ಫಿಲಿಪ್ಪಿಯವರಿಗೆ
ಗ್ರಂಥಕರ್ತೃತ್ವ
ಪೌಲನು ಇದನ್ನು ಬರೆದಿರುವುದಾಗಿ ಹೇಳಿಕೊಳ್ಳುತ್ತಾನೆ (1:1) ಮತ್ತು ಭಾಷೆ, ಶೈಲಿ ಹಾಗೂ ಐತಿಹಾಸಿಕ ಸತ್ಯಾಂಶಗಳಂಥ ಎಲ್ಲಾ ಆಂತರಿಕ ಗುಣಲಕ್ಷಣಗಳು ಅದನ್ನು ದೃಢಪಡಿಸುತ್ತವೆ. ಪೌಲನ ಗ್ರಂಥಕರ್ತೃತ್ವ ಮತ್ತು ಅಧಿಕಾರದ ಬಗ್ಗೆ ಆದಿ ಸಭೆಗಳು ಸತತವಾಗಿ ಮಾತನಾಡುತ್ತಾ ಬಂದಿವೆ. ಫಿಲಿಪ್ಪಿಯವರಿಗೆ ಬರೆದ ಪತ್ರಿಕೆಯು ಕ್ರಿಸ್ತನ ಮನಸ್ಸನ್ನು ವರ್ಣಿಸುತ್ತದೆ (2:1-11). ಫಿಲಿಪ್ಪಿಯವರಿಗೆ ಪತ್ರಿಕೆಯನ್ನು ಬರೆಯುವಾಗ ಪೌಲನು ಸೆರೆಯಾಳಾಗಿದ್ದರೂ, ಅವನು ಸಂತೋಷಭರಿತನಾಗಿದ್ದನು. ಕ್ರೈಸ್ತರಾದ ನಾವು ಸಂಕಷ್ಟ ಮತ್ತು ಯಾತನೆಗಳ ನಡುವೆ ಇದ್ದರೂ ಸಹ ಸಂತೋಷವಾಗಿರಬಹುದೆಂದು ಫಿಲಿಪ್ಪಿಯವರಿಗೆ ಬರೆದ ಪತ್ರಿಕೆಯು ನಮಗೆ ಕಲಿಸುತ್ತದೆ. ಕ್ರಿಸ್ತನಲ್ಲಿ ನಮಗಿರುವ ನಿರೀಕ್ಷೆಯ ನಿಮಿತ್ತವಾಗಿ ನಾವು ಸಂತೋಷವುಳ್ಳವರಾಗಿದ್ದೇವೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 61 ರಲ್ಲಿ ಬರೆಯಲ್ಪಟ್ಟಿದೆ.
ಪೌಲನು ರೋಮಾಪುರದ ಸೆರೆಮನೆಯಲ್ಲಿದ್ದಾಗ ಅಲ್ಲಿಂದ ಈ ಪತ್ರಿಕೆಯನ್ನು ಫಿಲಿಪ್ಪಿಯವರಿಗೆ ಬರೆದನು (ಅ.ಕೃ. 28:30). ಫಿಲಿಪ್ಪಿಯ ಸಭೆಯಿಂದ ಪೌಲನಿಗೆ ಆರ್ಥಿಕ ನೆರವನ್ನು ತೆಗೆದುಕೊಂಡು ಬಂದಿದ್ದ ಎಪಫ್ರೊದೀತನಿಂದ ಫಿಲಿಪ್ಪಿಯವರಿಗೆ ಬರೆದ ಪತ್ರಿಕೆಯನ್ನು ಕಳುಹಿಸಿಕೊಡಬೇಕಾಗಿತ್ತು (ಫಿಲಿ. 2:25; 4:18). ಆದರೆ ಎಪಫ್ರೊದೀತನು ರೋಮಾಪುರದಲ್ಲಿದ್ದ ಸಮಯದಲ್ಲಿ, ಅನಾರೋಗ್ಯಕ್ಕೆ ತುತ್ತಾದನು, ಅದು ಅವನು ಮನೆಗೆ ವಾಪಸು ಹೋಗುವುದರಲ್ಲಿ ವಿಳಂಬವಾಗುವಂತೆ ಮಾಡಿತ್ತು ಮತ್ತು ಆದ್ದರಿಂದ ಪತ್ರಿಕೆಯ ಕೊಂಡ್ಯೊಯುವುದು ವಿಳಂಬವಾಯಿತು (2:26-27).
