8
ಪವಿತ್ರಾತ್ಮನಿಂದ ನಡಿಸಲ್ಪಡುವ ಜೀವನ
1 ಆದ್ದರಿಂದ ಈಗ ಕ್ರಿಸ್ತ ಯೇಸುವಿನಲ್ಲಿರುವವರಿಗೆ ಯಾವ ಅಪರಾಧ ನಿರ್ಣಯವೂ ಇಲ್ಲ,
2 ಯಾಕೆಂದರೆ ಕ್ರಿಸ್ತ ಯೇಸುವಿನ ಮೂಲಕ ಜೀವವನ್ನುಂಟುಮಾಡುವ ಪವಿತ್ರಾತ್ಮನ ನಿಯಮವು ನನ್ನನ್ನು ಪಾಪಮರಣಗಳಿಗೆ ಕಾರಣವಾದ ನಿಯಮದಿಂದ ವಿಮುಕ್ತಿಗೊಳಿಸಿತು.
3 ಧರ್ಮಶಾಸ್ತ್ರವು ನಮ್ಮ ಶರೀರಾಧೀನಸ್ವಭಾವದ ನಿಮಿತ್ತ ದುರ್ಬಲವಾಗಿ ಯಾವ ಕೆಲಸವನ್ನು ಮಾಡಲಾರದೆ ಇತ್ತೋ, ಅದನ್ನು ದೇವರೇ ಮಾಡಿದನು. ಹೇಗೆಂದರೆ ಆತನು ಪಾಪನಿವಾರಣೆಗಾಗಿ ತನ್ನ ಮಗನನ್ನು ಪಾಪಾಧೀನವಾದ ಶರೀರ ರೂಪದಲ್ಲಿ ಕಳುಹಿಸಿಕೊಟ್ಟು ಶರೀರದಲ್ಲಿಯೇ ಪಾಪಕ್ಕೆ ಮರಣದಂಡನೆಯನ್ನು ವಿಧಿಸಿದನು.
4 ಹೀಗಿರಲು ಶರೀರಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾತ್ಮನಿಗನುಸಾರವಾಗಿ ನಡೆಯುವವರಾದ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮವು ನೆರವೇರುವುದಕ್ಕಾಗಿ ಹಾಗೆ ಮಾಡಿದನು.
5 ಶರೀರಭಾವವನ್ನು ಅನುಸರಿಸುವವರು ಅದಕ್ಕೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ, ಪವಿತ್ರಾತ್ಮನನ್ನುಸರಿಸುವವರು ಪವಿತ್ರಾತ್ಮನಿಗೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ.
6 ಶರೀರಭಾವದ ವಿಷಯಗಳ ಮೇಲೆ ಮನಸ್ಸಿಡುವುದು ಮರಣ; ಪವಿತ್ರಾತ್ಮನ ವಿಷಯಗಳ ಮೇಲೆ ಮನಸ್ಸಿಡುವುದು ನಿತ್ಯಜೀವವೂ ಮತ್ತು ಮನಶಾಂತಿಯೂ ಆಗಿದೆ.
7 ಯಾಕೆಂದರೆ ಶರೀರಭಾವಗಳ ಮೇಲೆ ಮನಸ್ಸಿಡುವುದು ದೇವರಿಗೆ ವಿರುದ್ಧವಾಗಿದೆ; ಅಂಥ ಮನಸ್ಸು ಧರ್ಮನಿಯಮಕ್ಕೆ ಒಳಪಡುವುದೂ ಇಲ್ಲ, ಒಳಪಡುವುದಕ್ಕಾಗುವುದೂ ಇಲ್ಲ.
8 ಶರೀರಭಾವಾಧೀನವಾಗಿರುವವರು ದೇವರನ್ನು ಮೆಚ್ಚಿಸಲಾರರು.
