9
ಶೆಬಾ ದೇಶದ ರಾಣಿಯು ಸೊಲೊಮೋನನ ಭೇಟಿಯಾದದ್ದು
ಶೆಬಾದ ರಾಣಿಯು ಸೊಲೊಮೋನನ ಕೀರ್ತಿಯನ್ನು ಕೇಳಿ, ಅವನನ್ನು ಒಗಟುಗಳಿಂದ ಪರೀಕ್ಷಿಸುವುದಕ್ಕಾಗಿ ಯೆರೂಸಲೇಮಿಗೆ ಬಂದಳು. ಆಕೆಯು ಸುಗಂಧದ್ರವ್ಯ, ಲೆಕ್ಕವಿಲ್ಲದಷ್ಟು ಬಂಗಾರ, ರತ್ನ ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು ಮಹಾ ಪರಿವಾರದೊಡನೆ ಸೊಲೊಮೋನನ ಬಳಿಗೆ ಬಂದು ತನ್ನ ಮನಸ್ಸಿನಲ್ಲಿ ಗೊತ್ತು ಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಅವನೊಡನೆ ಸಂಭಾಷಿಸಿದಳು. ಸೊಲೊಮೋನನು ಆಕೆಯ ಪ್ರಶ್ನೆಗಳಿಗೂ ಉತ್ತರಕೊಟ್ಟನು; ಅವುಗಳಲ್ಲಿ ಅವನಿಗೆ ತಿಳಿಯದಂಥದ್ದು ಒಂದೂ ಇರಲಿಲ್ಲವಾದುದ್ದರಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರಕೊಟ್ಟನು. ಶೆಬಾದ ರಾಣಿಯು, ಸೊಲೊಮೋನನ ಜ್ಞಾನ, ಅವನು ಕಟ್ಟಿಸಿದ ಅರಮನೆ, ಭೋಜನ ಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ ಮತ್ತು ಅವರ ಉಡುಪುಗಳು, ಅವನ ಪಾನಸೇವಕರು, ಅವರ ಉಡುಪುಗಳು ಇವುಗಳನ್ನೂ, ಅರಸನು ಯೆಹೋವನ ಆಲಯದಲ್ಲಿ ಸಮರ್ಪಿಸುತ್ತಿದ್ದ ಸರ್ವಾಂಗ ಹೋಮಗಳನ್ನೂ ನೋಡಿದಾಗ ವಿಸ್ಮಿತಳಾಗಿ ಅವನಿಗೆ, “ನಾನು ನನ್ನ ದೇಶದಲ್ಲಿ ನಿನ್ನ ಜ್ಞಾನವನ್ನೂ ಕೃತ್ಯಗಳನ್ನೂ ಕುರಿತು ಕೇಳಿದ್ದು ಸತ್ಯವಾಗಿದೆ. ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವವರೆಗೆ ಜನರು ಹೇಳಿದ ಸುದ್ದಿಯನ್ನು ನಂಬಿರಲಿಲ್ಲ; ಈಗ ನೋಡಿದರೆ, ನಿನ್ನ ಜ್ಞಾನಾತಿಶಯವು ನಾನು ಕೇಳಿದ್ದಕ್ಕಿಂತ ಉನ್ನತವಾಗಿದೆ; ಜನರು ನಿನ್ನ ಜ್ಞಾನ ಮತ್ತು ಐಶ್ವರ್ಯದ ಬಗ್ಗೆ ಅರ್ಧವನ್ನಾದರೂ ನನಗೆ ಹೇಳಿರಲಿಲ್ಲ. ನಿನ್ನ ಪ್ರಜೆಗಳೂ, ಸದಾ ನಿನ್ನ ಮುಂದೆ ನಿಂತುಕೊಂಡು ನಿನ್ನ ಜ್ಞಾನವಾಕ್ಯಗಳನ್ನು ಕೇಳುವ ನಿನ್ನ ಸೇವಕರೂ ಧನ್ಯರು. ನಿನ್ನನ್ನು ಮೆಚ್ಚಿ, ತನ್ನ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ನಿನ್ನ ದೇವರು ಇಸ್ರಾಯೇಲರನ್ನು ಪ್ರೀತಿಸಿ ಅವರನ್ನು ನಿರಂತರವಾಗಿ ಸ್ಥಿರಗೊಳಿಸಬೇಕೆಂದಿರುವುದರಿಂದ ಅವರ ನೀತಿನ್ಯಾಯಗಳನ್ನು ಸ್ಥಾಪಿಸುವುದಕ್ಕೋಸ್ಕರ ನಿನ್ನನ್ನೇ ಅರಸನ್ನಾಗಿ ನೇಮಿಸಿದ್ದಾನೆ” ಎಂದು ಹೇಳಿದಳು. ಆಕೆಯು ಅರಸನಿಗೆ ನೂರಿಪ್ಪತ್ತು ತಲಾಂತು ಬಂಗಾರವನ್ನೂ, ಅಪರಿಮಿತ ಸುಗಂಧ ದ್ರವ್ಯವನ್ನೂ, ಅಮೂಲ್ಯರತ್ನಗಳನ್ನೂ ಕೊಟ್ಟಳು. ಶೆಬಾದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟ ಸುಗಂಧದ್ರವ್ಯಕ್ಕೆ ಸರಿಸಮಾನವಾದ ಸುಗಂಧದ್ರವ್ಯ ಮತ್ತೆ ಸಿಗಲೇ ಇಲ್ಲ. 10 ಹೂರಾಮನ ಮತ್ತು ಸೊಲೊಮೋನನ ಆಳುಗಳು ಓಫೀರ್ ದೇಶದ ಬಂಗಾರವನ್ನಲ್ಲದೆ ಸುಗಂಧದ ಮರಗಳ ಅಮೂಲ್ಯರತ್ನಗಳನ್ನೂ ತಂದರು. 11 ಅರಸನು ಸುಗಂಧದ ಮರದಿಂದ ಯೆಹೋವನ ದೇವಾಲಯವನ್ನು ಹಾಗೂ ಅರಮನೆಗಳಿಗೆ ಸೋಪಾನಗಳನ್ನೂ, ಸಂಗೀತಗಾರರಿಗಾಗಿ ಕಿನ್ನರಿಗಳನ್ನೂ, ಸ್ವರಮಂಡಲಗಳನ್ನೂ ಮಾಡಿಸಿದನು. ಇಂಥ ಗಂಧದ ಮರವು ಹಿಂದೆಂದೂ ಯೆಹೂದ ದೇಶದಲ್ಲಿ ಕಂಡಿರಲಿಲ್ಲ. 12 ಅರಸನಾದ ಸೊಲೊಮೋನನು ಶೆಬಾದ ರಾಣಿಯಿಂದ ತನಗೆ ದೊರಕಿದ ಬಹುಮಾನಕ್ಕೆ ಪ್ರತಿಯಾಗಿ, ಆಕೆಗೆ ತಾನು ಕೊಟ್ಟು ವಸ್ತುಗಳನ್ನಲ್ಲದೆ, ಆಕೆಯು ಕೇಳಿದವುಗಳನ್ನೆಲ್ಲಾ ಕೊಟ್ಟುಬಿಟ್ಟನು. ಅನಂತರ ಆಕೆಯು ತನ್ನ ಪರಿವಾರದವರೊಡನೆ ಸ್ವದೇಶಕ್ಕೆ ಹೊರಟುಹೋದಳು.
ಸೊಲೊಮೋನನ ವೈಭವ
13 ಸೊಲೊಮೋನನಿಗೆ ಪ್ರತಿ ವರ್ಷ ಆರು ನೂರಅರವತ್ತಾರು ತಲಾಂತು ಬಂಗಾರವು ದೊರಕುತ್ತಿತ್ತು. 14 ಇದಲ್ಲದೆ ದೇಶಾಂತರದಲ್ಲಿ ವ್ಯಾಪಾರಮಾಡುತ್ತಿದ್ದ ವ್ಯಾಪಾರಿಗಳೂ, ವರ್ತಕರೂ, ಅರಬಸ್ಥಾನದ ಅರಸರೂ, ದೇಶಾಧಿಪತಿಗಳೂ ಅರಸನಾದ ಸೊಲೊಮೋನನಿಗೆ ಬೆಳ್ಳಿ ಮತ್ತು ಬಂಗಾರವನ್ನು ತರುತ್ತಿದ್ದರು. 15 ಅರಸನಾದ ಸೊಲೊಮೋನನು ಬಂಗಾರದ ತಗಡಿನಿಂದ ಇನ್ನೂರು ಗುರಾಣಿಗಳನ್ನು ಮಾಡಿಸಿದನು; ಪ್ರತಿಯೊಂದು ಗುರಾಣಿಗೆ ಆರುನೂರು ತೊಲಾ ಬಂಗಾರವು ಹಿಡಿಸುತ್ತಿತ್ತು. 16 ಇದಲ್ಲದೆ ಅವನು ಬಂಗಾರದ ತಗಡಿನಿಂದ ಮುನ್ನೂರು ಖೇಡ್ಯಗಳನ್ನು ಮಾಡಿಸಿದನು; ಪ್ರತಿಯೊಂದು ಖೇಡ್ಯಕ್ಕೆ ಮುನ್ನೂರು ತೊಲಾ ಬಂಗಾರ ಬೇಕಾಗುತ್ತಿತ್ತು. ಅರಸನು ಇವುಗಳನ್ನು ಲೆಬನೋನಿನ ತೋಪು ಎನಿಸಿಕೊಳ್ಳುವ ಮಂದಿರದಲ್ಲಿರಿಸಿದನು.
17 ಇದಲ್ಲದೆ ಅರಸನು ದೊಡ್ಡದಾದ ಒಂದು ದಂತ ಸಿಂಹಾಸನವನ್ನು ಮಾಡಿಸಿ ಅದನ್ನು ಚೊಕ್ಕ ಬಂಗಾರದ ತಗಡಿನಿಂದ ಹೊದಿಸಿದನು. 18 ಅದಕ್ಕೆ ಹೊಂದಿಕೆಯಾದ ಆರು ಮೆಟ್ಟಲುಗಳೂ, ಬಂಗಾರದ ಸಿಂಹಾಸನವೂ, ಒಂದು ಪಾದಪೀಠವು ಇದ್ದವು; ಆಸನಕ್ಕೆ ಎರಡು ಕೈಗಳೂ ಅವುಗಳ ಹತ್ತಿರ ಎರಡು ಸಿಂಹಗಳೂ ಇದ್ದವು. 19 ಆರು ಮೆಟ್ಟಿಲುಗಳ ಎರಡು ಕಡೆಗಳಲ್ಲಿಯೂ ಒಟ್ಟು ಹನ್ನೆರಡು ಸಿಂಹಗಳು ನಿಂತಿದ್ದವು. ಇಂಥ ಸಿಂಹಾಸನವು ಬೇರೆ ಯಾವ ರಾಜ್ಯದಲ್ಲಿಯೂ ಇರಲಿಲ್ಲ. 20 ಅರಸನಾದ ಸೊಲೊಮೋನನ ಎಲ್ಲಾ ಪಾನಪಾತ್ರೆಗಳು ಬಂಗಾರದವುಗಳಾಗಿದ್ದವು. ಲೆಬನೋನಿನ ತೋಪು ಎನಿಸಿಕೊಳ್ಳುವ ಮಂದಿರದ ಎಲ್ಲಾ ಸಾಮಾನುಗಳು ಚೊಕ್ಕ ಬಂಗಾರದವುಗಳು. ಸೊಲೊಮೋನನ ಕಾಲದಲ್ಲಿ ಬೆಳ್ಳಿಗೆ ಬೆಲೆಯೇ ಇರಲಿಲ್ಲ. 21 ಅರಸನ ಹಡುಗುಗಳು ಹೂರಾಮನ ನಾವಿಕರ ಜೊತೆಯಲ್ಲಿ ತಾರ್ಷೀಷಿಗೆ ಹೋಗಿ ಮೂರು ವರ್ಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ವಾನರ, ನವಿಲು ಇವುಗಳನ್ನು ತರುತ್ತಿದ್ದವು. 22 ಈ ಪ್ರಕಾರ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ ಜ್ಞಾನದಲ್ಲಿಯೂ ಭೂಲೋಕದ ಎಲ್ಲಾ ಅರಸರಿಗಿಂತ ಮಿಗಿಲಾಗಿದ್ದನು. 23 ಭೂರಾಜರೆಲ್ಲರೂ, ದೇವರು ಅವನಿಗೆ ಅನುಗ್ರಹಿಸಿದ ಜ್ಞಾನವಾಕ್ಯಗಳನ್ನು ಕೇಳುವುದಕ್ಕಾಗಿ ಸೊಲೊಮೋನ ದರ್ಶನಕ್ಕೆ ಬರುತ್ತಿದ್ದರು. 24 ಅವರೆಲ್ಲರೂ ಅವನಿಗೆ ವರ್ಷ ವರ್ಷವೂ ಬೆಳ್ಳಿ ಬಂಗಾರದ ಸಾಮಾನು, ಉಡುಪು, ಯುದ್ಧಸಲಕರಣಿಗಳು, ಶಸ್ತಾಸ್ತ್ರಗಳು, ಸುಗಂಧದ್ರವ್ಯ, ಕುದುರೆ, ಹೇಸರಗತ್ತೆ ಇವುಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು. 25 ಸೊಲೊಮೋನನು ಅಶ್ವಸಹಿತವಾದ ರಥಗಳು ನಾಲ್ಕು ಸಾವಿರ ಹಾಗೂ ರಾಹುತರು ಹನ್ನೆರಡು ಸಾವಿರ. ಇವುಗಳನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೂ ರಥಗಳಿಗಾಗಿ ನೇಮಿಸಿದ್ದ ಪಟ್ಟಣಗಳಲ್ಲೂ ಇರಿಸಿದ್ದನು. 26 ಅವನು ಯೂಫ್ರೆಟಿಸ್ ನದಿ ಮೊದಲುಗೊಂಡು ಫಿಲಿಷ್ಟಿಯರ ಮತ್ತು ಐಗುಪ್ತ್ಯರ ದೇಶಗಳವರೆಗೂ ಇರುವ ಎಲ್ಲಾ ರಾಜರನ್ನು ಆಳುತ್ತಿದ್ದನು. 27 ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಯು ಕಲ್ಲಿನ ಹಾಗೆಯೂ, ದೇವದಾರು ಮರಗಳು ಇಳಿಜಾರು ಪ್ರದೇಶದಲ್ಲಿ ಬೆಳೆಯುವ ಅತ್ತಿ ಮರಗಳಂತೆ ಹೇರಳವಾಗಿದ್ದವು. 28 ಸೊಲೊಮೋನನಿಗೋಸ್ಕರ ಐಗುಪ್ತ್ಯದಿಂದಲೂ ಹಾಗೂ ಬೇರೆ ದೇಶಗಳಿಂದಲೂ ಕುದುರೆಗಳನ್ನು ತರುತ್ತಿದ್ದರು.
ಸೊಲೊಮೋನನ ಮರಣ
29 ಸೊಲೊಮೋನನ ಉಳಿದ ಪೂರ್ವೋತ್ತರ ಚರಿತ್ರೆಯನ್ನು, ಪ್ರವಾದಿಯಾದ ನಾತಾನನ ಚರಿತ್ರೆ, ಶೀಲೋವಿನವನಾದ ಅಹೀಯನ ಪ್ರವಾದನೆಯ ಗ್ರಂಥ, ಹಾಗೂ ದಿವ್ಯದಾರ್ಶಿಕನಾದ ಇದ್ದೋವನು ನೆಬಾಟನ ಮಗನಾದ ಯಾರೊಬ್ಬಾಮನನ್ನು ಕುರಿತು ನುಡಿದ ದರ್ಶನೋಕ್ತಿ ಎಂಬ ಗ್ರಂಥಗಳಲ್ಲಿ ಬರೆದಿರುತ್ತದೆ. 30 ಸೊಲೊಮೋನನು ಯೆರೂಸಲೇಮಿನಲ್ಲಿ ಇದ್ದುಕೊಂಡು ಎಲ್ಲಾ ಇಸ್ರಾಯೇಲರನ್ನು ನಲ್ವತ್ತು ವರ್ಷ ಆಳಿದನು. 31 ಆನಂತರ ಸೊಲೊಮೋನನು ತನ್ನ ಪೂರ್ವಿಕರ ಬಳಿಗೆ ಸೇರಿದನು, ಅವನ ಶವವನ್ನು ಅವನ ತಂದೆಯಾದ ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು; ಅವನಿಗೆ ಬದಲಾಗಿ ಅವನ ಮಗನಾದ ರೆಹಬ್ಬಾಮನು ಅರಸನಾದನು.