೩೦
ಹರಕೆಯ ನಿಯಮಗಳು ಮತ್ತು ತೀರಿಸುವ ವಿಧಾನ
೧ ಮೋಶೆಯು ಇಸ್ರಾಯೇಲರ ಕುಲಾಧಿಪತಿಗಳಿಗೆ ಹೇಳಿದ್ದೇನೆಂದರೆ, “ಯೆಹೋವನು ಹೀಗೆ ಆಜ್ಞಾಪಿಸಿದ್ದಾನೆ, ೨ ಯಾವನಾದರೂ ಯೆಹೋವನಿಗೆ ಹರಕೆ ಮಾಡಿದರೆ ಇಲ್ಲವೆ ತಾನು ಅಶುದ್ಧವಾದುದನ್ನು ಮುಟ್ಟದೆ ಇರುವೆನೆಂದು ಆಣೆಯಿಟ್ಟುಕೊಂಡರೆ ಅವನು ತನ್ನ ಮಾತನ್ನು ಮೀರದೆ ಹೇಳಿದಂತೆಯೇ ನೆರವೇರಿಸಬೇಕು.
೩ “ಸ್ತ್ರೀಯು ಕನ್ಯಾವಸ್ಥೆಯಲ್ಲಿ ತಂದೆಯ ಮನೆಯಲ್ಲಿದ್ದು ಯೆಹೋವನಿಗೆ ಹರಕೆಯನ್ನು ಮಾಡಿದಾಗ ಇಲ್ಲವೆ ಯಾವುದಾದರೂ ಒಂದನ್ನು ಮುಟ್ಟದೆ ಇರುವೆನೆಂದು ಪ್ರತಿಜ್ಞೆಯನ್ನು ಮಾಡಿಕೊಂಡಾಗ ೪ ಅವಳ ತಂದೆಯು ಆ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಅವಳು ಆ ಹರಕೆಯನ್ನು ನೆರವೇರಿಸಲೇಬೇಕು. ಯಾವುದನ್ನು ಮುಟ್ಟದೆ ಇರುವೆನೆಂದು ಹೇಳಿದಳೋ ಅದನ್ನು ಮುಟ್ಟಲೇ ಬಾರದು. ೫ ಆದರೆ ತಂದೆ ಆ ಸಂಗತಿಯನ್ನು ತಿಳಿದಾಗ ಹಾಗೆ ಮಾಡಬಾರದೆಂದು ಅಪ್ಪಣೆಕೊಟ್ಟರೆ ಅವಳು ಮಾಡಿದ ಹರಕೆಗಳೂ, ಪ್ರತಿಜ್ಞೆಗಳೂ ವ್ಯರ್ಥವಾಗುವವು. ತಂದೆ ಕ್ಷಮಿಸಿ ಬೇಡವೆಂದು ಹೇಳಿದ್ದರಿಂದ ಯೆಹೋವನು ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.
೬ “ಅವಳು ಮದುವೆಯಾದ ಪಕ್ಷದಲ್ಲಿ ಮಾಡಿದ ಹರಕೆ ಇಲ್ಲವೆ ಯೋಚಿಸದೆ ಮಾಡಿದ ಪ್ರತಿಜ್ಞೆ ನಡೆಯುವಷ್ಟರೊಳಗೆ, ೭ ಗಂಡನು ಆ ಪ್ರಮಾಣದ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಆ ಹರಕೆಗಳೂ, ಪ್ರತಿಜ್ಞೆಗಳೂ ನಡೆಯಬೇಕು. ೮ ಆದರೆ ಗಂಡನು ಕೇಳಿದಾಗಲೇ ಕ್ಷಮಿಸಿ ಬೇಡವೆಂದು ಅಪ್ಪಣೆಕೊಟ್ಟರೆ ಆ ಹರಕೆಯು ಇಲ್ಲವೆ ಆ ಪ್ರತಿಜ್ಞೆಯು ನಿರರ್ಥಕವಾಗುವವು. ಯೆಹೋವನು ಅವಳನ್ನು ದೋಷಿಯೆಂದು ಎಣಿಸುವುದಿಲ್ಲ.
