1 ಪೇತ್ರನು
ಗ್ರಂಥಕರ್ತೃತ್ವ
ಆರಂಭಿಕ ವಚನವು ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು ಗ್ರಂಥಕರ್ತನಾಗಿದ್ದಾನೆಂದು ಸೂಚಿಸುತ್ತದೆ. ಅವನು ತನ್ನನ್ನು ಯೇಸು ಕ್ರಿಸ್ತನ ಅಪೊಸ್ತಲನೆಂದು ಕರೆದುಕೊಂಡನು (1 ಪೇತ್ರ. 1:1). ಕ್ರಿಸ್ತನ ಸಂಕಟದ ಬಗ್ಗೆ ಪದೇ ಪದೇ ಉಲ್ಲೇಖಿಸುವ ಆತನ ಉಲ್ಲೇಖಗಳು (2: 21-24; 3:18; 4:1; 5:1), ಸಂಕಟವನ್ನು ಅನುಭವಿಸುತ್ತಿರುವ ಸೇವಕನ ಚಿತ್ರಣವು ಅವನ ಮನಸ್ಸಿನಲ್ಲಿ ಆಳವಾಗಿ ಪ್ರಭಾವಬೀರಿದೆ ಎಂದು ತೋರಿಸುತ್ತವೆ. ಅವನು ಮಾರ್ಕನನ್ನು ತನ್ನ “ಮಗ” ಎಂದು ಕರೆದನು (5:13), ಈ ಯುವಕನ ಮತ್ತು ಅವನ ಕುಟುಂಬದ ಮೇಲಿರುವ ತನ್ನ ಮಮತೆಯನ್ನು ನೆನಪಿಸಿಕೊಂಡನು (ಅ.ಕೃ. 12:12). ಈ ಸಂಗತಿಗಳು ಅಪೊಸ್ತಲನಾದ ಪೇತ್ರನು ಈ ಪತ್ರಿಕೆಯನ್ನು ಬರೆದಿದ್ದಾನೆ ಎಂಬ ಕಲ್ಪನೆಗೆ ಸ್ವಾಭಾವಿಕವಾಗಿ ಕೊಂಡ್ಯೊಯುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 60-64 ರ ನಡುವೆ ಬರೆಯಲ್ಪಟ್ಟಿದೆ.
5:13 ರಲ್ಲಿ ಗ್ರಂಥಕರ್ತನು ಬಾಬಿಲೋನಿನಲ್ಲಿರುವ ಸಭೆಯಿಂದ ವಂದನೆಯನ್ನು ಹೇಳುತ್ತಿದ್ದಾನೆ.
ಸ್ವೀಕೃತದಾರರು
ಆಸ್ಯ ಸೀಮೆಯ ಉತ್ತರದ ಪ್ರದೇಶಗಳಲ್ಲಿ ಚದುರಿರುವ ಕ್ರೈಸ್ತರ ಗುಂಪಿಗೆ ಪೇತ್ರನು ಈ ಪತ್ರಿಕೆಯನ್ನು ಬರೆದನು. ಬಹುಶಃ ಯೆಹೂದ್ಯರು ಮತ್ತು ಅನ್ಯಜನರು ಒಳಗೊಂಡಿದ್ದ ಜನರ ಸಮೂಹಕ್ಕೆ ಅವನು ಬರೆದನು.