ಸ್ವೀಕೃತದಾರರು
ಮಕೆದೋನ್ಯದ ಜಿಲ್ಲೆಯ ಪ್ರಮುಖ ನಗರಗಳಲ್ಲಿ ಒಂದಾದ ಫಿಲಿಪ್ಪಿಯಲ್ಲಿರುವ ಕ್ರೈಸ್ತ ಸಭೆ.
ಉದ್ದೇಶ
ಸೆರೆಮನೆಯಲ್ಲಿದ್ದ ಅವನ ವಿಷಯದಲ್ಲಿ ಕಾರ್ಯಗಳು ಹೇಗೆ ಸಾಗುತ್ತಿವೆಯೆಂದು (1:12-26) ಮತ್ತು ಅವನ ಯೋಜನೆಗಳು ಯಾವುವು, ಅವನು ಬಿಡುಗಡೆಯಾಗುವನೋ (ಫಿಲಿ. 2: 23-24) ಎಂದು ಸಭೆಯು ತಿಳಿದುಕೊಳ್ಳಬೇಕೆಂದು ಪೌಲನು ಬಯಸಿದನು. ಸಭೆಯಲ್ಲಿ ವೈಮನಸ್ಸು ಮತ್ತು ವಿಭಜನೆ ಇದೆ ಎಂದು ಕಾಣಬರುತ್ತದೆ ಆದ್ದರಿಂದ ಐಕ್ಯತೆಯ ದೃಷ್ಟಿಕೋನದಿಂದ ದೀನತೆಯನ್ನು ಪ್ರೋತ್ಸಾಹಿಸಿ ಅಪೊಸ್ತಲನು ಬರೆಯುತ್ತಿದ್ದಾನೆ (2:1-18; 4:2-3). ಸಭಾಪಾಲನಾ ದೇವತಾಶಾಸ್ತ್ರಜ್ಞನಾದ ಪೌಲನು, ನಕರಾತ್ಮಕ ಬೋಧನೆಯನ್ನು ಮತ್ತು ಕೆಲವು ಮಂದಿ ಸುಳ್ಳು ಬೋಧಕರಿಂದ ಉಂಟಾದ ದುಷ್ಪರಿಣಾಮಗಳನ್ನು (3:2-3) ಹತ್ತಿಕ್ಕಬೇಕೆಂದು ಬರೆಯುತ್ತಾನೆ, ಪೌಲನು ಸಭೆಗೆ ತಿಮೊಥೆಯನನ್ನು ಪ್ರಶಂಸಿಸಲು ಮತ್ತು ಎಪಫ್ರೊದೀತನ ಆರೋಗ್ಯ ಮತ್ತು ಯೋಜನೆಗಳ ಬಗ್ಗೆ ಸಭೆಗೆ ವರದಿ ನೀಡಲು ಬರೆದನು (2:19-30) ಮತ್ತು ಪೌಲನು ತನ್ನ ಬಗೆಗಿನ ಅವರ ಕಾಳಜಿಗೆ ಮತ್ತು ಅವರು ನೀಡಿದ ದಾನಗಳಿಗೆ (4:10-20) ಕೃತಜ್ಞತೆಯನ್ನು ತಿಳಿಸಲು ಬರೆದನು.
ಮುಖ್ಯಾಂಶ
ಸಂತೋಷಭರಿತವಾದ ಜೀವನ
ಪರಿವಿಡಿ
1. ವಂದನೆ — 1:1-2
2. ಪೌಲನ ಪರಿಸ್ಥಿತಿ ಮತ್ತು ಸಭೆಗೆ ಪ್ರೋತ್ಸಾಹ — 1:3-2:30
3. ದುರ್ಬೋಧನೆಗೆ ವಿರುದ್ಧವಾದ ಎಚ್ಚರಿಕೆಗಳು — 3:1-4:1
4. ಅಂತಿಮ ಪ್ರಬೋಧನೆಗಳು — 4:2-9
5. ಕೃತಜ್ಞತೆಗಳು — 4:10-20
6. ಅಂತಿಮ ವಂದನೆಗಳು — 4:21-23
1
ಪೀಠಿಕೆ
ಕ್ರಿಸ್ತ ಯೇಸುವಿನ ದಾಸರಾದ ಪೌಲ ಮತ್ತು ತಿಮೊಥೆಯರು, ಫಿಲಿಪ್ಪಿಯದಲ್ಲಿ ಕ್ರಿಸ್ತ ಯೇಸುವಿನ ಮೂಲಕ *ದೇವಜನರಾಗಿರುವವರೆಲ್ಲರಿಗೂ ಮತ್ತು ಅವರೊಂದಿಗಿರುವ ಸಭಾಧ್ಯಕ್ಷರಿಗೂ ಹಾಗೂ ಸಭಾಸೇವಕರಿಗೂ ಬರೆಯುವುದೇನೆಂದರೆ, ನಮ್ಮ ತಂದೆಯಾದ ದೇವರಿಂದಲೂ, ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಲಭಿಸಲಿ.
ಕೃತಜ್ಞತಾಸ್ತುತಿಯೂ ಪ್ರಾರ್ಥನೆಗಳೂ
3-4 §ನಾನು ನಿಮ್ಮನ್ನು ನೆನಪಿಸಿಕೊಳ್ಳುವಾಗೆಲ್ಲಾ ನನ್ನ ದೇವರಿಗೆ ಸ್ತೋತ್ರಸಲ್ಲಿಸುತ್ತೇನೆ, ನಾನು ನಿಮಗಾಗಿ ದೇವರನ್ನು ಪ್ರಾರ್ಥಿಸುವ ಎಲ್ಲಾ ಸಮಯಗಳಲ್ಲಿಯೂ ಸಂತೋಷದಿಂದಲೇ ಪ್ರಾರ್ಥಿಸುವವನಾಗಿದ್ದೇನೆ. ನೀವು ಮೊದಲಿನಿಂದ ಇಂದಿನವರೆಗೂ *ಸುವಾರ್ತಾಪ್ರಚಾರದಲ್ಲಿ ಸಹಕಾರಿಗಳಾಗಿದ್ದೀರೆಂದು ನನ್ನ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇನೆ. ಈ ಒಳ್ಳೆಯ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ನಡಿಸಿಕೊಂಡು ಯೇಸು ಕ್ರಿಸ್ತನು ಬರುವ ದಿನದೊಳಗಾಗಿ ಪೂರ್ಣತೆಗೆ ತರುವನೆಂದು ನನಗೆ ಭರವಸವುಂಟು. ನಿಮ್ಮೆಲ್ಲರನ್ನು ಕುರಿತು ನನಗೆ ಹೀಗನ್ನಿಸುವುದು ಸೂಕ್ತವೇ ಸರಿ. §ನಾನು ಬಂಧನದಲ್ಲಿರುವಾಗಲೂ, *ಸುವಾರ್ತೆಯ ಕುರಿತಾದ ವಾದ-ಪ್ರತಿವಾದಗಳಲ್ಲಿಯು ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರೆಂದು ನಿಮ್ಮನ್ನು ನನ್ನ ಹೃದಯದಲ್ಲಿರಿಸಿಕೊಂಡಿದ್ದೇನೆ. ಕ್ರಿಸ್ತ ಯೇಸುವಿಗಿರುವಂಥ ಕನಿಕರದಿಂದ ನಿಮ್ಮೆಲ್ಲರಿಗೋಸ್ಕರ ಎಷ್ಟೋ ಹಂಬಲಿಸುತ್ತೇನೆ. §ಇದಕ್ಕೆ ದೇವರೇ ಸಾಕ್ಷಿ. ಮತ್ತು *ನಿಮ್ಮ ಪ್ರೀತಿಯು ಇನ್ನೂ ಅಧಿಕವಾಗಿ ಹೆಚ್ಚುತ್ತಾ ಪೂರ್ಣ ಜ್ಞಾನ ವಿವೇಕಗಳಿಂದ ಕೂಡಿರಬೇಕೆಂದು ನಾನು ನಿಮಗೋಸ್ಕರ ಪ್ರಾರ್ಥಿಸುತ್ತೇನೆ. 10 ಹೀಗೆ ಉತ್ತಮ ಕಾರ್ಯಗಳು ಯಾವವೆಂಬುದನ್ನು ನೀವು ವಿವೇಚಿಸುವವರಾಗಬೇಕೆಂತಲೂ ಹಾಗೂ ಕ್ರಿಸ್ತನು ಬರುವ ದಿನದಲ್ಲಿ ನೀವು §ಸರಳರಾಗಿಯೂ, ನಿರ್ಮಲರಾಗಿಯೂ, 11 ಯೇಸು ಕ್ರಿಸ್ತನ ಮೂಲಕವಾಗಿರುವ *ನೀತಿಯೆಂಬ ಫಲದಿಂದ ತುಂಬಿದವರಾಗಿಯೂ ಇರಬೇಕೆಂದು ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಸಲ್ಲಿಸಬೇಕೆಂತಲೂ ಬೇಡಿಕೊಳ್ಳುತ್ತೇನೆ.
