24
ಯೆಹೋವನ ಸನ್ನಿಧಿಯಲ್ಲಿ ಸೇರತಕ್ಕವರು
ದಾವೀದನ ಕೀರ್ತನೆ.
ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದು;
ಲೋಕವೂ ಮತ್ತು ಅದರ ನಿವಾಸಿಗಳೂ ಆತನವೇ.
ಆತನೇ ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು;
ಅದನ್ನು ಜಲರಾಶಿಗಳ ಮೇಲೆ ಸ್ಥಿರಪಡಿಸಿದವನು ಆತನೇ.
ಯೆಹೋವನ ಪರ್ವತವನ್ನು* ಹತ್ತತಕ್ಕವನು ಯಾರು?
ಆತನ ಪವಿತ್ರಸ್ಥಾನದಲ್ಲಿ ಪ್ರವೇಶಿಸುವುದಕ್ಕೆ ಎಂಥವನು ಯೋಗ್ಯನು?
ಯಾರು ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ,
ಮೋಸ ಪ್ರಮಾಣಮಾಡದೆ,
ಶುದ್ಧಹಸ್ತವೂ, ನಿರ್ಮಲಮನಸ್ಸೂ ಉಳ್ಳವನಾಗಿದ್ದಾನೋ,
ಅವನೇ ಯೆಹೋವನಿಂದ ಶುಭವನ್ನು ಹೊಂದುವನು;
ತನ್ನ ರಕ್ಷಕನಾದ ದೇವರಿಂದ ನೀತಿಫಲವನ್ನು ಪಡೆಯುವನು.
ಇಂಥವರೇ ಆತನ ದರ್ಶನವನ್ನು ಬಯಸುವವರು.
ಯಾಕೋಬ್ಯರ ದೇವರೇ, ನಿನ್ನ ಸಾನ್ನಿಧ್ಯವನ್ನು ಸೇರುವವರು ಇಂಥವರೇ.
ಸೆಲಾ
ದ್ವಾರಗಳೇ, ಉನ್ನತವಾಗಿರ್ರಿ!
ಪುರಾತನವಾದ ಕದಗಳೇ ತೆರೆದುಕೊಂಡಿರ್ರಿ!
ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ.
ಮಹಾಮಹಿಮೆಯುಳ್ಳ ಈ ಅರಸನು ಯಾರು?
ಮಹಾ ಬಲಿಷ್ಠನೂ, ವಿಶೇಷ ಪರಾಕ್ರಮಿಯೂ ಆಗಿರುವ ಯೆಹೋವ,
ಯುದ್ಧವೀರನಾಗಿರುವ ಯೆಹೋವ.
ದ್ವಾರಗಳೇ, ಉನ್ನತವಾಗಿರ್ರಿ!
ಪುರಾತನವಾದ ಕದಗಳೇ, ತೆರೆದುಕೊಂಡಿರ್ರಿ!
ಮಹಾಮಹಿಮೆಯುಳ್ಳ ಅರಸನು ಆಗಮಿಸುತ್ತಾನೆ.
10 ಮಹಾಮಹಿಮೆಯುಳ್ಳ ಈ ಅರಸನು ಯಾರು?
ಸೇನಾಧೀಶ್ವರನಾದ ಯೆಹೋವನೇ,
ಮಹಾಮಹಿಮೆಯುಳ್ಳ ಅರಸನು ಈತನೇ.
ಸೆಲಾ.
* 24:3 24:3 ಪರ್ವತವನ್ನು ಇದು ದೇವಾಲಯವನ್ನು ಕಟ್ಟಿದ ಪರ್ವತವಾಗಿದೆ. ಚೀಯೋನ್ ಪರ್ವತಾರೋಹಣವನ್ನು ಮಾಡುವ ಮತ್ತು ದೇವಾಲಯವನ್ನು ಪ್ರವೇಶಿಸುವ ಉದ್ದೇಶವೇನೆಂದರೆ ಯೆಹೋವನನ್ನು ಆರಾಧಿಸಲು ಹೋಗುವುದಾಗಿದೆ. 24:3 24:3 ಅಥವಾ ನಿಲ್ಲುವುದಕ್ಕೆ.