ಉದ್ದೇಶ
ತಮ್ಮ ನಂಬಿಕೆಗಾಗಿ ಹಿಂಸೆಯನ್ನು ಅನುಭವಿಸುತ್ತಿದ್ದ ತನ್ನ ಓದುಗರನ್ನು ಉತ್ತೇಜಿಸುವುದಕ್ಕಾಗಿ ಇದನ್ನು ಬರೆಯುತ್ತಿದ್ದೇನೆ ಎಂಬ ಕಾರಣವನ್ನು ಪೇತ್ರನು ತಿಳಿಸಿದನು. ಅವರು ದೇವರ ಕೃಪೆಯು ಕ್ರೈಸ್ತತ್ವದಲ್ಲಿ ಮಾತ್ರವೇ ದೊರಕುತ್ತದೆ ಎಂಬುದರ ಕುರಿತು ಸಂಪೂರ್ಣವಾಗಿ ಭರವಸೆಯುಳ್ಳವರಾಗಿರಬೇಕೆಂದು ಮತ್ತು ಆದ್ದರಿಂದ ನಂಬಿಕೆಯನ್ನು ಬಿಟ್ಟುಬಿಡಬಾರದು ಎಂದು ಅವನು ಬಯಸಿದ್ದನು. ಇದು 1 ಪೇತ್ರ 5:12 ರಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ, ನಿಮ್ಮನ್ನು ಪ್ರೋತ್ಸಾಹಿಸುವುದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವುದಕ್ಕೂ ನಾನು ಸಂಕ್ಷೇಪವಾಗಿ ಬರೆದಿದ್ದೇನೆ. ಅದರಲ್ಲಿ ದೃಢವಾಗಿ ನಿಂತುಕೊಳ್ಳಿರಿ. ಅವನ ಓದುಗಾರರಲ್ಲಿ ಈ ಹಿಂಸೆಯು ವ್ಯಾಪಕವಾಗಿ ಹರಡಿತ್ತು. ಉತ್ತರ ಆಸ್ಯ ಸೀಮೆಯಾದ್ಯಂತ ಕ್ರೈಸ್ತರಿಗೆ ಉಂಟಾದ ಹಿಂಸೆಯನ್ನು 1 ಪೇತ್ರನ ಪತ್ರಿಕೆಯು ಪ್ರತಿಫಲಿಸುತ್ತದೆ.
ಮುಖ್ಯಾಂಶ
ಸಂಕಟಕ್ಕೆ ಸ್ಪಂದನೆ
ಪರಿವಿಡಿ
1. ವಂದನೆಗಳು — 1:1-2
2. ದೇವರ ಕೃಪೆಗಾಗಿ ಆತನಿಗೆ ಸ್ತೋತ್ರ — 1:3-12
3. ಪರಿಶುದ್ಧ ಜೀವಿತಕ್ಕಾಗಿ ಪ್ರಬೋಧನೆಗಳು — 1:13-5:12
4. ಅಂತಿಮ ವಂದನೆಗಳು — 5:13-14
1
ಪೀಠಿಕೆ
1 ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು ಪೊಂತ, ಗಲಾತ್ಯ, ಕಪ್ಪದೋಕ್ಯ, ಆಸ್ಯ, ಬಿಥೂನ್ಯ ಎಂಬ ಸೀಮೆಗಳಲ್ಲಿ ಚದುರಿಹೋಗಿರುವಂಥ ಪರದೇಶಸ್ಥರಾದ ದೇವಜನರಿಗೆ ಅಂದರೆ,
2 ಪವಿತ್ರಾತ್ಮನಿಂದ ಪ್ರತಿಷ್ಠಿಸಲ್ಪಟ್ಟವರಾಗಿ, ವಿಧೇಯರಾಗುವುದಕ್ಕಾಗಿ, ಯೇಸು ಕ್ರಿಸ್ತನ ರಕ್ತದಿಂದ ಪ್ರೋಕ್ಷಿತರಾಗಿ, ತಂದೆಯಾದ ದೇವರ ಭವಿಷ್ಯದ ಜ್ಞಾನಾನುಸಾರವಾಗಿ ಆರಿಸಿಕೊಳಲ್ಪಟ್ಟವರಿಗೆ ಬರೆಯುವುದೇನೆಂದರೆ ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ಉಂಟಾಗಲಿ.
ಕ್ರೈಸ್ತರಿಗೆ ಇರುವ ಉತ್ಕೃಷ್ಟವಾದ ನಿರೀಕ್ಷೆ
3 ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ, ತನ್ನ ಮಹಾ ಕರುಣಾನುಸಾರವಾಗಿ ನಮ್ಮನ್ನು ತಿರುಗಿ ಜೀವಿಸುವಂತೆ ಮಾಡಿ ಜೀವಕರವಾದ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿ,
4 ನಮ್ಮನ್ನು ಲಯ, ಕಳಂಕ, ನಾಶಗಳಿಲ್ಲದ ಬಾಧ್ಯತೆಯನ್ನು ಎದುರು ನೋಡುವವರನ್ನಾಗಿ ಮಾಡಿದನು. ಆ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಡಲ್ಪಟ್ಟಿದೆ.