9 ಆದಾಗ್ಯೂ, ನೀವೂ ದೇವರ ಆತ್ಮನ ಸ್ವಭಾವದ ಮೇಲೆ ಆತುಕೊಂಡು ಜೀವಿಸುವವರೇ ಹೊರತು ದೇಹಸ್ವಭಾವದವರಲ್ಲಾ. ನಿಮ್ಮಲ್ಲಿ ದೇವರ ಆತ್ಮನು ವಾಸವಾಗಿರುವುದಾದರೆ ನೀವು ಶರೀರ ಭಾವಾಧೀನರಲ್ಲ, ದೇವರಾತ್ಮನಿಗೆ ಅಧೀನರಾಗಿದ್ದೀರಿ. ಯಾರಲ್ಲಿ ಕ್ರಿಸ್ತನ ಆತ್ಮನು ಇಲ್ಲವೋ ಅವನು ಕ್ರಿಸ್ತನವನಲ್ಲ.
10 ಆದರೆ ಕ್ರಿಸ್ತನು ನಿಮ್ಮಲ್ಲಿರುವುದಾದರೆ ದೇಹವು ಪಾಪದ ದೆಸೆಯಿಂದ ಸತ್ತದ್ದಾಗಿದ್ದರೂ, ಆತ್ಮವು ನೀತಿಯ ದೆಸೆಯಿಂದ ಜೀವಸ್ವರೂಪವಾಗಿರುತ್ತದೆ.
11 ಯೇಸುವನ್ನು ಸತ್ತವರೊಳಗಿಂದ ಜೀವಿತನಾಗಿ ಎಬ್ಬಿಸಿದಾತನ ಆತ್ಮನು ನಿಮ್ಮಲ್ಲಿ ವಾಸವಾಗಿದ್ದರೆ, ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನು ನಿಮ್ಮಲ್ಲಿ ವಾಸವಾಗಿರುವ ತನ್ನ ಆತ್ಮನ ಮೂಲಕ ನಿಮ್ಮ ಮರ್ತ್ಯದೇಹಗಳನ್ನು ಸಹ ಬದುಕಿಸುವನು.
12 ಹೀಗಿರಲಾಗಿ ಸಹೋದರರೇ, ನಾವು ಹಂಗಿನಲ್ಲಿದ್ದೇವೆ; ಆದರೆ ಪವಿತ್ರಾತ್ಮನ್ನನುಸರಿಸಿ ನಡೆಯುವ ಹಂಗಿನಲ್ಲಿದ್ದೇವೆಯೇ ಹೊರತು ಶರೀರಭಾವವನ್ನು ಅನುಸರಿಸಿ ಬದುಕಬೇಕೆಂಬ ಹಂಗಿನಲಿಲ್ಲ.
13 ನೀವು ಶರೀರಭಾವವನ್ನು ಅನುಸರಿಸಿ ಬದುಕಿದರೆ ಸಾಯುವುದು ನಿಶ್ಚಯ; ನೀವು ಪವಿತ್ರಾತ್ಮನಿಂದ ದೇಹದ ದುರಭ್ಯಾಸಗಳನ್ನು ನಾಶ ಮಾಡುವುದಾದರೆ ಜೀವಿಸುವಿರಿ.
14 ಯಾರು ದೇವರ ಆತ್ಮಾನುಸಾರವಾಗಿ ನಡೆದುಕೊಳ್ಳುತ್ತಾರೋ, ಅವರು ದೇವರ ಮಕ್ಕಳಾಗಿದ್ದಾರೆ.
15 ನೀವು ತಿರುಗಿ ಭಯದಲ್ಲಿ ಬೀಳುವ ಹಾಗೆ ದಾಸತ್ವದ ಆತ್ಮನನ್ನು ಹೊಂದಿದವರಲ್ಲ. ಅದರ ಬದಲಾಗಿ, ನಿಮ್ಮವು ದೇವರನ್ನು, “ಅಪ್ಪಾ, ತಂದೆಯೇ,” ಎಂದು ಕರೆಯುವ ಮಕ್ಕಳ ಆತ್ಮವನ್ನು ಹೊಂದಿದ್ದೀರಿ.
16 ನಾವು ದೇವರ ಮಕ್ಕಳಾಗಿದ್ದೇವೆಂಬುದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿ ಹೇಳುತ್ತಾನೆ.