ಸುವಾರ್ತೆಯ ಅಭಿವೃದ್ಧಿ
12 ಸಹೋದರರೇ, ನನಗೆ ಸಂಭವಿಸಿರುವಂಥವುಗಳೆಲ್ಲವೂ ಸುವಾರ್ತೆಯ ಪ್ರಸಾರಣೆಗೆ ಸಹಾಯವಾಯಿತೆಂದು ನೀವು ತಿಳಿಯಬೇಕೆಂಬುದಾಗಿ ಅಪೇಕ್ಷಿಸುತ್ತೇನೆ. 13 ಹೇಗೆಂದರೆ ನನ್ನ ಸೆರೆವಾಸವು ಕ್ರಿಸ್ತನ ನಿಮಿತ್ತವೇ ಎಂದು §ಅರಮನೆಯ ಕಾವಲುಗಾರರೆಲ್ಲರಿಗೂ ಹಾಗೂ ಉಳಿದವರೆಲ್ಲರಿಗೂ ತಿಳಿಯಲ್ಪಟ್ಟಿತು. 14 ಇದಲ್ಲದೆ ಸಹೋದರರಲ್ಲಿ ಬಹಳ ಜನರು ನನ್ನ ಬಂಧನದಿಂದಲೇ ಕರ್ತನಲ್ಲಿ ಭರವಸವುಳ್ಳವರಾಗಿ *ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವುದಕ್ಕೆ ಇನ್ನೂ ಹೆಚ್ಚು ಧೈರ್ಯಹೊಂದಿದ್ದಾರೆ. 15 ಕೆಲವರು ಹೊಟ್ಟೆಕಿಚ್ಚುಪಟ್ಟು ಭೇದ ಹುಟ್ಟಿಸಬೇಕೆಂಬ ಮನಸ್ಸಿನಿಂದ ಮತ್ತು ಬೇರೆ ಕೆಲವರು ಒಳ್ಳೆಯ ಭಾವದಿಂದ ಕ್ರಿಸ್ತನನ್ನು ಪ್ರಚುರಪಡಿಸುತ್ತಾರೆ. 16 ಇವರಂತೂ ನಾನು ಸುವಾರ್ತೆಯ ವಿಷಯದಲ್ಲಿ ಉತ್ತರ ಹೇಳುವುದಕ್ಕಾಗಿ ಇಲ್ಲಿ ಹಾಕಲ್ಪಟ್ಟಿದ್ದೆನೆಂದು ತಿಳಿದು ಪ್ರೀತಿಯಿಂದ ಪ್ರಸಿದ್ಧಿಪಡಿಸುತ್ತಿದ್ದಾರೆ. 17 ಆ ಬೇರೆ ತರದವರಾದರೋ ನಾನು ಬೇಡಿಯಿಂದ ಬಂಧಿತನಾಗಿರುವಾಗಲೂ ನನಗೆ ಸಂಕಟವನ್ನು ಹೆಚ್ಚಿಸಬೇಕೆಂದು ಯೋಚಿಸಿ, ಪ್ರಾಮಾಣಿಕವಲ್ಲದ ಸ್ವಾರ್ಥ ಉದ್ದೇಶದಿಂದ ಕ್ರಿಸ್ತನನ್ನು §ಪ್ರಸಿದ್ಧಿಪಡಿಸುತ್ತಾರೆ. 18 ಹೇಗಾದರೇನು? ಯಾವ ರೀತಿಯಿಂದಾದರೂ ಸರಿಯೇ ಕಪಟದಿಂದಾಗಲಿ ಅಥವಾ ಸತ್ಯದಿಂದಾಗಲಿ ಕ್ರಿಸ್ತನನ್ನು ಪ್ರಸಿದ್ಧಿಪಡಿಸುವುದುಂಟು, ಇದಕ್ಕೆ ನಾನು ಸಂತೋಷಿಸುತ್ತೇನೆ, ಮುಂದೆಯೂ ಸಂತೋಷಿಸುವೆನು. 