5 ಅಂತ್ಯ ಕಾಲದಲ್ಲಿ ಪ್ರಕಟವಾಗುವುದಕ್ಕೆ ಸಿದ್ಧವಾಗಿರುವ ರಕ್ಷಣೆಯು ನಂಬುವವರಾದ ನಿಮಗೆ ದೊರೆಯಬೇಕೆಂದು ದೇವರು ನಿಮ್ಮನ್ನು ತನ್ನ ಶಕ್ತಿಯಿಂದ ಕಾಪಾಡುತ್ತಾನೆ.
6 ಆದ್ದರಿಂದ ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ನಾನಾ ವಿಧ ಕಷ್ಟಗಳಲ್ಲಿ ದುಃಖಿಸುವವರಾಗಿದ್ದರೂ, ಹರ್ಷಿಸುವವರಾಗಿದ್ದೀರಿ.
7 ನಾಶವಾಗುವಂತಹದ್ದೂ, ಬೆಂಕಿಯಿಂದ ಶೋಧಿಸುವಂತಹದ್ದೂ ಆಗಿರುವ ಬಂಗಾರಕ್ಕಿಂತಲೂ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವಂತಹದ್ದಾಗಿದೆ.
8-9 ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ. ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು, ನಿಮ್ಮ ನಂಬಿಕೆಯ ಅಂತ್ಯಫಲವಾಗಿರುವ ಆತ್ಮಗಳ ರಕ್ಷಣೆಯನ್ನು ಹೊಂದುವವರಾಗಿ ಹೇಳಲಸಾಧ್ಯವಾದಂತಹ ಮಹಿಮೆಯುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.
10 ದೇವರು ನಿಮಗೆ ತೋರಿಸಿದ ಕೃಪೆಯನ್ನು ಕುರಿತು ಮುಂತಿಳಿಸಿದ ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದರು.
11 ತಮ್ಮಲ್ಲಿದ್ದ ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಮಹಿಮೆಯನ್ನೂ ಮುಂದಾಗಿ ತಿಳಿಸಿದಾಗ ಆತನು ಯಾವ ಕಾಲವನ್ನು ಇಲ್ಲವೆ ಎಂಥ ಕಾಲವನ್ನು ಸೂಚಿಸುವನೆಂಬುದನ್ನು ಅವರು ಪರಿಶೋಧನೆ ಮಾಡಿದರು.
12 ಆದರೆ ಈ ಸಂಗತಿಗಳನ್ನು ಮುಂತಿಳಿಸುವುದರಲ್ಲಿ ತಮಗೋಸ್ಕರವಲ್ಲ ನಿಮಗೋಸ್ಕರವೇ ಸೇವೆ ಮಾಡುವವರಾಗಿದ್ದಾರೆಂಬುದು ಅವರಿಗೆ ಪ್ರಕಟವಾಯಿತು. ಅವರು ಮುಂದಾಗಿ ಹೇಳಿದ ಸಂಗತಿಗಳೇ ಈಗ ಸಂಭವಿಸಲ್ಪಡುತ್ತಿವೆ ಎಂಬ ವರ್ತಮಾನವು ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮನ ಬಲದಿಂದ ನಿಮಗೆ ಸುವಾರ್ತೆಯನ್ನು ಸಾರಿದವರ ಮೂಲಕ ನಿಮಗೆ ಪ್ರಸಿದ್ಧಿಮಾಡಲ್ಪಟ್ಟಿದೆ. ದೇವದೂತರೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂದು ಬಯಸುತ್ತಿದ್ದಾರೆ.
ಪರಿಶುದ್ಧ ಜೀವಿತಕ್ಕೆ ಆಹ್ವಾನ
13 ಆದ್ದರಿಂದ ನೀವು ನಿಮ್ಮ ಮನಸ್ಸನ್ನು ದೃಢಪಡಿಸಿಕೊಂಡು, ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಸಂಪೂರ್ಣವಾಗಿ ಇಡಿರಿ.
