು ಸಂಖ್ಯೆ 1,86,400 ಮಂದಿ. ಇವರು ಮುಂಭಾಗದಲ್ಲಿ ಹೊರಡಬೇಕು.
10 ದಕ್ಷಿಣ ದಿಕ್ಕಿನಲ್ಲಿ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಶೆದೇಯೂರನ ಮಗನಾದ ಎಲೀಚೂರನು ರೂಬೇನ್ ಕುಲದ ಸೈನ್ಯಾಧಿಪತಿ.
11 ಅವನ ಸೈನಿಕರ ಸಂಖ್ಯೆ 46,500 ಮಂದಿ.
12 ರೂಬೇನ್ ಕುಲದವರ ಬಳಿಯಲ್ಲಿ ಇಳಿದುಕೊಳ್ಳುವವರು ಸಿಮೆಯೋನ್ ಕುಲದವರು. ಚೂರೀಷದ್ದೈಯನ ಮಗನಾದ ಶೆಲುಮೀಯೇಲನು ಸಿಮೆಯೋನ್ ಕುಲದ ಸೈನ್ಯಾಧಿಪತಿ.
13 ಅವನ ಸೈನಿಕರ ಸಂಖ್ಯೆ 59,300 ಮಂದಿ.
14 ತರುವಾಯ ಗಾದ್ಯರ ಕುಲದವರು. ರೆಗೂವೇಲನ ಮಗನಾದ ಎಲ್ಯಾಸಾಫನು ಗಾದ್ ಕುಲದ ಸೈನ್ಯಾಧಿಪತಿ.
15 ಅವನ ಸೈನಿಕರ ಸಂಖ್ಯೆ 45,650 ಮಂದಿ.
16 ಹೀಗೆ ರೂಬೇನ್ ಕುಲದ ದಂಡಿಗೆ ಸೇರಿದ ಸೈನಿಕರ ಒಟ್ಟು ಸಂಖ್ಯೆ 1,51,450 ಮಂದಿ. ಇವರು ಎರಡನೆಯ ದಂಡಾಗಿ ಹೊರಡಬೇಕು.
17 ಅನಂತರ ಸೈನ್ಯಗಳ ಮಧ್ಯದಲ್ಲಿ ದೇವದರ್ಶನದ ಗುಡಾರವು ಲೇವಿಯರ ಪಾಳೆಯದಿಂದ ಹೊರಡಬೇಕು. ಅವರು ಇಳಿದುಕೊಳ್ಳುವ ಪ್ರಕಾರವೇ ತಮ್ಮ ತಮ್ಮ ಧ್ವಜಗಳನ್ನು ಹಿಡಿದುಕೊಂಡು ತಮಗೆ ಗೊತ್ತಾದ ಸ್ಥಾನದಲ್ಲಿ ಹೊರಡಬೇಕು.
18 ಪಶ್ಚಿಮ ದಿಕ್ಕಿನಲ್ಲಿ ಎಫ್ರಾಯೀಮ್ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅಮ್ಮೀಹೂದನ ಮಗನಾದ ಎಲೀಷಾಮಾನು ಎಫ್ರಾಯೀಮ್ ಕುಲದ ಸೈನ್ಯಾಧಿಪತಿ.
19 ಅವನ ಸೈನಿಕರ ಸಂಖ್ಯೆ 40,500 ಮಂದಿ.
20 ಎಫ್ರಾಯೀಮ್ ಬಳಿಯಲ್ಲಿ ಮನಸ್ಸೆ ಕುಲದವರೂ ತಮ್ಮ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಪೆದಾಚೂರನ ಮಗನಾದ ಗಮ್ಲೀಯೇಲ್ ಮನಸ್ಸೆ ಕುಲದ ಸೈನ್ಯಾಧಿಪತಿ.
21 ಅವನ ಸೈನಿಕರ ಸಂಖ್ಯೆ 32,200 ಮಂದಿ.
22 ತರುವಾಯ ಬೆನ್ಯಾಮೀನ ಕುಲದವರು. ಗಿದ್ಯೋನಿಯ ಮಗನಾದ ಅಬೀದಾನ್ ಬೆನ್ಯಾಮೀನ ಕುಲದ ಸೈನ್ಯಾಧಿಪತಿ.
23 ಅವನ ಸೈನಿಕರ ಸಂಖ್ಯೆ 35,400 ಮಂದಿ.
24 ಹೀಗೆ ಎಫ್ರಾಯೀಮ್ಯರ ದಂಡಿಗೆ ಸೇರಿದ ಸೈನಿಕರ ಒಟ್ಟು ಸಂಖ್ಯೆ 1,08,100 ಮಂದಿ. ಇವರು ಮೂರನೆಯ ದಂಡಾಗಿ ಹೊರಡಬೇಕು.
25 ಉತ್ತರ ದಿಕ್ಕಿನಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅಮ್ಮೀಷದ್ದೈಯ ಮಗನಾದ ಅಹೀಗೆಜೆರ್ ದಾನ್ ಕುಲದ ಸೈನ್ಯಾಧಿಪತಿ.
26 ಅವನ ಸೈನಿಕರ ಸಂಖ್ಯೆ 62,700 ಮಂದಿ.
27 ದಾನ್ ಕುಲದ ಬಳಿಯಲ್ಲಿ ಆಶೇರ್ ಕುಲದವರು ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಒಕ್ರಾನನ ಮಗನಾದ ಪಗೀಯೇಲನು ಆಶೇರ್ ಕುಲದವರ ಸೈನ್ಯಾಧಿಪತಿ.
28 ಅವನ ಸೈನಿಕರ ಸಂಖ್ಯೆ 41,500 ಮಂದಿ.
29 ತರುವಾಯ ನಫ್ತಾಲಿ ಕುಲದವರು, ಏನಾನನ ಮಗನಾದ ಅಹೀರನು ನಫ್ತಾಲಿ ಕುಲದ ಸೈನ್ಯಾಧಿಪತಿ.
30 ಅವನ ಸೈನಿಕರ ಸಂಖ್ಯೆ 53,400 ಮಂದಿ.
31 ಹೀಗೆ ದಾನ್ ಕುಲದ ದಂಡಿಗೆ ಸೇರಿದ ಸೈನಿಕರ ಒಟ್ಟು ಸಂಖ್ಯೆ 1,57,600 ಮಂದಿ. ಇವರು ಕಡೆಯ ದಂಡಾಗಿ ಹೊರಡಬೇಕು.
32 ಮೋಶೆ ಮತ್ತು ಆರೋನರು ಇಸ್ರಾಯೇಲರ ಗೋತ್ರಗಳ ಪ್ರಕಾರ ದಂಡುಗಳಲ್ಲಿ ಸೈನಿಕರಾಗಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 6,03,550 ಮಂದಿ.
33 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಲೇವಿಯರು ಇಸ್ರಾಯೇಲರ ಸಂಗಡ ಲೆಕ್ಕಹಾಕಲಿಲ್ಲ.
34 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಮಾಡಿದರು. ಹಾಗೆಯೇ ದಂಡು ದಂಡಾಗಿ ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು ಮತ್ತು ಗೋತ್ರಕುಟುಂಬಗಳ ಪ್ರಕಾರವೇ ಹೊರಡುತ್ತಿದ್ದರು.