೩೬
ಹೆಣ್ಣು ಮಕ್ಕಳು ಸ್ವಕುಲದಲ್ಲಿಯೇ ಮದುವೆಯನ್ನು ಮಾಡಿಕೊಳ್ಳಬೇಕೆಂಬ ನಿಯಮ
೧ ಯೋಸೇಫನ ವಂಶದವರೊಳಗೆ ಮನಸ್ಸೆಯ ಮೊಮ್ಮಗನೂ ಮಾಕೀರನ ಮಗನಾದ ಗಿಲ್ಯಾದನ ಸಂತತಿಯವರ ಮುಖಂಡರು ಮೋಶೆಯ ಮತ್ತು ಇಸ್ರಾಯೇಲರ ಕುಲಾಧಿಪತಿಗಳ ಬಳಿಗೆ ಬಂದು, ೨ “ದೇಶವನ್ನು ಚೀಟುಹಾಕಿ ಇಸ್ರಾಯೇಲರಿಗೆ ಹಂಚಿಕೊಡಬೇಕೆಂದು ಯೆಹೋವನು ಒಡೆಯನಿಗೆ ಆಜ್ಞಾಪಿಸಿ ತರುವಾಯ ನಮ್ಮ ಸ್ವಕುಲದವನಾದ ಚಲ್ಪಹಾದನಿಗೆ ಬರತಕ್ಕ ಸ್ವಾಸ್ತ್ಯವನ್ನು ಅವನ ಹೆಣ್ಣುಮಕ್ಕಳಿಗೆ ಕೊಡಬೇಕು ಎಂದು ಅಪ್ಪಣೆಮಾಡಿದನು. ೩ ಹೀಗಿರಲು ಅವರು ಇಸ್ರಾಯೇಲರ ಬೇರೆ ಕುಲದವರಿಗೆ ಮದುವೆಯಾದ ಪಕ್ಷಕ್ಕೆ ಅವರ ಸ್ವಾಸ್ತ್ಯವು ನಮ್ಮ ಕುಲದಿಂದ ತೆಗೆಯಲ್ಪಟ್ಟು ಅವರು ಸೇರಿಕೊಳ್ಳುವ ಕುಲಕ್ಕೆ ಹೋಗುವುದು. ಆದುದರಿಂದ ನಮ್ಮ ಸ್ವಾಸ್ತ್ಯಕ್ಕೆ ನಷ್ಟವುಂಟಾಗುವುದು. ೪ ಇಸ್ರಾಯೇಲರ ಜೂಬಿಲಿ ಸಂವತ್ಸರವು ಬಂದಾಗ ಅವರ ಸ್ವಾಸ್ತ್ಯವು ಅವರು ಸೇರಿಕೊಳ್ಳುವ ಕುಲದ ಸ್ವಾಸ್ತ್ಯಕ್ಕೆ ಕೂಡಿಕೊಳ್ಳುವುದರಿಂದ ನಮ್ಮ ಕುಲದಿಂದ ತೆಗೆಯಲ್ಪಡುವುದು” ಎಂದು ಹೇಳಿದರು. ೫ ಆಗ ಮೋಶೆಯು ಯೆಹೋವನ ಅಪ್ಪಣೆಯನ್ನು ಹೊಂದಿ ಇಸ್ರಾಯೇಲರಿಗೆ, “ಯೋಸೇಫನ ಕುಲದವರು ಹೇಳುವ ಮಾತು ನ್ಯಾಯವಾಗಿದೆ. ೬ ಆದಕಾರಣ ಯೆಹೋವನು ಚಲ್ಪಹಾದನ ಹೆಣ್ಣುಮಕ್ಕಳ ವಿಷಯವಾಗಿ ಅಜ್ಞಾಪಿಸಿದ್ದೇನೆಂದರೆ, ‘ತಮ್ಮ ಕುಲದ ಕುಟುಂಬಗಳಲ್ಲಿ ಮಾತ್ರವೇ ತಮಗೆ ಇಷ್ಟಬಂದವರನ್ನು ಮದುವೆಮಾಡಿಕೊಳ್ಳಬೇಕು’ ಎಂಬುದೇ. ೭ ಇಸ್ರಾಯೇಲರ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರಾಯೇಲರೆಲ್ಲರೂ ತಮ್ಮತಮ್ಮ ಕುಲಗಳ ಸ್ವಾಸ್ತ್ಯವನ್ನು ಹೊಂದಿಕೊಂಡೇ ಇರಬೇಕು. ೮ ಇದಕ್ಕಾಗಿ ಇಸ್ರಾಯೇಲರ ವಂಶದಲ್ಲಿ ಸ್ವಾಸ್ತ್ಯವನ್ನು ಹೊಂದಿದ ಹೆಣ್ಣುಮಕ್ಕಳು ಸ್ವಕುಲದಲ್ಲಿಯೇ ಮದುವೆ ಮಾಡಿಕೊಳ್ಳಬೇಕು. ೯ ಹೀಗೆ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗದೆ ಇಸ್ರಾಯೇಲರ ಪ್ರತಿಯೊಂದು ಕುಲವು ತನ್ನ ಸ್ವಾಸ್ತ್ಯವನ್ನು ಹೊಂದಿಕೊಂಡೇ ಇರುವುದು” ಎಂದು ಆಜ್ಞಾಪಿಸಿದನು. ೧೦ ಚಲ್ಪಹಾದನ ಹೆಣ್ಣುಮಕ್ಕಳು ಯೆಹೋವನ ಆಜ್ಞಾನುಸಾರವೇ ನಡೆದುಕೊಂಡರು. ೧೧ ಚಲ್ಪಹಾದನ ಹೆಣ್ಣುಮಕ್ಕಳಾದ ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕಾ, ನೋವಾ ಎಂಬುವವರು ಮನಸ್ಸೆಯ ಕುಲದವರನ್ನು ಮದುವೆಮಾಡಿಕೊಂಡರು. ೧೨ ಅವರು ಯೋಸೇಫನ ಮಗನಾದ ಮನಸ್ಸೆಯ ಕುಲದವರಿಗೇ ಮದುವೆಯಾದುದರಿಂದ ಅವರ ಸ್ವಾಸ್ತ್ಯವು ತಂದೆಯ ಕುಲದಲ್ಲಿಯೇ ಉಳಿಯಿತು. ೧೩ ಯೊರ್ದನ್ ನದಿಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಯೆಹೋವನು ಮೋಶೆಯ ಮೂಲಕ ಇಸ್ರಾಯೇಲರಿಗೆ ಕೊಟ್ಟ ಆಜ್ಞಾವಿಧಿಗಳು ಇವೇ.