೯ “ವಿಧವೆಯು ಇಲ್ಲವೆ ಗಂಡನಿಂದ ಬಿಡಲ್ಪಟ್ಟ ಸ್ತ್ರೀಯು ಇಂತಹ ಪ್ರಮಾಣಮಾಡಿಕೊಂಡರೆ ಅದು ನಿಲ್ಲುವುದು. ಅವಳು ಅದನ್ನು ನೆರವೇರಿಸಬೇಕು.
೧೦ “ಮುತ್ತೈದೆಯು ಅಂತಹ ಹರಕೆಯನ್ನಾಗಲಿ, ಪ್ರಮಾಣವನ್ನಾಗಲಿ ಮಾಡಿದಾಗ, ೧೧ ಅವಳ ಗಂಡನು ತಿಳಿದು ಅಡ್ಡಿಮಾಡದೆ ಸುಮ್ಮನಿದ್ದರೆ ಆ ಹರಕೆಗಳೂ, ಪ್ರತಿಜ್ಞೆಗಳೂ ನಿಲ್ಲುವವು. ೧೨ ಆದರೆ ಗಂಡನು ಅವುಗಳನ್ನು ತಿಳಿದಾಗಲೇ ಬೇಡವೆಂದರೆ ಅವು ರದ್ದಾಗುವವು. ಗಂಡನು ಕ್ಷಮಿಸಿ ಬೇಡವೆಂದು ಹೇಳಿದ್ದರಿಂದ ಅಂಥವಳು ಯೆಹೋವನಿಗೆ ಹರಕೆ ಮಾಡಿದರೂ, ದೋಷಿಯೆಂದು ಎಣಿಸಲ್ಪಡುವುದಿಲ್ಲ. ೧೩ ಹೆಂಡತಿ ಮಾಡಿದ ಹರಕೆಯನ್ನೂ, ಉಪವಾಸವಾಗಿರುವೆನೆಂದು ಅವಳು ಮಾಡಿದ ಪ್ರಮಾಣವನ್ನೂ ಸ್ಥಾಪಿಸುವುದಕ್ಕಾಗಲಿ ರದ್ದುಮಾಡುವುದಕ್ಕಾಗಲಿ ಗಂಡನಿಗೆ ಅಧಿಕಾರವಿರುವುದು. ೧೪ ಆದರೆ ಅವಳ ಗಂಡನು ಯಾವ ಅಡ್ಡಿಯನ್ನೂ ಮಾಡದೆ ಸುಮ್ಮನಿದ್ದರೆ ಅವನು ಅವಳ ಹರಕೆಗಳನ್ನೂ, ಪ್ರತಿಜ್ಞೆಗಳನ್ನೂ ಅವನು ನಮೂದಿಸಿದಂತೆ ಆಗುವುದು. ೧೫ ಅವನು ತರುವಾಯ ಬೇಡವೆಂದರೆ ಆ ಪಾಪದ ಫಲವನ್ನು ಅವನೇ ಅನುಭವಿಸಬೇಕು.”
೧೬ ಗಂಡಹೆಂಡತಿಯರ ವಿಷಯವಾಗಿಯೂ, ಇನ್ನೂ ಮದುವೆಯಿಲ್ಲದ ಹೆಂಗಸು ಮತ್ತು ಅವಳ ತಂದೆ ಇವರ ವಿಷಯವಾಗಿಯೂ, ಹರಕೆಗಳ ಸಂಬಂಧವಾಗಿಯೂ ಯೆಹೋವನು ಮೋಶೆಗೆ ಕೊಟ್ಟ ನಿಯಮಗಳು ಇವೇ.