ದೇವರ ದಿನವು ತಡವಾದರೂ ಅದು ಬರುವುದು ನಿಶ್ಚಯ
೧ ಪ್ರಿಯರೇ, ನಿಮಗೀಗ ಬರೆಯುವುದು ಎರಡನೆಯ ಪತ್ರ. ೨  *ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ಜ್ಞಾಪಕಮಾಡಿಕೊಳ್ಳಬೇಕೆಂದು ಈ ಎರಡು ಪತ್ರಿಕೆಗಳ ಮೂಲಕ ನಿಮಗೆ ತಿಳಿಸಿಕೊಡುತ್ತಾ ನಿಮ್ಮ ನಿರ್ಮಲವಾದ ಮನಸ್ಸನ್ನು ಎಚ್ಚರಗೊಳಿಸುತ್ತಿದ್ದೇನೆ.
೩ ಕಡೆ ದಿನಗಳಲ್ಲಿ §ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ, ೪  *ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆಹೊಂದಿದ ನಂತರದಿಂದ; ಸಮಸ್ತವೂ ಸೃಷ್ಟಿಯ ಆರಂಭದಲ್ಲಿ ಇದ್ದ ಹಾಗೆಯೇ ಇದೆಯಲ್ಲಾ? ಎಂದು ಪರಿಹಾಸ್ಯಮಾಡುತ್ತಾ ಕೇಳುವರೆಂಬುದಾಗಿ ನೀವು ಮೊದಲು ತಿಳಿದುಕೊಳ್ಳಬೇಕು. ೫ ಆದರೆ ಪೂರ್ವಕಾಲದಲ್ಲಿ ಭೂಮ್ಯಾಕಾಶಗಳು ದೇವರ ವಾಕ್ಯದ ಮೂಲಕ §ನೀರಿನೊಳಗಿನಿಂದ ಹಾಗೂ ನೀರಿನಿಂದ ರೂಪಿಸಲ್ಪಟ್ಟಿತೆಂಬುದನ್ನು ಅವರು ಉದ್ದೇಶರ್ಪೂವಕವಾಗಿಯೇ ಮರೆತುಬಿಡುತ್ತಾರೆ. ೬  *ಆ ನೀರಿನಿಂದಲೇ ಅಂದಿನ ಲೋಕವು ಜಲಪ್ರಳಯದಲ್ಲಿ ನಾಶವಾಯಿತು. ೭ ಆದರೆ ಈಗಿನ ಭೂಮ್ಯಾಕಾಶಗಳು ಅದೇ ವಾಕ್ಯದಿಂದ ಅಗ್ನಿನಾಶಕ್ಕಾಗಿ ಕಾದಿರಿಸಲ್ಪಟ್ಟಿವೆ. ಅವು ನ್ಯಾಯ ತೀರ್ಪಿನ ದಿನಕ್ಕಾಗಿ ಮತ್ತು ಭಕ್ತಿಹೀನರ ನಾಶಕ್ಕಾಗಿ ಉಳಿಸಲ್ಪಟ್ಟಿವೆ.
೮ ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ ಎಂಬುದನ್ನು ಮಾತ್ರ ಮರೆಯಬೇಡಿರಿ. ೯  §ಕರ್ತನು ತನ್ನ ವಾಗ್ದಾನಗಳನ್ನು ನೆರವೇರಿಸುವುದಕ್ಕೆ ತಡಮಾಡುತ್ತಾನೆಂಬುದಾಗಿ ಕೆಲವರು ತಿಳಿದುಕೊಂಡಿರುವ ಪ್ರಕಾರ ಆತನು ತಡಮಾಡುವವನಲ್ಲ. *ಯಾರೊಬ್ಬನೂ ನಾಶವಾಗುವುದರಲ್ಲಿ ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪ ಪಡಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ. ೧೦ ಆದರೂ §ಕರ್ತನ ದಿನವು ಕಳ್ಳನು ಬರುವಂತೆ ಬರುತ್ತದೆ. *ಆ ದಿನದಲ್ಲಿ ಆಕಾಶ ಮಂಡಲವು ಮಹಾಘೋಷದಿಂದ ಇಲ್ಲದೆ ಹೋಗುವವು. ಮೂಲಧಾತುಗಳು ಉರಿದು ಲಯವಾಗಿ ಹೋಗುವವು. ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟು ಹೋಗುವವು.