14 ವಿಧೇಯತ್ವವುಳ್ಳ ಮಕ್ಕಳಂತೆ ನಡೆಯಿರಿ, ನೀವು ಮೊದಲು ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರದೆ,
15 ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಾಗಿದ್ದು ಆತನಿಗೆ ನಿಮ್ಮ ಎಲ್ಲಾ ನಡವಳಿಕೆಗಳಲ್ಲಿ ಪರಿಶುದ್ಧರಾಗಿರಿ.
16 ಏಕೆಂದರೆ, “ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು” ಎಂದು ಬರೆದಿದೆಯಲ್ಲಾ.
17 ಪ್ರತಿಯೊಬ್ಬನ ನಡತೆಯನ್ನು ನೋಡಿ ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನನ್ನು ನೀವು ತಂದೆಯೆಂದು ಕರೆಯುವವರಾಗಿರುವುದರಿಂದ ಈ ಲೋಕದಲ್ಲಿನ ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯಿಂದ ಕಳೆಯಿರಿ.
18 ನಿಮ್ಮ ಪೂರ್ವಿಕರಿಂದ ಬಂದಿರುವ ವ್ಯರ್ಥವಾದ ಸಂಪ್ರದಾಯಗಳ ನಡವಳಿಕೆಗಳಿಂದ ನಿಮಗೆ ಬಿಡುಗಡೆಯನ್ನುಂಟುಮಾಡಿದ್ದು ಬೆಳ್ಳಿ, ಬಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ.
19 ಯೇಸು ಕ್ರಿಸ್ತನೆಂಬ ನಿಷ್ಕಳಂಕವೂ, ನಿರ್ಮಲವೂ ಆದ ಕುರಿಮರಿಯ ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ.
20 ಆತನು ಜಗದುತ್ಪತ್ತಿಗೆ ಮೊದಲೇ ನೇಮಿಸಲ್ಪಟ್ಟವನಾಗಿದ್ದು ಈ ಅಂತ್ಯಕಾಲಗಳಲ್ಲಿ ನಿಮಗಾಗಿ ಪ್ರತ್ಯಕ್ಷನಾದನು.
21 ಆತನನ್ನು ಸತ್ತವರೊಳಗಿಂದ ಎಬ್ಬಿಸಿ ಆತನಿಗೆ ಮಹಿಮೆಯನ್ನು ಕೊಟ್ಟ ದೇವರಲ್ಲಿ ನೀವು ಆತನ ಮೂಲಕ ನಂಬಿಕೆಯಿಟ್ಟವರಾಗಿದ್ದೀರಷ್ಟೆ. ಹೀಗಿರಲಾಗಿ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿಯೇ ನೆಲೆಗೊಂಡಿವೆ.
22 ನೀವು ಸತ್ಯೋಪದೇಶಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಿಮಾಡಿಕೊಂಡದ್ದರಿಂದ ನಿಷ್ಕಪಟವಾದ ಸಹೋದರ ಪ್ರೀತಿಯುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನೊಬ್ಬರು ಶುದ್ಧಹೃದಯದಿಂದಲೂ, ಯಥಾರ್ಥವಾಗಿಯೂ ಪ್ರೀತಿಸಿರಿ.
23 ಏಕೆಂದರೆ ನೀವು ಹೊಸದಾಗಿ ಹುಟ್ಟಿರುವಂಥದ್ದು ನಾಶವಾಗುವ ವಾಕ್ಯದಿಂದದ್ದಲ್ಲ. ಆದರೆ ನಾಶವಾಗದಂಥ ವಾಕ್ಯದಿಂದಲೇ. ಅದು ಸದಾ ಜೀವವುಳ್ಳ ದೇವರವಾಕ್ಯದ ಮೂಲಕ ಉಂಟಾಯಿತು.
24 ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ:
“ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ.
ಅದರ ಮಹಿಮೆಯೆಲ್ಲಾ ಹುಲ್ಲಿನ ಹೂವಿನಂತಿದೆ.
ಹುಲ್ಲು ಒಣಗಿ ಹೋಗುವುದು. ಅದರ ಹೂವು ಉದುರಿ ಹೋಗುವುದು.
25 ಆದರೆ ಕರ್ತನ ಮಾತೋ ಸದಾಕಾಲವೂ ಇರುವುದು.”
ಆ ಮಾತು ಯಾವುದೆಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.