17 ಮಕ್ಕಳಾಗಿದ್ದರೆ ಬಾಧ್ಯಸ್ಥರೂ ಆಗಿದ್ದೇವೆ; ದೇವರಿಗೆ ಬಾಧ್ಯಸ್ಥರೂ ಹಾಗೂ ಕ್ರಿಸ್ತನೊಂದಿಗೆ ಸಹಾ ಬಾಧ್ಯರು ಆಗಿದ್ದೇವೆ. ಹೇಗೆಂದರೆ ಕ್ರಿಸ್ತನ ಕಷ್ಟಗಳಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.
ದೇವರ ಮಕ್ಕಳಿಗೆ ಮುಂದೆ ಬರುವ ಮಹಿಮೆ
18 ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಾಪದವಿಯನ್ನು ಆಲೋಚಿಸಿದರೆ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ.
19 ದೇವರ ಮಕ್ಕಳ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು ಸೃಷ್ಟಿಯು ಬಹು ಕಾತುರದಿಂದ ಎದುರು ನೋಡುತ್ತಿದೆ.
20 ಸೃಷ್ಟಿ ನಿರರ್ಥಕತೆಗೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ,
21 ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನೆಂದರೆ ಆ ಸೃಷ್ಟಿಯೂ ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುತ್ತವೆಂಬುದೇ.
22 ಸೃಷ್ಟಿಯೆಲ್ಲಾ ಇಂದಿನವರೆಗೂ ನರಳುತ್ತಾ, ಪ್ರಸವ ವೇದನೆಪಡುತ್ತಾ ಇದೆಯೆಂದು ನಾವು ಬಲ್ಲೆವು. ಇದು ಮಾತ್ರವಲ್ಲದೆ
23 ಪ್ರಥಮ ಫಲವಾಗಿರುವ ಹಾಗೂ ಪವಿತ್ರಾತ್ಮವರವನ್ನು ಹೊಂದಿದ ನಾವೂ ಸಹ ದೇವರ ಮಕ್ಕಳ ಪದವಿಯನ್ನು ಅಂದರೆ ದೇಹಕ್ಕೆ ಬರಬೇಕಾದ ವಿಮೋಚನೆಯನ್ನು ಎದುರುನೋಡುತ್ತಾ ನಮ್ಮೊಳಗೆ ನರಳುತ್ತಿದ್ದೇ.
24 ಆ ನಿರೀಕ್ಷೆಯಿಂದಲೇ ನಾವು ರಕ್ಷಣೆಯನ್ನು ಹೊಂದಿದವರಾಗಿದ್ದೇವೆ. ನಾವು ನಿರೀಕ್ಷಿಸುವುದು ಪ್ರತ್ಯಕ್ಷವಾಗಿದ್ದರೆ ಅದನ್ನು ನಿರೀಕ್ಷೆ ಎನ್ನುವುದಿಲ್ಲ; ಪ್ರತ್ಯಕ್ಷವಾಗಿರುವುದನ್ನು ಯಾರಾದರೂ ನಿರೀಕ್ಷಿಸುವುದುಂಟೇ?
25 ಆದರೆ ಕಾಣದಿರುವುದನ್ನು ನಾವು ಎದುರುನೋಡುವವರಾಗಿರುವುದರಿಂದ ತಾಳ್ಮೆಯಿಂದ ಕಾದುಕೊಂಡಿದ್ದೇವೆ.
26 ಹಾಗೆ ಪವಿತ್ರಾತ್ಮನು ಸಹ ನಮ್ಮ ಬಲಹೀನತೆಯನ್ನು ನೋಡಿ ನಮಗೆ ಸಹಾಯಮಾಡುತ್ತಾನೆ. ಹೇಗೆಂದರೆ ನಾವು ಯಾವಾಗ ಏನು ಬೇಡಿಕೊಳ್ಳಬೇಕೋ ಎನ್ನುವುದು ನಮಗೆ ತಿಳಿದಿಲ್ಲದ್ದರಿಂದ ಪವಿತ್ರಾತ್ಮನು ತಾನೇ ಮಾತಿಲ್ಲದ ನರಳಾಟದಿಂದ ನಮಗೋಸ್ಕರ ದೇವರನ್ನು ಬೇಡಿಕೊಳ್ಳುತ್ತಾನೆ.
27 ಆದರೆ ಹೃದಯಗಳನ್ನು ಪರಿಶೋಧಿಸಿ ನೋಡುವಾತನಿಗೆ ಪವಿತ್ರಾತ್ಮನ ಮನೋಭಾವವು ಏನೆಂದು ತಿಳಿದಿದೆ; ಆ ಆತ್ಮನು ದೇವರ ಚಿತ್ತಾನುಸಾರವಾಗಿ ದೇವಜನರಿಗೋಸ್ಕರ ಬೇಡಿಕೊಳ್ಳುವನೆಂದು ಆತನು ಬಲ್ಲನು.
28 ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಒಳ್ಳೆಯದಕ್ಕಾಗಿಯೇ ಆಗುವುದೆಂದು ನಮಗೆ ತಿಳಿದಿದೆ.
29 ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡನೋ ಅವರನ್ನು ತನ್ನ ಮಗನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದನು.
30 ಮತ್ತು ಯಾರನ್ನು ಮೊದಲು ನೇಮಿಸಿದನೋ ಅವರನ್ನು ಕರೆದನು. ಯಾರನ್ನು ಕರೆದನೋ ಅವರನ್ನು ನೀತಿವಂತರೆಂದು ನಿರ್ಣಯಿಸಿದನು. ಯಾರನ್ನು ನೀತಿವಂತರೆಂದು ನಿರ್ಣಯಿಸಿದನೋ ಅವರನ್ನು ಮಹಿಮಾಪದವಿಗೆ ಸೇರಿಸಿದನು.
ಯೇಸು ಕ್ರಿಸ್ತನಲ್ಲಿ ದೇವರ ಪ್ರೀತಿ
31 ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಜೊತೆಯಲ್ಲಿ ಇದ್ದರೆ ನಮ್ಮನ್ನು ಎದುರಿಸುವವರು ಯಾರು?
32 ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ, ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೋ?
33 ದೇವರು ಆದುಕೊಂಡವರ ಮೇಲೆ ಯಾರು ತಪ್ಪು ಹೊರಿಸುವವರು ಯಾರು? ದೇವರೇ ನಮ್ಮನ್ನು ನೀತಿವಂತರೆಂದು ನಿರ್ಣಯಿಸುವಾತನಾಗಿದ್ದಾನೆ.
34 ಹಾಗಿದ್ದ ಮೇಲೆ ಅಪರಾಧಿಗಳೆಂದು ಖಂಡಿಸುವವರು ಯಾರು? ಮರಣವನ್ನು ಹೊಂದಿದ್ದಲ್ಲದೆ ಜೀವಿತನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು ನಮಗೋಸ್ಕರ ಬೇಡುವವನಾಗಿರುವ ಕ್ರಿಸ್ತ ಯೇಸುವೋ?
35 ಈ ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ? ಸಂಕಟವೋ? ಹಿಂಸೆಯೋ? ಹಸಿವೋ? ವಸ್ತ್ರವಿಲ್ಲದಿರುವುದೋ? ಗಂಡಾಂತರವೋ? ಖಡ್ಗವೋ?
36 “ದೇವರೇ ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗುತ್ತಿದ್ದೇವೆ. ವಧ್ಯಸ್ಥಾನಕ್ಕೆ ಒಯ್ದ ಕುರಿಗಳಂತೆ ಎಣಿಸಿದರು.” ಎಂಬುದಾಗಿ ಬರೆದಿರುವಂತೆ ಆಗುತ್ತದಲ್ಲಾ.
37 ಆದರೆ ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಎಲ್ಲಾ ವಿಷಯಗಳಲ್ಲಿಯೂ ಪೂರ್ಣ ಜಯಶಾಲಿಗಳಾಗಿದ್ದೇವೆ.
38 ಹೇಗೆಂದರೆ ಮರಣವಾಗಲಿ, ಜೀವವಾಗಲಿ, ದೇವದೂತರಾಗಲಿ, ದುರಾತ್ಮಗಳಾಗಲಿ, ಈಗಿನ ಸಂಗತಿಗಳಾಗಲಿ, ಮುಂದಣ ಸಂಗತಿಗಳಾಗಲಿ,
39 ಮಹತ್ವಗಳಾಗಲಿ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲು ಸಾಧ್ಯವಿಲ್ಲವೆಂದು ನಾವು ಬಲ್ಲವರಾಗಿದ್ದೇವೆ.