ಲೋಕಾಂತ್ಯವನ್ನು ಎದುರುನೋಡುತ್ತಾ ಪರಿಶುದ್ಧರಾಗಿ ನಡೆಯಿರಿ ಎಂಬ ಬೋಧನೆ
೧೧ ಇವೆಲ್ಲವುಗಳು ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿರಬೇಕು? §ಪರಿಶುದ್ಧವಾಗಿಯೂ ಭಕ್ತಿಯುಳ್ಳವರಾಗಿಯೂ ಜೀವಿಸಬೇಕು. ೧೨ ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ *ಆತುರಪಡುವ ಆ ದಿನದಲ್ಲಿ ಆಕಾಶಮಂಡಲವು ಬೆಂಕಿಯಿಂದ ನಾಶವಾಗಿ ಹೋಗುವವು. ಅತಿ ಉಷ್ಣದಿಂದ ಮೂಲಧಾತುಗಳು ಉರಿದು ಕರಗಿ ಹೋಗುವವು. ೧೩ ಆದರೂ ನಾವು ದೇವರ ವಾಗ್ದಾನದ ಪ್ರಕಾರ ನೂತನ ಆಕಾಶ ಮಂಡಲವನ್ನೂ ಮತ್ತು ನೂತನ ಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ. ಅವುಗಳಲ್ಲಿ ನೀತಿಯು ವಾಸವಾಗಿರುವುದು.
೧೪  §ಆದಕಾರಣ ಪ್ರಿಯರೇ, ನೀವು ಇವುಗಳನ್ನು ಎದುರುನೋಡುವವರಾಗಿರುವುದರಿಂದ ಆತನೊಂದಿಗೆ ಸಮಾಧಾನದಲ್ಲಿದ್ದು *ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಆತನಿಗೆ ಕಾಣಿಸಿಕೊಳ್ಳುವಂತೆ ಪ್ರಯತ್ನಿಸಿರಿ. ೧೫  ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಇದೆ ಎಂದು ಪರಿಗಣಿಸಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ §ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ *ನಿಮಗೆ ಬರೆದಿದ್ದಾನೆ. ೧೬ ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ಈ ವಿಷಯಗಳನ್ನು ಕುರಿತು ಹೇಳಿದ್ದಾನೆ. ಆ ಪತ್ರಗಳಲ್ಲಿರುವ ಕೆಲವು ಸಂಗತಿಗಳು ನಿಮಗೆ ಅರ್ಥಮಾಡಿಕೊಳ್ಳುವುದಕ್ಕೆ ಕಠಿಣವಾಗಿವೆ. ಅಜ್ಞಾನಿಗಳೂ, ಚಂಚಲಚಿತ್ತರೂ ಆದವರು ಉಳಿದ ಗ್ರಂಥಗಳ ಹಾಗೆ ಇದನ್ನೂ ತಪ್ಪಾಗಿ ಅರ್ಥ ಕೊಟ್ಟು ತಮಗೆ ನಾಶವನ್ನುಂಟು ಮಾಡಿಕೊಳ್ಳುತ್ತಾರೆ. ೧೭ ಆದಕಾರಣ ಪ್ರಿಯರೇ, §ನೀವು ಈ ಸಂಗತಿಗಳನ್ನು ಮುಂಚಿತವಾಗಿ ತಿಳಿದುಕೊಂಡಿರುವುದರಿಂದ ದುಷ್ಟರ ವಂಚನೆಯಲ್ಲಿ ಸಿಕ್ಕಿ *ನಿಮ್ಮ ಸ್ಥಿರವಾದ ನಂಬಿಕೆಯನ್ನು ಬಿಟ್ಟು ಭ್ರಷ್ಟರಾಗದಂತೆಯೂ ಎಚ್ಚರಿಕೆಯಾಗಿರಿ. ೧೮ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ಕುರಿತಾದ ಕೃಪೆಯಲ್ಲಿಯೂ ಜ್ಞಾನದಲ್ಲಿಯೂ ನೀವು ಅಭಿವೃದ್ಧಿ ಹೊಂದಿರಿ. ಆತನಿಗೆ ಈಗಲೂ ಸದಾಕಾಲವೂ ಮಹಿಮೆಯುಂಟಾಗಲಿ. ಆಮೆನ್.