19 ಯಾಕೆಂದರೆ *ನಿಮ್ಮ ವಿಜ್ಞಾಪನೆಯಿಂದಲೂ ಮತ್ತು ಯೇಸು ಕ್ರಿಸ್ತನ ಆತ್ಮನ ಸಹಾಯದಿಂದಲೂ ಇದು ನನ್ನ ಬಿಡುಗಡೆಗೆ ಅನುಕೂಲವಾಗುವುದೆಂದು ಬಲ್ಲೆನು. 20 ಹೇಗೆಂದರೆ ನಾನು ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ತುಂಬಾ ಧೈರ್ಯದಿಂದಿರುವುದರಿಂದ §ಬದುಕಿದರೂ ಸರಿಯೇ ಅಥವಾ ಸತ್ತರೂ ಸರಿಯೇ *ನನ್ನ ಶರೀರದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂದು ನನ್ನ ಬಹು ಅಭಿಲಾಷೆಯಾಗಿದೆ, ಹಾಗೆಯೇ ಆಗುವುದೆಂಬ ಭರವಸೆವುಂಟು. 21 ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ. 22 ಶರೀರದಲ್ಲಿಯೇ ಬದುಕಬೇಕಾದ್ದಲ್ಲಿ ನನ್ನ ಕೆಲಸಮಾಡಿ ಫಲಹೊಂದಲು ನನಗೆ ಸಾಧ್ಯವಾಗುವುದು. ಹೀಗಿರಲಾಗಿ ನಾನು ಯಾವುದನ್ನಾರಿಸಿಕೊಳ್ಳಬೇಕೆನ್ನುವುದು ನನಗೆ ತಿಳಿಯದು. 23 ಈ ಎರಡರ ನಡುವೆ ಸಿಕ್ಕಿಕೊಂಡಿದ್ದೇನೆ, §ಇಲ್ಲಿಂದ ಹೊರಟು *ಕ್ರಿಸ್ತನ ಜೊತೆಯಲ್ಲಿರಬೇಕೆಂಬುದೇ ನನ್ನ ಅಭಿಲಾಷೆ, ಅದು ಅತ್ಯುತ್ತಮವಾಗಿದೆ. 24 ಆದರೆ ನಾನಿನ್ನೂ ಶರೀರದಲ್ಲಿ ವಾಸಮಾಡಿಕೊಂಡಿರುವುದು ನಿಮಗೋಸ್ಕರ ಬಹು ಅವಶ್ಯಕವಾಗಿದೆ. 25 ಆದ್ದರಿಂದ ನಿಮಗೆ ಕ್ರಿಸ್ತನಂಬಿಕೆಯಲ್ಲಿ ಅಭಿವೃದ್ಧಿಯೂ ಆನಂದವೂ ಉಂಟಾಗುವುದಕ್ಕೋಸ್ಕರ ನಾನು ಜೀವದಿಂದುಳಿದು ನಿಮ್ಮೆಲ್ಲರ ಬಳಿಯಲ್ಲಿರುವೆನೆಂದು ದೃಢವಾಗಿ ನಂಬಿದ್ದೇನೆ. 26 ಹೀಗೆ ನಾನು ತಿರುಗಿ ನಿಮ್ಮ ಬಳಿಗೆ ಬರುವುದರಿಂದ ನೀವು ಕ್ರಿಸ್ತ ಯೇಸುವಿನ ವಿಷಯವಾಗಿ ಉಲ್ಲಾಸಪಡುವುದಕ್ಕೆ ನನ್ನಿಂದ ಅಧಿಕ ಆಸ್ಪದವಿರುವುದು.
ಕ್ರೈಸ್ತರು ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಬೇಕೆಂಬ ಬೋಧನೆ
27 §ಹೇಗೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿದರೂ ಸರಿಯೇ, ದೂರದಲ್ಲಿದ್ದು ನಿಮ್ಮ ಸುದ್ದಿಯನ್ನು ಕೇಳಿದರೂ ಸರಿಯೇ, ನೀವು ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲಾದರೂ ಹೆದರದೆ ಏಕಮನಸ್ಸಿನಿಂದ* ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕಮತ್ಯದಿಂದ ಹೋರಾಡುವವರಾಗಿದ್ದೀರೆಂದು ನಾನು ತಿಳಿದುಕೊಳ್ಳುವೆನು. 28 ನೀವು ಹೀಗಿರುವುದು ವಿರೋಧಿಗಳ ನಾಶನಕ್ಕೂ, ನಿಮ್ಮ ರಕ್ಷಣೆಗೂ ಒಂದು ಗುರುತಾಗಿದೆ. ಅದು ದೇವರಿಂದಾದ ಮುನ್ಸೂಚನೆಯಾಗಿದೆ. 29 ಕ್ರಿಸ್ತನ ಮೇಲೆ ನಂಬಿಕೆಯಿಡುವುದು ಮಾತ್ರವಲ್ಲ §ಆತನಿಗೋಸ್ಕರ ಬಾಧೆಯನ್ನನುಭವಿಸುವುದು ನಿಮಗೆ ವರವಾಗಿ ದೊರಕಿದೆ. 30 ಹೀಗೆ ನೀವು *ನನ್ನಲ್ಲಿ ಕಂಡಂಥ ಮತ್ತು ಈಗ ನನ್ನ ಕುರಿತಾಗಿ ಕೇಳುವಂಥ ಅದೇ ಹೋರಾಟವು ನಿಮಗೂ ಉಂಟು.
* 1:1 2 ಕೊರಿ 1:1; ಕೊಲೊ 1:2 1:1 ಅ. ಕೃ. 20:28; 1 ತಿಮೊ. 3:1-7; ತೀತ. 1:6-9 1:1 1 ತಿಮೊ. 3:8,12 § 1:3-4 ರೋಮಾ. 1:9; ಎಫೆ 1:16 * 1:5 ಫಿಲಿ. 2:12; 4:15; ಅ. ಕೃ. 16:12-40 1:5 ರೋಮಾ. 1:8 1:6 ಕೀರ್ತ 138:8; 1 ಥೆಸ. 5:24 § 1:7 ಅ. ಕೃ. 20:23; 26:29; ಕೊಲೊ 4:18; 2 ತಿಮೊ. 2:9; ಎಫೆ 3:1 * 1:7 ವ. 16 1:7 2 ಕೊರಿ 7:3 1:8 ಫಿಲಿ. 4:1; ರೋಮಾ. 1:11; 1 ಥೆಸ. 3:6; 2 ತಿಮೊ. 1:4 § 1:8 ರೋಮಾ. 1:9; 9:1 * 1:9 1 ಥೆಸ. 3:12; 2 ಥೆಸ. 1:3 1:9 ಕೊಲೊ 1:9; 3:10; ಫಿಲೆ. 6 1:10 ರೋಮಾ. 2:18 § 1:10 1 ಥೆಸ. 3:13; 5:23 * 1:11 ಕೊಲೊ 1:6,10; ಯಾಕೋಬ 3:18 1:11 ಎಫೆ 1:12,14 1:13 ಲೂಕ 21:13 § 1:13 ಅ. ಕೃ. 28:30,31; 2 ಕೊರಿ 2:9 * 1:14 ಅ. ಕೃ. 4:31 1:15 2 ಕೊರಿ 11:13 1:16 ವ. 7 § 1:17 ಫಿಲಿ. 2:3; ಯಾಕೋಬ 3:14 * 1:19 2 ಕೊರಿ 1:11 1:19 ಅ. ಕೃ. 16:7; ಗಲಾ. 3:5 1:20 ರೋಮಾ. 5:5; 2 ತಿಮೊ. 2:15 § 1:20 ರೋಮಾ. 14:8 * 1:20 1 ಕೊರಿ 6:20 1:21 ಗಲಾ. 2:20 1:23 2 ಕೊರಿ 5:8 § 1:23 2 ತಿಮೊ. 4:6 * 1:23 ಯೋಹಾ 12:26 1:25 ರೋಮಾ. 15:13 1:26 2 ಕೊರಿ 1:14 § 1:27 ಎಫೆ 4:1 * 1:27 1 ಕೊರಿ 16:13 1:27 ಫಿಲಿ. 2:2 1:28 ಅ. ಕೃ. 14:22 § 1:29 ಮತ್ತಾ 5:12; ಅ. ಕೃ. 14:22 * 1:30 ಅ. ಕೃ. 16:19-40 1:30 ಕೊಲೊ 1:29; 2:1