35
ಯೋಷೀಯನ ಕಾಲದಲ್ಲಿ ನಡೆದ ಪಸ್ಕಹಬ್ಬ
ಯೋಷೀಯನು ಯೆಹೋವನಿಗೋಸ್ಕರ ಯೆರೂಸಲೇಮಿನಲ್ಲಿ ಪಸ್ಕಹಬ್ಬವನ್ನು ಆಚರಿಸುವಂತೆ ಮಾಡಿದನು. ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಸ್ಕದ ಕುರಿಗಳನ್ನು ಕೊಯ್ದರು. ಯೋಷೀಯನು ಯಾಜಕರನ್ನು ಅವರವರ ಕೆಲಸಕ್ಕೆ ನೇಮಿಸಿ, ಯೆಹೋವನ ಆಲಯದ ಸೇವೆಗಾಗಿ ಅವರನ್ನು ಪ್ರೋತ್ಸಾಹಿಸಿದನು. ಎಲ್ಲಾ ಇಸ್ರಾಯೇಲರನ್ನು ಉಪದೇಶಿಸತಕ್ಕವರೂ, ಯೆಹೋವನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆ, “ದಾವೀದನ ಮಗನೂ ಇಸ್ರಾಯೇಲ್ ರಾಜನೂ ಆದ ಸೊಲೊಮೋನನು ಕಟ್ಟಿಸಿದ ದೇವಾಲಯದಲ್ಲಿ ಪವಿತ್ರ ಮಂಜೂಷವನ್ನು ಇರಿಸಿರಿ; ಅದನ್ನು ಹೆಗಲಿನ ಮೇಲೆ ಹೊತ್ತುಕೊಳ್ಳುವ ಅಗತ್ಯವಿಲ್ಲ. ಅದು ನಿಮ್ಮ ಹೆಗಲುಗಳಿಗೆ ಹೊರೆಯಾಗಿರಬಾರದು; ಇನ್ನು ಮುಂದೆ ನಿಮ್ಮ ದೇವರಾದ ಯೆಹೋವನನ್ನೂ, ಆತನ ಪ್ರಜೆಗಳಾದ ಇಸ್ರಾಯೇಲರನ್ನೂ ಸೇವಿಸಿರಿ. ಇಸ್ರಾಯೇಲರ ಅರಸನಾದ ದಾವೀದನೂ, ಅವನ ಮಗನಾದ ಸೊಲೊಮೋನನೂ ಬರೆದು ನೇಮಿಸಿದಂತೆ ನಿಮ್ಮ ನಿಮ್ಮ ಗೋತ್ರವರ್ಗಗಳ ಪ್ರಕಾರ ಸಿದ್ಧರಾಗಿದ್ದು, ನಿಮ್ಮ ಸಹೋದರರಾದ ಇಸ್ರಾಯೇಲರ ಒಂದೊಂದು ಗೋತ್ರಶಾಖೆಗಳಿಗಾಗಿ ನಿಮ್ಮಲ್ಲಿ ಒಂದೊಂದು ಗುಂಪಿನವರು ಪವಿತ್ರಸ್ಥಾನದಲ್ಲಿ ನಿಂತು ಪಸ್ಕದ ಕುರಿಯನ್ನು ವಧಿಸಲಿ ಮೋಶೆಯಿಂದ ಪ್ರಕಟವಾದ ಯೆಹೋವನ ವಿಧಿಗನುಸಾರವಾಗಿ ನಿಮ್ಮ ಸಹೋದರರು ಪಸ್ಕಭೋಜನ ಮಾಡುವಂತೆ ನೀವು ನಿಮ್ಮನ್ನು ಶುದ್ಧಿಪಡಿಸಿಕೊಂಡು ಅವರಿಗಾಗಿ ಎಲ್ಲವನ್ನೂ ಸಿದ್ಧಮಾಡಿರಿ” ಎಂದು ಆಜ್ಞಾಪಿಸಿದನು.
ಯೋಷೀಯನು ಹಬ್ಬಕ್ಕೆ ಬಂದ ಜನರಿಗೆ ಪಸ್ಕಯಜ್ಞಕ್ಕಾಗಿ ರಾಜಕೀಯ ಸೊತ್ತಿನಿಂದ ಮೂವತ್ತು ಸಾವಿರ ಆಡುಮರಿಗಳನ್ನೂ, ಕುರಿಮರಿಗಳನ್ನೂ, ಮೂರು ಸಾವಿರ ಹೋರಿಗಳನ್ನೂ ದಾನಮಾಡಿದನು. ಅವನ ಸರದಾರರು ಜನರಿಗೂ, ಯಾಜಕರಿಗೂ, ಲೇವಿಯರಿಗೂ ಯಜ್ಞಪಶುಗಳನ್ನು ಸಂತೋಷವಾಗಿ ಕೊಟ್ಟರು. ದೇವಾಲಯದ ಪ್ರಧಾನರಾದ ಹಿಲ್ಕೀಯ, ಜೆಕರ್ಯ, ಯೆಹೀಯೇಲ್ ಎಂಬುವವರು ಯಾಜಕರಿಗೆ ಎರಡು ಸಾವಿರದ ಆರು ನೂರು ಪಸ್ಕದ ಕುರಿಮರಿಗಳನ್ನೂ, ಮುನ್ನೂರು ಹೋರಿಗಳನ್ನೂ ಕೊಟ್ಟರು. ಲೇವಿಯರಲ್ಲಿ ಮುಖ್ಯಸ್ಥರಾದ ಕೋನನ್ಯ, ಸೆಮಾಯ, ನೆತನೇಲ್ ಎಂಬ ಅಣ್ಣತಮ್ಮಂದಿರೂ, ಹಷಲ್ಯ, ಯೆಗೀಯೇಲ್, ಯೋಜಾಬಾದ್ ಎಂಬವರೂ ಲೇವಿಯರಿಗೆ ಐದು ಸಾವಿರ ಪಸ್ಕದ ಕುರಿಮರಿಗಳನ್ನೂ, ಐನೂರು ಹೋರಿಗಳನ್ನೂ ದಾನಮಾಡಿದರು. 10 ಸೇವೆಯ ಸಂಬಂಧವಾದದ್ದೆಲ್ಲವನ್ನೂ ಏರ್ಪಡಿಸಿದನಂತರ ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿಯೂ, ಲೇವಿಯರು ಅರಸನ ಅಪ್ಪಣೆಯಂತೆ ವರ್ಗವರ್ಗಗಳಾಗಿಯೂ ನಿಂತರು; 11 ಲೇವಿಯರು ಪಸ್ಕದ ಪಶುಗಳನ್ನು ವಧಿಸಿದರು. ಯಾಜಕರು ಇವರ ಕೈಯಿಂದ ರಕ್ತವನ್ನು ತೆಗೆದುಕೊಂಡು ಪ್ರೋಕ್ಷಿಸಿದರು. 12 ಲೇವಿಯರು ಚರ್ಮ ಸುಲಿದು ಹೋಮಕ್ಕಾಗಿ ಪ್ರತ್ಯೇಕಿಸತಕ್ಕದ್ದನ್ನು ಪ್ರತ್ಯೇಕಿಸಿ ಜನರಿಗೆ ಆಯಾ ಗೋತ್ರಶಾಖೆಗಳಿಗನುಸಾರವಾಗಿ ಕೊಟ್ಟರು. ಇವರು ಅದನ್ನು ಮೋಶೆಯ ಧರ್ಮಶಾಸ್ತ್ರವಿಧಿಯ ಮೇರೆಗೆ ಯೆಹೋವನಿಗೆ ಸಮರ್ಪಿಸಬೇಕಾಯಿತು. ಹೋರಿಗಳ ವಿಷಯದಲ್ಲಿಯೂ ಅದೇ ಕ್ರಮವನ್ನು ಅನುಸರಿಸಿದರು. 13 ಆಮೇಲೆ ಲೇವಿಯರು ಪಸ್ಕದ ಮಾಂಸವನ್ನು ನಿಯಮದ ಪ್ರಕಾರ ಬೆಂಕಿಯಲ್ಲಿ ಸುಟ್ಟು ದೇವರಿಗೆ ಕಾಣಿಕೆಯಾಗಿ ಸಮರ್ಪಿತವಾದ ಪಶುಗಳ ಮಾಂಸವನ್ನು ಕೊಪ್ಪರಿಗೆ, ಬಾನೆ, ಹಂಡೆಗಳಲ್ಲಿ ಬೇಯಿಸಿ, ಬೇಗನೆ ತಂದು ಜನರಿಗೆ ಬಡಿಸಿದರು. 14 ತರುವಾಯ ತಮಗೋಸ್ಕರವೂ ಯಾಜಕರಿಗೋಸ್ಕರವೂ ಸಿದ್ಧಮಾಡಿದರು. ಆರೋನನ ಮಕ್ಕಳಾದ ಯಾಜಕರು ರಾತ್ರಿಯವರೆಗೂ ಸರ್ವಾಂಗಹೋಮಗಳನ್ನೂ, ಕೊಬ್ಬನ್ನೂ ಸರ್ಮಪಿಸುತ್ತಾ ಇದ್ದುದರಿಂದ ಲೇವಿಯರು ತಮಗೋಸ್ಕರ ಹೇಗೋ ಹಾಗೆ ಆರೋನನ ಮಕ್ಕಳಾದ ಯಾಜಕರಿಗೋಸ್ಕರ ಭೋಜನ ಸಿದ್ಧಮಾಡಿದರು. 15 ಆಸಾಫ್ಯರಾದ ಗಾಯಕರು, ಅರಸನಾದ ದಾವೀದನ ಮತ್ತು ಆಸಾಫ್, ಹೇಮಾನ್, ಅರಸನ ದರ್ಶಿಯಾದ ಯೆದುತೂನ್ ಇವರ ಆಜ್ಞಾನುಸಾರವಾಗಿ ತಮ್ಮ ಸ್ಥಳದಲ್ಲಿ ನಿಂತಿದ್ದರು; ದ್ವಾರಪಾಲಕರು ಆಯಾ ಬಾಗಿಲುಗಳನ್ನು ಕಾಯುತ್ತಿದ್ದರು. ಅವರ ಸಹೋದರರಾದ ಲೇವಿಯರು ಅವರ ಭೋಜನಕ್ಕೆ ಸಿದ್ಧಮಾಡುತ್ತಿದ್ದದರಿಂದ ಅವರು ತಮ್ಮ ತಮ್ಮ ಸೇವೆಯನ್ನು ಬಿಡುವುದಕ್ಕೆ ಕಾರಣವಿರಲಿಲ್ಲ. 16 ಈ ಪ್ರಕಾರ ಅರಸನಾದ ಯೋಷೀಯನ ಅಪ್ಪಣೆಯಂತೆ ಪಸ್ಕವನ್ನು ಆಚರಿಸುವುದಕ್ಕೂ ಯೆಹೋವನ ಯಜ್ಞವೇದಿಯ ಮೇಲೆ ಸರ್ವಾಂಗಹೋಮಗಳನ್ನರ್ಪಿಸುವುದಕ್ಕೂ ಯೆಹೋವನ ಸೇವೆಯ ಸಂಬಂಧವಾದದ್ದೆಲ್ಲವೂ ಆ ದಿನವೇ ಸಿದ್ಧವಾಯಿತು. 17 ಕೂಡಿಬಂದಿದ್ದ ಇಸ್ರಾಯೇಲರು ಆ ಕಾಲದಲ್ಲಿ ಪಸ್ಕಹಬ್ಬವನ್ನೂ ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯನ್ನೂ ಆಚರಿಸಿದರು. 18 ಇಂಥಾ ಪಸ್ಕಹಬ್ಬವು ಪ್ರವಾದಿಯಾದ ಸಮುವೇಲನ ದಿನಗಳಿಂದ ಇಸ್ರಾಯೇಲರಲ್ಲಿ ನಡೆಯಲೇ ಇಲ್ಲ. ಯೋಷೀಯನೂ, ಯಾಜಕರೂ, ಲೇವಿಯರೂ ಕೂಡಿಬಂದಿದ್ದ ಇಸ್ರಾಯೇಲರು, ಯೆಹೂದ್ಯರು, ಯೆರೂಸಲೇಮಿನವರೂ ಪಸ್ಕಹಬ್ಬವನ್ನು ಆಚರಿಸಿದಂತೆ ಇಸ್ರಾಯೇಲ್ ರಾಜರಲ್ಲಿ ಒಬ್ಬನೂ ಆಚರಿಸಲಿಲ್ಲ. 19 ಈ ಪಸ್ಕಹಬ್ಬವು ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ನಡೆಯಿತು.
ಯೋಷೀಯನ ಮರಣ
20 ಯೋಷೀಯನು ದೇವಾಲಯದ ವಿಷಯದಲ್ಲಿ ಈ ಎಲ್ಲಾ ವ್ಯವಸ್ಥೆಯನ್ನು ಮಾಡಿದನಂತರ ಐಗುಪ್ತದ ಅರಸನಾದ ನೆಕೋ ಎಂಬುವವನು ಯುದ್ಧಮಾಡುವುದಕ್ಕೋಸ್ಕರ ಯೂಫ್ರೆಟಿಸ್ ನದಿಯ ತೀರದಲ್ಲಿದ್ದ ಕರ್ಕೆಮೀಷಿಗೆ ಹೋದನು. 21 ಯೋಷೀಯನು ಅವನಿಗೆ ವಿರುದ್ಧವಾಗಿ ಹೊರಡಲು ನೆಕೋವನು ಅವನ ಬಳಿಗೆ ದೂತರನ್ನು ಕಳುಹಿಸಿ, “ಯೆಹೂದದ ಅರಸನೇ, ನನ್ನ ಗೊಡವೆ ನಿನಗೇಕೆ? ನಾನು ಈ ಸಾರಿ ಯುದ್ಧಕ್ಕೆ ಹೊರಟದ್ದು ನಿನಗೆ ವಿರುದ್ಧವಾಗಿ ಅಲ್ಲ. ನನ್ನ ಶತ್ರುವಂಶಕ್ಕೆ ವಿರುದ್ಧವಾಗಿ, ನಾನು ಮುನ್ನುಗ್ಗಬೇಕೆಂದು ದೇವರ ಅಪ್ಪಣೆಯಾಗಿದೆ. ನನ್ನೊಂದಿಗಿರುವ ದೇವರಿಗೆ ವಿರುದ್ಧ ಕೈಯೆತ್ತುವುದನ್ನು ಬಿಡು. ಇಲ್ಲವಾದರೆ ಆತನು ನಿನ್ನನ್ನು ನಾಶಮಾಡುವನು” ಎಂದು ಹೇಳಿಸಿದನು. 22 ಆದರೆ ಯೋಷೀಯನು ಅವನನ್ನು ಬಿಟ್ಟು ಹಿಂದಿರುಗಲಿಲ್ಲ. ದೈವೋಕ್ತಿಯಾಗಿದ್ದ ನೆಕೋವಿನ ಮಾತಿಗೆ ಕಿವಿಗೊಡದೆ, ವೇಷಹಾಕಿಕೊಂಡು ಅವನೊಡನೆ ಕಾದಾಡುವುದಕ್ಕೆ ಮೆಗಿದ್ದೋ ಬಯಲಿಗೆ ಹೋದನು. 23 ಅಲ್ಲಿ ಬಿಲ್ಲುಗಾರರು ಅರಸನಾದ ಯೋಷೀಯನಿಗೆ ಬಾಣವನ್ನೆಸೆದಾಗ ಅವನು ತನ್ನ ಸೇವಕರಿಗೆ, “ನನಗೆ ದೊಡ್ಡ ಗಾಯವಾಯಿತು, ನನ್ನನ್ನು ಆಚೆಗೆ ತೆಗೆದುಕೊಂಡು ಹೋಗಿರಿ” ಎಂದನು. 24 ಸೇವಕರು ಅವನನ್ನು ಯುದ್ಧರಥದಿಂದಿಳಿಸಿ, ಅವನ ಎರಡನೆಯ ರಥದಲ್ಲಿ ಮಲಗಿಸಿ ಯೆರೂಸಲೇಮಿಗೆ ತೆಗೆದುಕೊಂಡು ಹೋಗಲು ಅಲ್ಲಿ ಸತ್ತನು. ಅವನ ಶವವನ್ನು ಅವನ ಪೂರ್ವಿಕರ ಸ್ಮಶಾನದಲ್ಲಿ ಸಮಾಧಿಮಾಡಿದರು. ಎಲ್ಲಾ ಯೆಹೂದ್ಯರೂ ಯೆರೂಸಲೇಮಿನವರೂ ಯೋಷೀಯನ ವಿಷಯವಾಗಿ ಗೋಳಾಡಿದರು. 25 ಯೆರೆಮೀಯನು ಯೋಷೀಯನನ್ನು ಕುರಿತು ಶೋಕಗೀತವನ್ನು ರಚಿಸಿದನು. ಎಲ್ಲಾ ಗಾಯಕರೂ ಗಾಯಕಿಯರೂ ಅವನನ್ನು ಇಂದಿನ ವರೆಗೆ ತಮ್ಮ ಶೋಕಗೀತಗಳಲ್ಲಿ ವರ್ಣಿಸುತ್ತಿರುತ್ತಾರೆ. ಆ ಗೀತೆಗಳನ್ನು ಹಾಡುವುದು ಇಸ್ರಾಯೇಲರಲ್ಲಿ ಒಂದು ಪದ್ಧತಿಯಾಗಿದೆ. ಅವು ಶೋಕಗೀತಗ್ರಂಥದಲ್ಲಿ ಬರೆದಿರುತ್ತವೆ. 26 ಯೋಷೀಯನ ಉಳಿದ ಚರಿತ್ರೆಯೂ ಯೆಹೋವನ ಧರ್ಮಶಾಸ್ತ್ರ ಅನುಸಾರವಾದ ಅವನ ಭಕ್ತಿಕಾರ್ಯಗಳೂ, 27 ಅವನ ಪೂರ್ವೋತ್ತರ ವೃತ್ತಾಂತವೂ ಇಸ್ರಾಯೇಲರ ಮತ್ತು ಯೆಹೂದ್ಯ ರಾಜರ ಗ್ರಂಥದಲ್ಲಿ ಬರೆದಿರುತ್ತವೆ.