* ೩:೨ ಲೂಕ. 1:70; ಅ. ಕೃ. 3:21: ೩:೨ ಯೂದ. 17: ೩:೨ 2 ಪೇತ್ರ. 1:13: § ೩:೩ ಯೂದ. 18: * ೩:೪ 1 ಥೆಸ. 2:19: ೩:೪ ಯೆಶಾ. 5:19; ಯೆರೆ. 17:15; ಯೆಹೆ. 11:3; 12:22, 27; ಮಲಾ. 2:17: ೩:೫ ಆದಿ. 1:6, 7, 9; ಕೀರ್ತ. 33:6; ಇಬ್ರಿ. 11:3: § ೩:೫ ಕೀರ್ತ. 24:2; 136:6: * ೩:೬ ಆದಿ. 7:11, 21; 2 ಪೇತ್ರ. 2:5: ೩:೭ 2 ಥೆಸ. 1:9: ೩:೮ ಕೀರ್ತ. 90. 4: § ೩:೯ ಹಬ. 2:3; ಇಬ್ರಿ. 10:37; ಪ್ರಸಂಗಿ. 8:11: * ೩:೯ ಯೆಹೆ. 18:23, 32; 33:11: ೩:೯ 1 ತಿಮೊ. 2:4: ೩:೯ ಯೆಶಾ. 30. 18; ಲೂಕ. 18:7; 1 ಪೇತ್ರ. 3:20: § ೩:೧೦ ಮತ್ತಾ 24:42-51; ಲೂಕ. 12:39-46; 1 ಥೆಸ. 5:2; ಪ್ರಕ. 3:3: * ೩:೧೦ ಮತ್ತಾ 24:35; ಇಬ್ರಿ. 12:26, 27; ಪ್ರಕ. 6:14; 20:11; 21:1: ೩:೧೦ ಯೆಶಾ. 34:4: ೩:೧೦ ಕೆಲವು ಪ್ರತಿಗಳಲ್ಲಿ ಭೂಮಿಯೂ ಅದರಲ್ಲಿರುವ ಕೆಲಸಗಳೂ ಕಾಣುವವೇ? ಎಂದು ಬರೆದದೆ. § ೩:೧೧ 1 ಪೇತ್ರ. 1:15: * ೩:೧೨ ಅಥವಾ, ಬೇಗ ಬರುವಂತೆ ಪ್ರಯತ್ನಿಸುತ್ತಾ. ೩:೧೩ ಯೆಶಾ. 65:17; 66:22; ಪ್ರಕ. 21:1: ೩:೧೩ ಯೆಶಾ. 60. 21; ಪ್ರಕ. 21:27: § ೩:೧೪ 1 ಕೊರಿ. 15:58; 1 ಥೆಸ. 3:13; 5:23: * ೩:೧೪ ಯಾಕೋಬ 1:27; ಫಿಲಿ. 2:15: ೩:೧೫ ವ. 9: ೩:೧೫ ಅ. ಕೃ. 15:25: § ೩:೧೫ 1 ಕೊರಿ. 3:10: * ೩:೧೫ ರೋಮಾ. 2:4: ೩:೧೬ ರೋಮಾ. 8:19; 1 ಕೊರಿ. 15:24; 1 ಥೆಸ. 4:15: ೩:೧೬ ಯೆಶಾ. 28:13: § ೩:೧೭ 2 ಪೇತ್ರ. 1:12: * ೩:೧೭ 2 ಪೇತ್ರ. 1:10; 1:1 ಕೊರಿ. 10:12: ೩:೧೮ 2 ಪೇತ್ರ. 1:5; ಎಫೆ. 4:15; ಕೊಲೊ. 1:10; 2:19; 1 ಪೇತ್ರ. 2:2: ೩:೧೮ ರೋಮಾ. 11:36: